ಮಾಸ್ಕೋ(ಮೇ.24): ಇತ್ತೀಚೆಗೆ ಮುಕ್ತಾಯಗೊಂಡ ಜಿ-7 ಶೃಂಗಸಭೆಯಲ್ಲಿ ಸದಸ್ಯ ರಾಷ್ಟ್ರಗಳು ರಷ್ಯಾದ (Russia) ಮೇಲೆ ಇನ್ನಷ್ಟು ಕಠಿಣ ನಿರ್ಬಂಧಗಳನ್ನು ಹೇರುವುದಾಗಿ ಘೋಷಿಸಿವೆ. ರಷ್ಯಾವನ್ನು ಆರ್ಥಿಕವಾಗಿ ದುರ್ಬಲಗೊಳಿಸಲು, G-7 ದೇಶಗಳು ರಷ್ಯಾದ ಹಡಗುಗಳು, ವಿಮಾನಗಳು ಮತ್ತು ರಷ್ಯಾದ ವಜ್ರಗಳ ಮೇಲೆ ನಿಷೇಧವನ್ನು ಘೋಷಿಸಿವೆ. ಅದೇ ಸಮಯದಲ್ಲಿ, ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಈ ಹೊಸ ನಿಷೇಧದಿಂದಾಗಿ, ಭಾರತದ ವಜ್ರ (Diamond) ಉದ್ಯಮದಲ್ಲಿ ಕೆಲಸ ಮಾಡುವ 10 ಲಕ್ಷ ಉದ್ಯೋಗಿಗಳಿಗೆ ನಿರುದ್ಯೋಗ ಭೀತಿ ಕಾಡಲಾರಂಭಿಸಿದೆ ಎನ್ನಲಾಗಿದೆ. ಪ್ರಪಂಚದ ಶೇಕಡ 90ರಷ್ಟು ವಜ್ರಗಳ ಕಟ್ಟಿಂಗ್ ಹಾಗೂ ಪಾಲಿಶಿಂಗ್ ಭಾರತದಲ್ಲೇ ಮಾಡಲಾಗುತ್ತದೆ. ಈ ವಜ್ರಗಳಲ್ಲಿ ರಷ್ಯಾದ ವಜ್ರಗಳೂ ಸಹ ಸೇರಿವೆ.
10 ಲಕ್ಷ ಜನರ ಉದ್ಯೋಗ ಕೈತಪ್ಪುವ ಭೀತಿ
ಭಾರತವು ರಷ್ಯಾದ ಅಲ್ರೋಸಾದಿಂದ ವಜ್ರಗಳನ್ನು ಆಮದು ಮಾಡಿಕೊಳ್ಳುತ್ತದೆ. ಪ್ರಪಂಚದ ಒಟ್ಟು ವಜ್ರಗಳಲ್ಲಿ ಸುಮಾರು 30 ಪ್ರತಿಶತವನ್ನು ಅಲ್ರೋಸಾದಲ್ಲಿ ಉತ್ಪಾದಿಸಲಾಗುತ್ತದೆ. ಭಾರತೀಯ ವಜ್ರ ಕಂಪನಿಗಳು ಆಮದು ಮಾಡಿಕೊಂಡ ವಜ್ರಗಳನ್ನು ಕತ್ತರಿಸಿ ಪಾಲಿಶ್ ಮಾಡುವ ಮೂಲಕ G-7 ದೇಶಗಳಿಗೆ ರಫ್ತು ಮಾಡುತ್ತವೆ. ರಷ್ಯಾ ಮೇಲಿನ ನಿಷೇಧ ಹೀಗೆಯೇ ಮುಂದುವರಿದರೆ ಜಿ-7 ದೇಶಗಳು ರಷ್ಯಾದ ಮೇಲೆ ನಿಷೇಧ ಹೇರಿದ ಬಳಿಕ ಭಾರತದಲ್ಲಿ 10 ಲಕ್ಷ ಜನರ ಉದ್ಯೋಗ ಸ್ಥಗಿತವಾಗಲಿದೆ ಎಂದು ರತ್ನ ಮತ್ತು ಆಭರಣ ರಫ್ತು ಉತ್ತೇಜನಾ ಮಂಡಳಿ ಅಧ್ಯಕ್ಷ ವಿಪುಲ್ ಶಾ ಹೇಳಿದ್ದಾರೆ.
ವಜ್ರಗಳ ಪೂರೈಕೆ ಮೇಲೆ ಪರಿಣಾಮ ಬೀರಿದೆ
ರಷ್ಯಾದ ವಜ್ರಗಳ ಮೇಲಿನ ನಿಷೇಧವು ಈಗಾಗಲೇ ಬೇಡಿಕೆಯ ಕುಸಿತ ಮತ್ತು ಜಾಗತಿಕ ಆರ್ಥಿಕ ಹಿಂಜರಿತದಿಂದ ಹೋರಾಡುತ್ತಿರುವ ಸೂರತ್‌ನ ವಜ್ರ ಕಾರ್ಮಿಕರಿಗೆ ದೊಡ್ಡ ಹೊಡೆತ ಎಂದು ಪರಿಗಣಿಸಲಾಗಿದೆ ಎಂಬುವುದು ಉಲ್ಲೇಖನೀಯ. ನಿಷೇಧದಿಂದಾಗಿ ಒರಟು ವಜ್ರಗಳ ಪೂರೈಕೆ ಮೇಲೆ ಪರಿಣಾಮ ಬೀರಲಾರಂಭಿಸಿದ್ದು, ಇದರ ಪರಿಣಾಮ ವಜ್ರದ ವ್ಯಾಪಾರಿಗಳ ಕೆಲಸದಲ್ಲಿ ಗೋಚರಿಸುತ್ತಿದೆ. ಪ್ರಸ್ತುತ ಬೇಡಿಕೆ ಕಡಿಮೆಯಾಗಿರುವುದರಿಂದ ಕಡಿಮೆ ಪೂರೈಕೆಯಲ್ಲಿ ಉದ್ಯಮ ನಿರ್ವಹಣೆ ಮಾಡಲು ಸಾಧ್ಯವಾಗಿದೆ. ಬೇಡಿಕೆ ಹೆಚ್ಚಾದಾಗ ತೊಂದರೆ ಬರುತ್ತದೆ ಎಂದು ವಿಪುಲ್ ಶಾ ಹೇಳಿದ್ದಾರೆ.
2021 ರಲ್ಲಿ ವಜ್ರ ರಫ್ತಿನಿಂದ ರಷ್ಯಾ $ 4 ಬಿಲಿಯನ್ ಗಳಿಸಿದೆ
ರಷ್ಯಾವನ್ನು ಆರ್ಥಿಕವಾಗಿ ದುರ್ಬಲಗೊಳಿಸುವ ಸಲುವಾಗಿ, ಪಾಶ್ಚಿಮಾತ್ಯ ದೇಶಗಳು ಉಕ್ರೇನ್ ಯುದ್ಧದ ಆರಂಭದಿಂದಲೂ ರಷ್ಯಾದ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರುತ್ತಿವೆ ಎಂಬುವುದು ಉಲ್ಲೇಖನೀಯ. ಈ ನಿಷೇಧದಿಂದಾಗಿ, ರಷ್ಯಾದ ಆದಾಯದಲ್ಲಿ ಸುಮಾರು 50 ಪ್ರತಿಶತದಷ್ಟು ಕುಸಿತ ಕಂಡುಬಂದಿದೆ. ಆದರೆ ರಷ್ಯಾ ವಜ್ರದ ರಫ್ತು ಹೆಚ್ಚಿಸುವ ಮೂಲಕ ನಷ್ಟವನ್ನು ತುಂಬಲು ಪ್ರಯತ್ನಿಸಿತು. ವರದಿಯ ಪ್ರಕಾರ, 2021 ರಲ್ಲಿ, ವಜ್ರ ರಫ್ತಿನಿಂದ ರಷ್ಯಾ ಸುಮಾರು $ 4 ಬಿಲಿಯನ್ ಗಳಿಸಿದೆ.
ಈ ದೇಶಗಳಲ್ಲಿ ರಷ್ಯಾದ ಡೈಮಂಡ್ ಕಂಪನಿ ಬ್ಯಾನ್
"ರಷ್ಯಾದ ಆದಾಯವನ್ನು ಕಡಿಮೆ ಮಾಡುವ ಸಲುವಾಗಿ ರಷ್ಯಾದಲ್ಲಿ ಗಣಿಗಾರಿಕೆ ಮಾಡಿದ ಅಥವಾ ಉತ್ಪಾದಿಸಿದ ವಜ್ರಗಳ ವ್ಯಾಪಾರ ಮತ್ತು ಬಳಕೆಯನ್ನು ನಿರ್ಬಂಧಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ" ಎಂದು ಜಪಾನ್‌ನ ಹಿರೋಷಿಮಾದಲ್ಲಿ ನಡೆದ ಜಿ -7 ಶೃಂಗಸಭೆಯ ಅಂತ್ಯದ ನಂತರ ಜಂಟಿ ಹೇಳಿಕೆ ತಿಳಿಸಿದೆ. ಅಮೆರಿಕ, ಬ್ರಿಟನ್, ಕೆನಡಾ, ನ್ಯೂಜಿಲೆಂಡ್ ಮತ್ತು ಬಹಾಮಾಸ್ ಏಪ್ರಿಲ್ 2022 ರಲ್ಲಿ ರಷ್ಯಾದ ಡೈಮಂಡ್ ಮೈನರ್ ಕಂಪನಿ ಅಲ್ರೋಸಾದೊಂದಿಗೆ ವ್ಯಾಪಾರವನ್ನು ನಿಷೇಧಿಸಿವೆ ಎಂಬುವುದು ಗಮನಾರ್ಹ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ