Explained: ಚುನಾವಣೆಗೆ 4 ತಿಂಗಳಿರುವಂತೆ ಮನೆಯೊಂದು ಮೂರು ಬಾಗಿಲಿನಂತಾದ ಪಂಜಾಬ್ ಕಾಂಗ್ರೆಸ್ ಪರಿಸ್ಥಿತಿ!

ಅಮರೀಂದರ್ ಸಿಂಗ್ ಅವರು ಇಂದು ದೆಹಲಿಗೆ ತೆರಳಿದ್ದಾರೆ. ಅಲ್ಲಿ ಬಿಜೆಪಿ ನಾಯಕರಾದ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಲಿದ್ದಾರೆ ಎಂದು ವರದಿಯಾಗಿದೆ. ಹಾಗೊಂದು ವೇಳೆ ಅವರು ಬಿಜೆಪಿ ಸೇರ್ಪಡೆಯಾದರೆ, ಪಂಜಾಬ್ ರಾಜ್ಯ ಕಾಂಗ್ರೆಸ್ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅದರ ಪ್ರತಿಫಲ ಎದುರಿಸಬೇಕಾಗಿ ಬರಬಹುದು. 

ನವಜೋತ್ ಸಿಂಗ್ ಸಿಧು ಹಾಗೂ ಸಿಎಂ ಚರಣಜಿತ್ ಸಿಂಗ್ ಚನ್ನಿ

ನವಜೋತ್ ಸಿಂಗ್ ಸಿಧು ಹಾಗೂ ಸಿಎಂ ಚರಣಜಿತ್ ಸಿಂಗ್ ಚನ್ನಿ

  • Share this:
ಪಂಜಾಬ್ ವಿಧಾನಸಭಾ ಚುನಾವಣೆಗೆ (Punjab Assembly Election) ಇನ್ನು ನಾಲ್ಕು ತಿಂಗಳಷ್ಟೇ ಬಾಕಿ ಇದೆ. ಏತನ್ಮಧ್ಯೆ ಪಂಜಾಬ್ ರಾಜ್ಯ ಕಾಂಗ್ರೆಸ್ (Punjab Congress) ಪರಿಸ್ಥಿತಿ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ. ಈ ಹಿಂದಿನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ (Captain Amarinder Singh) ಹಾಗೂ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು (Navjot Singh Sidu) ನಡುವಿನ ಮನಸ್ತಾಪ ರಾಜ್ಯ ರಾಜಕೀಯಯಲ್ಲಿ ಅಸ್ಥಿರತೆಯನ್ನು ಹುಟ್ಟುಹಾಕಿದೆ. ಅಮರೀಂದರ್ ಸಿಂಗ್ ರಾಜೀನಾಮೆ ಬಳಿಕ ಸಿಎಂ ಸ್ಥಾನದ ಮೇಲೆ ಕಣ್ಣೀಟ್ಟಿದ್ದ ನವಜೋತ್ ಸಿಂಗ್ ಸಿಧುಗೆ ಕಾಂಗ್ರೆಸ್ ಭಾರೀ ಶಾಕ್ ನೀಡಿತ್ತು. ಇದರಿಂದ ಸಹಜವಾಗಿ ಅಸಮಾಧಾನಗೊಂಡ ಸಿಧು ಇಂದು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತ ಸಿಎಂ ಸ್ಥಾನದಿಂದ ಕೆಳಗೆ ಇಳಿದ ಅಮರೀಂದರ್ ಸಿಂಗ್ ಇಂದು ದೆಹಲಿಗೆ ತೆರಳಿ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದಾರೆ. ಚುನಾವಣೆಗೆ ಕೆಲವು ತಿಂಗಳಷ್ಟೇ ಬಾಕಿ ಇರುವ ಹೊತ್ತಿನಲ್ಲಿ ಇದೀಗ ಕಾಂಗ್ರೆಸ್ ಒಡೆದ ಮನೆಯಂತಾಗಿದೆ.

ಅಮರೀಂದರ್ ಸಿಂಗ್ ಅವರನ್ನು ಸಿಂಗ್ ವಿರುದ್ಧ ತನ್ನ ಬೆಂಬಲಿಗ ಶಾಸಕರನ್ನು ಎತ್ತಿ ಕಟ್ಟಿದ ಸಿಧು ಅವರು ರಾಜೀನಾಮೆ ನೀಡುವಂತೆ ಮಾಡುವಲ್ಲಿ ಯಶಸ್ವಿಯಾದರು. ಆದರೆ, ಆ ಸ್ಥಾನಕ್ಕೆ ನಾನೇ ಎಂದುಕೊಳ್ಳುವಾಗಲೇ ದಲಿತ ಸಮುದಾಯದ ಪ್ರಬಲ ನಾಯಕನಾಗಿರುವ ಚರಣಜಿತ್ ಸಿಂಗ್ ಚನ್ನಿಯನ್ನು ಸಿಎಂ ಮಾಡುವ ಮೂಲಕ ಸಿಧುಗೆ ಕಾಂಗ್ರೆಸ್ ಸರಿಯಾದ ಪೆಟ್ಟು ನೀಡಿತ್ತು. ಅಲ್ಲದೇ, ಚನ್ನಿ ಸರ್ಕಾರದ ಸಂಪುಟದಲ್ಲಿ ತನ್ನ ನಿಷ್ಠರನ್ನು ನೇಮಿಸುವಲ್ಲಿಯೂ ನವಜೋತ್ ಸಿಂಗ್ ಸಿಧು ಸಫಲರಾಗಲಿಲ್ಲ. ಅಷ್ಟೇ ಅಲ್ಲದೇ. ಮರಳು ಮಾಫಿಯಾದಲ್ಲಿ ಶಾಮೀಲಾದ ಆರೋಪ ಹೊತ್ತು ಅಮರೀಂದರ್ ಸಿಂಗ್ ಸಚಿವ ಸಂಪುಟದಿಂದ 2017ರಲ್ಲೇ ನಿರ್ಗಮಿಸಿದ್ದ ರಾಣಾ ಗುರ್ಜಿತ್ ಸಿಂಗ್ ಅವರು ಚನ್ನಿ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಭ್ರಷ್ಟ ಹಾಗೂ ಕಳಂಕಿತರಾಗಿರುವ ರಾಣಾ ಗುರ್ಜೀತ್ ಸಿಂಗ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಾರದು, ಸಂಪುಟದಿಂದ ಅವರನ್ನು ಕೈಬಿಡಬೇಕು ಎಂದು ಕಾಂಗ್ರೆಸ್ ಶಾಸಕರು ಪಕ್ಷದ ಅಧ್ಯಕ್ಷರಾಗಿದ್ದ ನವಜೋತ್ ಸಿಂಗ್ ಸಿಧು ಅವರಿಗೆ ಪತ್ರ ಬರೆದಿದ್ದರು. ಅದರಂತೆ ಅವರನ್ನು ಸಂಪುಟದಿಂದ ಬಿಡುವಂತೆ ಸಿಧು ಸಿಎಂ ಚನ್ನಿ ಬಳಿ ಮನವಿ ಸಹ ಮಾಡಿಕೊಂಡಿದ್ದರು. ಆದರೆ, ಅವರ ಮನವಿಗೆ ಚನ್ನಿ ಸೊಪ್ಪು ಹಾಕಲಿಲ್ಲ. ಇದರಿಂದ ಸಹಜವಾಗಿಯೇ ಸಿಧು ಅಸಮಾಧಾನಕ್ಕೆ ಕಾರಣವಾಗಿತ್ತು.

ಅಮರೀಂದರ್ ಸಿಂಗ್ ಅಸಮಾಧಾನ

ಕಾಂಗ್ರೆಸ್ ಹಿರಿಯ ನಾಯಕ, ಕಳೆದ ನಾಲ್ಕೂವರೆ ವರ್ಷದಿಂದ ಸಿಎಂ ಆಗಿದ್ದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು, ಕಳೆದ ಸೆಪ್ಟೆಂಬರ್ 18ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ವೇಳೆ ಅವರು, " ಕಳೆದ ಎರಡು ತಿಂಗಳಲ್ಲಿ ನಾನು ಕಾಂಗ್ರೆಸ್ ನಾಯಕತ್ವದಿಂದ ಮೂರು ಬಾರಿ ಅವಮಾನಕ್ಕೊಳಗಾಗಿದ್ದೇನೆ ... ಅವರು ಎರಡು ಬಾರಿ ಶಾಸಕರನ್ನು ದೆಹಲಿಗೆ ಕರೆಸಿಕೊಂಡರು ಮತ್ತು ಈಗ ಇಲ್ಲಿ ಚಂಡೀಗಢದಲ್ಲಿ ಸಿಎಲ್‌ಪಿ ಸಭೆಯನ್ನು ಕರೆದರು. ಸ್ಪಷ್ಟವಾಗಿ ಅವರು (ಕಾಂಗ್ರೆಸ್ ಹೈಕಮಾಂಡ್) ನನ್ನ ಮೇಲೆ ವಿಶ್ವಾಸ ಹೊಂದಲಿಲ್ಲ ಮತ್ತು ನಾನು ನನ್ನ ಕೆಲಸವನ್ನು ಸಮರ್ಥವಾಗಿ ನಿಭಾಯಿಸಬಲ್ಲೆ ಎಂದು ಭಾವಿಸಲಿಲ್ಲ. ಆದರೆ ಅವರು ಇಡೀ ಪ್ರಕರಣವನ್ನು ನಿರ್ವಹಿಸಿದ ರೀತಿಯಿಂದ ನನಗೆ ಅವಮಾನವಾಯಿತು," ಎಂದು ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ನೀಡಿದ ನಂತರ ಅವರು ರಾಜಭವನದ ಗೇಟ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಜೊತೆಗೆ"ಅವರು ಯಾರನ್ನು ನಂಬುತ್ತಾರೋ ಅವರನ್ನು ನೇಮಿಸಲಿ" ಎಂದು ಅವರು ಪಕ್ಷದ ನಾಯಕತ್ವವನ್ನು ತರಾಟೆಗೆ ತೆಗೆದುಕೊಂಡಿದ್ದರು.

ಇದನ್ನು ಓದಿ: Navjot Singh Sidhu Resignation: ಪಂಜಾಬ್​ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿಧು: ಮುಂದುವರೆದ ಕಗ್ಗಂಟು

ಇದೀಗ ಅಮರೀಂದರ್ ಸಿಂಗ್ ಅವರು ಇಂದು ದೆಹಲಿಗೆ ತೆರಳಿದ್ದಾರೆ. ಅಲ್ಲಿ ಬಿಜೆಪಿ ನಾಯಕರಾದ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಲಿದ್ದಾರೆ ಎಂದು ವರದಿಯಾಗಿದೆ. ಹಾಗೊಂದು ವೇಳೆ ಅವರು ಬಿಜೆಪಿ ಸೇರ್ಪಡೆಯಾದರೆ, ಪಂಜಾಬ್ ರಾಜ್ಯ ಕಾಂಗ್ರೆಸ್ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅದರ ಪ್ರತಿಫಲ ಎದುರಿಸಬೇಕಾಗಿ ಬರಬಹುದು.

ವರದಿ: ರಮೇಶ್ ಹಂಡ್ರಂಗಿ
Published by:HR Ramesh
First published: