ಪರಿಸರ ಜಾಗೃತಿ ಮತ್ತು ಸರ್ಕಾರದ ಕ್ರಮಗಳಿಗೆ ಜಾಗತಿಕವಾಗಿ ಸಾರ್ವಜನಿಕರ ಬೆಂಬಲ ವ್ಯಾಪಕವಾಗಿದೆ ಮತ್ತು ಇದು ಸಾಂಪ್ರದಾಯಿಕ ರಾಜಕೀಯ ವಿಭಜನೆಗಳನ್ನು ಮೀರಲು ಪ್ರಾರಂಭಿಸುತ್ತಿದೆ ಎಂದು ಇಂಗ್ಲೆಂಡ್ ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧನೆಯು ಸೂಚಿಸಿದೆ. ಸಮೀಕ್ಷೆಯ ಪ್ರಕಾರ 7ರ ಪೈಕಿ 6 ದೇಶಗಳಲ್ಲಿ ನಡೆಸಿದ ಅಧ್ಯಯನದಲ್ಲಿ ಪಾಲ್ಗೊಂಡಿದ್ದ 10 ರಲ್ಲಿ 9 ಜನರು ಸರ್ಕಾರಗಳು ಪರಿಸರ ಸಂರಕ್ಷಣೆಗಾಗಿ ಇನ್ನು ಹೆಚ್ಚಿನ ಕೆಲಸ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಹೌದು, ಪರಿಸರವನ್ನು ನಾವು ರಕ್ಷಿಸಿದರೆ, ಪರಿಸರ ನಮ್ಮನ್ನು ರಕ್ಷಿಸುತ್ತದೆ. ಪರಿಸರ ಸಂರಕ್ಷಣೆ ಬಗ್ಗೆ ನಾವು ಸದಾ ಜಾಗೃತಿ ಮತ್ತು ಕಾಳಜಿ ವಹಿಸಬೇಕಾಗಿದೆ. ಮನುಷ್ಯ ಜೀವಿಗೆ ಪರಿಸರ ಎಲ್ಲವನ್ನೂ ಕೊಟ್ಟಿದೆ. ಆದರೆ ಮನುಷ್ಯ ಮಾತ್ರ ಪರಿಸರದಿಂದ ಕಿತ್ತುಕೊಳ್ಳುತ್ತಲೇ ಇದ್ದಾನೆ. ತಂತ್ರಜ್ಞಾನ ಯುಗದಲ್ಲಿ ಮನುಷ್ಯ ಪರಿಸರದಿಂದ ದೂರವಾಗುತ್ತಿದ್ದಾನೆ. ದಿನದಿಂದ ದಿನಕ್ಕೆ ಹವಾಮಾನ ವೈಪರೀತ್ಯ ಹೆಚ್ಚಾಗುತ್ತಿದ್ದು, ಪ್ರಕೃತಿ ವಿಕೋಪ ಸಂಭವಿಸುತ್ತಿವೆ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಮತ್ತು ಕಾಳಜಿ ವಿಷಯವಾಗಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಮೀಕ್ಷೆಯೊಂದನ್ನು ನಡೆಸಿದೆ.
ಮತದಾನ ಸಂಸ್ಥೆ ಯೂಗೊವ್ ಸಹಭಾಗಿತ್ವದಲ್ಲಿ ನಡೆಸಲಾಗಿರುವ ಈ ಸಮೀಕ್ಷೆಯಲ್ಲಿ ಸುಮಾರು 14,627 ವಯಸ್ಕರು ಪಾಲ್ಗೊಂಡಿದ್ದರು ಅಥವಾ ಅಧ್ಯಯನ ಮಾಡಿದ 7 ದೇಶಗಳಲ್ಲಿ ತಲಾ 2 ಸಾವಿರ ಜನರು (ಬ್ರೆಜಿಲ್, ಚೀನಾ, ಭಾರತ, ಇಂಡೋನೇಷ್ಯಾ, ಪೋಲೆಂಡ್, ಇಂಗ್ಲೆಂಡ್, ಅಮೆರಿಕ) ಭಾಗವಹಿಸಿದ್ದರು. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಜನರಿಗೆ ತಮ್ಮ ತಮ್ಮ ದೇಶಗಳಲ್ಲಿ ಸರ್ಕಾರಗಳು ರೂಪಿಸುವ ಪರಿಸರ ನೀತಿಗಳ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿತ್ತು. 6 ದೇಶಗಳಲ್ಲಿ 10 ಜನರ ಪೈಕಿ ಕನಿಷ್ಠ 9 ಜನರು ತಮ್ಮ ಸರ್ಕಾರಗಳು ಪರಿಸರ ಸಂರಕ್ಷಣೆಗಾಗಿ ಹೆಚ್ಚಿನ ಕೆಲಸ ಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಾಡುಹಗಲೇ ದರೋಡೆ ನಡೀತಿದ್ರೂ ಆರಾಮಾಗಿ ನಿದ್ದೆ ಮಾಡಿದ ಸಾಕು ನಾಯಿ..!; ಇಲ್ಲಿದೆ ನೋಡಿ ವೈರಲ್ ವಿಡಿಯೋ
ಅಮೆರಿಕದಲ್ಲಿ ಈ ಅಂಕಿ-ಅಂಶವು ಶೇ.79ರಷ್ಟು ತಲುಪಿದೆ. ಸಮೀಕ್ಷೆ ಪ್ರಕಾರ ನವೆಂಬರ್ 2020ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆ ಮತ ಹಾಕಿದ ಶೇ.55 ರಷ್ಟು ಮತದಾರರು ಸರ್ಕಾರವು ಪರಿಸರದ ಬಗ್ಗೆ ಹೆಚ್ಚಿನ ಕಾರ್ಯಗಳನ್ನು ಮಾಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಈ ಪೈಕಿ ಶೇ.95ರಷ್ಟು ಜನರು ಪ್ರಸ್ತುತ ಅಧ್ಯಕ್ಷರಾಗಿರುವ ಜೋ ಬಿಡೆನ್ ಅವರಿಗೆ ಮತ ಹಾಕಿದ್ದಾರೆ. ಈ ಅಂತರವನ್ನು ಗಮನಿಸಿದರೆ ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚು ಕಾಳಜಿ ತೆಗೆದುಕೊಳ್ಳದ ಟ್ರಂಪ್ ಅವರನ್ನು ಅಮೆರಿಕ ಚುನಾವಣೆಯಲ್ಲಿ ಸೋಲಿಸಲಾಗಿದ್ದು, ಪರಿಸರ ಪರ ಕಾಳಜಿ ಹೊಂದಿರುವ ಬಿಡೆನ್ ಅವರನ್ನು ಗೆಲ್ಲಿಸಲಾಗಿದೆ ಎಂಬುದು ತಿಳಿಯುತ್ತದೆ.
ಇನ್ನು ಇಂಗ್ಲೆಂಡ್ ನಲ್ಲಿ ಕನ್ಸರ್ವೇಟಿವ್ ಬೆಂಬಲಿಗರು (ಶೇ.87ರಷ್ಟು) ಮತ್ತು ಕಾರ್ಮಿಕ ಬೆಂಬಲಿಗರು (ಶೇ.97ರಷ್ಟು) ನಡುವಿನ ವ್ಯತ್ಯಾಸ ಕೊಂಚ ಕಡಿಮೆಯಾಗಿದೆ. ಇದು ಬ್ರಿಕ್ಸೈಟರ್ ಮತ್ತು ರಿಮೇನರ್‌ಗಳ ನಡುವಿನ ವ್ಯತ್ಯಾಸದಂತಿದೆ. ಈ ಅಂಕಿ ಅಂಶಗಳು ಪರಿಸರ ಸಂರಕ್ಷಣೆಗೆ ಸರ್ಕಾರಗಳು ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ನಾಗರಿಕರ ಮನಸ್ಥಿತಿಯನ್ನು ತೆರೆದಿಟ್ಟಿವೆ. ಪರಿಸರ ಪರ ಕಾಳಜಿ ಇಲ್ಲದ ರಾಜಕಾರಣಿಗಳಿಗೆ ಪ್ರಜೆಗಳು ತಕ್ಕಪಾಠ ಕಲಿಸಿರುವುದು ಇದರಿಂದ ತಿಳಿದುಬಂದಿದೆ.
‘ನಾವು ಧ್ರುವೀಕರಣದ ಸಮಯದಲ್ಲಿ ವಾಸಿಸುತ್ತಿದ್ದೇವೆ ಮತ್ತು ಪರಿಸರದ ಸಮಸ್ಯೆಗಳು ಸಮಾಜದಲ್ಲಿನ ರಾಜಕೀಯ ವಿಭಜನೆಗಳನ್ನು ದೀರ್ಘಕಾಲಿಕವಾಗಿ ಸಾಕಾರಗೊಳಿಸಿವೆ. ಪ್ರಮುಖ ರಾಷ್ಟ್ರಗಳಲ್ಲಿ ಪರಿಸರ ರಕ್ಷಿಸಲು ಸರ್ಕಾರಗಳು ಹೆಚ್ಚಿನ ಕ್ರಮ ತೆಗೆದುಕೊಳ್ಳುವಂತೆ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ’ ಎಂದು ಕೇಂಬ್ರಿಡ್ಜ್ ನ ರಾಜಕೀಯ ಮನಶಾಸ್ತ್ರಜ್ಞ ಹಾಗೂ ಅಧ್ಯಯನದ ಸಹ ಲೇಖಕ ಡಾ.ಲೀ ಡಿ-ವಿಟ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ