ಮನೆಗೆ ಯಾರಾದರೂ ಅತಿಥಿಗಳು (House) ಬಂದ್ರೆ ಅವರಿಗೆ ನೀರು, ಊಟ, ಉಪಹಾರ ಕೊಟ್ಟು ಸತ್ಕರಿಸೋದು ಭಾರತೀಯರ ಸಂಸ್ಕಾರ (Indian Culture). ಇದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ (tradition). ಆಧುನಿಕತೆಯ ಹೊಡೆತಕ್ಕೆ ಸಿಲುಕಿ ಅಂದಿನಷ್ಟು ಅತಿಥಿ ಸತ್ಕಾರ ಇಲ್ಲದಿದ್ದರೂ, ಪೂರ್ಣವಾಗಿ ಮಾಸಿಲ್ಲ ಎನ್ನುವುದು ಸಂತಸದ ವಿಚಾರವೇ ಸರಿ. ಇನ್ನು ಬೇರೆ ಬೇರೆ ರಾಜ್ಯ, ದೇಶಗಳಿಂದ ನಮ್ಮ ರಾಜ್ಯಕ್ಕೆ ಗಣ್ಯರು ಬರುತ್ತಾರೆ. ಅವರನ್ನು ರಾಜ್ಯ ಸರ್ಕಾರವೇ (state government) ಸತ್ಕಾರ ಮಾಡುತ್ತದೆ. ಹೀಗೆ ಬೇರೆ ರಾಜ್ಯ ಹಾಗೂ ಬೇರೆ ದೇಶಗಳಿಂದ ರಾಜ್ಯಕ್ಕೆ ಬಂದ ಅತಿಥಿಗಳ ಸತ್ಕಾರಕ್ಕೆ ಅಂತ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಎಷ್ಟು ಖರ್ಚು ಮಾಡಿದೆ ಗೊತ್ತಾ? ಬರೋಬ್ಬರಿ 72.82 ಕೋಟಿ ರೂಪಾಯಿಗಳಂತೆ! ಅದು 3 ವರ್ಷದಲ್ಲಿ ಮಾಡಿರೋ ಖರ್ಚಿನ ಲೆಕ್ಕಾಚಾರ. ಈ ಮಾಹಿತಿ ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗವಾಗಿದೆ ಅಂತ ದಿ ಫೈಲ್ ವೆಬ್‌ಸೈಟ್ ವರದಿ ಮಾಡಿದೆ.
ಅತಿಥಿ ಸತ್ಕಾರಕ್ಕೆ ಬರೋಬ್ಬರಿ 72.82 ಕೋಟಿ ರೂಪಾಯಿ ಖರ್ಚು!
ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೂರು ವರ್ಷಗಳಲ್ಲಿ ಅತಿಥಿಗಳ ಸತ್ಕಾರಕ್ಕಾಗಿ ಬರೋಬ್ಬರಿ 72.82 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ಯಂತೆ! ಇದು ಆರ್‌ಟಿಐ ಮೂಲಗಳಿಂದ ತಿಳಿದು ಬಂದ ಮಾಹಿತಿ ಅಂತ ದಿ ಫೈಲ್ ವೆಬ್‌ಸೈಟ್ ವರದಿ ಮಾಡಿದೆ.
ಯಾರ್ಯಾರಿಗೆ ಖರ್ಚು?
ಮಾಹಿತಿ ಹಕ್ಕು ಕಾಯ್ದೆ ಮತ್ತು ನಿಯಂತ್ರಕರು ಮತ್ತು ಲೆಕ್ಕಪರಿಶೋಧಕರ ದಾಖಲೆಗಳ ಅಡಿಯಲ್ಲಿ ಈ ಮಾಹಿತಿ ಲಭ್ಯವಾಗಿದೆ. ರಾಜ್ಯದ ವಿವಿಐಪಿ ಅತಿಥಿಗಳು, ಕೇಂದ್ರ ಸಚಿವರು, ಐಎಎಸ್ ಅಧಿಕಾರಿಗಳು ಅಧಿಕೃತ ಕರ್ತವ್ಯ ಮತ್ತು ಜೊತೆಗಿದ್ದ ನಿಯೋಗಗಳ ಸದಸ್ಯರು, ಕರ್ನಾಟಕ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರುಗಳು ಸೇರು ಹಲವು ಗಣ್ಯರಿಗೆ ಖರ್ಚು ಮಾಡಲಾಗಿದೆ ಅಂತ ಹೇಳಲಾಗುತ್ತಿದೆ.
ಇದನ್ನೂ ಓದಿ: Madalu Prashant: ಬಗೆದಷ್ಟು ಹೊರ ಬರುತ್ತಿದೆ ಮಾಡಾಳು ಮಗನ ಭ್ರಷ್ಟಾಚಾರ! ಡೀಲ್ ನಡೆಸ್ತಿದ್ದನಾ ಪ್ರಶಾಂತ್?
ಬಿಎಸ್‌ವೈ ಅವಧಿಯಲ್ಲಿ 30.04 ಕೋಟಿ ರೂಪಾಯಿ ಖರ್ಚು!
2019 ರಲ್ಲಿ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದಾಗ, ರಾಜ್ಯದ ಅತಿಥಿಗಳು, ಕೇಂದ್ರ ಸಚಿವರು, ಐಎಎಸ್ ಅಧಿಕಾರಿಗಳು ಅಧಿಕೃತ ಕರ್ತವ್ಯ ಮತ್ತು ಜೊತೆಗಿದ್ದ ನಿಯೋಗಗಳು, ಕರ್ನಾಟಕ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು, ಕೇಂದ್ರ ಸಮಿತಿಗಳ ಅಧ್ಯಕ್ಷರು ಮುಂತಾದ ಗಣ್ಯರಿಗೆ ಆತಿಥ್ಯ ನೀಡಲು 30.04 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದ್ಯಂತೆ.
ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಖರ್ಚಾಗಿದ್ದೆಷ್ಟು?
ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ 2021-22ರ ಆರ್ಥಿಕ ವರ್ಷದಲ್ಲಿ 20.47 ಕೋಟಿ ರೂಪಾಯಿಗಳಷ್ಟು ಹಣವನ್ನು ಅತಿಥಿಗಳ ಸತ್ಕಾರಕ್ಕಾಗಿ ಖರ್ಚು ಮಾಡಲಾಗಿದ್ಯಂತೆ. ಇದರ ಜತೆಗೆ ಇದೇ ಅವಧಿಯಲ್ಲಿ ಸಿಎಂಒದಿಂದ ಅತಿಥಿಗಳಿಗೆ ಆತಿಥ್ಯ ನೀಡಲು ಒಟ್ಟು 168 ಕೋಟಿ ರೂ ಖರ್ಚಾಗಿದ್ಯಂತೆ.
ಯಾವುದಕ್ಕೆಲ್ಲ ಖರ್ಚು ಮಾಡಲಾಗಿದೆ?
ಈ ಲೆಕ್ಕವು ಕಾಫಿ ಮತ್ತು ಚಹಾ, ಆಹಾರ, ಇಂಧನ, ಸಾರಿಗೆ ಮತ್ತು ಹಾಲಿನ ವೆಚ್ಚಗಳನ್ನು ಒಳಗೊಂಡಿದೆ.
ಸಿದ್ದರಾಮಯ್ಯ ಅವಧಿಯಲ್ಲಿ ಎಷ್ಟು ಖರ್ಚಾಗಿದೆ?
2013 ರಿಂದ 2018 ರವರೆಗಿನ ಐದು ವರ್ಷಗಳ ಅವಧಿಯಲ್ಲಿ ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸರ್ಕಾರಿ ಹಾಸ್ಟೆಲ್‌ಗಳು ಮತ್ತು ಅತಿಥಿ ಗೃಹಗಳು ಸೇರಿದಂತೆ ಸಾಮಾನ್ಯ ಆತಿಥ್ಯ ವೆಚ್ಚಗಳು, ಸಿಎಂಒ ಅಡಿಯಲ್ಲಿ ಸಾರಿಗೆ ಮತ್ತು ಆಡಳಿತಾತ್ಮಕ ವೆಚ್ಚಗಳು 52 ಕೋಟಿಗಳಷ್ಟಿದೆ ಅಂತ ದಿ ಫೈಲ್ ವರದಿ ಮಾಡಿದೆ.
ಸಿದ್ದರಾಮಯ್ಯ ವಿರುದ್ದ ಆರೋಪಿಸಿದ್ದ ಬಿಜೆಪಿ
ಕೆಲ ದಿನಗಳ ಹಿಂದಷ್ಟೇ ಬಿಜೆಪಿ ನಾಯಕ ಎನ್‌ಆರ್ ರಮೇಶ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸುದ್ದಿಗೋಷ್ಠಿ ಮಾಡಿ, ಆರೋಪ ಮಾಡಿದ್ದರು. “ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಫಿ ತಿಂಡಿ ಹೆಸರಲ್ಲಿ 200 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಲೂಟಿ ಮಾಡಿದ್ದಾರೆ” ಅಂತ ರಮೇಶ್ ಆರೋಪಿಸಿದ್ದರು.
ಬಿಜೆಪಿ ಆರೋಪಕ್ಕೆ ಉತ್ತರ ನೀಡಿದ್ದ ಸಿದ್ದರಾಮಯ್ಯ
ಇನ್ನು ಬಿಜೆಪಿ ಆರೋಪಕ್ಕೆ ದಾಖಲೆ ಮೂಲಕವೇ ಉತ್ತರಿಸಿದ್ದ ಸಿದ್ದರಾಮಯ್ಯ, “ಕಾಫಿ ತಿಂಡಿ ಊಟಕ್ಕೆ ಖರ್ಚಾಗಿದ್ದು 200 ಕೋಟಿ ಅಲ್ಲ, 3 ಕೋಟಿ 26 ಲಕ್ಷ ರೂಪಾಯಿಗಳು ಮಾತ್ರ” ಅಂತ ಸ್ಪಷ್ಟನೆ ನೀಡಿದ್ದರು.
ಸಿದ್ದರಾಮಯ್ಯ ಹೇಳಿದ್ದೇನು?
2013-14 ರಿಂದ 2017-18 ರವರೆಗೆ ಕಾಫಿ ತಿಂಡಿ ಸೇರಿದಂತೆ ಮುಖ್ಯಮಂತ್ರಿಗಳ ಕಛೇರಿಯು ಆತಿಥ್ಯಕ್ಕೋಸ್ಕರ ಖರ್ಚು ಮಾಡಿದ ದಾಖಲೆಗಳನ್ನು ಸರ್ಕಾರ ನನಗೆ ನೀಡಿದೆ. 13-5-2013 ರಿಂದ 30-01-2014 ರವರೆಗೆ 85.13 ಲಕ್ಷ ರೂಪಾಯಿಗಳು, 2014-15 ರಲ್ಲಿ 58.45 ಲಕ್ಷ ರೂಪಾಯಿಗಳು, 2015-16 ರಲ್ಲಿ 39.20 ಲಕ್ಷ ರೂಪಾಯಿಗಳು, 2016-17 ರಲ್ಲಿ 66.03 ಲಕ್ಷ ಮತ್ತು 2017-18 ರಲ್ಲಿ 77.26 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ ಅಂತ ಸಿದ್ದರಾಮಯ್ಯ ದಾಖಲೆ ನೀಡಿದ್ದರು.
ಬಿಜೆಪಿ ಸುಳ್ಳಿನ ಕಾರ್ಖಾನೆ ಎಂದಿದ್ದ ಸಿದ್ದರಾಮಯ್ಯ
5 ವರ್ಷಗಳ ನಮ್ಮ ಸಕಾರದ ಅವಧಿಯಲ್ಲಿ 3.26 ಕೋಟಿ ರೂಪಾಯಿಗಳನ್ನು ಮಾತ್ರ ಮುಖ್ಯಮಂತ್ರಿಗಳ ಕಚೇರಿಯ ಸಭೆಗಳಿಗೆ, ಜನತಾದರ್ಶನಗಳು ಸೇರಿದಂತೆ ಇತರೆ ಕಾರ್ಯಕ್ರಮಗಳಿಗೆ ಕಾಫಿ, ತಿಂಡಿ ಮತ್ತು ಊಟ ಮುಂತಾದವುಗಳಿಗೆ ಖರ್ಚಾಗಿದೆ ಅಂತ ಸಿದ್ದರಾಮಯ್ಯ ಪತಿಕ್ರಾ ಹೇಳಿಕೆ ಬಿಡುಗಡೆ ಮಾಡಿದ್ದರು. ಜೊತೆಗೆ ಬಿಜೆಪಿ ಸುಳ್ಳಿನ ಕಾರ್ಖಾನೆ ಅಂತ ಕೆಂಡಾಮಂಡಲರಾಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ