Explained: ಊಟಕ್ಕೂ ಗತಿಯಿಲ್ಲದೇ ಹಸಿವಿನಿಂದ ಮಲಗುವ ದಿನಗಳು ಬರಲಿವೆಯೇ?

Russia Ukraine War Effects: ಕಳೆದ ಎರಡು ವರ್ಷಗಳಲ್ಲಿ 50 ಕೋಟಿ ಜನರು ಊಟಕ್ಕೆ ಗತಿಯಿಲ್ಲದೇ ಹಸಿವಿನಿಂದಲೇ ಮಲಗಿದ್ದಾರೆ ಎನ್ನುತ್ತದೆ ಒಂದು ವರದಿ. ರಷ್ಯಾ ಉಕ್ರೇನ್ ಯುದ್ಧ ಈ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಅಲ್ಲದೇ ಜನಸಾಮಾನ್ಯರ ಕೈಗೆಟುಕದಷ್ಟು ಎತ್ತರಕ್ಕೆ ಆಹಾರ ಧಾನ್ಯಗಳು ಬೆಲೆ ಏರುವುದಂತೂ ಖಚಿತವಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣ (Russia vs Ukraine War) ಇಡೀ ವಿಶ್ವಕ್ಕೆ ಕಂಟಕಪ್ರಾಯವಾಗುತ್ತಿದೆ. ಜಗತ್ತಿನ ಹಲವು ದೇಶಗಳ ಜನರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ ರಷ್ಯಾದ ಆಕ್ರಮಣ. ರಷ್ಯಾ ಮತ್ತು ಉಕ್ರೇನ್ ಎರಡೂ ದೇಶಗಳು ಜಗತ್ತಿಗೆ ಬೃಹತ್ ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು (Global Food Production) ಉತ್ಪಾದಿಸುವ ದೇಶಗಳು. ವಿವಿಧ ದೇಶಗಳು ರಷ್ಯಾ ಮತ್ತು ಉಕ್ರೇನ್​ನಿಂದಲೇ ಆಹಾರವನ್ನು ಆಮದು (Food Import) ಮಾಡಿಕೊಳ್ಳುತ್ತಿದ್ದವು. ಸದ್ಯ ಈ ಎರಡೂ ದೇಶಗಳು ಯುದ್ಧ ನಿರತರಾಗಿರುವುದು ವಿವಿಧ ದೇಶಗಳ ಆಹಾರ ರಫ್ತಿಗೆ ತಡೆಒಡ್ಡಿದೆ. ಜೊತೆಗೆ ಆಹಾರ ವಸ್ತುಗಳ ಬೆಲೆ ಗಗನಕ್ಕೇರುವ (Food Price Hike) ಅಪಾಯಕ್ಕೆ ನಾಂದಿ ಹಾಡಿದೆ. ಯಾರಾ ಇಂಟರ್​ನ್ಯಾಷನಲ್ ಎಂಬ ಆಹಾರೋದ್ಯಮ ಸಂಸ್ಥೆ ಈಗಲೇ ರಷ್ಯಾ ಉಕ್ರೇನ್ ಯುದ್ಧದಿಂದ ಬಸವಳಿದಿದ್ದಾಗಿ ಹೇಳಿಕೊಂಡಿದೆ.

ಕಳೆದ ಎರಡು ವರ್ಷಗಳಲ್ಲಿ 50 ಕೋಟಿ ಜನರು ಊಟಕ್ಕೆ ಗತಿಯಿಲ್ಲದೇ ಹಸಿವಿನಿಂದಲೇ ಮಲಗಿದ್ದಾರೆ ಎನ್ನುತ್ತದೆ ಒಂದು ವರದಿ. ರಷ್ಯಾ ಉಕ್ರೇನ್ ಯುದ್ಧ ಈ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ.

ರಷ್ಯಾ -ಉಕ್ರೇನ್ ಕೃಷಿ ಕ್ಷೇತ್ರಕ್ಕೆ ಹೇಗೆ ಆಧಾರವಾಗಿವೆ?
ರಷ್ಯಾವು ಕೃಷಿ ಕ್ಷೇತ್ರದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ರಸಗೊಬ್ಬರ ತಯಾರಿಸಲು ಬಳಸುವ ಪೊಟ್ಯಾಶ್ ಮತ್ತು ಫಾಸ್ಫೇಟ್​ಗಳನ್ನುಉತ್ಪಾದಿಸುತ್ತದೆ. ರಸಗೊಬ್ಬರ ಬಳಸುವ ಕಾರಣಕ್ಕೆ ಇಡೀ ವಿಶ್ವದ ಜನರ ಹಸಿವು ನೀಗಿಸುವಷ್ಟು ಆಹಾರದ ಉತ್ಪಾದನೆ ಸಾಧ್ಯವಾಗುತ್ತಿದೆ.

ವಿಶ್ವದ ಅರ್ಧದಷ್ಟು ಜನಸಂಖ್ಯೆಯು ರಸಗೊಬ್ಬರಗಳ ಬಳಕೆಯಿಂದ ಬೆಳೆಯುವ ಆಹಾರವನ್ನು ಪಡೆಯುತ್ತದೆ. ಇದೀಗ ರಷ್ಯಾ ಯುದ್ಧದ ಕಡೆ ಗಮನ ಕೊಟ್ಟಿರುವುದು ಕೃಷಿ ಕ್ಷೇತ್ರಕ್ಕೆ ಆದ ಹಿನ್ನೆಡೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದೊಂದೇ ಅಲ್ಲ, ರಷ್ಯಾದ ಮೇಲೆ ಅಮೆರಿಕಾ ಸೇರಿದಂತೆ ಯೂರೋಪ್​ನ ವಿವಿಧ ದೇಶಗಳು ಹೇರಿದ ನಿರ್ಬಂಧಗಳೂ ಸಹ ಆಹಾರ ಕ್ಷೇತ್ರದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿವೆ. ಅಲ್ಲದೇ ರಷ್ಯಾ ರಸಗೊಬ್ಬರಗಳ ರಫ್ತಿಗೆ ತಡೆ ಒಡ್ಡಿದ್ದು ರಷ್ಯಾವನ್ನೇ ನಂಬಿದ ದೇಶಗಳಿಗೆ ಆಹಾರದ ಕೊರತೆ ಉಂಟಾಗಲಿದೆ.

ಈ ದೇಶಗಳು ಏನನ್ನೆಲ್ಲಾ ರಫ್ತು ಮಾಡುತ್ತವೆ|
ಪ್ರಪಂಚಕ್ಕೆ ಗೋಧಿ ಮತ್ತು ಬಾರ್ಲಿ ರಫ್ತಿನ ಸುಮಾರು ಮೂರನೇ ಒಂದು ಭಾಗ ರಷ್ಯಾ ಮತ್ತು ಉಕ್ರೇನ್ ದೇಶಗಳಿಂದಲೇ ಆಗುತ್ತದೆ. ಉಕ್ರೇನ್ ಜೋಳ, ಸೂರ್ಯಕಾಂತಿ ಎಣ್ಣೆಯ ಪ್ರಮುಖ ರಫ್ತುದಾರ ದೇಶ.  ಆಫ್ರಿಕಾ ಖಂಡದ ದೇಶಗಳು 2020 ರಲ್ಲಿ ರಷ್ಯಾದಿಂದ $4 ಶತಕೋಟಿ ಮೌಲ್ಯದ ಕೃಷಿ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದ್ದವು. ಅದರಲ್ಲಿ ಸುಮಾರು 90 ಪ್ರತಿಶತ ಗೋಧಿಯಾಗಿತ್ತು.

ಹಸಿವಿನಿಂದ ಕಂಗೆಡಲಿವೆ ಈ ದೇಶಗಳು
ಯುದ್ಧದ ಪರಿಣಾಮದಿಂದ ಹಸಿವಿನಿಂದ ಕಂಗೆಡಲಿರುವ ಅಪಾಯದಲ್ಲಿರುವ ದೇಶಗಳ ಮೊದಲ ಪಂಕ್ತಿಯಲ್ಲಿ ಈಜಿಪ್ಟ್ ಲೆಬೆನಾನ್ ಮತ್ತು ಆಫ್ರಿಕಾ ಖಂಡವಿದೆ. ನೆನಪು ಮಾಡಿಕೊಳ್ಳಿ, ಇವು ಮೊದಲೇ ಬಡದೇಶಗಳು. ಇನ್ನು ಆಹಾರ ಕೊರತೆ, ಆಹಾರದ ಬೆಲೆ ಏರಿಕೆಯೂ ಆದರೆ?

ಇಂಡೋನೇಷ್ಯಾ ಉಕ್ರೇನ್​ನಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ಗೋಧಿಯನ್ನು ಆಮದು ಮಾಡಿಕೊಳ್ಳುತ್ತದೆ. ಇಂಡೋನೇಷ್ಯಾದಲ್ಲಿ ಗೋಧಿಯಿಂದ ತಯಾರಿಸುವ ನೂಡಲ್ಸ್ ಜನಸಾಮಾನ್ಯರ ದಿನಬಳಕೆಯ ಆಹಾರ. ನೂಡಲ್ಸ್ ಬೆಲೆ ಏರಿಕೆಯಾದಲ್ಲಿ ಕಡಿಮೆ ಆದಾಯದ ಜನರಿಗೆ ನೋವುಂಟು ಮಾಡುತ್ತದೆ ಎಂದು ವ್ಯಾಪಾರ ಸಚಿವಾಲಯದ ಸಂಶೋಧನಾ ವಿಭಾಗದ ಮುಖ್ಯಸ್ಥ ಕಸನ್ ಮುಹ್ರಿ ಹೇಳಿದ್ದಾರೆ.

ಇದನ್ನೂ ಓದಿ: Russia-Ukraine War: ಯುದ್ಧ ಒಂದು ಕಡೆ; ಚಳಿ ಮತ್ತೊಂದು ಕಡೆ; ಮನಕಲಕುವ ಯುದ್ಧಭೂಮಿಯ ಫೋಟೋಗಳು

ಅಲ್ಲದೇ ಜನಸಾಮಾನ್ಯರ ಕೈಗೆಟುಕದಷ್ಟು ಎತ್ತರಕ್ಕೆ ಆಹಾರ ಧಾನ್ಯಗಳು ಬೆಲೆ ಏರುವುದಂತೂ ಖಚಿತವಾಗಿದೆ. ಒಂದುವೇಳೆ ರಸಗೊಬ್ಬರಗಳ ಕೊರತೆ ಉಂಟಾಗಿ ಬೆಳೆಗಳ ಉತ್ಪಾದನೆ ಕುಸಿದರೆ ಹೊಟ್ಟೆ ಮೇಲೆ ತಣ್ಣಿರು ಬಟ್ಟೆ ಹಾಕಿಕೊಳ್ಳುವ ಗತಿಯೂ ಬರಬಹುದು ಎಂದೇ ಹೇಳಲಾಗಿದೆ. ಹಾಗೇನಾದರೂ ಆಗಿದ್ದೇ ಆದಲ್ಲಿ ಯುದ್ಧದಿಂದ ಉಂಟಾಗುವ ಕೆಡುಕಿಗಿಂತ ಹಸಿವಿನಿಂದಲೇ ಜಗತ್ತು ನಶಿಸಿಹೋಗಲಿದೆ.

ಹಸಿದ ಹೊಟ್ಟೆಯಲ್ಲೇ ಮಲಗುವ ಪರಿಸ್ಥಿತಿ?
ರಸಗೊಬ್ಬರಗಳ ಕೊರತೆ ರೈತರ ಪಾಲಿಗೆ ಕಡುಕಷ್ಟದ ದಿನಗಳನ್ನು ತರಲಿದೆ. ಕೃಷಿಕರಿಗೆ ಬೆಳೆ ಬೆಳೆಯುವುದು ಹೆಚ್ಚು ವೆಚ್ಚದಾಯಕ ಆಗಬಹುದು. ಇಳುವಳಿಯಲ್ಲೂ ಕುಸಿತ ಆಗಬಹುದು. ಇದರಿಂದ ಆಹಾರ ಧಾನ್ಯಗಳ ಕೊರತೆ ಉಂಟಾಗಿ, ಬೆಲೆಯೂ ಏರಿ ಜನಸಾಮಾನ್ಯ ಹಸಿದ ಹೊಟ್ಟೆಯಲ್ಲೇ ನಿದ್ರೆಗೆ ಶರಣಾಗುವ ದುರಂತ ಪರಿಸ್ಥಿತಿ ಎದುರಾಗಬಹುದು ಎನ್ನುತ್ತಾರೆ ಯಾರಾ ಇಂಟರ್​ನ್ಯಾಶನಲ್ ಸಿಬ್ಬಂದಿ.

ಸಾರಜನಕ ಗೊಬ್ಬರದ ಪ್ರಮುಖ ಅಂಶ ಅಮೋನಿಯಾ. ಇದನ್ನು ಉತ್ಪಾದಿಸಲು ದೊಡ್ಡ ಪ್ರಮಾಣದ ನೈಸರ್ಗಿಕ ಅನಿಲದ ಅಗತ್ಯವಿದೆ. ಯಾರಾ ಇಂಟರ್‌ನ್ಯಾಶನಲ್​ನಂತಹ ಹಲವು ಕಂಪನಿಗಳು ಯುರೋಪ್​ನಲ್ಲಿರುವ ತಮ್ಮ ಕಾರ್ಖಾನೆಗಳಿಗೆ ರಷ್ಯಾದಿಂದ ಆಮದಾಗುವ ನೈಸರ್ಗಿಕ ಅನಿಲದ ಮೇಲೆ ಅವಲಂಬಿತವಾಗಿವೆ.

ಪರಿಹಾರವೇ ಇಲ್ಲವೇ?
ನೈಸರ್ಗಿಕ ಅನಿಲದ ಬೆಲೆಯಲ್ಲಿ ಕಳೆದ ವರ್ಷವಷ್ಟೇ ಏರಿಕೆಯಾಗಿತ್ತು. ಹೀಗಾಗಿ ಯುರೋಪ್‌ನಲ್ಲಿ 40% ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆಮದು ನಿರ್ಬಂಧ, ನೈಸರ್ಗಿಕ ಅನಿಲದ ದರ ಏರಿಕೆಯ ಜೊತೆಗೆ ಹವಾಮಾನ ಬದಲಾವಣೆಯೂ ಸಹ ಆಹಾರೋದ್ಯಮಕ್ಕೆ ಕೊಕ್ಕೆ ಹಾಕುತ್ತಿದೆ.

ಇದನ್ನೂ ಓದಿ: ಇನ್ನೂ Ukraineನಲ್ಲೇ ಸಿಲುಕಿರುವವರಿಗೆ ಮಹತ್ವದ ಸೂಚನೆ: ಆಪರೇಷನ್ ಗಂಗಾ ಕೊನೆ ಹಂತಕ್ಕೆ ಬಂತಾ..?

ಈ ಎಲ್ಲ ಬೆಳವಣಿಗೆಯನ್ನು ಇನ್ನೊಂದು ದೃಷ್ಟಿಕೋನದಲ್ಲೂ ವಿಶ್ಲೇಷಿಸಬಹುದು- ಅದುವೇ ರಷ್ಯಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಆದರೆ ಇದು ಅಷ್ಟು ಸುಲಭ ಸಾಧ್ಯವಲ್ಲ.
Published by:guruganesh bhat
First published: