Explained: Sonu Sood ಸಹೋದರಿ ಕಾಂಗ್ರೆಸ್ ಪಕ್ಷಕ್ಕೇ ಸೇರಿದ್ದು ಯಾಕೆ? ಇಲ್ಲಿದೆ ನೋಡಿ ಡೀಟೈಲ್ಸ್
ಮಾಳವಿಕ ಸೂದ್ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮತ್ತು ಸಿಧು ಸಮ್ಮುಖದಲ್ಲಿ ಪಂಜಾಬಿನ ಮೋಗಾ ಜಿಲ್ಲೆಯ ಸೂದ್ ನಿವಾಸದಲ್ಲಿ ಮಾಳವಿಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು
ಫೆಬ್ರವರಿ 10 ರಿಂದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಪ್ರಾರಂಭವಾಗಲಿದೆ. ಹಾಗಾಗಿ ಕೆಲವು ಆಕಾಂಕ್ಷಿಗಳು ತಮ್ಮ ಇಷ್ಟದ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಕೆಲವರು ತಾವಿರುವ ಪಕ್ಷ ತೊರೆದು ತಮ್ಮ ಇಷ್ಟದ ಪಕ್ಷಕ್ಕೆ ಜೊತೆಯಾಗುತ್ತಿದ್ದಾರೆ. ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆ (Punjab Assembly elections) ಗಮನದಲ್ಲಿಟ್ಟುಕೊಂಡು ಇದೀಗ ಬಾಲಿವುಡ್ ನಟ ಸೋನು ಸೂದ್ ಸಹೋದರಿ ಮಾಳವಿಕಾ ಸೂದ್ ಕಾಂಗ್ರೆಸ್ ಪಕ್ಷವನ್ನು(Congress party) ಸೇರ್ಪಡೆಗೊಂಡಿದ್ದಾರೆ. ಇವರಿಗೆ ಬೆಂಬಲವಾಗಿ ಸೋನು ಸೂದ್ (Sonu Sood) ನಿಂತಿದ್ದಾರೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಜನರ ಸಹಾಯಕ್ಕೆ ನಿಂತವರು ಬಾಲಿವುಡ್ (Bollywood actor) ನಟ ಸೋನು ಸೂದ್. ಆ ಸಮಯದಲ್ಲಿ ಅವರು ಮಾಡಿದ ಸೇವೆ ಇಂದಿಗೂ ಮುಂದುವರೆದಿದ್ದು, ಕಷ್ಟ ಎಂದವರಿಗೆ ಸಹಾಯ ಹಸ್ತ ನೀಡಿದ್ದಾರೆ. ಅದರಲ್ಲೂ ಕೋವಿಡ್ ಸಮಯದಲ್ಲಿ ಸೋನು ಸೂದ್ ಕೆಲಸವು ಅವರಿಗೆ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿತ್ತು.
ಪಂಜಾಬ್ ಮುಖ್ಯಮಂತ್ರಿ ಸಮ್ಮುಖದಲ್ಲಿ ಸೇರ್ಪಡೆ
ಮಾಳವಿಕ ಸೂದ್ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮತ್ತು ಸಿಧು ಸಮ್ಮುಖದಲ್ಲಿ ಪಂಜಾಬಿನ ಮೋಗಾ ಜಿಲ್ಲೆಯ ಸೂದ್ ನಿವಾಸದಲ್ಲಿ ಮಾಳವಿಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.. ಅಲ್ಲಿ ಕಳೆದ ವರ್ಷ ನವೆಂಬರ್ನಲ್ಲಿ ನಟ ತನ್ನ ಸಹೋದರಿ ರಾಜಕೀಯಕ್ಕೆ ಸೇರುವುದಾಗಿ ಹೇಳಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಳವಿಕಾ ಸೂದ್, ಜನಸೇವೆಗಾಗಿ ತನ್ನನ್ನು ತಾನು ಅರ್ಪಿಸಿಕೊಳ್ಳಲು ರಾಜಕೀಯಕ್ಕೆ ಧುಮುಕಿದ್ದೇನೆ ಎಂದು ಹೇಳಿದರು.
ರಾಜ್ಯ ಚುನಾವಣೆಗೆ ಮುಂಚಿತವಾಗಿ ನಡೆದ ಈ ಬೆಳವಣಿಗೆಯನ್ನು "ಗೇಮ್ ಚೇಂಜರ್" ಎಂದು ಬಣ್ಣಿಸಿದ ಕಾಂಗ್ರೆಸ್ ಪಂಜಾಬ್ ಘಟಕದ ಮುಖ್ಯಸ್ಥ ನವಜೋತ್ ಸಿಂಗ್ ಸಿಧು, ಪಕ್ಷದ ಮುಖ್ಯಸ್ಥರು ಮತ್ತು ಮುಖ್ಯಮಂತ್ರಿ ಇಬ್ಬರೂ ಮನೆಗೆ ಗೌರವವನ್ನು ನೀಡಲು ಹೋಗಿದ್ದು ಬಹಳ ಅಪರೂಪ ಮತ್ತು ಅದಕ್ಕೆ ಅವರು ಅರ್ಹರು ಎಂದು ಸಿಧು ಹೇಳಿದರು.
ಗೇಮ್ ಚೇಂಜರ್
ಎನ್ಜಿಒ ಮೂಲಕ ಹೆಸರು ಗಳಿಸಿ ಜನಸೇವೆಗೆ ತನ್ನನ್ನು ಸಮರ್ಪಿಸಿಕೊಂಡ ಯುವತಿಯೊಬ್ಬರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ನಮಗೆ ಅತ್ಯಂತ ಸಂತಸದಾಯಕ ವಿಚಾರ ಎಂದು ಹೇಳಿದ ಸಿಧು ಅವರನ್ನು ಕಾಂಗ್ರೆಸ್ಗೆ ಸ್ವಾಗತಿಸಿದರು. ಮಾಳವಿಕಾ ಸೂದ್ ಕಾಂಗ್ರೆಸ್ ಸೇರುತ್ತಿರುವುದನ್ನು ಉಲ್ಲೇಖಿಸಿದ ಸಿಧು, "ಕ್ರಿಕೆಟ್ ಜಗತ್ತಿನಲ್ಲಿ ಇದನ್ನು ಗೇಮ್ ಚೇಂಜರ್ ಎಂದು ಕರೆಯಲಾಗುತ್ತದೆ. ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಮಾಳವಿಕ ಶಿಕ್ಷಣವೇ ಮುಂದಿನ ಭವಿಷ್ಯಕ್ಕೆ ಸಹಕಾರಿಯಾಗಲಿದೆ ಎಂದರು.
ವಿಡಿಯೋ ನೋಡಿ:
ಭವಿಷ್ಯಕ್ಕಾಗಿ ಸಿದ್ಧತೆ
ಮನುಕುಲಕ್ಕೆ ಸಂತೋಷವನ್ನು ನೀಡುವ ಪ್ರಯತ್ನದ ಮುಂದೆ ಹೆಸರು ಮತ್ತು ಖ್ಯಾತಿ ಇದ್ಯಾವುದೂ ಇರುವುದಿಲ್ಲ..! ಕುರ್ಚಿಗಳು ಜನರನ್ನು ಮೆಚ್ಚಿಸುವುದಿಲ್ಲ. ಆದರೆ ಜನರು ಆ ಕುರ್ಚಿಗಳನ್ನು ಅಲಂಕರಿಸುತ್ತಾರೆ. ಸೇವಾ ಮನೋಭಾವದವರ ಜೊತೆ ಇರಲು ಹೆಮ್ಮೆಯಾಗುತ್ತದೆ. ಪಕ್ಷವು ಅಂತಹವರನ್ನು ಸ್ವಾಗತಿಸಲು ಹೆಮ್ಮೆಪಡುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು. ಪಂಜಾಬ್ ಕಾಂಗ್ರೆಸ್ ನಾಯಕ ನವಜೋತ್ ಸಿಧು ಚಿತ್ರವನ್ನು ಸೋನು ಸೂದ್ರೊಂದಿಗೆ ಟ್ವೀಟ್ ಮಾಡಿದ್ದು, "ದಿನದ ಚಿತ್ರ- ಕಾಂಗ್ರೆಸ್ 'ಪಂಜಾಬ್ ಭವಿಷ್ಯಕ್ಕಾಗಿ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳುತ್ತದೆ'" ಎಂದು ಬರೆದಿದ್ದರು.
ಒಂದೇ ಹಂತದಲ್ಲಿ ಮತದಾನ
2017ರ ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ, 10 ವರ್ಷಗಳ ನಂತರ ಎಸ್ಎಡಿ-ಬಿಜೆಪಿ ಸರ್ಕಾರವನ್ನು ಸೋಲಿಸಿದ ಕಾಂಗ್ರೆಸ್ 77 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಸಂಪೂರ್ಣ ಬಹುಮತ ಗಳಿಸಿತು. 117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಆಮ್ ಆದ್ಮಿ ಪಕ್ಷ 20 ಸ್ಥಾನಗಳನ್ನು ಗೆದ್ದು ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಶಿರೋಮಣಿ ಅಕಾಲಿ ದಳ ಕೇವಲ 15 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರೆ, ಬಿಜೆಪಿ 3 ಸ್ಥಾನಗಳನ್ನು ಪಡೆದುಕೊಂಡಿದೆ. ಫೆಬ್ರವರಿ 14ರಂದು ಪಂಜಾಬ್ನಲ್ಲಿಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10ರಂದು ಮತಗಳ ಎಣಿಕೆ ನಡೆಯಲಿದೆ.
Published by:vanithasanjevani vanithasanjevani
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ