Home Plan: ನೀವೂ ಹೊಸ ಮನೆ ಖರೀದಿಸುವ ಪ್ಲ್ಯಾನ್ ಮಾಡ್ತಾ ಇದ್ದೀರಾ? ಹಾಗಿದ್ರೆ ಈ 5 ಪ್ರಮುಖ ಅಂಶಗಳ ಬಗ್ಗೆ ತಿಳ್ಕೋಬಿಡಿ

ಮನೆ ಕೊಳ್ಳುವುದು ಎಂದರೆ ಸಾಕಷ್ಟು ಹಣದ ಅಗತ್ಯವಿರುವ ದೊಡ್ಡ ಆರ್ಥಿಕ ಕ್ರಮವಾಗಿದೆ. ಗೃಹ ಸಾಲ, ಹಣಕಾಸು, ದಾಖಲೆ ಸೇರಿ ಮನೆ ಖರೀದಿದಾರರು ಹಲವಾರು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮನೆಯನ್ನು ಖರೀದಿಸುವಾಗ ಮುಖ್ಯವಾಗಿ ನಿಯಂತ್ರಕ, ಹಣಕಾಸು ಮತ್ತು ಸ್ಥಳ, ಈ ಮೂರು ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಸ್ವಂತ ಸೂರೊಂದನ್ನು ಹೊಂದುವ ಆಸೆ ಯಾರಿಗೆ ಇರುವುದಿಲ್ಲ ಹೇಳಿ. ಪ್ರತಿಯೊಬ್ಬರು ತಮ್ಮದೇ ಆದ ಕನಸಿನ ಮನೆಯನ್ನು (House) ಕಟ್ಟುವ ಅಥವಾ ತೆಗೆದುಕೊಳ್ಳುವ ಆಸೆಯಲ್ಲಿ ಇದ್ದೇ ಇರುತ್ತಾರೆ. ಕೆಲವರು ಸುಲಭವಾಗಿ ತಮ್ಮ ಕನಸನ್ನು ಈಡೇರಿಸಕೊಂಡರೆ ಇನ್ನೂ ಕೆಲವರು ತಮ್ಮ ಪರಿಶ್ರಮದ ಒಂದೊಂದು ರೂಪಾಯಿಯನ್ನು ಉಳಿಸಿ ಮನೆ ಖರೀದಿಗೆ ಮುಂದಾಗುತ್ತಾರೆ. ಸ್ವಂತ ಮನೆಯು ಒಬ್ಬರ ಆತ್ಮ ವಿಶ್ವಾಸವನ್ನು ಹೆಚ್ಚಿಸುವುದರೊಂದಿಗೆ ಭದ್ರತೆ (Security) ಮತ್ತು ಸ್ಥಿರತೆಯ ಭಾವವನ್ನು ನೀಡುತ್ತದೆ. ಮನೆ ಕೊಳ್ಳುವುದು ಎಂದರೆ ಸಾಕಷ್ಟು ಹಣದ (Money) ಅಗತ್ಯವಿರುವ ದೊಡ್ಡ ಆರ್ಥಿಕ ಕ್ರಮವಾಗಿದೆ. ಗೃಹ ಸಾಲ, ಹಣಕಾಸು, ದಾಖಲೆ ಸೇರಿ ಮನೆ ಖರೀದಿದಾರರು ಹಲವಾರು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮನೆಯನ್ನು ಖರೀದಿಸುವಾಗ ಮುಖ್ಯವಾಗಿ ನಿಯಂತ್ರಕ, ಹಣಕಾಸು ಮತ್ತು ಸ್ಥಳ (Place), ಈ ಮೂರು ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಮನೆ ಖರೀದಿಸುವಾಗ ಈ ಮೂರು ಅಂಶಗಳ ಜೊತೆ ಕೆಳಕಂಡ ಕೆಲ ಮುಖ್ಯ ವಿಷಯಗಳ ಮೇಲೆ ಗಮನಹರಿಸುವುದು ಸುರಕ್ಷತೆ, ಆರ್ಥಿಕ ಯೋಜನೆಯ ನಿಟ್ಟಿನಲ್ಲಿ ಸಹಕಾರಿಯಾಗುತ್ತದೆ.

1) ಕೈಗೆಟುಕುವಿಕೆ ಮತ್ತು ಮರುಪಾವತಿ ಸಾಮರ್ಥ್ಯ
ಗೃಹ ಸಾಲಗಳು ಸ್ವಂತ ಸೂರಿನ ಕನಸು ನನಸು ಮಾಡಿಕೊಳ್ಳಲು ತುಂಬಾ ಸಹಕಾರಿಯಾಗಿವೆ. ಆದಾಗ್ಯೂ, ನೀವು ಮನೆಯನ್ನು ಖರೀದಿಸುವ ಮೊದಲು, ಹಣಕಾಸಿನ ಸ್ಥಿತಿ, ಡೌನ್‌ಪೇಮೆಂಟ್‌ಗಳು ಮತ್ತು ಕಂತುಗಳನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಗೃಹ ಸಾಲವು 75-90%ರಷ್ಟು ಹಣಕಾಸು ಪೂರೈಸಿದರೆ, ಉಳಿದ ಹಣವನ್ನು ಸ್ವತಹಃ ನೀವೇ ನೀಡಬೇಕು. ದೊಡ್ಡ ಮೊತ್ತದ ಡೌನ್‌ಪೇಮೆಂಟ್ ಮಾಡುವುದರಿಂದ ನಿಮ್ಮ ಲೋನ್ ಅಗತ್ಯಗಳು ಕಡಿಮೆ ಆಗುತ್ತವೆ ಮತ್ತು ಇಎಂಐ ಹೊರೆ ಕೂಡ ಕಡಿಮೆಯಾಗುತ್ತದೆ. ಡೌನ್ ಪೇಮೆಂಟ್ ಅನ್ನು ಉಳಿಸಲು ಹಲವು ಮಾರ್ಗಗಳಿವೆ. ಉದಾಹರಣೆಗೆ, SIP ಮೂಲಕ ಈಕ್ವಿಟಿ ಮ್ಯೂಚುವಲ್ ಫಂಡ್‌ನಲ್ಲಿ ತಿಂಗಳಿಗೆ 25,000 ರೂ. ಹೂಡಿಕೆ ಮಾಡಿದರೆ ಸರಾಸರಿ 12% ಆದಾಯ ದರದಲ್ಲಿ ಮೂರು ವರ್ಷಗಳ ನಂತರ 10.9 ಲಕ್ಷ ಪಡೆಯಬಹುದು.

ನಿಮ್ಮ ಸಾಲವನ್ನು ಮಂಜೂರು ಮಾಡುವಾಗ ಸಾಲದಾತರು ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ಸಹ ಲೆಕ್ಕಾಚಾರ ಮಾಡುತ್ತಾರೆ. ಹೀಗಾಗಿ ನಿಮ್ಮ ಹಣಕಾಸಿನ ಸರಿಯಾದ ಅಂದಾಜು ಹೊಂದುವುದು ಉತ್ತಮ. ತಿಂಗಳ ವೆಚ್ಚಗಳನ್ನು ಸರಿದೂಗಿಸಿದ ನಂತರ ಸಾಲ ಮರುಪಾವತಿಸಲು ನಿಮ್ಮಲ್ಲಿ ಸಾಕಷ್ಟು ಉಳಿತಾಯವಿದೆ ಎಂದು ಖಚಿತಪಡಿಸಿಕೊಳ್ಳಬೇಕು.

2) ಕ್ರೆಡಿಟ್ ಸ್ಕೋರ್
ಹೊಸ ಮನೆ ಖರೀದಿಗೆ ನೀವು ಹಣಕಾಸು ಯೋಜಿಸಲು ಹೋದರೆ, 750 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಅನ್ನು ಹೊಂದಲು ಸಲಹೆ ನೀಡಲಾಗುತ್ತದೆ. ಇದು ನಿಮ್ಮ ಕ್ರೆಡಿಟ್ ಅರ್ಹತೆಯನ್ನು ಬಲಪಡಿಸುತ್ತದೆ ಮತ್ತು ಕಡಿಮೆ ಬಡ್ಡಿ ದರದಲ್ಲಿ ಲೋನ್ ಪಡೆಯಲು ನಿಮ್ಮ ಅರ್ಹತೆಯನ್ನು ಹೆಚ್ಚಿಸುತ್ತದೆ. ನೀವು ಅಸ್ತಿತ್ವದಲ್ಲಿರುವ ಅಲ್ಪಾವಧಿಯ ಇಎಂಐಗಳನ್ನು ಹೊಂದಿದ್ದರೆ, ಸಾಧ್ಯವಾದಷ್ಟು ಬೇಗ ಅವುಗಳನ್ನು ಹೊಂದಿಸಲು ಶಿಫಾರಸು ಮಾಡಲಾಗುತ್ತದೆ.

3) ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (RERA) ಮತ್ತು ಇತರ ದಾಖಲೆಗಳು
ಮನೆ ಖರೀದಿದಾರರು ಮೊದಲು ತಾವು ಖರೀದಿಸುತ್ತಿರುವ ಆಸ್ತಿಯು ಸೂಕ್ತವಾದ ಪ್ರಮಾಣಪತ್ರ, ಕಾನೂನು ಮಾನ್ಯತೆ ಮತ್ತು ಸ್ಥಳೀಯ ಅನುಮತಿಗಳನ್ನು ಹೊಂದಿದೆಯೇ ಎಂಬುದರ ಕುರಿತು ಎಚ್ಚರಿಕೆಯಿಂದಿರಬೇಕು. ಆಸ್ತಿಯು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ (RERA) ನೋಂದಾಯಿಸಲ್ಪಟ್ಟಿದೆಯೇ ಎಂಬುದನ್ನು ಪ್ರಮುಖವಾಗಿ ಪರಿಶೀಲಿಸಬೇಕು.

ಇದನ್ನೂ ಓದಿ: Vastu Tips: ಮನೆಯ ಮೆಟ್ಟಿನ ವಾಸ್ತು ಬಗ್ಗೆ ನಿರ್ಲಕ್ಷ್ಯ ಬೇಡ

RERA ನೋಂದಾಯಿತ ಆಸ್ತಿಯನ್ನು ಖರೀದಿಸುವುದು ಯೋಜನೆಯಲ್ಲಿನ ವಿಳಂಬ ಅಥವಾ ದೋಷಯುಕ್ತ ನಿರ್ಮಾಣದಂತಹ ಸಮಸ್ಯೆಗಳಿಗೆ ಪರಿಹಾರವಾಗಿರುತ್ತದೆ. ಅಗತ್ಯ ಪ್ರಮಾಣಪತ್ರಗಳು ಮತ್ತು ಕ್ಲಿಯರೆನ್ಸ್‌ಗಳನ್ನು ಹೊಂದಿಲ್ಲದಿದ್ದರೆ ಸಾಲದಾತರು ನಿಮ್ಮ ಆಸ್ತಿಗೆ ಹಣಕಾಸು ಒದಗಿಸಲು ಅನುಮಾನಿಸಬಹುದು. ಹೀಗಾಗಿ ಸರಿಯಾದ ಸೂಕ್ತ ದಾಖಲೆಗಳನ್ನು ಹೊಂದುವುದು ಅತ್ಯಗತ್ಯ.

4) ಶೀರ್ಷಿಕೆ ಪತ್ರ ಮತ್ತು ಎನ್ಕಂಬರೆನ್ಸ್ ಪ್ರಮಾಣಪತ್ರ
ನಿಮ್ಮ ಹೊಸ ಮನೆಯ ಖರೀದಿಯಲ್ಲಿ ಪರಿಶೀಲಿಸಬೇಕಾದ ಮತ್ತೊಂದು ಪ್ರಮುಖ ವಿಷಯವೆಂದರೆ ಆಸ್ತಿ ಅಥವಾ ಪ್ರಾಜೆಕ್ಟ್ ಆಧರಿಸಿದ ಭೂಮಿಯ ಶೀರ್ಷಿಕೆ ಪತ್ರ. ಟೈಟಲ್ ಡೀಡ್ ಎನ್ನುವುದು ಬಿಲ್ಡರ್‌ನಿಂದ ಆಸ್ತಿಯ ಮಾಲೀಕತ್ವ, ಮಾಲೀಕತ್ವವನ್ನು ಮಾರಾಟ ಮಾಡುವ ಅಥವಾ ವರ್ಗಾಯಿಸುವ ಹಕ್ಕು ಮತ್ತು ಆಸ್ತಿಯು ಯಾವುದಾದರು ವ್ಯಾಜ್ಯದಲ್ಲಿ ಇದೆಯೇ ಇಲ್ಲವೇ ಎಂಬುನ್ನು ತೋರಿಸುವ ದಾಖಲೆಯಾಗಿದೆ.

ದಾಖಲೆಗಳನ್ನು ಪರೀಕ್ಷಿಸಲು ನೀವು ವಕೀಲರ ಸಹಾಯವನ್ನು ಸಹ ಪಡೆಯಬಹುದು.
ಅಂತೆಯೇ, ನೀವು ಎನ್ಕಂಬರೆನ್ಸ್ ಪ್ರಮಾಣಪತ್ರವನ್ನು ಪರಿಶೀಲಿಸಬೇಕು. ಹೋಮ್ ಲೋನ್‌ಗೆ ಅರ್ಜಿ ಸಲ್ಲಿಸುವಾಗ ನಿಮಗೆ ಎನ್ಕಂಬರೆನ್ಸ್ ಪ್ರಮಾಣಪತ್ರದ ಅಗತ್ಯವಿದೆ. ಇದು ಯಾವುದೇ ಕಾನೂನು ಸಮಸ್ಯೆಗಳಿಂದ ಆಸ್ತಿ ಮುಕ್ತವಾಗಿದೆ ಎಂಬುದಕ್ಕೆ ಪುರಾವೆ ನೀಡುವ ದಾಖಲೆಯಾಗಿದೆ.

5) ಸ್ಟ್ಯಾಂಪ್ ಡ್ಯೂಟಿ ಮತ್ತು ಇತರ ಶುಲ್ಕಗಳು
ಮನೆ ಖರೀದಿ ಮಾಡುವಾಗ ಮನೆ ಜೊತೆ ಇತರೆ ವೆಚ್ಚಗಳು ನಿಮ್ಮ ಹಣಕಾಸಿನ ಪ್ಲ್ಯಾನ್ ಗಿಂತ ಹೆಚ್ಚಗಬಹುದು. ಹೊಸ ಆಸ್ತಿಯನ್ನು ಖರೀದಿಸುವಾಗ ನೀವು ಅನೇಕ ಇತರ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ಖರೀದಿ ಒಪ್ಪಂದಕ್ಕೆ ಸಹಿ ಮಾಡುವ ಸಮಯದಲ್ಲಿ ವೆಚ್ಚಗಳು ಹೆಚ್ಚಾಗುತ್ತವೆ. ಈ ವೆಚ್ಚವು ನಿಮ್ಮ ಬಜೆಟ್ ಮೀರಿ ಹೋಗಬಹುದು. ಆದ್ದರಿಂದ, ಮನೆಯ ಮೂಲ ಬೆಲೆಗಿಂತ ಹೆಚ್ಚಿನ ಕೆಲವು ಆಕಸ್ಮಿಕ ಶುಲ್ಕಗಳ ಬಗ್ಗೆ ತಿಳಿದುಕೊಳ್ಳುವುದು ಖರೀದಿ ಸಮಯದಲ್ಲಿ ಅನಗತ್ಯ ಆಘಾತಗಳನ್ನು ತಪ್ಪಿಸಲು ಮತ್ತು ಆರ್ಥಿಕವಾಗಿ ಉತ್ತಮವಾಗಿ ಯೋಜಿಸಲು ಸಾಧ್ಯವಾಗುತ್ತದೆ. ಇತರೆ ಖರ್ಚುಗಳೆಂದರೆ ಸ್ಟ್ಯಾಂಪ್ ಡ್ಯೂಟಿ (5-7%), ನೋಂದಣಿ ಶುಲ್ಕಗಳು 1-2%, ನಿರ್ವಹಣಾ ಶುಲ್ಕಗಳು ಮತ್ತು ಪಾರ್ಕಿಂಗ್ ಶುಲ್ಕಗಳು ಆಗಿವೆ.

ಇದನ್ನೂ ಓದಿ: Vastu Tips: ನಿಮ್ಮ ಮನೆ ಹಣವನ್ನು ಆಕರ್ಷಿಸಬೇಕು ಮತ್ತು ಸಮೃದ್ಧಿಯಿಂದ ತುಂಬಿರ್ಬೇಕು ಅಂದ್ರೆ ಈ 6 ವಿಚಾರ ಗಮನಿಸಿ ಸಾಕು

ಮೇಲೆ ಚರ್ಚಿಸಿದ ಐದು ಅಂಶಗಳ ಹೊರತಾಗಿ, ಹೊಸ ಮನೆ ಖರೀದಿಸುವಾಗ ಸ್ಥಳವನ್ನು ನಿರ್ಣಯಿಸಿ. ಮನೆ ಸಮೀಪದಲ್ಲಿ ಶಾಲಾ-ಕಾಲೇಜು, ಆಸ್ಪತ್ರೆಗಳು, ರೈಲು ಮತ್ತು ರಸ್ತೆ ಸಂಪರ್ಕ, ವಿಮಾನ ನಿಲ್ದಾಣಗಳು ಮತ್ತು ಮಾರುಕಟ್ಟೆಗಳು ಇವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇವುಗಳು ನಿಮ್ಮ ಅನುಕೂಲಕ್ಕೆ ತಕ್ಕಂತೆ ಮತ್ತು ನಿಮ್ಮ ಜೀವನಮಟ್ಟವನ್ನು ಹೆಚ್ಚಿಸುತ್ತವೆ.

ಜೀವನದಲ್ಲಿ ಸ್ವಂತ ಮನೆ ಖರೀದಿಯ ಕ್ಷಣಗಳು ಅಪರೂಪ. ಹೀಗಾಗಿ ಹಣಕಾಸು ಯೋಜನೆ, ಸರಿಯಾದ ವಿಚಾರಣೆ, ದಾಖಲೆಗಳ ಕೂಲಂಕೂಷ ಪರಿಶೀಲನೆಯನ್ನು ಎಚ್ಚರಿಕೆಯಿಂದ ನಿಭಾಯಿಸಬೇಕು.
Published by:Ashwini Prabhu
First published: