Explained: ಸ್ವಾತಂತ್ರ್ಯ ಸಂಗ್ರಾಮದ ನೆನಪು; ಭಾರತ ಬಿಟ್ಟು ತೊಲಗಿ ಕ್ರಾಂತಿ ಹೇಗಿತ್ತು?

Quit India Movement Day: ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟದಲ್ಲಿ ಕ್ವಿಟ್ ಇಂಡಿಯಾ ಚಳವಳಿಯು ಬಹಳ ಮಹತ್ವದ ಪಾತ್ರವನ್ನು ವಹಿಸಿದೆ.

ಕ್ವಿಟ್‌ ಇಂಡಿಯಾ ಚಳುವಳಿ ದಿನ

ಕ್ವಿಟ್‌ ಇಂಡಿಯಾ ಚಳುವಳಿ ದಿನ

  • Share this:
ಕ್ವಿಟ್‌ ಇಂಡಿಯಾ ಚಳುವಳಿ ಆಂದೋಲನದ ದಿನ: "ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ" ಎಂಬ ಮಹಾತ್ಮಾ ಗಾಂಧಿಯವರ (Mahatma Gandhi) ಘೋಷಣೆ, 8 ಆಗಸ್ಟ್ 1942 ರಂದು ಭಾರತದ ಉದ್ದಗಲದಲ್ಲಿ ವಿದ್ಯುತ್ ಸಂಚಾರ ಮೂಡಿಸಿತು. ಬ್ರಿಟಿಷರ ಆಳ್ವಿಕೆಯಿಂದ (British rule) ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟದಲ್ಲಿ (struggle) ಕ್ವಿಟ್ ಇಂಡಿಯಾ ಚಳವಳಿಯು ಬಹಳ ಮಹತ್ವದ ಪಾತ್ರವನ್ನು ವಹಿಸಿದೆ. ಬ್ರಿಟಿಷರನ್ನು ಭಾರತದಿಂದ ಒದ್ದೋಡಿಸಲೇ ಬೇಕೆಂದು ಕೋಟಿಗಟ್ಟಲೆ ಭಾರತೀಯರು ಸಂಕಲ್ಪ ತೊಡಲು ಅದು ಕಾರಣವಾಯಿತು. ಇದನ್ನು ಆಗಸ್ಟ್ ಕ್ರಾಂತಿ (August revolution) ಅಥವಾ ಆಗಸ್ಟ್ ಚಳುವಳಿ ಎಂದೂ ಕರೆಯುತ್ತಾರೆ. ಅಲ್ಲಿಯವರೆಗೆ, ಭಾರತೀಯರಿಗೆ ಆಡಳಿತದಲ್ಲಿ ಭಾಗಶಃ ಸ್ವಾತಂತ್ರ್ಯ ನೀಡುವ ಪ್ರಸ್ತಾಪಗಳನ್ನು ಚರ್ಚಿಸಲಾಗುತ್ತಿತ್ತು.

“ಕ್ವಿಟ್ ಇಂಡಿಯಾ" ಅಥವಾ “ಭಾರತ್ ಛೋಡೋ” ಆಂದೋಲನ ಭಾರತೀಯರಿಗೆ ಬೇಕಾದ್ದು ಸಂಪೂರ್ಣ ಸ್ವಾತಂತ್ರ್ಯ ಎಂಬುದನ್ನು ಇಡೀ ಜಗತ್ತಿಗೆ ಘೋಷಿಸಿ, 15 ಆಗಸ್ಟ್ 1947 ರಂದು ಭಾರತ ಸ್ವತಂತ್ರವಾಗಲು ಕಾರಣವಾಯಿತು. "ಸಂಪೂರ್ಣ ಸ್ವರಾಜ್ಯ”ದ ಪರಿಕಲ್ಪನೆಯನ್ನು 1921 ರಲ್ಲೇ ಅಖಿಲ ಭಾರತ ಕಾಂಗ್ರೆಸ್ ವೇದಿಕೆಯಲ್ಲಿ ಕಾಂಗ್ರೆಸ್ ನಾಯಕ ಹಸ್‌ರತ್ ಮೊಹಾನಿ ಪ್ರಸ್ತಾಪಿಸಿದ್ದರು. ಈ ಬಗ್ಗೆ 19 ಡಿಸೆಂಬರ್ 1929 ರಂದು ಪ್ರಸ್ತಾವನೆಯನ್ನು ಅನುಮೋದಿಸಲಾಗಿತ್ತು. “ಭಾರತ ಬಿಟ್ಟು ತೊಲಗಿ" ಎಂದು ಘೋಷಿಸಿದ ತಕ್ಷಣ ಜನರೆಲ್ಲ ಒಂದಾಗಿ ಎದ್ದು ನಿಂತರು.

ಬ್ರಿಟಿಷರನ್ನು ಭಾರತದಿಂದ ತೊಲಗಿಸಲು "ಮಾಡು ಇಲ್ಲವೆ ಮಡಿ”
ಕ್ವಿಟ್ ಇಂಡಿಯಾ ಚಳುವಳಿಯ ಪ್ರಾರಂಭದ ಸಮಯದಲ್ಲಿ ಮಹಾತ್ಮ ಗಾಂಧಿಯವರು ತಮ್ಮ ಪ್ರಸಿದ್ಧ 'ಮಾಡು ಇಲ್ಲವೇ ಮಡಿ' ಭಾಷಣವನ್ನು ಗೋವಾಲಿಯಾ ಟ್ಯಾಂಕ್ ಮೈದಾನದಲ್ಲಿ ಪ್ರಸ್ತುತಪಡಿಸಿದರು. ಇದನ್ನು ಈಗ ಮುಂಬೈನ ಆಗಸ್ಟ್ ಕ್ರಾಂತಿ ಮೈದಾನ ಎಂದು ಕರೆಯಲಾಗುತ್ತದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಬಾಂಬೆ (ಈಗಿನ ಮುಂಬೈ) ಅಧಿವೇಶನದಲ್ಲಿ ಕ್ವಿಟ್ ಇಂಡಿಯಾ ಚಳುವಳಿಯನ್ನು ಪ್ರಾರಂಭಿಸಲಾಯಿತು.

ಇದನ್ನೂ ಓದಿ: Vijayapura: 75 ಕಿಲೋಮೀಟರ್, 8 ದಿನ, 10 ಸಾವಿರಕ್ಕೂ ಹೆಚ್ಚು ಜನ! ವಿಜಯಪುರದಲ್ಲಿ ವಿಶೇಷ ಪಾದಯಾತ್ರೆ!

ಅಂದು ಕ್ರಾಂತಿಯ ಕಿಚ್ಚು ಹಚ್ಚಿದ ಮಹಾತ್ಮಾ ಗಾಂಧಿಯವರು ತಮ್ಮ ಭಾಷಣದಲ್ಲಿ ದೇಶಬಾಂಧವರಿಗೆ ಅಂತಿಮ ಹೋರಾಟದ ಕರೆ ನೀಡಿದರು, “ನಮ್ಮ ಹೋರಾಟಕ್ಕೂ ಒಂದು ಮಂತ್ರವಿದೆ, ಆ ಚುಟುಕಾದ ಮಂತ್ರವನ್ನು ನಿಮಗೆ ಕೊಡುತ್ತಿದ್ದೇನೆ. ಅದನ್ನು ನಿಮ್ಮ ಹೃದಯದಲ್ಲಿ ಅಚ್ಚೊತ್ತಿಕೊಳ್ಳಿ ಮತ್ತು ನೀವು ಉಸಿರಾಡುವ ಪ್ರತಿ ಸಲವೂ ಅದನ್ನು ನೆನಪು ಮಾಡಿಕೊಳ್ಳಿ. “ಮಾಡು ಇಲ್ಲವೇ ಮಡಿ” ಎಂಬುದೇ ಆ ಮಂತ್ರ. ನಾವು ಸ್ವತಂತ್ರರಾಗೋಣ ಅಥವಾ ಸ್ವಾತಂತ್ರಗಳಿಸುವ ಪ್ರಯತ್ನದಲ್ಲಿ ಬಲಿದಾನಗೈಯೋಣ" ಎಂದಿದ್ದರು.

8 ಆಗಸ್ಟ್ 1942 ರ "ಭಾರತ ಬಿಟ್ಟು ತೊಲಗಿ" ಕ್ರಾಂತಿ ಹೇಗಿತ್ತು?
8 ಆಗಸ್ಟ್ 1942 ರ "ಭಾರತ ಬಿಟ್ಟು ತೊಲಗಿ" ಕ್ರಾಂತಿ ಕಹಳೆಯ ಅನುಸಾರ, ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಅರುಣಾ ಅಸಫ್ ಆಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದರು. ಮರುದಿನ, ಆಗಸ್ಟ್ 9 ರಂದು ಜವಾಹರಲಾಲ್ ನೆಹರೂ, ಅಬ್ದುಲ್ ಕಲಾಂ ಅಜಾದ್, ಮಹಾತ್ಮಾ ಗಾಂಧಿ ಸಹಿತ ಎಲ್ಲ ಹಿರಿಯ ಕಾಂಗ್ರೆಸ್ ಮುಂದಾಳುಗಳನ್ನು ರಾಜದ್ರೋಹದ ಆಪಾದನೆ ಹೊರಿಸಿ ಬ್ರಿಟಿಷ್ ಆಡಳಿತ ಬಂಧಿಸಿ ಜೈಲಿನಲ್ಲಿಟ್ಟಿತು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಕಾನೂನು- ಬಾಹಿರ ಸಂಸ್ಥೆಯೆಂದು ಘೋಷಿಸಿದ ಬ್ರಿಟಿಷ್ ಸರಕಾರ 
ಅಷ್ಟೇ ಅಲ್ಲ, ಬಂಧಿತ ಕಾಂಗ್ರೆಸ್ ಮುಂದಾಳುಗಳನ್ನೆಲ್ಲ 2ನೇ ಮಹಾಯುದ್ಧ 1945ರಲ್ಲಿ ಮುಕ್ತಾಯವಾಗುವವರೆಗೆ ಯಾವುದೇ ವಿಚಾರಣೆ ನಡೆಸದೆ ಬ್ರಿಟಿಷ್ ಸರಕಾರ ಬಂಧನದಲ್ಲಿಟ್ಟಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಕಾನೂನು- ಬಾಹಿರ ಸಂಸ್ಥೆಯೆಂದು ಬ್ರಿಟಿಷ್ ಸರಕಾರ ಘೋಷಿಸಿತು. ದೇಶದಲ್ಲಿದ್ದ ಕಾಂಗ್ರೆಸ್ಸಿನ ಎಲ್ಲ ಕಚೇರಿಗಳ ಮೇಲೆ ದಾಳಿ ನಡೆಸಿ, ಅದರ ಹಣಕಾಸಿನ ಖಾತೆಗಳನ್ನೆಲ್ಲ ನಿಷೇಧಿಸಲಾಯಿತು.

ಹಾಗಿದ್ದರೂ, ಹಿರಿಯ ಮುಂದಾಳುಗಳನ್ನೆಲ್ಲ ಸೆರೆಮನೆಯಲ್ಲಿಟ್ಟ ಬ್ರಿಟಿಷ್ ಆಡಳಿತಕ್ಕೆ 1944ರ ವರೆಗೆ ಸಾರ್ವಜನಿಕ ಪ್ರತಿಭಟನೆಗಳನ್ನು ಹತ್ತಿಕ್ಕಲು ಸಾಧ್ಯವಾಯಿತು. ಆದರೆ, ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಮಹಾತ್ಮ ಗಾಂಧಿ ಘೋಷಿಸಿದ ಸಂಪೂರ್ಣ ಸ್ವಾತಂತ್ರ್ಯದ ಬೇಡಿಕೆಯ ಬೆಂಕಿಜ್ವಾಲೆಗಳನ್ನು ಹತ್ತಿಕ್ಕಲು ಬ್ರಿಟಿಷ್ ಆಡಳಿತಕ್ಕೆ ಸಾಧ್ಯವಾಗಲಿಲ್ಲ. ಕೋಟಿಗಟ್ಟಲೆ ಭಾರತೀಯರ ಹೃದಯದ ಅಗ್ನಿಕುಂಡದಲ್ಲಿ ಅಚ್ಚೊತ್ತಿದ್ದ "ಮಾಡು ಇಲ್ಲವೆ ಮಡಿ" ಎಂಬ ಮಂತ್ರ ಆ ಜ್ವಾಲೆಗಳನ್ನು ಭುಗಿಲೆಬ್ಬಿಸುತ್ತಿತ್ತು.

ಇದನ್ನೂ ಓದಿ: Independence Day 2022: 42 ವರ್ಷಗಳಲ್ಲಿ 3 ಮಿಲಿಯನ್ ರಾಷ್ಟ್ರಧ್ವಜ ತಯಾರಿ! ಇದರ ಹಿಂದಿದ್ದಾರೆ ಅಬ್ದುಲ್ ಚಾಚಾ

ಭಾರತದ 75 ನೇಯ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ, ನಮ್ಮ ದೇಶ ಸ್ವಾತಂತ್ರ್ಯ ಗಳಿಸಲಿಕ್ಕಾಗಿ ಬಲಿದಾನ ಗೈದ ಹಾಗೂ ಅಪಾರ ಸಂಕಷ್ಟ ಅನುಭವಿಸಿದ ಲಕ್ಷಗಟ್ಟಲೆ ಜನರ ಮಹಾತ್ಯಾಗವನ್ನು ಮತ್ತೆಮತ್ತೆ ನೆನಪು ಮಾಡಿಕೊಳ್ಳೋಣ.
Published by:Ashwini Prabhu
First published: