Explained: ರಾತ್ರಿ ಪ್ರಯಾಣ, ಹೆಲಿಕಾಪ್ಟರ್ ಸವಾರಿ, ಕ್ವಾರಂಟೈನ್: ಹೀಗಿತ್ತು ನಮೀಬಿಯಾದಿಂದ ಭಾರತಕ್ಕೆ ಚಿರತೆಗಳ ಪ್ರಯಾಣ!

ಭಾರತದ ಕಾಡುಗಳಲ್ಲಿ ಚಿರತೆಗಳ ಮತ್ತೆ ವಾಪಸಾತಿಗೆ ಈ ದಿನ ಸಾಕ್ಷಿಯಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಸುಸಂದರ್ಭದಂದು ಅವರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದಾದ ಜಗತ್ತಿನ ಅತಿ ವೇಗವಾಗಿ ಓಡುವ ಪ್ರಾಣಿಯನ್ನು ಮತ್ತೆ ಭಾರತದಲ್ಲಿ ಪರಿಚಯಿಸುವ ಕಾರ್ಯ ಇಂದು ನೆರವೇರಲಿದೆ.

ನಮೀಬಿಯಾದಿಂದ ಭಾರತಕ್ಕೆ ಚಿರತೆಗಳ ಪ್ರಯಾಣ

ನಮೀಬಿಯಾದಿಂದ ಭಾರತಕ್ಕೆ ಚಿರತೆಗಳ ಪ್ರಯಾಣ

 • Share this:
  ಇಂದು ಭಾರತದ (India) ವನ್ಯಜೀವಿ ಸಂರಕ್ಷಣೆಯ ವಿಷಯಕ್ಕೆ ಸಂಬಂಧಿಸಿದಂತೆ ಒಂದು ದೊಡ್ಡ ದಿನ. ಏಕೆಂದರೆ, ಭಾರತದ ಕಾಡುಗಳಲ್ಲಿ ಚಿರತೆಗಳು (Cheetah) ಮತ್ತೆ ವಾಪಸಾತಿಗೆ ಈ ದಿನ ಸಾಕ್ಷಿಯಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಜನ್ಮದಿನದ ಸುಸಂದರ್ಭದಂದು ಅವರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದಾದ ಜಗತ್ತಿನ ಅತಿ ವೇಗವಾಗಿ ಓಡುವ ಪ್ರಾಣಿಯನ್ನು ಮತ್ತೆ ಭಾರತದಲ್ಲಿ ಪರಿಚಯಿಸುವ ಕಾರ್ಯ ಇಂದು ನೆರವೇರಲಿದೆ. ಭಾರತದ ಕಾಡುಗಳಲ್ಲಿ (wild) ಚಿರತೆಗಳು ಕಾಣೆಯಾಗಿ ಈಗಾಗಲೇ 70 ವರ್ಷಗಳು ಕಳೆದಿವೆ. ಆದರೆ, ಚಿರತೆಗಳ ಕೊರತೆಯಿಂದ ಈಗ ಭಾರತ ಹೊರಬಂದಿದೆ, ಏಕೆಂದರೆ ಆಫ್ರಿಕಾದ ನಮೀಬಿಯಾದಿಂದ (Namibia) ಎಂಟು ಚಿರತೆಗಳು ಭಾರತಕ್ಕೆ ಬಂದಿವೆ ಹಾಗೂ ಇಲ್ಲಿ ಶಾಶ್ವತವಾಗಿ ಆಶ್ರಯ ಪಡೆಯಲಿವೆ. ಇನ್ನು, ಭಾರತ ಆ ಎಂಟು ಚಿರತೆಗಳಿಗೆ ಮಾತೃಭೂಮಿಯಾಗಲಿದೆ ಎಂದರೂ ತಪ್ಪಿಲ್ಲ.

  ಹೀಗೆ ಬರಲಿರುವ ಈ ಚಿರತೆಗಳನ್ನು ಮಧ್ಯ ಪ್ರದೇಶದ ಕುನೊ-ಪಾಲಾಪುರ್ ರಾಷ್ಟ್ರೀಯ ವನದಲ್ಲಿ ಬಿಡಲಾಗುವುದು.

  ಭಾರತಕ್ಕೆ ಹೇಗೆ ಬಂದಿವೆ?
  ಆಫ್ರಿಕಾದಿಂದ ಐದು ಹೆಣ್ಣು ಹಾಗೂ ಮೂರು ಗಂಡು ಚಿರತೆಗಳನ್ನು ಸದ್ಯ ಭಾರತಕ್ಕೆ ತರಲಾಗಿದೆ. ಅದಕ್ಕೂ ಮೊದಲು ಶುಕ್ರವಾರದಂದು ನಮೀಬಿಯಾದ ರಾಜಧಾನಿ ವಿಂಡ್ ಹೋಕ್ ನಿಂದ ಖಾಸಗಿ ಚರ್ಟರ್ಡ್ ಫ್ಲೈಟಿಗೆ ಮೊದಲು ಚಿರತೆಗಳನ್ನು ವರ್ಗಾಯಿಸಲಾಯಿತು. ಅಲ್ಲಿಂದ ರಾತ್ರಿಯೆಲ್ಲ ವಿಮಾನದಲ್ಲಿ ಪ್ರಯಾಣಿಸಿದ ಚಿರತೆಗಳು ಶನಿವಾರ ಬೆಳಗ್ಗೆಯಂದು ಗ್ವಾಲಿಯರ್ ನಗರದ ಮಹಾರಾಜಪುರ ಏರ್ ಬೇಸ್ ಅನ್ನು ತಲುಪಿದವು. ಬೆಳಗ್ಗೆ ಆರು ಗಂಟೆಗೆ ಫ್ಲೈಟ್ ತಲುಪಬೇಕಾಗಿತ್ತು ಆದರೆ ವಿಳಂಬವಾಗಿ ಎಂಟು ಗಂಟೆಗೆ ತಲುಪಿತು. ತದನಂತರ ವಲಸೆ ಸಂಬಂಧಿತ ಪ್ರಕ್ರಿಯೆಗಳು ಏರ್ಪಟ್ಟು ಅದು ಪೂರ್ಣಗೊಂಡ ಬಳಿಕ ಭಾರತೀಯ ಸೈನ್ಯದ ಅತಿ ಭಾರ ಹೊರುವ ಚಿನೂಕ್ ಹೆಲಿಕಾಪ್ಟರ್ ಬಳಸಿಕೊಂಡು ಚಿರತೆಗಳನ್ನು ಕುನೋ ರಾಷ್ಟ್ರೀಯ ವನಕ್ಕೆ ಕೊಂಡೊಯ್ಯಲಾಯಿತು.  ಈ ಒಟ್ಟಾರೆ ಪ್ರಕ್ರಿಯೆಯಲ್ಲಿ ರೇಡಿಯೊ ಕಾಲರ್ ಹಾಕಲಾಗಿರುವ ಈ ಚಿರತೆಗಳನ್ನು ಪಂಜರದಲ್ಲೇ ಇರಿಸಲಾಗಿತ್ತು. ಚಿರತೆಗಳಿಗೆ ಈ ಸಂದರ್ಭದಲ್ಲಿ ಮತ್ತು ಬರಿಸುವ ಯಾವ ಔಷಧಿಗಳನ್ನು ಕೊಡಲಾಗಲಿಲ್ಲ, ಬದಲಾಗಿ ಪ್ರಯಾಣದ ಮುಂಚಿನ ಎರಡು ದಿನಗಳ ಕಾಲ ಅವುಗಳಿಗೆ ಚೆನ್ನಾಗಿ ಆಹಾರ ನೀಡಲಾಯಿತು ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

  ಇದನ್ನೂ ಓದಿ: PM Narendra Modi Birthday: ಮೋದಿ ಹುಟ್ಟುಹಬ್ಬಕ್ಕೆ ದೇಶಕ್ಕೆ ಚಿರತೆಗಳ ಉಡುಗೊರೆ!

  ಚಿರತೆಗಳ ಯೋಗಕ್ಷೇಮದ ಬಗ್ಗೆ ಗಮನವಹಿಸಿ ಜಗತ್ತಿನ ಪ್ರಮುಖ ಚಿರತೆ ತಜ್ಞರಾಗಿರುವ ಡಾ. ಲೌರಿ ಮಾರ್ಕರ್ ಅವರ ಸಹಾಯವನ್ನು ಪಡೆಯಲಾಗಿತ್ತು. ಅವುಗಳ ಜೊತೆ ಲೌರಿ ಪ್ರಯಾಣಿಸಿದರು ಹಾಗೂ ಅವರು ಈ ಬಗ್ಗೆ, "ಚಿರತೆಗಳಿಗೆ ಅತಿ ಕಡಿಮೆ ಪ್ರಮಾಣದಲ್ಲಿ ಮತ್ತು ನೀಡಲಾಗಿತ್ತೇ ಹೊರತು ಪೂರ್ಣವಾಗಿ ಟ್ರಾಂಕ್ವಿಲೈಸ್ ಮಾಡಿರಲಿಲ್ಲ, ಅವು ತುಂಬಾ ಚೆನ್ನಾಗಿ ಹಾಗೂ ಆರೋಗ್ಯಕರವಾಗಿ ಕಾಣುತ್ತಿವೆ" ಎಂದು ಹೇಳಿದರು.  ಲೌರಿ ಜೊತೆ ಮೂರು ಭಾರತೀಯ ಪಶು ವೈದ್ಯರೂ ಸಹ ಈ ಪ್ರಯಾಣದಲ್ಲಿ ಪಾಲ್ಗೊಂಡಿದ್ದರು.

  ಚಿರತೆಗಳು ಗ್ವಾಲಿಯರ್ ಮುಟ್ಟಿದಾಗ
  ಇದೊಂದು ದೀರ್ಘ ಪ್ರಯಾಣವಾಗಿತ್ತು ಹಾಗೂ ಚಿರತೆಗಳು ರಾತ್ರಿಯೆಲ್ಲ ವಿಮಾನದಲ್ಲಿ ಪ್ರಯಾಣಿಸಿ ಬೆಳಗ್ಗೆ ಗ್ವಾಲಿಯರ್ ವಾಯು ನಿಲ್ದಾಣ ತಲುಪಿದ್ದವು. ಸಹಜವಾಗಿ ಅವು ಸ್ವಲ್ಪ ವಿಶ್ರಾಂತಿ ಭಂಗಿಯಲ್ಲಿದ್ದವು. ಈ ಸಂದರ್ಭದಲ್ಲಿ ಆಡಳಿತಾತ್ಮಕ ಕಾರ್ಯಗಳನ್ನು ಪೂರೈಸಲಾಯಿತು. ನಂತರ, ಆ ಚಿರತೆಗಳು ಇಲ್ಲಿಂದ ನಲವತ್ತು ನಿಮಿಷಗಳಷ್ಟು ಪ್ರಯಾಣಾವಧಿಯ ಮತ್ತೊಂದು ಪ್ರಯಾಣ ಮಾಡಬೇಕಾಗಿತ್ತು. ಅದಕ್ಕಾಗಿ ಅವುಗಳನ್ನು ಇಲ್ಲಿಂದ ಸುಸೂತ್ರವಾಗಿ ಕೊಂಡೊಯ್ಯಲು ಭಾರತೀಯ ಸೈನ್ಯದ ಚಿನೂಕ್ ಹೆಲಿಕಾಪ್ಟರ್ ಅನ್ನು ಬಳಸಲಾಯಿತು.  ಇದಕ್ಕೂ ಮುಂಚೆ ಕುನೋ ರಾಷ್ಟ್ರೀಯ ವನ್ಯಧಾಮದಲ್ಲಿ ತಾತ್ಕಾಲಿಕ ಹೆಲಿ ಪ್ಯಾಡ್ ಒಂದನ್ನು ನಿರ್ಮಿಸಲಾಗಿತ್ತು. ಅದರ ಪ್ರಕಾರವಾಗಿ ನಲವತ್ತು ನಿಮಿಷಗಳಷ್ಟು ಪ್ರಯಾಣ ಮಾಡಿ ಚಿನೂಕ್ ಮೂಲಕ ಚಿರತೆಗಳನ್ನು ವನ್ಯಧಾಮಕ್ಕೆ ಕರೆತರಲಾಯಿತು.

  ಕುನೋದಲ್ಲಿ ಚಿರತೆಗಳನ್ನು ಎಲ್ಲಿ ಇರಿಸಲಾಗುವುದು?
  ಕುನೋ ರಾಷ್ಟ್ರೀಯ ವನ್ಯಧಾಮದಲ್ಲಿ ಚಿರತೆಗಳನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ. ಮೊದಲ ತಿಂಗಳಿನಲ್ಲಿ ಅವುಗಳನ್ನು ಪ್ರತಿಬಂಧಿಸಲಾಗಿರುವ ಅಂದರೆ ಕ್ವಾರಂಟೈನ್ ಮಾಡಲಾಗಿರುವ ದೊಡ್ಡ ಸ್ಥಳದಲ್ಲಿ ಬಿಡಲಾಗುವುದು. ಈ ಮೂಲಕ ಅವುಗಳ ಆರೋಗ್ಯದ ಮೇಲೆ ನಿಗಾ ಇರಿಸಲಾಗುವುದು. ಅವುಗಳಲ್ಲಿ ಯಾವುದಾದರೂ ಸೋಂಕುಂಟಾಗಿದೆಯೇ ಎಂದು ಗಮನಿಸಲಾಗುವುದು ಮತ್ತು ಅವು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿರುವುದನ್ನು ಪರಿಶೀಲಿಸಲಾಗುವುದು.

  ಇದನ್ನೂ ಓದಿ:  PM Modi Birthday: ಹುಟ್ಟುಹಬ್ಬದ ಸಂಭ್ರಮದಲ್ಲಿ ನರೇಂದ್ರ ಮೋದಿ; ನಮ್ಮ ಪ್ರಧಾನಿ ಈ ಮಟ್ಟಕ್ಕೆ ಬೆಳೆದದ್ದೇ ರೋಚಕ! 

  50*30 ಮೀ ಅಳತೆಯುಳ್ಳ ಆರು ಸ್ಥಳಗಳನ್ನು ಕ್ವಾರಂಟೈನ್ ಪ್ರದೇಶಗಳಾಗಿ ರೂಪಿಸಲಾಗಿದ್ದು ಈ ಒಟ್ಟಾರೆ ಪ್ರದೇಶದಲ್ಲಿ ಎಂಟು ಚಿರತೆಗಳನ್ನು ಬಿಡಲಾಗುವುದು. ಈ ಬಗ್ಗೆ ಮಾತನಾಡಿರುವ ಚೌಹಾಣ್ ಅವರು, "ನಾವು ಈಗಾಗಲೇ ಪ್ರಾಣಿಗಳ ವರ್ಗಾವಣೆಯ ವಿಷಯದಲ್ಲಿ ನಿಗದಿಪಡಿಸಲಾಗಿರುವ ಅಗತ್ಯತೆಗಳಿಗನುಸಾರವಾಗಿ ಆರು ಪ್ರತಿಬಂಧಕ ಸ್ಥಳಗಳನ್ನು ರಚಿಸಿದ್ದೇವೆ. ಅವುಗಳಲ್ಲಿ ಚಿರತೆಗಳನ್ನು ಮಾನ್ಯ ಪ್ರಧಾನಿಯವರು ಬಿಡಲಿದ್ದಾರೆ" ಎಂದು ಹೇಳಿದರು.

  ಶಿಷ್ಟಾಚಾರದ ಪ್ರಕಾರ, ಚಿರತೆಗಳನ್ನು ವರ್ಗಾಯಿಸಿದಾಗ ಒಂದು ತಿಂಗಳು ಅವುಗಳನ್ನು ಹೊಸ ಸ್ಥಳದಲ್ಲಿ ಕ್ವಾರಂಟೈನ್ ಮಾಡಿ ಇರಿಸಬೇಕಾಗುತ್ತದೆ. ಒಂದೊಮ್ಮೆ ಅವು ಒಂದು ತಿಂಗಳು ಕಳೆದ ಬಳಿಕ ತದನಂತರ ದೊಡ್ಡದಾದ ಪ್ರದೇಶದಲ್ಲಿ ಅವುಗಳನ್ನು ಬಿಡಲಾಗುತ್ತದೆ ಎಂದು ಚೌಹಾಣ್ ಹೇಳಿದರು.

  ಎಲ್ಲಿಯವರೆಗೂ ಚಿರತೆಗಳು ಎನ್ಕ್ಲೋಸರ್ ನಲ್ಲಿರಲಿವೆ?
  ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅಧಿಕಾರಿಯಾದ ಎಸ್ ಪಿ ಯಾದವ್ ಅವರು ಹೇಳುವಂತೆ, ಮೊದಲಿಗೆ ದೊಡ್ಡ ಎನ್ಕ್ಲೋಸರ್ ನಲ್ಲಿ ಬಿಡಲಾಗುವ ಚಿರತೆಗಳನ್ನು ನಿರಂತರವಾಗಿ ಗಮನಿಸಲಾಗುವುದು, ಅವು ಹೇಗೆ ಬೇಟೆಯಾಡುತ್ತಿವೆ, ಸರಿಯಾಗಿ ತಿನ್ನುತ್ತಿವೆಯೇ, ಜೀರ್ಣಕ್ರಿಯೆ ಸರಿಯಾಗುತ್ತಿದೆಯೆ ಎಂಬೆಲ್ಲ ಅಂಶಗಳನ್ನು ಮಾನಿಟರ್ ಮಾಡಲಾಗುವುದು.

  ಒಂದೊಮ್ಮೆ ಅವು ಹೊಂದಿಕೊಂಡಿವೆ ಎಂದೆನಿಸಿದಾಗ ಅಥವಾ ಖಾತ್ರಿಯಾದಾಗ ಅವುಗಳನ್ನು 740 ಚ.ಕಿ.ಮೀ ವ್ಯಾಪ್ತಿಯ ಕುನೋ ವನ್ಯಧಾಮದಲ್ಲಿ ಬಿಡಲಾಗುವುದು. ಈ ಸಂದರ್ಭದಲ್ಲಿ ಚಿರತೆಗಳು ಈ ವಿಶಾಲ ಅರಣ್ಯದ ಐದು ಸಾವಿರ ಚ.ಕಿ.ಮೀ ವಿಸ್ತಾರ ಭೂಮಿಯಲ್ಲಿ ಸ್ವಚ್ಛಂದವಾಗಿ ವಿಹರಿಸಬಹುದು. ಇಲ್ಲಿಯವರೆಗೂ 25 ಗ್ರಾಮಗಳ ಪೈಕಿ 24 ಗ್ರಾಮಗಳನ್ನು ಚಿರತೆಗಳ ವಾಸಯೋಗ್ಯ ಮಾಡುವ ಉದ್ದೇಶದಿಂದ ಮರು ಸ್ಥಾಪಿಸಲಾಗಿದೆ. ಚಿರತೆಗಳಿಗೆ ಯಾವುದೇ ರೀತಿಯ ಸೋಂಕು ಬರದಂತೆ ಈ ಪ್ರದೇಶದಲ್ಲಿ ಕಂಡುಬರುವ ಎಲ್ಲ ಫೇರಲ್ ನಾಯಿಗಳಿಗೂ ಲಸಿಕೆ ನೀಡಲಾಗಿದೆ.  ಯಾದವ್ ಅವರ ಪ್ರಕಾರ, ಕುನೋ ವನ್ಯಧಾಮವು ಚಿರತೆಗಳು ಆರಾಮವಾಗಿ ಇರುವಂತೆ ಅನುಕೂಲವಾಗಲು ಸಾಕಷ್ಟು ಬೇಟೆಗಳನ್ನು ಹೊಂದಿದೆ. ಅಲ್ಲದೆ, ಇಲ್ಲಿ ಸಾಕಷ್ಟು ವೈವಿಧ್ಯಮತೆಯಿದೆ ಮತ್ತು ಉತ್ತಮ ವಾತಾವರಣವಿದೆ.

  ಭಾರತಕ್ಕೆ ಇನ್ನಷ್ಟು ಚಿರತೆಗಳು ಬರಲಿವೆಯೆ?
  ಹೌದು, ಖಂಡಿತ ಇನ್ನಷ್ಟು ಚಿರತೆಗಳು ಮುಂದಿನ ಕೆಲ ವರ್ಷಗಳಲ್ಲಿ ಭಾರತಕ್ಕೆ ಬಂದು ಸೇರಲಿವೆ. ಸರ್ಕಾರವು ಮುಂದಿನ ಐದು ವರ್ಷಗಳಲ್ಲಿ 50 ಹೆಚ್ಚುವರಿ ಚಿರತೆಗಳನ್ನು ಭಾರತದಲ್ಲಿ ಪರಿಚಯಿಸುವ ಯೋಜನೆ ಹೊಂದಿದೆ.  ಇದನ್ನೂ ಓದಿ:  PM Modi Birthday: ಮೋದಿ ಅಭಿಮಾನಿಗಳು ವಿಶ್ವದ ಈ ದಿಗ್ಗಜ ನಾಯಕರು: ಈ ಐವರು ನಾಯಕರ ಜೊತೆ ಪ್ರಧಾನಿಗೆ ಆಪ್ತ ಸ್ನೇಹ!

  ಈ ವರ್ಷ ಭಾರತ 20 ಪಡೆಯಲಿದೆ. ಆ ನಿಟ್ಟಿನಲ್ಲಿ ಈಗಾಗಲೇ ನಮೀಬಿಯಾದಿಂದ ಎಂಟು ಚಿರತೆಗಳು ಬಂದಿವೆ. ಇನ್ನೂ 12 ಚಿರತೆಗಳು ದಕ್ಷಿಣ ಆಫ್ರಿಕಾದಿಂದ ಶೀಘ್ರದಲ್ಲೇ ಬರಲಿವೆ. ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬರಲಿರುವ ಚಿರತೆಗಳಿಗೆ ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಲಾಗಿದೆ. ರೇಡಿಯೊ ಕಾಲರ್ ಸಹ ಅಳವಡಿಸಲಾಗಿದೆ.
  Published by:Ashwini Prabhu
  First published: