news18-kannada Updated:February 24, 2021, 5:25 PM IST
ಸಾಂದರ್ಭಿಕ ಚಿತ್ರ
ಮುಂಬೈ ಮತ್ತು ಸುತ್ತಮುತ್ತಲಿನ ಬಂಗಲೆಗಳಲ್ಲಿ ಅಶ್ಲೀಲ ಸಿನಿಮಾಗಳನ್ನು ಚಿತ್ರಿಸುತ್ತಿದ್ದ ದೊಡ್ಡ ಪ್ರಮಾಣದ ಸೆಕ್ಸ್ ದಂಧೆಯನ್ನು ಮುಂಬೈ ಅಪರಾಧ ಶಾಖೆಯ ಪೊಲೀಸರು ಕೆಲವು ದಿನಗಳ ಹಿಂದೆ ಪತ್ತೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಿದಂತೆ 9 ಜನರು ಇದರಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ಹಾಗೆಯೇ ಅಚ್ಚರಿಯ ಮಾಹಿತಿಗಳು ಸಹ ಹೊರಬಿದ್ದಿವೆ.
ಅರ್ಧ ಗಂಟೆ ಚಿತ್ರೀಕರಣ ಮಾಡಿದ ಪೋರ್ನ್ (ಅಶ್ಲೀಲ) ವಿಡಿಯೋಗಳನ್ನು ವೆಬ್ ಸರಣಿಯ ಹೆಸರಿನಲ್ಲಿ ಕೆಲವೊಂದು ಅಪ್ಲಿಕೇಶನ್ಗಳಿಗೆ ಹಾಕಲಾಗುತ್ತಿತ್ತು. ಹೀಗೆ ಒಟ್ಟು 12 ಅಪ್ಲಿಕೇಶನ್ಗಳಲ್ಲಿ ಈ ಪೋರ್ನ್ ಕಂಟೆಂಟ್ ದೊರಕಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ. ಒಟ್ಟು 9 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಅದರಲ್ಲಿ ಗಂಧೀ ಬಾತ್ ವೆಬ್ ಸಿರೀಸ್ ಖ್ಯಾತಿಯ ನಟಿ ಗಹನಾ ವಶಿಷ್ಟ ಕೂಡ ಇದ್ದಾರೆ. ಈಕೆಯ ನಿಜವಾದ ಹೆಸರು ವಂದನಾ ತಿವಾರಿ. ಮಿಸ್ ಏಷ್ಯಾ ಬಿಕಿನಿ ವಿನ್ನರ್ ಆಗಿದ್ದ ಈಕೆಯನ್ನು ಪೋರ್ನ್ ವಿಡಿಯೋ ಅಪ್ಲೋಡ್ ಮಾಡುತ್ತಿದ್ದ ಆರೋಪದಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ತಂಡದ ಇನ್ನೂ ಎಂಟು ಜನರನ್ನು ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಈ ಪ್ರಕರಣದ ಮತ್ತೊಬ್ಬ ಆರೋಪಿ ಸೂರತ್ ನಗರದ ಸೈಯದ್ಪುರ ನಿವಾಸಿ ತನ್ವೀರ್ ಅಕಿಲ್ ಹಶ್ಮಿಯನ್ನು ಸಹ ಬಂಧನ ಮಾಡಲಾಗಿದೆ. ಈತ ತನ್ನ ಫಾರ್ಮ್ ಹೌಸ್ ಅನ್ನು ಬಾಡಿಗೆಗೆ ನೀಡಿ, ಪೋರ್ನ್ ಚಿತ್ರೀಕರಣಕ್ಕೆ ಕೈ ಜೋಡಿಸಿದ್ದ ಎಂದು ತಿಳಿದು ಬಂದಿದೆ. ಈ ಗುಂಪಿನಲ್ಲಿ ಯಾಸ್ಮಿನ್ ಬೇಗ್ ಖಾನ್, ಪ್ರತಿಭಾ ನಲವಾಡೆ ಸೇರಿದಂತೆ ಒಟ್ಟು ಒಂಭತ್ತು ಜನರು ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಅಪ್ಲಿಕೇಶನ್ಗಳ ವಹಿವಾಟು ಎಷ್ಟು?
ಪೋರ್ನ್ (ಅಶ್ಲೀಲ) ವೆಬ್ಸೈಟ್ಗಳನ್ನು ಭಾರತ ಸರ್ಕಾರವು ನಿರ್ಬಂಧ ಮಾಡಿದ ಮೇಲೆ, ಈ ದಂಧೆ ಬೇರೆಯದೇ ತಿರುವನ್ನು ಪಡೆಯಿತು. ಅಪ್ಲಿಕೇಶನ್ನಲ್ಲಿ ವೆಬ್ ಸಿರೀಸ್ ಎನ್ನುವ ಹೆಸರಿನಲ್ಲಿ ಈ ಪೋರ್ನ್ ಕಂಟೆಂಟ್ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಂಡಿತು. ಅದೂ ಲಾಕ್ಡೌನ್ ಸಮಯದಲ್ಲಿ ಇಂತಹ ಅಪ್ಲಿಕೇಶನ್ಗಳ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಾರೆ ಪೊಲೀಸರು.
ಈ ತರಹದ ಅಪ್ಲಿಕೇಶನ್ಗಳಲ್ಲಿ ಅಶ್ಲೀಲವಾಗಿರುವ ಇಂತಹ ವಿಡಿಯೋಗಳನ್ನು ನೋಡಲು ತಿಂಗಳಿಗೆ 199 ರೂ. ಶುಲ್ಕವನ್ನು ಈ ಅಪ್ಲಿಕೇಶನ್ಗಳು ವಿಧಿಸುತ್ತವೆ. ಲಾಕ್ಡೌನ್ ಸಂದರ್ಭದಲ್ಲಿ ಪೋರ್ನ್ ವೀಕ್ಷಣೆ ಹೆಚ್ಚಾದಾಗ, ಅನೇಕರು ಇಂತಹ ಅಪ್ಲಿಕೇಶನ್ಗಳಿಗೆ ಚಂದಾದಾರರಾದರು. ಒಂದು ಲಕ್ಷಕ್ಕಿಂತ ಹೆಚ್ಚು ಚಂದಾದಾರರ ಮೂಲಕ ಒಟ್ಟಾರೆ ಒಂದು ತಿಂಗಳಿಗೆ 2 ಕೋಟಿಯ ವಹಿವಾಟನ್ನು ಈ ಅಪ್ಲಿಕೇಶನ್ಗಳು ಮಾಡುತ್ತಿವೆ.
ಇಂತಹ ಪೋರ್ನ್ ವಿಡಿಯೋ ಚಿತ್ರೀಕರಣವನ್ನು ಮಾಡೋಕೆ ಅವರಿಗೆ ಹೆಚ್ಚು ಖರ್ಚು ತಗುಲುವುದಿಲ್ಲ ಎನ್ನಲಾಗಿದೆ. ವಾರಕ್ಕೆ ಎರಡರಿಂದ ಮೂರು ಚಲನಚಿತ್ರ ತೆಗೆಯಬಹುದು. ಇದಕ್ಕೆ ಕೇವಲ ಐದರಿಂದ ಆರು ಜನರು ಬೇಕಾಗುತ್ತಾರೆ. ತಮ್ಮದೇ ಮೊಬೈಲ್ ಕ್ಯಾಮೆರಾ ಮೂಲಕ ಚಿತ್ರೀಕರಣ ಮಾಡುತ್ತಾರೆ. ಅಲ್ಲದೇ ವಿಡಿಯೋ ಶೂಟ್ ಮಾಡಿದ ಮೇಲೆ ತಮ್ಮದೇ ಲ್ಯಾಪ್ಟಾಪ್ನಲ್ಲಿ ಉಚಿತ ಸಾಫ್ಟ್ವೇರ್ ಬಳಸಿ ಅವುಗಳನ್ನು ಎಡಿಟ್ ಮಾಡಿ ಅಪ್ಲಿಕೇಶನ್ಗಳಲ್ಲಿ ವೆಬ್ ಸಿರೀಸ್ ಹೆಸರಿನಲ್ಲಿ ಹಾಕುತ್ತಾರೆ ಎನ್ನುತ್ತಾರೆ ಪೊಲೀಸರು.
ಇದಕ್ಕೆ ತಗುಲುತ್ತಿದ್ದ ಖರ್ಚು ಎಷ್ಟು?
ಮುಂಬಯಿಯ ಹೊರವಲಯದಲ್ಲಿರುವ ಬಂಗಲೆಗೆ ದಿನಕ್ಕೆ 10000 ರೂ. ನೀಡಿದರೆ ಬಾಡಿಗೆ ಸಿಗುತ್ತದೆ. ಇದರಲ್ಲಿ ಅಭಿನಯಿಸುವ ನಟಿಯರಿಗೆ ದಿನಕ್ಕೆ 10000 ರೂ. ನೀಡಲಾಗುತ್ತಿತ್ತು. ಇನ್ನು ಅನೇಕ ವಿಡಿಯೋಗಳನ್ನು ತಮ್ಮದೇ ಮೊಬೈಲ್ ಕ್ಯಾಮೆರಾ ಮೂಲಕ ಶೂಟ್ ಮಾಡುತ್ತಿದ್ದರಿಂದ ಶೂಟಿಂಗ್ ಖರ್ಚು ಕೂಡ ಬರುತ್ತಿರಲಿಲ್ಲ. ಕೆಲವೊಂದು ವಿಡಿಯೋಗಳಿಗೆ ಯಾವುದೇ ಸಂಭಾಷಣೆ ಇಲ್ಲದೇ ಇರುವುದರಿಂದ ಅಲ್ಲಿಯೂ ಅವರಿಗೆ ಖರ್ಚು ಇರಲಿಲ್ಲ. ಹೀಗಾಗಿ ತುಂಬ ಕಡಿಮೆ ಖರ್ಚಿನಲ್ಲಿ ಈ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ.
ಮುಂಬೈ ಸುತ್ತಮುತ್ತ ಈ ಚಿತ್ರೀಕರಣಕ್ಕೆ ಕಾರಣ?
ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳಿಗೆ ಬಾಲಿವುಡ್ ನಂಟಿದೆ ಎನ್ನಲಾಗಿದೆ. ಅವರು ಬಾಲಿವುಡ್ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಅಲ್ಲದೇ ಅನೇಕರು ಇದೇ ನಗರದವರಾಗಿರುವುದರಿಂದ ಅವರಿಗೆ ಮುಂಬೈ ಹಾಗೂ ಅಲ್ಲಿನ ಸುತ್ತಮುತ್ತಲಿನ ಪ್ರದೇಶ ಸೂಕ್ತವೆನಿಸಿದೆ. ಇನ್ನು ಅನೇಕ ನಟಿಯರು ತಾವು ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚಬೇಕು ಎನ್ನುವ ಆಸೆ ಇಟ್ಟುಕೊಂಡಿರುತ್ತಾರೆ. ಅಂತಹವರನ್ನು ಮೋಸಗೊಳಿಸಿ ಅವರಿಗೆ ಮುಖ್ಯವಾಹಿನಿಯ ಸಿನಿಮಾಗಳಲ್ಲಿ ಅಥವಾ ಧಾರಾವಾಹಿಗಳಲ್ಲಿ ಅಭಿನಯಿಸುವ ಅವಕಾಶ ನೀಡಲಾಗುವುದು ಎಂದು ಹೇಳುತ್ತಾರೆ. ಇನ್ನು ಕೆಲವರು ಹಣದ ಆಸೆಗಾಗಿ ಈ ಕೆಲಸದಲ್ಲಿ ತೊಡಗಿಕೊಂಡಿದ್ದರು ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.
ಪೋರ್ನ್ ಅಪ್ಲಿಕೇಶನ್ ಕುರಿತು ಜನರಿಗೆ ಹೇಗೆ ಗೊತ್ತಾಯಿತು?
ಈ ಅಪ್ಲಿಕೇಶನ್ಗಳ ವಿಷಯವನ್ನು ಚಿತ್ರೀಕರಣ ತಂಡವು ಫೇಸ್ಬುಕ್, ಟ್ವಿಟರ್, ಟೆಲಿಗ್ರಾಮ್ ಮತ್ತು ಇನ್ಸ್ಟಾಗ್ರಾಮ್ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಿದೆ. ಇಲ್ಲಿ ಲಿಂಕ್ ನೀಡುವ ಮೂಲಕ ಬಳಕೆದಾರರನ್ನು ಅಪ್ಲಿಕೇಶನ್ ಬಗ್ಗೆ ತಿಳಿಯುವಂತೆ ಮಾಡುತ್ತಾರೆ. ಈ ಅಪ್ಲಿಕೇಶನ್ಗಳು ಓಟಿಟಿಯಂತೆ ಕೆಲಸ ಮಾಡುತ್ತಿದ್ದವು ಎನ್ನಲಾಗಿದೆ. ಅದರಲ್ಲಿ ಎಪಿಸೋಡ್ ರೂಪದಲ್ಲಿ ಈ ತರದ ಪೋರ್ನ್ ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ಇದನ್ನು ಓದಿ: Sexual wellness: ವಿವಾಹಪೂರ್ವ ಲೈಂಗಿಕ ಸಂಬಂಧದ ಬಗ್ಗೆ ತಜ್ಙರ ಅಭಿಪ್ರಾಯ ಇಲ್ಲಿದೆ
ಪೋರ್ನೊಗ್ರಾಫಿ ಬಗ್ಗೆ ಭಾರತದ ಕಾನೂನು ಏನು ಹೇಳುತ್ತದೆ?
ಭಾರತ ದೇಶದಲ್ಲಿ ಅಶ್ಲೀಲ ವೆಬ್ಸೈಟ್ಗಳನ್ನು ನಿರ್ಬಂಧಿಸಿದ ನಂತರ ಆ ವೆಬ್ಸೈಟ್ಗಳನ್ನು ತೆಗೆದುಹಾಕುವಂತೆ ಸುಪ್ರೀಂ ಕೋರ್ಟ್ ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಆದೇಶ ಮಾಡಿತ್ತು. ಅಲ್ಲದೇ ಯಾರಾದರೂ ಅಶ್ಲೀಲ ವಿಡಿಯೋಗಳನ್ನು ಪ್ರಸಾರ ಮಾಡುವುದು ಕಂಡುಬಂದರೆ ಅವರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 (ಎ) ಅಡಿಯಲ್ಲಿ ಗರಿಷ್ಠ ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಬಹುದು ಎನ್ನುತ್ತದೆ ಕಾನೂನು.
Published by:
HR Ramesh
First published:
February 24, 2021, 5:25 PM IST