ಕೇರಳ (Kerala) ರಾಜ್ಯದಲ್ಲಿ ಇದೀಗ 'ಟೊಮೆಟೋ ಜ್ವರ' (Tomato flu) ಹೆಚ್ಚಾಗಿ ಕಂಡುಬರುತ್ತಲಿದೆ. ಅಪರೂಪದ ವೈರಲ್ ಕಾಯಿಲೆಯು (Viral Fever) ಕೇರಳ ರಾಜ್ಯದಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ 80 ಕ್ಕೂ ಹೆಚ್ಚು ಮಕ್ಕಳಿಗೆ ಸೋಂಕು ತಗುಲಿಸಿದೆ ಎಂದು ವರದಿಯಾಗಿದೆ. ಟೊಮೇಟೊ ಜ್ವರದ ಎಲ್ಲಾ ಪ್ರಕರಣಗಳು ಕೊಲ್ಲಂ ಜಿಲ್ಲೆಯಲ್ಲಿ ವರದಿಯಾಗಿದ್ದು, ಈ ಜ್ವರವು ಸೋಂಕಿತ ಮಗುವಿನ ದೇಹದ ಮೇಲೆ ದದ್ದುಗಳು ಮತ್ತು ಗುಳ್ಳೆಗಳನ್ನು ಉಂಟುಮಾಡುತ್ತದೆ. ದದ್ದುಗಳು ಕೆಂಪು ಬಣ್ಣದ್ದಾಗಿರುವುದರಿಂದ, ಗುರುತಿಸಲಾಗದ ಜ್ವರಕ್ಕೆ 'ಟೊಮೆಟೋ ಜ್ವರ' ಎಂದು ಹೆಸರಿಸಲಾಗಿದೆ. ಇನ್ನು, ಈ ಜ್ವರ ಬಂದ ನಂತರದಲ್ಲಿ ಹಲವೆಡೆ ಟೊಮೆಟೋ (Tomato) ಸೇವನೆಯಿಂದ ಈ ಜ್ವರ ಬರುತ್ತಲಿವೆ ಎಂದು ಹೇಳಲಾಗುತ್ತಿದೆ. ರಾಜ್ಯದ ಗಡಿ ಭಾಗದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.
ಟೊಮೆಟೋ ಜ್ವರಕ್ಕೆ ಟೊಮೆಟೋ ಹಣ್ಣು ಕಾರಣವೇ?:
ಇನ್ನು, ಹಲವೆಡೆ ಜನರಲ್ಲಿ ಕೆಲ ಮಅತುಗಳು ಕೇಳಿಬರುತ್ತಿದ್ದು, ಜೊತೆಗೆ ಸಾಮಾಜಿಕ ಮಾಧ್ಯಗಳಲ್ಲಿಯೂ ಈ ವಿಷಯ ಚರ್ಚೆಗೆ ಗ್ರಾಸವಾಗಿದೆ. ಹೌದು, ಟೊಮೆಟೋ ಸೇವನೆಯಿಂದ ಟೊಮೆಟೋ ಜ್ವರ ಬರುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಟೊಮೆಟೋ ಸೇವನೆಯಿಂದ ಯಾವುದೇ ಕಾರಣಕ್ಕೂ ಈ ಜ್ವರ ಬರುತ್ತಿಲ್ಲ ಎಂದು ತಜ್ಞರು ತಿಳಸಿದ್ದಾರೆ.
ಟೊಮೆಟೋ ಜ್ವರ ಎಂದು ಏಕೆ ಕರೆಯಲಾಗುತ್ತದೆ:
ಮೂಲಗಳ ವರದಿಯ ಪ್ರಕಾರ ಟೊಮೆಟೋ ಜ್ವರ ಎಂದರೆ ಅದರ ಲಕ್ಷಣಗಳ ಆಧಾರದ ಮೇಲೆ ಹೀಗೆ ಕರೆಯಲಾಗುತ್ತದೆ ಎಂದು ಹೇಳಲಾಗಿದೆ. ಅಂದರೆ ಈ ಜ್ವರ ಕಾಣಿಸಿಕೊಂಡವರಲ್ಲಿ ಮೈ ಮೇಲೆ ಕೆಂಪಗೆ ದದ್ದುಗಳು ಆಗುವುದಕ್ಕಾಗಿ ಟೊಮೆಟೋ ಜ್ವರ ಎಂದು ಹೇಳಲಾಗುತ್ತಿದೆ ಎಂದು ಕೆಲ ಮೂಲಗಳು ವರದಿ ಮಾಡಿದೆ. ಆದರೆ ಯಾವುದೇ ಸ್ಪಷ್ಟ ಆಧಾರ ಈವರೆಗೂ ದೊರಕಿಲ್ಲ.
ಇದನ್ನೂ ಓದಿ: Explained: ತಮಿಳುನಾಡಿನಲ್ಲಿ 'ಪಟ್ಟಿನ ಪ್ರವೇಸಂ' ಆಚರಣೆ ನಿಷೇಧ: ಏನಿದು ಸಮಾರಂಭ, ಧಾರ್ಮಿಕ, ರಾಜಕೀಯ ನಾಯಕರ ನಿಲುವೇನು?
ಟೊಮೆಟೋ ಜ್ವರ ಎಂದರೇನು?:
ಟೊಮೆಟೊ ಜ್ವರ ಸದ್ಯ ಹೆಚ್ಚಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಂಡುಬರುತ್ತಿದೆ. ಟೊಮೆಟೋ ಜ್ವರವು ಅಪರೂಪದ ವೈರಲ್ ಸೋಂಕು ಆಗಿದ್ದು, ಈ ಜ್ವರದಿಂದ ಬಳಲುತ್ತಿರುವ ಮಕ್ಕಳಲ್ಲಿ ದದ್ದುಗಳು, ಚರ್ಮದ ಕಿರಿಕಿರಿ ಮತ್ತು ನಿರ್ಜಲೀಕರಣ ಉಂಟಾಗುತ್ತದೆ. ಮೈ ಮೇಲಿನ ಗುಳ್ಳೆಗಳು ಸಾಮಾನ್ಯವಾಗಿ ಕೆಂಪು ಬಣ್ಣದಲ್ಲಿ ಇರುವುದರಿಂದ ಇದನ್ನು ಟೊಮೆಟೊ ಜ್ವರ ಎಂದು ಕರೆಯಲಾಗುತ್ತದೆ. ಆದರೆ ಟೊಮೆಟೋ ಜ್ವರ ವೈರಲ್ ಜ್ವರವೇ ಎಂದು ಈವರೆಗೂ ಸರಿಯಾದ ಮಾಹಿತಿ ಲಭ್ಯವಾಗಿಲ್ಲ.
ಟೊಮೆಟೋ ಜ್ವರ ಲಕ್ಷಣಗಳು:
ಟೊಮೆಟೋ ಫ್ಲೂ ರೋಗಲಕ್ಷಣಗಳೆಂದರೆ ಚರ್ಮದ ಕಿರಿಕಿರಿ, ದೇಹದ ನೋವು, ಸುಸ್ತು, ವಾಕರಿಕೆ, ಸೀನುವಿಕೆ, ಕೆಮ್ಮು, ನಿರ್ಜಲೀಕರಣ, ಹೊಟ್ಟೆ ನೋವು, ಕೀಲು ಊತ, ಕೈಗಳು, ಮೊಣಕಾಲುಗಳು, ಪೃಷ್ಠದ ಬಣ್ಣ ಬದಲಾಗುವುದು ಮತ್ತು ನಿರ್ಜಲೀಕರಣವಾಗಿದೆ.
ಟೊಮೆಟೋ ಜ್ವರವನ್ನು ಹೇಗೆ ಎದುರಿಸುವುದು?:
- ಟೊಮೆಟೋ ಜ್ವರದ ರೋಗಲಕ್ಷಣಗಳು ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.
- ಸೋಂಕಿತ ಮಗು ಗುಳ್ಳೆಗಳನ್ನು ಕೆರೆಯುವುದನ್ನು, ಉಜ್ಜುವುದನ್ನು ತಪ್ಪಿಸಬೇಕು.
- ಮನೆಯ ಸುತ್ತ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು.
- ಸರಿಯಾದ ವಿಶ್ರಾಂತಿಯನ್ನು ಸೂಚಿಸಲಾಗುತ್ತದೆ.
ಇದನ್ನೂ ಓದಿ: Explained: ಪೆಸಿಫಿಕ್ ಮಹಾಸಾಗರದ ತಳದಲ್ಲಿ ಇದ್ಯಂತೆ 'ಹಳದಿ ಇಟ್ಟಿಗೆಯ ರಸ್ತೆ’! ಸಮುದ್ರ ತಜ್ಞರ ತಂಡದಿಂದ ಪತ್ತೆ
ಗಡಿ ಭಾಗದಲ್ಲಿ ಕಟ್ಟೆಚ್ಚರ:
ಇನ್ನು, ಕೇರಳದಲ್ಲಿ ಈ ಜ್ವರ ಕಂಡುಬಂದಿದ್ದು, ಈಗಾಗಲೇ ಟೊಮೆಟೋ ಜ್ವರಕ್ಕೆ ಸುಮಾರು 80ಕ್ಕೂ ಹೆಚ್ಚಿನ ಮಕ್ಕಳು ತುತ್ತಾಗಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಈ ಜ್ವರ ವೈರಲ್ ಫ್ಲೂ ಆಗಿರುವುದರಿಮದ ಯಾವುದೇ ಕಾರಣಕ್ಕೂ ಇದು ರಾಜ್ಯಕ್ಕೆ ಹರಡಬಾರದು ಎಂದು ರಾಜ್ಯದ ಆರೋಗ್ಯ ಸಚಿವರು ಈಗಾಗಲೇ ಗಡಿಯಲ್ಲಿ ಕಟ್ಟೆಚ್ಚರ ವಹಿಸುವಂತೆ ಆದೇಶಿಸಿದ್ದಾರೆ.
ಈ ಕುರಿತು ಮಾತನಾಡಿರುವ ಆರೋಗ್ಯ ಸಚಿವ ಡಾ. ಕೆ ಸುಧಾಕರ್, ‘ಮಂಗಳೂರು, ಉಡುಪಿ, ಕೊಡಗು, ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳಿಗೆ ಕೇರಳದಿಂದ ಆಗಮಿಸುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುವುದು. ಅಲ್ಲದೇ ರಾಜ್ಯದಲ್ಲಿ ಯಾವುದೇ ಮಕ್ಕಳಿಗೆ ಈ ರೋಗದ ಲಕ್ಷಣ ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಸಚಿವರು ತಿಳಸಿದ್ದಾರೆ.
ನೆರೆ ರಾಜ್ಯಗಳಲ್ಲಿ ಹೈ ಅಲರ್ಟ್
ಕೇರಳದಲ್ಲಿ ಟೊಮೇಟೊ ಜ್ವರ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೊಯಮತ್ತೂರು ಜಿಲ್ಲಾಡಳಿತ ಗಡಿಯಲ್ಲಿ ಕಟ್ಟೆಚ್ಚರ ವಹಿಸಿದ್ದು, ರಾಜ್ಯಕ್ಕೆ ಸೋಂಕು ಬಾರದಂತೆ ತಡೆಯಲು ಕೊಯಮತ್ತೂರು ಜಿಲ್ಲಾಡಳಿತ ನಿಗಾ ವಹಿಸಿದೆ. ತಮಿಳುನಾಡು-ಕೇರಳ ಗಡಿಯಲ್ಲಿರುವ ವಾಳಯಾರ್ ಚೆಕ್‌ಪೋಸ್ಟ್‌ನಲ್ಲಿ ನೆರೆಯ ರಾಜ್ಯದಿಂದ ಬರುವ ಜನರನ್ನು ತಪಾಸಣೆ ಮಾಡಲು ಕಂದಾಯ, ಆರೋಗ್ಯ ಮತ್ತು ಪೊಲೀಸ್ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ