• Home
  • »
  • News
  • »
  • explained
  • »
  • Explained: 3 ಬಾರಿ ಬ್ಯಾನ್ ಆಗಿತ್ತು RSS; ನಿಷೇಧಿಸಿದ್ದಾದ್ರೂ ಯಾರು?

Explained: 3 ಬಾರಿ ಬ್ಯಾನ್ ಆಗಿತ್ತು RSS; ನಿಷೇಧಿಸಿದ್ದಾದ್ರೂ ಯಾರು?

ಆರ್​ಎಸ್​ಎಸ್​ (ಸಾಂಕೇತಿಕ ಚಿತ್ರ)

ಆರ್​ಎಸ್​ಎಸ್​ (ಸಾಂಕೇತಿಕ ಚಿತ್ರ)

ಯಾವಾಗೆಲ್ಲಾ, ಯಾವ ಕಾರಣಕ್ಕಾಗಿ ಸಂಘಪರಿವಾರ ಬ್ಯಾನ್‌ ಆಗಿತ್ತು ಎಂಬ ಸಂಕ್ಷಿಪ್ತ ಇತಿಹಾಸವನ್ನು ನಾವಿಲ್ಲಿ ತಿಳಿಯೋಣ.

  • Share this:

ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದಡಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಮೇಲೆ ಸೆಪ್ಟೆಂಬರ್ 28 ರಂದು ಕೇಂದ್ರ ಸರ್ಕಾರ ನಿಷೇಧ ಹೇರುತ್ತಿದ್ದಂತೆ, ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನೂ (RSS)  ಸಹ ಬ್ಯಾನ್‌ ಮಾಡುವಂತೆ ದೊಡ್ಡದೊಂದು ಕೂಗು ಕೇಳಿಬರುತ್ತಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಹಾರದ ಲಾಲು ಪ್ರಸಾದ್ ಮತ್ತು ಕೇರಳದ ರಮೇಶ್ ಚೆನ್ನಿತಲಾ ಅವರಂತಹ ಹಲವಾರು ರಾಜಕೀಯ ನಾಯಕರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್) ಸಹ ನಿಷೇಧಿಸಬೇಕು (RSS Ban) ಎಂದು ಒತ್ತಾಯಿಸುತ್ತಿದ್ದಾರೆ. ವಿಶ್ವದ ಅತ್ಯಂತ ವಿಶಾಲ ಸಂಘಟನೆಯಾದ ಆರ್‌ಎಸ್ಎಸ್ ಕೂಡ ಈಗಾಗಲೇ ದೇಶದಲ್ಲಿ ಮೂರು ಬಾರಿ ನಿಷೇಧಕ್ಕೊಳಗಾಗಿತ್ತು. ಹೌದು ಸ್ವಾತಂತ್ರ್ಯ ನಂತರ ಕೂಡ ಮೂರು ಬಾರಿ ಆರ್‌ಎಸ್ಎಸ್ ನಿಷೇಧಕೊಳ್ಳಗಾಗಿತ್ತು.


ಹಾಗಿದ್ದರೆ ಇಲ್ಲಿ ನಾವು ಯಾವಾಗೆಲ್ಲಾ, ಯಾವ ಕಾರಣಕ್ಕಾಗಿ ಸಂಘಪರಿವಾರ ಬ್ಯಾನ್‌ ಆಗಿತ್ತು ಎಂಬ ಸಂಕ್ಷಿಪ್ತ ಇತಿಹಾಸವನ್ನು ನಾವಿಲ್ಲಿ ತಿಳಿಯೋಣ.


1) ಮಹಾತ್ಮ ಗಾಂಧಿಯವರ ಹತ್ಯೆಯ ನಂತರ, 1948ರಲ್ಲಿ ನಿಷೇಧ


ಮಹಾತ್ಮ ಗಾಂಧಿಯವರನ್ನು ನಾಥೂರಾಂ ಗೋಡ್ಸೆ ಕೊಂದ ಕೆಲವು ದಿನಗಳ ನಂತರ, ಫೆಬ್ರವರಿ 4, 1948 ರಂದು ಆರ್‌ಎಸ್ಎಸ್ ಅನ್ನು ನಿಷೇಧಿಸಲಾಯಿತು. "ದೇಶದಲ್ಲಿ ಅಶಾಂತಿ, ದ್ವೇಷ ಹರಡಿದ್ದು, ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವ ಶಕ್ತಿಗಳನ್ನು ಬೇರುಸಹಿತ ಕಿತ್ತೆಸೆಯಲು ಆರ್‌ಎಸ್ಎಸ್ ಮೇಲೆ ನಿಷೇಧವನ್ನು ಹೇರಲಾಗುತ್ತಿದೆ" ಎಂದು ಸರ್ಕಾರ ಆ ಸಂದರ್ಭದಲ್ಲಿ ಹೇಳಿತ್ತು.


ಅಂದಿನ ಸರ್ಕಾರ ಪ್ರತಿಕ್ರಿಯಿಸಿದ್ದೇನು?
“ದೇಶದ ಹಲವಾರು ಭಾಗಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವೈಯಕ್ತಿಕ ಸದಸ್ಯರು ಬೆಂಕಿ ಹಚ್ಚುವಿಕೆ, ದರೋಡೆ, ಡಕಾಯಿತಿ ಮತ್ತು ಕೊಲೆಗಳನ್ನು ಒಳಗೊಂಡ ಹಿಂಸಾಚಾರದಲ್ಲಿ ತೊಡಗಿದ್ದಾರೆ ಮತ್ತು ಅಕ್ರಮ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಿದ್ದಾರೆ ಎಂದು ಕಂಡುಬಂದಿದೆ. ಅವರು ಭಯೋತ್ಪಾದಕ ವಿಧಾನಗಳನ್ನು ಆಶ್ರಯಿಸಲು, ಬಂದೂಕುಗಳನ್ನು ಸಂಗ್ರಹಿಸಲು, ಸರ್ಕಾರದ ವಿರುದ್ಧ ಅಸಮಾಧಾನವನ್ನು ಸೃಷ್ಟಿಸಲು ಮತ್ತು ಪೊಲೀಸರು ಮತ್ತು ಮಿಲಿಟರಿಯನ್ನು ಅಧೀನಗೊಳಿಸುವಂತೆ ಜನರನ್ನು ಉತ್ತೇಜಿಸುವ ಕರಪತ್ರಗಳನ್ನು ಪ್ರಸಾರ ಮಾಡುತ್ತಿರುವುದು ಕಂಡುಬಂದಿದೆ, ”ಎಂದು ಸರ್ಕಾರದ ಹೇಳಿಕೆ ತಿಳಿಸಿತ್ತು.


ಹಿಂಸಾಚಾರವನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರದ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಸಂಘವನ್ನು ಕಾನೂನುಬಾಹಿರ ಸಂಘವೆಂದು ಘೋಷಿಸಲು ನಿರ್ಧರಿಸಿದೆ ಎಂದು ಹೇಳಿತ್ತು.


ಸರಸಂಘಚಾಲಕ ಗೋಳ್ವಾಲ್ಕರ್ ಬಂಧನ
ಗಾಂಧಿಯವರನ್ನು ಕೊಂದ ನಂತರವಂತೂ ಆರ್​ಎಸ್​ಎಸ್​ ಎಲ್ಲ ಶಾಖೆಗಳಲ್ಲೂ ಸಿಹಿ ಹಂಚಿ ಸಮಾರಂಭಗಳನ್ನು ಏರ್ಪಡಿಸಲಾಗಿತ್ತು. ಹೀಗಾಗಿ ಫೆಬ್ರವರಿಯಲ್ಲಿ ಹಿಂದೂ ಮಹಾಸಭಾದ ಮುಖ್ಯಸ್ಥ ಸಾವರ್ಕರ್ ಅವರನ್ನು ಬಂಧಿಸಲಾಯಿತಲ್ಲದೆ ಸರ್ದಾರ್ ವಲ್ಲಭಭಾಯಿ ಪಟೇಲ್ ನೇತೃತ್ವದ ಕೇಂದ್ರ ಗೃಹ ಸಚಿವಾಲಯವು ಫೆಬ್ರವರಿ 4,1948 ರಂದು ಆರ್‌ಎಸ್ಎಸ್ ನಿಷೇಧಿಸಿ ಅದರ ಸರಸಂಘಚಾಲಕ ಗೋಳ್ವಾಲ್ಕರ್ ಅವರನ್ನೂ ಒಳಗೊಂಡಂತೆ ಹಲವಾರು ಆರೆಸ್ಸೆಸ್ ಕಾರ್ಯಕರ್ತರನ್ನು ಬಂಧಿಸಿತು.


1948 ರಲ್ಲಿ RSS ಮೇಲೆ ಹೇರಿದ್ದ ನಿಷೇಧವನ್ನು ಹಿಂಪಡೆಯಲು ಹಲವಾರು ಮನವಿಗಳು ಕೇಳಿ ಬಂದಿದ್ದವು. ಆಗಿನ ಸರಸಂಘಚಾಲಕ್ ಎಂಎಸ್ ಗೋಲ್ವಾಲ್ಕರ್ ಅವರು ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಭೇಟಿ ಮಾಡಿದರು ಮತ್ತು ಪಟೇಲ್ ಮತ್ತು ಪ್ರಧಾನಿ ಜವಾಹರಲಾಲ್ ನೆಹರು ಇಬ್ಬರಿಗೂ ಪತ್ರ ಬರೆದರು.


ನಿಷೇಧ ತೆಗೆಯಲು ಸತ್ಯಾಗ್ರಹ
ಆರ್‌ಎಸ್‌ಎಸ್‌ನ ಬಲ್ಲ ಮೂಲಗಳ ಮಾಹಿತಿ ಪ್ರಕಾರ, ಸರ್ಕಾರದೊಂದಿಗಿನ ಮಾತುಕತೆ ವಿಫಲವಾದ ನಂತರ, ಸ್ವಯಂಸೇವಕರು ಡಿಸೆಂಬರ್ 9, 1948 ರಂದು ಸಂಘದ ಮೇಲಿನ ನಿಷೇಧವನ್ನು ತೆಗೆದುಹಾಕಲು ಒತ್ತಾಯಿಸಿ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದರು ಎಂದು ತಿಳಿದು ಬಂದಿದೆ.


ಆರ್‌ಎಸ್‌ಎಸ್‌ ಪ್ರತಿಕ್ರಿಯೆ ಆಗ ಹೇಗಿತ್ತು?
ಈ ಎಲ್ಲಾ ಉಗ್ರ ಹೋರಾಟಗಳ ಒಂದು ವರ್ಷದ ನಂತರ, ಜುಲೈ 11, 1949 ರಂದು ನಿಷೇಧವನ್ನು ತೆಗೆದುಹಾಕಲಾಯಿತು. ನಿಷೇಧವನ್ನು ತೆಗೆದುಹಾಕಿದ ಸರ್ಕಾರ ತನ್ನ ಪ್ರಕಟಣೆಯಲ್ಲಿ “ಆರ್‌ಎಸ್‌ಎಸ್ ನಾಯಕನು ಕೇಂದ್ರ ಸಂವಿಧಾನದ ನಿಷ್ಠೆಯನ್ನು ಮತ್ತು ರಾಷ್ಟ್ರೀಯ ಧ್ವಜದ ಗೌರವವನ್ನು ಆರ್‌ಎಸ್‌ಎಸ್‌ನ ಸಂವಿಧಾನದಲ್ಲಿ ಹೆಚ್ಚು ಸ್ಪಷ್ಟವಾಗಿ ಮಾಡಲು ಕೈಗೊಂಡಿದ್ದಾರೆ.  ಹಿಂಸಾತ್ಮಕ ಮತ್ತು ರಹಸ್ಯ ವಿಧಾನಗಳನ್ನು ನಂಬುವ ಅಥವಾ ಆಶ್ರಯಿಸುವ ವ್ಯಕ್ತಿಗಳಿಗೆ ಸಂಘದಲ್ಲಿ ಸ್ಥಾನವಿಲ್ಲ ಎಂದು ಸ್ಪಷ್ಟವಾಗಿ ಒದಗಿಸುವುದು. ಸಂವಿಧಾನವನ್ನು ಪ್ರಜಾಪ್ರಭುತ್ವದ ಆಧಾರದ ಮೇಲೆ ಕೆಲಸ ಮಾಡಲಾಗುವುದು ಎಂದು ಆರ್‌ಎಸ್‌ಎಸ್ ನಾಯಕ ಸ್ಪಷ್ಟಪಡಿಸಿದ್ದಾರೆ" ಎಂದು ಹೇಳಿತ್ತು.


ಆರ್‌ಎಸ್‌ಎಸ್ ವೆಬ್‌ಸೈಟ್‌ನಲ್ಲಿ ಸಂಘದ ಸಂವಿಧಾನವನ್ನು 1949 ರಲ್ಲಿ ರಚಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಸರ್ಕಾರಿ ನೌಕರರು ಆರ್‌ಎಸ್‌ಎಸ್‌ ಸೇರುವುದನ್ನು ನಿಷೇಧಿಸಲಾಗಿದೆ. 1966 ರಲ್ಲಿ, ಗೃಹ ಸಚಿವಾಲಯವು ಆರ್‌ಎಸ್‌ಎಸ್ ಅಥವಾ ಜಮಾತ್-ಎ-ಇಸ್ಲಾಮಿ ಆಯೋಜಿಸುವ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸುವುದನ್ನು ನಿರ್ಬಂಧಿಸುವ ಆದೇಶವನ್ನು ಹೊರಡಿಸಿತು.


2) ತುರ್ತು ಪರಿಸ್ಥಿತಿಯಲ್ಲಿ ನಿಷೇಧ
ಇಂದಿರಾಗಾಂಧಿ ಅವರು ದೇಶದ ಪ್ರಧಾನಿಯಾಗಿದ್ದ ಈ ವೇಳೆ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಈ ಸಂದರ್ಭದಲ್ಲಿ ಆರ್‌ಎಸ್ಎಸ್ ಮೇಲೆ ಹಿಡಿತ ಸಾಧಿಸಲು ಇಂದಿರಾಗಾಂಧಿ ನೇತೃತ್ವದ ಸರ್ಕಾರ ದಿಟ್ಟ ಹೆಜ್ಜೆ ಇರಿಸಿತ್ತು.


ಇದೇ ಉದ್ದೇಶದಿಂದ ಹಾಗೂ ಆರ್‌ಎಸ್‌ಎಸ್‌ ಕಾರ್ಯ ಚಟುವಟಿಕೆಗಳ ಮೊಟಕುಗೊಳಿಸುವ ಉದ್ದೇಶದಿಂದ 1975ರಲ್ಲಿ ಈ ಸಂಘಟನೆಯನ್ನು ಬ್ಯಾನ್ ಮಾಡಲಾಗಿತ್ತು. ಜೂನ್ 25, 1975 ರಲ್ಲಿ ಇಂದಿರಾಗಾಂಧಿ ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿಯನ್ನು ಹೇರಿದ ನಂತರ, ಜುಲೈ 4 ರಂದು RSS ಅನ್ನು ನಿಷೇಧಿಸಲಾಯಿತು.


ಇಂದಿರಾ ಗಾಂಧಿ ಆಗ ಹೇಳಿದ್ದೇನು?
ತುರ್ತು ಪರಿಸ್ಥಿತಿಯ ಕುರಿತ ಪ್ರಶ್ನೆಯೊಂದಕ್ಕೆ ಉತ್ತರವಾಗಿ, ಜಯಪ್ರಕಾಶ್ ನಾರಾಯಣ್ ಅವರು ಮಹಾತ್ಮ ಗಾಂಧಿಯವರ ಹತ್ಯೆಗೆ ಪ್ರಚೋದನೆ ನೀಡಿದ ಮತ್ತು "ಮತಾಂಧ" ಹಿಂದೂ ಸಂಘಟನೆಯಾದ ಆರ್‌ಎಸ್‌ಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಇಂದಿರಾ ಹೇಳಿದ್ದರು.


ಇದನ್ನೂ ಓದಿ: Paresh Mesta Death Case: ಪರೇಶ್‌ ಮೇಸ್ತ ಅವರದ್ದು ಆಕಸ್ಮಿಕ ಸಾವಾ? ಅಷ್ಟಕ್ಕೂ ಗಲಭೆ ದಿನ ನಡೆದಿದ್ದೇನು?


ನಿಷೇಧಕ್ಕೆ ಗುರಿಯಾದ ಆರ್​ಎಸ್​ಎಸ್​ನ ಆಗಿನ ಸರಸಂಘಚಾಲಕ ಬಾಳಾಸಾಹೇಬ್ ದೇವರಸ್ ಅವರು 1975ರ ಆಗಸ್ಟ್​ ತಿಂಗಳಿನಿಂದಲೇ ಇಂದಿರಾ ಗಾಂಧಿಯವರಿಗೆ ಪತ್ರವನ್ನು ಬರೆಯಲು ಪ್ರಾರಂಭಿಸಿ ಇಂದಿರಾ ಗಾಂಧಿಯವರ ಸರ್ವಾಧಿಕಾರಿ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಆರ್​ಎಸ್​ಎಸ್ ಬಗ್ಗೆ ಸರಕಾರಕ್ಕೆ ತಪ್ಪುಅಭಿಪ್ರಾಯ ಇದೆಯೆಂದೂ, ತಾವು ಇಂದಿರಾ ಗಾಂಧಿಯವರ ಜೊತೆಗೆ ಹೆಜ್ಜೆಹಾಕಲು ಸಿದ್ಧವೆಂದು ಹೇಳುತ್ತಾ ಆರೆಸ್ಸೆಸ್ ಮೇಲಿನ ನಿಷೇಧವನ್ನು ತೆಗೆದುಹಾಕಲು ವಿನಂತಿಗಳನ್ನು ಪ್ರಾರಂಭಿಸಿದರು.


ಮನವಿಯಲ್ಲಿ ಏನಿತ್ತು?
ಇಂದಿರಾ ಗಾಂಧಿಗೆ ಪತ್ರ ಬರೆದ ಬಾಳಾಸಾಹೇಬ್ “ನಿಷೇಧ ಆದೇಶವು ನಿಷೇಧಕ್ಕೆ ನಿರ್ದಿಷ್ಟ ಕಾರಣವನ್ನು ನೀಡುವುದಿಲ್ಲ. ದೇಶದ ಆಂತರಿಕ ಭದ್ರತೆ ಮತ್ತು ಸಾರ್ವಜನಿಕ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಏನನ್ನೂ ಆರ್‌ಎಸ್‌ಎಸ್ ಎಂದಿಗೂ ಮಾಡಿಲ್ಲ. ಇಡೀ ಹಿಂದೂ ಸಮಾಜವನ್ನು ಸಂಘಟಿಸುವುದು ಮತ್ತು ಅದನ್ನು ಏಕರೂಪ ಮತ್ತು ಸ್ವಾಭಿಮಾನಿಯನ್ನಾಗಿ ಮಾಡುವುದು ಸಂಘದ ಉದ್ದೇಶವಾಗಿದೆ. ಸಂಘವು ಎಂದಿಗೂ ಹಿಂಸಾಚಾರದಲ್ಲಿ ತೊಡಗಿಲ್ಲ ಎಂಬುದನ್ನು ಸ್ಪಷ್ಟಪಡಿಸುವುದು ಅವಶ್ಯಕ. ಹಿಂಸೆಯನ್ನು ಎಂದೂ ಕಲಿಸಿಲ್ಲ. ಸಂಘವು ಅಂತಹ ವಿಷಯಗಳನ್ನು ನಂಬುವುದಿಲ್ಲ" ಎಂದು ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ಪತ್ರದಲ್ಲಿ ಮನವಿ ಮಾಡಿದ್ದರು.


ಹಲವಾರು ಸುತ್ತಿನ ಮಾತುಕತೆಗಳ ನಂತರ, ತುರ್ತು ಪರಿಸ್ಥಿತಿ ಕೊನೆಗೊಂಡಾಗ ಮಾರ್ಚ್ 22, 1977 ರಂದು ಆರೆಸ್ಸೆಸ್‌ ಮೇಲೆ ಹೇರಿದ್ದ ನಿಷೇಧವನ್ನು ತೆಗೆದುಹಾಕಲಾಯಿತು.


3) ಬಾಬರಿ ಮಸೀದಿ ಧ್ವಂಸದ ನಂತರ ಮೂರನೇ ಬಾರಿ ಬ್ಯಾನ್ ‌
1992 ಈ ವೇಳೆಗೆ ಆರ್‌ಎಸ್‌ಎಸ್‌ ಎರಡು ಬಾರಿ ಬ್ಯಾನ್ ಆಗಿತ್ತು. ಇದೆಲ್ಲ ಮುಗಿದ ಬಳಿಕ 1992ರಲ್ಲಿ ಬಾಬ್ರಿ ಮಸೀದಿ ಧ್ವಂಸ ಸಂಭವಿಸಿತ್ತು. ಈ ಪ್ರಕರಣ ದೇಶದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು.


ಈ ವೇಳೆ ಪಿವಿ ನರಸಿಂಹ ರಾವ್ ಅವರು ದೇಶದ ಪ್ರಧಾನಿಯಾಗಿದ್ದರು. ಶಂಕರರಾವ್ ಬಲವಂತರಾವ್ ಚವಾಣ್ ಅವರು ಅಂದಿನ ಗೃಹ ಸಚಿವರಾಗಿದ್ದರು. ಈ ವೇಳೆ ಆರ್‌ಎಸ್ಎಸ್ ಅನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು.


ನಿಷೇಧ ಹಿಂತೆಗೆತ ಆಗಿದ್ದು ಹೇಗೆ?
ಅಯೋಧ್ಯೆಯಲ್ಲಿನ ಬಾಬರಿ ಮಸೀದಿಯನ್ನು ಡಿಸೆಂಬರ್ 6, 1992 ರಂದು ಕೆಡವಲಾಯಿತು.  ಡಿಸೆಂಬರ್ 10 ರಂದು RSS ಅನ್ನು ನಿಷೇಧಿಸಲಾಯಿತು. ನ್ಯಾಯಮೂರ್ತಿ ಬಹ್ರಿ ಆಯೋಗವು "ಅನ್ಯಾಯ" ಎಂದು ಕಂಡುಹಿಡಿದ ನಂತರ ಜೂನ್ 4, 1993 ರಂದು ಮೂರನೇ ನಿಷೇಧವನ್ನು ತಿಂಗಳೊಳಗೆ ತೆಗೆದುಹಾಕಿತು.


ಡಿಸೆಂಬರ್ 2009 ರಲ್ಲಿ, ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಅವರು ಮಾಧ್ಯಮವೊಂದಕ್ಕೆ ಬರೆದ ಲೇಖನವೊಂದರಲ್ಲಿ ಈ ರೀತಿ ನಮೂದಿಸಿದ್ದರು, “ಆರ್‌ಎಸ್‌ಎಸ್ ಕಾನೂನುಬಾಹಿರವೆಂದು ಘೋಷಿಸುವ ಅಧಿಸೂಚನೆಯನ್ನು ಕಾನೂನು ಅವಶ್ಯಕತೆಯಂತೆ ದೆಹಲಿ ಹೈಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ಪಿಕೆ ಬಹ್ರಿ ನೇತೃತ್ವದ ನ್ಯಾಯಮಂಡಳಿಯು ತೀರ್ಪು ನೀಡಲು ಕಳುಹಿಸಲಾಗಿದೆ.


ಇದನ್ನೂ ಓದಿ: Explained: ವಾಯುಪಡೆಗೆ ಲಘು ಯುದ್ಧ ವಿಮಾನ ಸೇರ್ಪಡೆ: 'ಪ್ರಚಂಡ್' ವಿಶೇಷತೆ ಏನು? ಸೇನೆಗೆ ಆಗೋ ಲಾಭವೇನು?


ನ್ಯಾಯಮೂರ್ತಿ ಬಹ್ರಿಯವರ ತೀರ್ಪನ್ನು ಗೃಹ ಸಚಿವಾಲಯವು ಜೂನ್ 18,1993 ರಂದು ತಿಳಿಸಿತು, ಇದರಲ್ಲಿ 71 ನೇ ಪುಟದಲ್ಲಿ, ನ್ಯಾಯಾಧೀಶರು PW-7, ಅತ್ಯಂತ ಹಿರಿಯ IB ಅಧಿಕಾರಿಯ ಪುರಾವೆಯನ್ನು ಗಮನಿಸಿದ್ದು ಅದರಲ್ಲಿ ಈ ಸಂಘ (ಆರ್‌ಎಸ್‌ಎಸ್) ವಿವಾದಿತ ಕಟ್ಟಡ ಬಾಬರಿ ಮಸೀದಿಯನ್ನು ನಾಶಮಾಡಲು ಮೊದಲೇ ಯೋಜಿಸಿದ ಯಾವುದೇ ವಸ್ತು ಪುರಾವೆಗಳಿಲ್ಲ ಎಂದಿತ್ತು.


ಪೂರ್ವ ಯೋಜನಾ ಸಿದ್ಧಾಂತವನ್ನು ಬೆಂಬಲಿಸದ ಕೇಂದ್ರ ಸರ್ಕಾರವು ಸಿದ್ಧಪಡಿಸಿದ ಶ್ವೇತಪತ್ರವನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆರ್‌ಎಸ್‌ಎಸ್ ಅನ್ನು ಕಾನೂನುಬಾಹಿರ ಎಂದು ಘೋಷಿಸಲು ಯಾವುದೇ ಸಾಕಷ್ಟು ಆಧಾರವಿಲ್ಲ ಎಂದು ನ್ಯಾಯಪೀಠ ಹೇಳಿದೆ ಎಂದು ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದರು.

Published by:ಗುರುಗಣೇಶ ಡಬ್ಗುಳಿ
First published: