ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದಾಗ ಜಾರಿಗೆ ತಂದಿದ್ದ ಗ್ರೀನ್ ಕಾರ್ಡ್ ವಿತರಣೆ ಹಾಗೂ ವಲಸೆ ನೀತಿಗೆ ಸಂಬಂಧಿಸಿದ ಆದೇಶವನ್ನು ಅಮೆರಿಕದ ನೂತನ ಅಧ್ಯಕ್ಷ ಜೊ ಬಿಡನ್ ಅವರು ರದ್ದು ಮಾಡಿದ್ದಾರೆ. ಬಿಡನ್ ಅವರ ಈ ಕ್ರಮದಿಂದಾಗಿ ಎಚ್-ಎ ಬಿ ವೀಸಾ ಪಡೆದು ಅಮೆರಿಕದಲ್ಲಿ ಕೆಲಸದಲ್ಲಿರುವ ಭಾರತೀಯರಿಗೆ ಅನುಕೂಲವಾಗಲಿದೆ. ಅದರಲ್ಲೂ ಐಟಿ ಕ್ಷೇತ್ರದ ಅಮೆರಿಕದ ಕಂಪನಿಗಳಲ್ಲಿ ಭಾರತೀಯರು ಅಧಿಕ ಸಂಖ್ಯೆಯಲ್ಲಿ ಉದ್ಯೋಗದಲ್ಲಿದ್ದಾರೆ.
ಟ್ರಂಪ್ ಆದೇಶವನ್ನು ರದ್ದು ಪಡಿಸಿದ ಬಳಿಕ ಮಾತನಾಡಿದ ಅಧ್ಯಕ್ಷ ಜೋ ಬಿಡನ್ ಅವರು, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸೆ ನೀತಿಯಿಂದಾಗಿ ಅಮೆರಿಕದ ಅಭಿವೃದ್ಧಿಗೆ ತಡೆಯೊಡ್ಡುತ್ತಿತ್ತು. ಅಲ್ಲದೇ ಇದು ಅಮೆರಿಕದ ಹಿತಾಸಕ್ತಿಗೆ ವಿರುದ್ಧವಾಗಿದೆ. ಇಲ್ಲಿ ನೆಲೆಸಿರುವ ವಿವಿಧ ದೇಶಗಳ ಜನರಿಗೆ, ಅವರ ಕುಟುಂಬದ ಸದಸ್ಯರಿಗೆ ತೊಂದರೆಯಾಗುತ್ತದೆ. ಇದನ್ನು ಮನಗಂಡು ಹಳೇ ಗ್ರೀನ್ ಕಾರ್ಡ್ ಹಾಗೂ ವಲಸೆ ನೀತಿಯನ್ನು ರದ್ದುಪಡಿಸಲಾಗಿದೆ ಎಂದು ಜೊ ಬಿಡನ್ ಅವರು ಹೇಳಿದ್ದಾರೆ.
ಕೋವಿಡ್-19 ಪಿಡುಗಿನಿಂದಾಗಿ ಅಮೆರಿಕದಲ್ಲಿ ಉದ್ಯೋಗ ನಷ್ಟವಾಗುವುದನ್ನು ತಡೆಯುವ ಸಂಬಂಧ ವಲಸೆ ಹಾಗೂ ಗ್ರೀನ್ ಕಾರ್ಡ್ ವಿತರಿಸುವುದನ್ನು ನಿಷೇಧಿಸುತ್ತಿರುವುದಾಗಿ ಟ್ರಂಪ್ ಹೇಳಿದ್ದರು. ಮೊದಲು 2020ರ ಅಂತ್ಯದ ವರೆಗೆ ಜಾರಿಯಲ್ಲಿದ್ದ ಈ ಆದೇಶವನ್ನು ನಂತರ 2021ರ ಮಾರ್ಚ್ ಅಂತ್ಯದವರೆಗೆ ವಿಸ್ತರಿಸಲಾಗಿತ್ತು.
ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾದ ಬಳಿಕ ಅಮೆರಿಕ ಫಸ್ಟ್ ಎಂಬ ಪರಿಕಲ್ಪನೆಯಲ್ಲಿ ವಲಸೆ ನೀತಿಯಲ್ಲಿ ಬಿಗಿ ನಿಲುವು ತಳೆದಿದ್ದರು. ಬೇರೆ ದೇಶದ ಜನರು ಇಲ್ಲಿಗೆ ಬಂದು ಉದ್ಯೋಗ ನಿರ್ವಹಿಸುವುದರಿಂದ ಇಲ್ಲಿನ ಸ್ಥಳೀಯ ನಿವಾಸಿಗಳಿಗೆ ಉದ್ಯೋಗ ಕಡಿತವಾಗುತ್ತದೆ. ಮೊದಲು ಅಮೆರಿಕನ್ನರಿಗೆ ಕೆಲಸ ನೀಡಬೇಕು. ಆ ಬಳಿಕ ಉಳಿದವರಿಗೆ ನೀಡಬೇಕು ಎಂಬ ಕಾರಣದಿಂದ ಟ್ರಂಪ್ ಈ ಆದೇಶ ಮಾಡಿದ್ದರು. ಇದರಿಂದಾಗಿ ಅಮೆರಿಕದಲ್ಲಿ ಇರುವ ಹಾಗೂ ಅಮೆರಿಕಕ್ಕೆ ಕೆಲಸಕ್ಕೆ ಹೋಗುವವರಿಗೆ ಸಾಕಷ್ಟು ತೊಂದರೆಯಾಗಿತ್ತು. ಇದೀಗ ಆ ಆದೇಶವನ್ನು ನೂತನ ಅಧ್ಯಕ್ಷ ಜೊ ಬಿಡನ್ ಅವರು ರದ್ದುಪಡಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರ ಕಠಿಣ ವಲಸೆ ನೀತಿಗಳನ್ನು ತೆಗೆದು ಹಾಕುವುದಾಗಿ ಚುನಾವಣೆ ಪ್ರಚಾರದ ವೇಳೆಯಲ್ಲೇ ಬಿಡೆನ್ ಹೇಳಿಕೆ ನೀಡಿದ್ದರು. ಅದರಂತೆ ಇದೀಗ ಆ ಆದೇಶ ರದ್ದು ಮಾಡಿದ್ದಾರೆ. ಈ ಆದೇಶದಿಂದಾಗಿ ಗ್ರೀನ್ ಕಾರ್ಡ್ ಪಡೆಯಲು ಯತ್ನಿಸುತ್ತಿರುವ ಭಾರತೀಯರು ಸೇರಿದಂತೆ ಲಕ್ಷಾಂತರ ಮಂದಿಗೆ ರಿಲೀಫ್ ಸಿಕ್ಕಂತಾಗಿದೆ. ಇನ್ನು ಮುಂದೆ ಹೊಸದಾಗಿ ಗ್ರೀನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನು ಓದಿ: ಆರ್ಥಿಕ ಅಪರಾಧಿ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಿ; ಇಂಗ್ಲೆಂಡ್ ನ್ಯಾಯಾಲಯ ತೀರ್ಪು
ಟ್ರಂಪ್ ತಮ್ಮ ಅಧಿಕಾರವಧಿಯಲ್ಲಿ ಮೂಲ ಅಮರಿಕನ್ನರನ್ನು ಓಲೈಕೆ ಮಾಡಲು ಎಚ್1-ಬಿ ವೀಸಾ ಕಾಯ್ದೆಗೆ ತಂದಿದ್ದ ತಿದ್ದುಪಡಿಯನ್ನು ಜೋ ಬಿಡನ್ ರದ್ದು ಮಾಡಿದ್ದರು. ಆ ಮೂಲಕ ಕೆಲಸ ಕಳೆದುಕೊಳ್ಳುವ ಆತಂಕದಿಂದ ಲಕ್ಷಾಂತರ ಭಾರತೀಯರು ಪಾರಾಗಿದ್ದರು. ಎಚ್1-ಬಿ ವೀಸಾ ಹೊಂದಿರುವ ವ್ಯಕ್ತಿಯ ಪತ್ನಿ ಅಥವಾ ಪತಿಗೆ ನೀಡಲಾಗಿದ್ದ ವೃತ್ತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಿ ಟ್ರಂಪ್ ಸರ್ಕಾರ ಹೊಸ ನಿಯಮ ರೂಪಿಸಿತ್ತು. ಸ್ಥಳೀಯರಿಗೆ ಕೆಲಸ ನೀಡುವ ಉದ್ದೇಶದಿಂದ ಈ ನಿಯಮ ಜಾರಿಗೆ ತರಲಾಗಿತ್ತು. ಆದರೆ ಇದು ಅಮೆರಿಕದಲ್ಲಿರುವ ಸುಮಾರು ಒಂದು ಲಕ್ಷದಷ್ಟು ಭಾರತೀಯ ಮೂಲದವರಿಗೆ ಕೆಲಸ ಕಳೆದುಕೊಳ್ಳುವ ಭೀತಿ ಉಂಟು ಮಾಡಿತ್ತು.
2015 ರಲ್ಲಿ ಅಂದಿನ ಬರಾಕ್ ಒಬಾಮ ಸರ್ಕಾರ, ಎಚ್1-ಬಿ ವೀಸಾ ಹೊಂದಿರುವ ವ್ಯಕ್ತಿಯ ಪತ್ನಿ ಅಥವಾ ಪತಿಗೆ ಎಚ್-4 ವೃತ್ತಿ ಪ್ರಮಾಣ ಪತ್ರ ನೀಡಿತ್ತು. ಸುಮಾರು ಒಂದು ಲಕ್ಷದಷ್ಟು ಭಾರತೀಯರು ಇದರ ಪ್ರಯೋಜನ ಪಡೆದುಕೊಂಡಿದ್ದರು. ಆದರೆ 2019ರಲ್ಲಿ ಡೊನಾಲ್ಡ್ ಟ್ರಂಪ್ ಇದಕ್ಕೆ ತಡೆ ನೀಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ