mYoga app ಬಿಡುಗಡೆ‌: ಯೋಗ ಕಲಿಕೆಗೆ ಕೇಂದ್ರದ ಮಹತ್ತರ ಹೆಜ್ಜೆ

mYoga app: ಈ ಆ್ಯಪ್‌ ಅನ್ನು 12 ರಿಂದ 65 ವರ್ಷದವರು ಬಳಸಬಹುದು ಹಾಗೂ ವಿಡಿಯೊಗಳನ್ನು ನೋಡಿಕೊಂಡು ಯೋಗಾಭ್ಯಾಸವನ್ನು ಮಾಡಬಹುದು. ವೈಜ್ಞಾನಿಕ ಅಂಶಗಳು ಹಾಗೂ ಪರಿಣಿತರ ನೆರವಿನಿಂದ ಈ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ.

Narendra Modi

Narendra Modi

  • Share this:

ವಿಶ್ವಯೋಗದಿನವಾದ ಇಂದು ಯೋಗದ ಪ್ರಾಮುಖ್ಯತೆಯನ್ನು ತಿಳಿಯಪಡಿಸುವ ಸಲುವಾಗಿ ಆಯುಷ್ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಜೊತೆಗೂಡಿಕೊಂಡು mYoga ಆ್ಯಪ್‌ ಅನ್ನು ಬಿಡುಗಡೆ ಮಾಡಿದೆ. ಈ ಆ್ಯಪ್‌ನ ಉದ್ದೇಶ ಪ್ರತಿಯೊಬ್ಬರೂ ಯೋಗವನ್ನು ನಿಯಮಿತವಾಗಿ ಅಭ್ಯಾಸ ಮಾಡುವುದಕ್ಕಾಗಿದೆ. 7ನೇ ವಿಶ್ವಯೋಗ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು mYoga app ಅನ್ನು ಬಿಡುಗಡೆ ಮಾಡಿದ್ದಾರೆ. ಯೋಗ ಉತ್ಸಾಹಿಗಳು ಮತ್ತು ಯೋಗವನ್ನು ಅಭ್ಯಾಸ ಮಾಡಬೇಕೆಂಬ ಪ್ರಬಲ ಇಚ್ಛೆ ಉಳ್ಳವರು ಇನ್ನುಮುಂದೆ ಬೆರಳ ತುದಿಯಲ್ಲೇ ಯೋಗಾಭ್ಯಾಸವನ್ನು ಮಾಡಬಹುದು. ಈ ಆ್ಯಪ್‌ ಮೂಲಕ ಯೋಗ ತರಬೇತಿಯನ್ನು ಪಡೆದುಕೊಳ್ಳಬಹುದಾಗಿದೆ.


ಒಂದು ವಿಶ್ವ, ಒಂದೇ ಆರೋಗ್ಯ


ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ ಭಾರತವು ಇನ್ನೊಂದು ಮಹತ್ತರ ಹೆಜ್ಜೆಯನ್ನಿರಿಸಿದೆ. ವಿಶ್ವದಾದ್ಯಂತ ಇರುವ ಜನರಿಗಾಗಿ ಬೇರೆ ಬೇರೆ ಭಾಷೆಗಳಲ್ಲಿ ನಾವು ಯೋಗ ತರಬೇತಿ ವೀಡಿಯೊಗಳನ್ನು ನಾವು ಶೀಘ್ರದಲ್ಲಿಯೇ ಲಾಂಚ್ ಮಾಡುತ್ತಿದ್ದೇವೆ. ನಮ್ಮ ಧ್ಯೇಯವಾಗಿರುವ “ಒಂದು ವಿಶ್ವ, ಒಂದೇ ಆರೋಗ್ಯ”ವನ್ನು ತಲುಪಲು ಈ ಆ್ಯಪ್‌ ನಮಗೆ ನೆರವು ನೀಡಲಿದೆ ಎಂದು ಮೋದಿಯವರು ಜನತೆಯನ್ನುದ್ದೇಶಿಸಿ ಹೇಳಿದ್ದಾರೆ.


mYoga app


ಈ ಆ್ಯಪ್‌ ಅನ್ನು 12 ರಿಂದ 65 ವರ್ಷದವರು ಬಳಸಬಹುದು ಹಾಗೂ ವಿಡಿಯೊಗಳನ್ನು ನೋಡಿಕೊಂಡು ಯೋಗಾಭ್ಯಾಸವನ್ನು ಮಾಡಬಹುದು. ವೈಜ್ಞಾನಿಕ ಅಂಶಗಳು ಹಾಗೂ ಪರಿಣಿತರ ನೆರವಿನಿಂದ ಈ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ. ಜನರು ತಮ್ಮ ಬೆರಳ ಸ್ಪರ್ಶದಲ್ಲಿಯೇ ಸುಲಭವಾಗಿ ಯೋಗದ ಭಂಗಿಗಳನ್ನು ನೋಡಿಕೊಂಡು ನಿತ್ಯವೂ ಯೋಗವನ್ನು ಅಭ್ಯಸಿಸಬೇಕು ಎಂಬುದು ಆ್ಯಪ್‌ನ ಉದ್ದೇಶವಾಗಿದೆ. ಇನ್ನು ಆ್ಯಪ್‌ ಸುರಕ್ಷಿತ ಮತ್ತು ಬಳಸಲು ಸುಲಭವಾಗಿದೆ. ಇದು ಯಾವುದೇ ಮಾಹಿತಿಗಳನ್ನು ಬಳಕೆದಾರರಿಂದ ಸಂಗ್ರಹಿಸುವುದಿಲ್ಲ. ಪ್ರಸ್ತುತ ಆ್ಯಪ್‌ ಫ್ರೆಂಚ್, ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿದೆ. ಇನ್ನು ಮುಂಬರುವ ತಿಂಗಳಿನಲ್ಲಿ ವಿವಿಧ ಭಾಷೆಗಳಲ್ಲಿ ಕೂಡ ಆ್ಯಪ್‌ ಲಭ್ಯವಿರಲಿದೆ.


ವಿಜ್ಞಾನ ಮತ್ತು ತಂತ್ರಜ್ಞಾನದ ಸಮ್ಮಿಲನ


ವಿಶ್ವದಲ್ಲಿರುವ ಜನರು ಹೆಚ್ಚು ಸುಲಭವಾಗಿ ಯೋಗವನ್ನು ಅಭ್ಯಸಿಸಬೇಕು ಎಂಬ ನಿಟ್ಟಿನಲ್ಲಿ ಆ್ಯಪ್‌ ಅನ್ನು ರಚಿಸಲಾಗಿದೆ. ಆಧುನಿಕ ತಂತ್ರಜ್ಞಾನ ಹಾಗೂ ಸನಾತನ ವಿಜ್ಞಾನದ ಸಹಯೋಗ ಇದಾಗಿದೆ ಎಂಬುದನ್ನು ಮೋದಿಯವರು ಉಲ್ಲೇಖಿಸಿದ್ದಾರೆ. ಯೋಗವು ಮಾನಸಿಕ ಸ್ಥೈರ್ಯವನ್ನು ನೀಡುವುದರ ಜೊತೆಗೆ ದೈನಂದಿನ ಜೀವನದಲ್ಲಿ ಶಿಸ್ತನ್ನು ಅಳವಡಿಸಲು ನೆರವಾಗುತ್ತದೆ. ದೇಹದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಮಾನಸಿಕ ಸಮಸ್ಯೆಗಳಿಗೂ ಯೋಗ ವರದಾನವಾಗಿದೆ ಎಂದು ಮೋದಿಯವರು ಮಾಹಿತಿ ನೀಡಿದ್ದಾರೆ.


ಮಾನಸಿಕ ನೆಮ್ಮದಿ ದೈಹಿಕ ಸ್ಥೈರ್ಯ


ಜಗತ್ತು ಕೋವಿಡ್-19 ಎಂಬ ಮಾರಕ ರೋಗದಿಂದ ಜರ್ಝರಿತವಾಗಿದೆ. ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸಲು ಯೋಗವು ಸಹಕಾರಿಯಾಗಿದೆ. ಸಾಂಕ್ರಾಮಿಕ ಪಿಡುಗಿನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಆರ್ಥಿಕ ಚಟುವಟಿಕೆಗಳಿಗೆ ಬ್ರೇಕ್ ನೀಡಿ ನಾವು ಮನೆಯಲ್ಲಿಯೇ ದಿನಕಳೆಯುತ್ತಿದ್ದೇವೆ. ಈ ಸಮಯದಲ್ಲಿ ಖಿನ್ನತೆ ಮತ್ತು ಬೇಸರ ನಮ್ಮನ್ನು ಹಿಂಬಾಲಿಸುವುದು ಸಹಜ. ಭವಿಷ್ಯದ ಬಗ್ಗೆ ಆತಂಕ ಎದುರಾಗುವುದು ಸಾಮಾನ್ಯ. ಈ ಸಮಯದಲ್ಲಿ ಯೋಗದಂತಹ ಉತ್ತಮ ಒಡನಾಡಿ ನಮ್ಮೊಂದಿಗೆ ಇರುವುದರಿಂದ ಖಿನ್ನತೆಯನ್ನು ನಾವು ದೂರಮಾಡಿಕೊಳ್ಳಬಹುದು. ಎಂತಹ ಪ್ರಬಲ ರೋಗವನ್ನು ಕೂಡ ಬುಡಸಮೇತ ಕಿತ್ತುಹಾಕುವ ಮನೋಬಲವನ್ನು ಬೆಳೆಸಿಕೊಳ್ಳಬಹುದು ಎಂದು ನುಡಿದಿದ್ದಾರೆ.


ಹಾಗಿದ್ದರೆ ಇನ್ನೇಕೆ ತಡ ಈ ಆ್ಯಪ್‌ ಅನ್ನು ಫೋನ್‌ನಲ್ಲಿ ಈಗಲೇ ಇನ್‌ಸ್ಟಾಲ್ ಮಾಡಿಕೊಳ್ಳಿ ಮತ್ತು ನಿಯಮಿತವಾಗಿ ಯೋಗ ಅಭ್ಯಾಸವನ್ನು ನಡೆಸಿ.


First published: