ಒಂದಿಷ್ಟು ದಿನದಿಂದ ಎಲ್ಲರ ಬಾಯಲ್ಲೂ ಒಂದೇ ಮಾತು, ಹೇ ಆಧಾರ್ ಮತ್ತೆ ಪ್ಯಾನ್ ಕಾರ್ಡ್ ಲಿಂಕ್ (Aadhar Card and Pan Card Link) ಮಾಡಿ ಆಯ್ತಾ ಅಂತಾ. ಕೆಲವರು ನಾಳೆ ಮಾಡ್ತೀನಿ, ನಾಡಿದ್ದು ಮಾಡ್ತೀನಿ ಅಂತಾ ಸಮಯ ದೂಡುತ್ತಲೇ ಇದ್ರು. ಇನ್ನು ಕೆಲವರು ಡೆಡ್‌ಲೈನ್ (DeadLIne) ಮುಂದೆ ಹೋಗಬಹುದೇನೋ ಅಂತಾ ಬಾಯಿ ಮೇಲೆ ಬೆರಳು ಇಟ್ಟುಕೊಂಡು ಕಾಯ್ತಿದ್ರು. ಆದರೆ ಇಂದಿನ ದಿನದಲ್ಲಿ ಪ್ಯಾನ್ ಮತ್ತು ಆಧಾರ್ ಪ್ರತಿಯೊಂದಕ್ಕೂ ಅಗತ್ಯ ದಾಖಲೆಯಾಗಿಬಿಟ್ಟಿದೆ. ಯಾವುದೇ ಒಂದು ಡಾಕ್ಯುಮೆಂಟ್ (Document) ಫಿಲ್ ಮಾಡ್ಬೇಕಂದ್ರು ಅಲ್ಲಿ ಪ್ಯಾನ್ ಅಥವಾ ಆಧಾರ್ ಕಾರ್ಡ್ ಇವೆರಡರಲ್ಲಿ ಒಂದರ ನಂಬರ್ ಆ್ಯಡ್ ಮಾಡ್ಲೇಬೇಕು.
ಆದರೆ ಇತ್ತೀಚೆಗೆ ದೇಶದಾದ್ಯಂತ ಸರ್ಕಾರ ಪ್ರತಿಯೊಬ್ಬರೂ ಪ್ಯಾನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿರ್ಬೇಕು ಎಂದು ಹೇಳಿತ್ತು. ಆದರೆ ಹೆಚ್ಚಿನವರು ಇದನ್ನು ಮಾಡೇ ಇರಲಿಲ್ಲ. ಇದರಿಂದ ಹೆಚ್ಚಿನವರಿಗೆ ಗೊಂದಲಬವೂ ಆಗಿತ್ತು. ಆದರೆ ಇದೀಗ ಲಿಂಕ್ ಮಾಡಲು ಸರ್ಕಾರ ಮತ್ತೆ 3 ತಿಂಗಳ ಅವಕಾಶವನ್ನು ನೀಡಿದೆ.
ಪ್ಯಾನ್-ಆಧಾರ್ ಲಿಂಕ್ ಮತ್ತೆ ಡೆಡ್‌ಲೈನ್ ವಿಸ್ತರಣೆ
ಅಂತೂ ಹೀಗೆ ಸರ್ಕಾರದ ಡೆಡ್‌ಲೈನ್‌ಗೆ ಕ್ಯಾರೆ ಅನ್ನದೇ ಸಮಯ ಮುಂದೂಡುತ್ತಿದ್ದ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಬಳಕೆದಾರರಿಗೆ ಸರ್ಕಾರ ಖುಷಿ ಸುದ್ದಿ ಕೊಟ್ಟೇ ಬಿಟ್ಟಿತ್ತು. ಅದೇನಪ್ಪಾ ಅಂದ್ರೆ ಎಲ್ಲರಿಗೂ ಗೊತ್ತಿರುವಂತೆ ಆಧಾರ್ ಜೊತೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಇನ್ನೂ ಜೂನ್ 30, 2023 ರವರೆಗೆ ಡೆಡ್‌ಲೈನ್ ಅನ್ನು ಸರ್ಕಾರ ವಿಸ್ತರಣೆ ಮಾಡಿದೆ.
ಇದನ್ನೂ ಓದಿ: ಚುನಾವಣಾ ನೀತಿ ಸಂಹಿತೆಯಲ್ಲಿ ಅಭ್ಯರ್ಥಿಗಳು ಪಾಲಿಸಬೇಕಾದ ನಿಯಮಗಳು
ಆದಾಯ ತೆರಿಗೆ ಕಾಯ್ದೆ 139 ಎಎ ಪ್ರಕಾರ ಪಾನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಲಿಂಕ್ ಮಾಡೋದು ಕಡ್ಡಾಯವಾಗಿದ್ದು, ಈ ಹಿಂದೆ ಮಾರ್ಚ್ 31ರೊಳಗೆ ಪ್ಯಾನ್ - ಆಧಾರ್ ನಂಬರ್‌ಗಳನ್ನು ಜೋಡಣೆ ಮಾಡಲು ಸರ್ಕಾರ ಡೆಡ್‌ಲೈನ್ ನೀಡಿತ್ತು. ಈ ಸಮಯ ಮೀರಿದರೆ ಐನ್ನೂರು ರೂಪಾಯಿ ಇಂದ ಸಾವಿರದವರೆಗೆ ದಂಡ ಕೂಡ ವಿಧಿಸುವುದಾಗಿ ಹೇಳಿತ್ತು.ಆದರೆ ಸುಮಾರು ಬಳಕೆದಾರರು ಈ ದಿನಾಂಕವನ್ನು ನಿರ್ಲಕ್ಷ್ಯಿಸಿದ ಕಾರಣ ಸಮಯ ಕೊಟ್ಟರೂ ಪರವಾಗಿಲ್ಲ ಮುಂದಾಗುವ ಅನಾಹುತಗಳನ್ನು ತಡೆಯಲು ಪ್ಯಾನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಆಗಲೇ ಬೇಕೆಂದು ಮತ್ತೆ ಸಮಯ ನೀಡಿದೆ.
ಜೂನ್ 30ರವರೆಗೆ ಇದೇ ಟೈಮ್
ಕಾಯಿದೆಯ ಪ್ರಕಾರ 2023ರ ಏಪ್ರಿಲ್ 1 ರಿಂದ ಕೆಲವು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಈಗ ಈ ಗಡುವನ್ನು ಅಂದರೆ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡುವ ಉದ್ದೇಶದ ದಿನಾಂಕವನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ.
ಹೌದು, ತೆರಿಗೆದಾರರಿಗೆ ಹೆಚ್ಚಿನ ಸಮಯವನ್ನು ನೀಡಲು, ಪರ್ಮನೆಂಟ್ ಅಕೌಂಟ್ಟ ನಂಬರ್ ಮತ್ತು ಆಧಾರ್ ಅನ್ನು ಲಿಂಕ್ ಮಾಡುವ ಗಡುವನ್ನು ಕೇಂದ್ರ ಸರ್ಕಾರವು ಮೂರು ತಿಂಗಳವರೆಗೆ ಜೂನ್ 30 ಕ್ಕೆ ವಿಸ್ತರಿಸಿದೆ. ಅಂದರೆ ಯಾರೆಲ್ಲಾ ಇನ್ನೂ ಲಿಂಕ್ ಮಾಡಿಲ್ಲವೋ ಅವರು ಹೆಚ್ಚಿನ ಮೂರು ತಿಂಗಳ ಅವಧಿ ಪಡೆದುಕೊಳ್ಳುತ್ತಾರೆ.
ಇಲಾಖೆ ಹೇಳಿದ್ದೇನು?
"ಆದಾಯ ತೆರಿಗೆ ಕಾಯಿದೆ, 1961 ('ಆಕ್ಟ್') ನಿಬಂಧನೆಗಳ ಪ್ರಕಾರ, 2017ರ ಜುಲೈ 1 ರಂತೆ ಪ್ಯಾನ್ ಅನ್ನು, ನಿಗದಿಪಡಿಸಿದ ಮತ್ತು ಆಧಾರ್ ಸಂಖ್ಯೆಯನ್ನು ಪಡೆಯಲು ಅರ್ಹರಾಗಿರುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ಆಧಾರ್ ಜತೆಗೆ ಜೋಡಿಸಬೇಕು. ಇದನ್ನು 2023ರ ಮಾರ್ಚ್ 31ರ ಒಳಗೆ ನಿಗದಿತ ಶುಲ್ಕ ಪಾವತಿಸಿ ಮಾಡಬೇಕು. ಹಾಗೆ ಮಾಡಲು ವಿಫಲವಾದರೆ ಕಾಯಿದೆಯ ಪ್ರಕಾರ 2023ರ ಏಪ್ರಿಲ್ 1 ರಿಂದ ಕೆಲವು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಈಗ ಈ ಗಡುವನ್ನು ಅಂದರೆ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡುವ ದಿನಾಂಕವನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ" ಎಂದು ಹಣಕಾಸು ಸಚಿವಾಲಯದ ಹೇಳಿಕೆ ತಿಳಿಸಿದೆ.
ಜುಲೈ 1, 2023 ರಿಂದ, ಅಗತ್ಯವಿರುವಂತೆ ತಮ್ಮ ಆಧಾರ್ ಅನ್ನು ಪ್ಯಾನ್ ಜೊತೆ ಲಿಂಕ್ ಮಾಡದೇ ಇದ್ದರೆ ತೆರಿಗೆದಾರರ PAN ನಿಷ್ಕ್ರಿಯಗೊಳ್ಳುತ್ತದೆ. ಇಲ್ಲಿಯವರೆಗೆ 51 ಕೋಟಿಗೂ ಹೆಚ್ಚು ಪ್ಯಾನ್‌ಗಳನ್ನು ಈಗಾಗಲೇ ಆಧಾರ್‌ನೊಂದಿಗೆ ಲಿಂಕ್ ಮಾಡಲಾಗಿದೆ ಎಂದು ಹೇಳಲಾಗಿದೆ. ಇನ್ನೂ ಸಹ ಕೋಟ್ಯಾಂತರ ಲಿಂಕ್ ಮಾಡದ ಬಳಕೆದಾರರಿದ್ದು, ಅವರಿಗೆ ಕೇಂದ್ರ ಇನ್ನೂ ಸಹ ಸಮಯ ನೀಡಿದೆ.
ಇಲ್ಲಿಯವರೆಗೆ ಈಗಾಗಲೇ ನಾಲ್ಕು ಬಾರಿ ಸರ್ಕಾರ ಗಡುವನ್ನು ವಿಸ್ತರಿಸಿದೆ. ಹಾಗಾದರೆ ಇನ್ನೂ ಸಮಯ ನೀಡುತ್ತಿರುವುದರ ಹಿಂದಿನ ಕಾರಣವೇನು ಎಂಬುದನ್ನು ನಾವಿಲ್ಲಿ ನೋಡೋಣ.
ಸರ್ಕಾರವು ಪ್ಯಾನ್-ಆಧಾರ್ ಲಿಂಕ್ ಡೆಡ್‌ಲೈನ್ ಅನ್ನು ಏಕೆ ವಿಸ್ತರಿಸುತ್ತಿದೆ? ಮುಖ್ಯ ಉದ್ದೇಶವೇನು?
ಒಟ್ಟಾರೆ ಬ್ಯಾಂಕ್ ಹಣ, ಹೊಸ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಪಡೆಯಲು, ತೆರಿಗೆ ಪ್ರಯೋಜನ, ವಹಿವಾಟು ಹೀಗೆ ಹಲವು ಕ್ಷೇತ್ರಗಳಲ್ಲಿ ಬಳಕೆದಾರರು ಪ್ರಯೋಜನ ಪಡೆದುಕೊಳ್ಳಲಿ ಎಂಬ ಕಾರಣಕ್ಕೆ ಸರ್ಕಾರ ಈ ಅವಧಿಯನ್ನು ವಿಸ್ತರಿಸುತ್ತಲೇ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ