Air Passengers: ವಿಮಾನ ಪ್ರಯಾಣಿಕರಿಗೆ ಗೊತ್ತಿರಬೇಕಾದ ಅವರ ಹಕ್ಕುಗಳು ಮತ್ತು ಪಾಲಿಸಬೇಕಾದ ನಿಯಮಗಳಿವು

ಭಾರತ ಸರ್ಕಾರದ ನಾಗರಿಕ ವಿಮಾನಯಾನ ಸಚಿವಾಲಯವು ಫೆಬ್ರವರಿ 2019 ರಲ್ಲೇ ವಿಮಾನ ಪ್ರಯಾಣಿಕರ ಹಕ್ಕುಗಳೊಂದಿಗೆ ವ್ಯವಹರಿಸುವ ಬಗ್ಗೆ ಪ್ರಯಾಣಿಕರಿಗಾಗಿ ಚಾರ್ಟರ್ ಅನ್ನು ಪ್ರಕಟಿಸಿದೆ. ಆ ಬಗ್ಗೆ ಪ್ರಯಾಣಿಕರ ಹಕ್ಕು ಸೇರಿಸಿ ಅವರು ಪಾಲಿಸಬೇಕಾದ ನೀತಿ/ನಿಯಮಗಳು ಏನು ಎಂಬುದರ ಬಗ್ಗೆ ಇಲ್ಲಿ ತಿಳಿಯೋಣ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಭಾರತ ಸರ್ಕಾರದ (Indian Government) ನಾಗರಿಕ ವಿಮಾನಯಾನ ಸಚಿವಾಲಯವು ಫೆಬ್ರವರಿ 2019 ರಲ್ಲೇ ವಿಮಾನ ಪ್ರಯಾಣಿಕರ ಹಕ್ಕುಗಳೊಂದಿಗೆ ವ್ಯವಹರಿಸುವ ಬಗ್ಗೆ ಪ್ರಯಾಣಿಕರಿಗಾಗಿ ಚಾರ್ಟರ್ ಅನ್ನು ಪ್ರಕಟಿಸಿದೆ. ವಿಮಾನ ನಿಯಮಗಳು, 1937 ರ ನಿಯಮ 133A ರ ನಿಬಂಧನೆಗಳ ಅಡಿಯಲ್ಲಿ ನಾಗರಿಕ ವಿಮಾನಯಾನ (Airlines) ಅಗತ್ಯತೆಗಳನ್ನು (CAR) ಸಹ ಇದರಲ್ಲಿ ನೀಡಲಾಗಿದೆ, ಮಾಹಿತಿ, ಮಾರ್ಗದರ್ಶನ ಮತ್ತು ಅಂತಾರಾಷ್ಟ್ರೀಯ ಸ್ಥಳಗಳಿಗೆ ವಿಮಾನಗಳನ್ನು (Flights) ನಿರ್ವಹಿಸುವ ಅಥವಾ ಭವಿಷ್ಯದಲ್ಲಿ ಅಂತಹ ಅಂತಾರಾಷ್ಟ್ರೀಯ ಸ್ಥಳಗಳಿಗೆ ವಿಮಾನಗಳನ್ನು ನಿರ್ವಹಿಸಲು ಉದ್ದೇಶಿಸಿರುವ ಎಲ್ಲಾ ಸಂಸ್ಥೆಗಳ ಅನುಸರಣೆಗಾಗಿ ಇದು ಲಭ್ಯವಿದೆ. ಹಾಗಾದರೆ ಬನ್ನಿ, ಆ ಬಗ್ಗೆ ಪ್ರಯಾಣಿಕರ ಹಕ್ಕು (right of passengers) ಸೇರಿಸಿ ಅವರು ಪಾಲಿಸಬೇಕಾದ ನೀತಿ/ನಿಯಮಗಳು ಏನು ಎಂಬುದರ ಬಗ್ಗೆ ಇಲ್ಲಿ ತಿಳಿಯೋಣ.

ಪ್ರಮುಖ ವಿಚಾರವೆಂದರೆ CAR ಮತ್ತು ಪ್ಯಾಸೆಂಜರ್ ಚಾರ್ಟರ್ ವಿಮಾನ ಪ್ರಾಧಿಕಾರಗಳು ಪ್ರಯಾಣಿಕರ ಹಕ್ಕುಗಳನ್ನು ಗುರುತಿಸುತ್ತವೆ ಮತ್ತು ಅವರ ಹಿತಾಸಕ್ತಿಗಳನ್ನು ರಕ್ಷಿಸುವ ಗುರಿಯನ್ನು ಹೊಂದಿವೆ. ಆದ್ದರಿಂದ ಅನ್ವಯವಾಗುವ CAR ನ ನಿಬಂಧನೆಗಳ ಅಡಿಯಲ್ಲಿ ಪ್ರಯಾಣಿಕರ ಹಿತಾಸಕ್ತಿಗೆ ಸಂಬಂಧಿಸಿದಂತೆ ಯಾವುದೇ ಉಲ್ಲಂಘನೆ ಆದ ಸಂದರ್ಭದಲ್ಲಿ, ಉಲ್ಲಂಘಿಸುವ ಆ ಏರ್‌ಲೈನ್ ವಿರುದ್ಧ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬಹುದು; ಉಲ್ಲಂಘನೆಯನ್ನು ಸೇವೆಯ ಕೊರತೆ ಎಂದು ಪರಿಗಣಿಸಬಹುದು; ಮತ್ತು ಪ್ರಯಾಣಿಕರು ಪರಿಹಾರಕ್ಕಾಗಿ ಸೂಕ್ತವಾದ ಕಾನೂನು ವೇದಿಕೆಯನ್ನು ಕೂಡ ಸಂಪರ್ಕಿಸಬಹುದು.

ಬೋರ್ಡಿಂಗ್ ನಿರಾಕರಣೆ
ಫ್ಲೈಟ್‌ ಓವರ್‌ಬುಕ್ ಆಗಿದೆ ಎಂದು ಪ್ರಯಾಣಿಕರಿಗೆ ಬೋರ್ಡಿಂಗ್ ನಿರಾಕರಿಸಿದರೆ, ಮೂಲ ವಿಮಾನದ ನಿರ್ಗಮನದ ಒಂದು ಗಂಟೆಯೊಳಗೆ ಅವನಿಗೆ / ಆಕೆಗೆ ಪರ್ಯಾಯ ವಿಮಾನವನ್ನು ನೀಡದಿದ್ದರೆ ಅವನು / ಅವಳು ಏರ್‌ಲೈನ್‌ನಿಂದ ಪರಿಹಾರವನ್ನು ಪಡೆಯಲು ಅರ್ಹರಾಗಿರುತ್ತಾರೆ.

ಒಂದು ವೇಳೆ ಕಾಯ್ದಿರಿಸಿದ ನಿಗದಿತ ನಿರ್ಗಮನದ ಅವಧಿಯ ಮುಂದಿನ 24 ಗಂಟೆಗಳ ಒಳಗೆ ನಿರ್ಗಮಿಸಲು ಪರ್ಯಾಯ ಏರ್‌ಲೈನ್ ವಿಮಾನವನ್ನು ಏರ್ಪಡಿಸಿದರೆ, ಆಗ ಮೊದಲಿನ ಏರ್‌ಲೈನ್‌ ಸಂಸ್ಥೆ ಪ್ರಯಾಣಿಕರಿಗೆ 200% ರಷ್ಟು ಕಾಯ್ದಿರಿಸಿದ ಏಕಮುಖ ಮೂಲ ಶುಲ್ಕ ಮತ್ತು ಏರ್‌ಲೈನ್ ಇಂಧನ ಶುಲ್ಕವನ್ನು ಪಾವತಿಸುವ ಮೂಲಕ ಗರಿಷ್ಠ ರೂ. 10,000ರ ವರೆಗೆ ಪರಿಹಾರ ನೀಡಬೇಕು.

ಇದನ್ನೂ ಓದಿ: Explained: ನವಿ ಮುಂಬೈ ವಿಮಾನ ನಿಲ್ದಾಣದ ಹೆಸರಿಗೆ ಹಗ್ಗಜಗ್ಗಾಟ; ಠಾಕ್ರೆ ಹೆಸರಿಡಲು ವಿರೋಧ

ಒಂದು ವೇಳೆ ಕಾಯ್ದಿರಿಸಿದ ನಿಗದಿತ ನಿರ್ಗಮನದ 24 ಗಂಟೆಗಳಿಗಿಂತ ಹೆಚ್ಚು ಸಮಯದ ನಂತರ ನಿರ್ಗಮಿಸಲು ಪರ್ಯಾಯ ವಿಮಾನವನ್ನು ಮೂಲ ಏರ್ಲೈನ್ ಸಂಸ್ಥೆ ಪ್ರಯಾಣಿಕರಿಗೆ ಏರ್ಪಡಿಸಿದರೆ, ಆಗ ಅದು ಕಾಯ್ದಿರಿಸಿದ ಏಕಮುಖ ಮೂಲ ದರದ 400% ಮತ್ತು ಏರ್‌ಲೈನ್ ಇಂಧನ ಶುಲ್ಕಕ್ಕೆ ಸಮಾನವಾದ ಮೊತ್ತವನ್ನು ಗರಿಷ್ಠ ಮೊತ್ತ 20,000 ರೂ. ವರೆಗೆ ಪರಿಹಾರ ನೀಡಬೇಕು. ಒಂದು ವೇಳೆ ಪ್ರಯಾಣಿಕರು ಪರ್ಯಾಯ ವಿಮಾನವನ್ನು ಆಯ್ಕೆ ಮಾಡಿಕೊಳ್ಳದಿದ್ದಲ್ಲಿ, ಏರ್‌ಲೈನ್‌ಗಳು ಟಿಕೆಟ್‌ನ ಸಂಪೂರ್ಣ ಮೌಲ್ಯ ಮತ್ತು ಕಾಯ್ದಿರಿಸಿದ ಏಕಮುಖ ಮೂಲ ದರದ 400% ರಷ್ಟು ಪರಿಹಾರವನ್ನು ಮತ್ತು ಗರಿಷ್ಠ ರೂ 20,000 ಕ್ಕೆ ಒಳಪಟ್ಟಿರುವಂತೆ ಪರಿಹಾರ ಮೊತ್ತ ನೀಡಬೇಕಾಗುತ್ತದೆ.

ವಿಳಂಬವಾದ ವಿಮಾನಗಳು
ವಿಮಾನವು 2-5 ಗಂಟೆಗಳ ಕಾಲ ವಿಳಂಬವಾದರೆ, ಆ ಏರ್ಲೈನ್ ಸಂಸ್ಥೆಯು ವಿಳಂಬವಾಗುವ ಸಮಯವನ್ನು ಆಧರಿಸಿ ಪ್ರಯಾಣಿಕರಿಗೆ ಉಚಿತ ಊಟ ಮತ್ತು ಉಪಹಾರವನ್ನು ನೀಡಬೇಕು. ಒಂದು ವೇಳೆ ವಿಮಾನವು ಆರು ಗಂಟೆಗಳಿಗಿಂತಲೂ ತಡವಾಗುವ ಸಂದರ್ಭದಲ್ಲಿ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಒಟ್ಟು ಟಿಕೆಟ್ ವೆಚ್ಚವನ್ನು ಮರುಪಾವತಿಸಬೇಕಾಗುತ್ತದೆ, ಅಥವಾ ಪ್ರಯಾಣಿಕರಿಗೆ ಪರ್ಯಾಯ ವಿಮಾನವನ್ನು ಏರ್ಪಾಡು ಮಾಡಿಕೊಡಬೇಕು.

ಇದನ್ನೂ ಓದಿ: Abortion Law: ಗರ್ಭಪಾತ ನಿಷೇಧ ಕಾನೂನು ಎಂದರೇನು? ಅಮೆರಿಕಾದಲ್ಲಿ ಆಕ್ರೋಶ ವ್ಯಕ್ತವಾಗಿದ್ದೇಕೆ?

ನಿಗದಿತ ನಿರ್ಗಮನಕ್ಕೆ 24 ಗಂಟೆಗಳ ಮೊದಲು ಆರು ಗಂಟೆಗಳಿಗೂ ಹೆಚ್ಚು ವಿಳಂಬವಾಗಲಿದೆ ಎಂದು ಏರ್‌ಲೈನ್ ತಿಳಿಸಿದ್ದು ವಿಮಾನವು 20:00 ಗಂಟೆಗಳಿಂದ 3:00 ಗಂಟೆಗಳ ಮಧ್ಯದ ಸಮಯದಲ್ಲಿ ನಿರ್ಗಮಿಸಲು ನಿರ್ಧರಿಸಿದ್ದರೆ ಆಗ ಅದು ಪ್ರಯಾಣಿಕರಿಗೆ ಹೋಟೆಲ್ ಸೌಕರ್ಯಗಳನ್ನು ಒದಗಿಸಬೇಕು. ವಿಮಾನವು 24 ಗಂಟೆಗಳ ಕಾಲ ವಿಳಂಬವಾದರೆ ಆಗಲೂ ನಿಯ ಅದೇ ರೀತಿ ಜಾರಿಯಲ್ಲಿ ಇರುತ್ತದೆ.

ರದ್ದತಿ
ವಿಮಾನಯಾನ ಪ್ರಾಧಿಕಾರದಿಂದ ಮಾಡಲಾಗಿರುವ ಚಾರ್ಟರ್ ಪ್ರಕಾರ, ಬುಕ್ ಮಾಡಿರುವ ವಿಮಾನ ಹಾರಾಟ ರದ್ದಾದ ಸಂದರ್ಭದಲ್ಲಿ ಪ್ರಯಾಣಿಕರು ಪರ್ಯಾಯ ಹಾರಾಟಕ್ಕೆ ಅರ್ಹರಾಗಿರುತ್ತಾರೆ ಅಥವಾ ಆ ವಿಮಾನದ ನಿರ್ಗಮನದ ಎರಡು ವಾರಗಳಲ್ಲಿ ವಿಮಾನ ರದ್ದತಿಯ ಬಗ್ಗೆ ಪ್ರಯಾಣಿಕರಿಗೆ ತಿಳಿಸಲು ವಿಮಾನಯಾನ ಸಂಸ್ಥೆ ವಿಫಲವಾದಲ್ಲಿ ಅದರ ಪೂರ್ಣ ಮರುಪಾವತಿಯನ್ನು ಪ್ರಯಾಣಿಕರಿಗೆ ಮಾಡಬೇಕಾಗುತ್ತದೆ.

ಇದಲ್ಲದೆ, ಚಾರ್ಟರ್ ಪ್ರಕಾರ, ವಿಮಾನಯಾನ ಸಂಸ್ಥೆಗಳು ನಿಗದಿತ ನಿರ್ಗಮನ ಸಮಯಕ್ಕಿಂತ 24 ಗಂಟೆಗಳ ಮೊದಲು ವಿಮಾನ ರದ್ದತಿಯ ಬಗ್ಗೆ ಪ್ರಯಾಣಿಕರಿಗೆ ತಿಳಿಸಬೇಕು. ನಿರ್ಗಮನದ 24 ಗಂಟೆಗಳ ಮೊದಲು ಪ್ರಯಾಣಿಕರಿಗೆ ತಿಳಿಸದಿದ್ದರೆ ಅಥವಾ ಅವನು / ಅವಳು ಪ್ರಯಾಣಿಕರ ತಪ್ಪಿಲ್ಲದೆ ರದ್ದತಿಯಿಂದಾಗಿ ಸಂಪರ್ಕ ವಿಮಾನವನ್ನು ಕಳೆದುಕೊಂಡರೆ, ವಿಮಾನಯಾನ ಸಂಸ್ಥೆಯು ಪರಿಹಾರವನ್ನು ನೀಡಬೇಕಾಗುತ್ತದೆ.

ಬದಲಿಸ್ಥಾನ
ನಿಗದಿತ ರೂಟ್ ಬದಲಾಗಿ ವಿಮಾನವನ್ನು ಬೇರೆ ಸ್ಥಾನಕ್ಕೆ ಬದಲಿಸಬೇಕಾಗಿ ಬಂದರೆ, ಅಂತಹ ಸಂದರ್ಭದಲ್ಲಿ ಪ್ರಯಾಣಿಕರು ಕಾಯುವ ಸಂದರ್ಭ ಎದುರಿಸುತ್ತಾರೆ. ಈ ಕಾಯುವ ಅವಧಿಯು ಎರಡು ಗಂಟೆ ಅಥವಾ ಅದಕ್ಕಿಂತ ಕಡಿಮೆ ಇದ್ದರೆ ಏರ್‌ಲೈನ್ ಸಂಸ್ಥೆಯು ಪ್ರಯಾಣಿಕರಿಗೆ ರಿಫ್ರೆಶ್‌ಮೆಂಟ್ ಅನ್ನು ಒದಗಿಸಬೇಕು. ಪರ್ಯಾಯ ವಿಮಾನ ನಿಲ್ದಾಣದಲ್ಲಿ ಕಾಯುವ ಸಮಯ ಎರಡು ಗಂಟೆಗಳಿಗಿಂತ ಹೆಚ್ಚಿದ್ದರೆ, ವಿಮಾನಯಾನ ಸಂಸ್ಥೆಯು ಇಳಿಯಲು ವ್ಯವಸ್ಥೆ ಮಾಡಬೇಕು ಮತ್ತು ಪ್ರಯಾಣಿಕರಿಗೆ ಉಪಹಾರ, ನೀರು, ಚಹಾ ಅಥವಾ ಕಾಫಿಯನ್ನು ಒದಗಿಸಬೇಕು.

ಇದನ್ನೂ ಓದಿ: Reliance Jio: ಜಿಯೋ ಬೆಳವಣಿಗೆಗೆ ಆಕಾಶ್ ಅಂಬಾನಿ ಕೊಡುಗೆ; ಜಾಗತಿಕವಾಗಿ ಇನ್ನಷ್ಟು ಬೆಳವಣಿಗೆ

ಯಾವುದೇ ಶುಲ್ಕ ರದ್ದು ಅಥವಾ ತಿದ್ದುಪಡಿ ಇಲ್ಲ
ಟಿಕೆಟ್ ಬುಕ್ ಮಾಡಿದ 24 ಗಂಟೆಗಳ ಒಳಗೆ ಪ್ರಯಾಣಿಕರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಟಿಕೆಟ್‌ಗಳನ್ನು ತಿದ್ದುಪಡಿ ಮಾಡಬಹುದು ಅಥವಾ ರದ್ದುಗೊಳಿಸಬಹುದು. ಈ ಸೌಲಭ್ಯವು ವಿಮಾನ ಹೊರಡುವ ಏಳು ದಿನಗಳ ಮೊದಲು ಲಭ್ಯವಿರುತ್ತದೆ.

ಸಾಮಾನು ಸರಂಜಾಮುಗಳ ನಷ್ಟ, ವಿಳಂಬ ಅಥವಾ ಹಾನಿ
ಈ ಸಂದರ್ರ್ಭದಲ್ಲಿ ಏರ್‌ಲೈನ್ ಸಂಸ್ಥೆಗಳ ಹೊಣೆಗಾರಿಕೆಯು 20,000 ರೂ.ಗಳಿಗೆ ಸೀಮಿತವಾಗಿದೆ.

ಈ ಸಂದರ್ಭದಲ್ಲಿ ಪರಿಹಾರ ಸಿಗುವುದಿಲ್ಲ
ಒಂದು ವೇಳೆ ಏರ್‌ಲೈನ್‌ ಸಂಸ್ಥೆಗಳ ನಿಯಂತ್ರಣಕ್ಕೆ ಮೀರಿದ ಸಂದರ್ಭಗಳಿಂದಾಗಿ ವಿಳಂಬ/ರದ್ದತಿ/ತಿರುಗುವಿಕೆ ಸಂಭವಿಸಿದರೆ ಆ ಸಂದರ್ಭದಲ್ಲಿ ಏರ್ಲೈನ್ ಸಂಸ್ಥೆಗಳು "ಪರಿಹಾರ" ಪಾವತಿಸಲು ಬಾಧ್ಯಸ್ಥರಾಗಿರುವುದಿಲ್ಲ. ಆ ಸಂದರ್ಭಗಳೆಂದರೆ ಅದು ರಾಜಕೀಯ ಅಸ್ಥಿರತೆ, ನೈಸರ್ಗಿಕ ವಿಕೋಪ, ಗಲಭೆಗಳು, ಪ್ರವಾಹಗಳು, ಸರ್ಕಾರಿ ನಿಯಮಗಳು, ಹವಾಮಾನ ಪರಿಸ್ಥಿತಿಗಳು, ಭದ್ರತಾ ಅಪಾಯಗಳು ಇತ್ಯಾದಿಗಳಲ್ಲಿ ಯಾವುದಾದರೂ ಆಗಿರಬಹುದು.

ದೂರುಗಳು ಮತ್ತು ಪರಿಹಾರ ಕಾರ್ಯವಿಧಾನ


  • ಆನ್‌ಲೈನ್ ಪೋರ್ಟಲ್: airseva.gov.in

  • Twitter: @airsewa_MoCA

  • ಫೇಸ್ಬುಕ್: @AirSewa

Published by:Ashwini Prabhu
First published: