• ಹೋಂ
  • »
  • ನ್ಯೂಸ್
  • »
  • Explained
  • »
  • Explained: ಇಂದು ನ್ಯಾಷನಲ್ ಸೈನ್ಸ್​ ಡೇ- ವಿಜ್ಞಾನ ಜಗತ್ತಿಗೆ ಸರ್ ಸಿ. ವಿ. ರಾಮನ್‌ ಕೊಡುಗೆಗಳೇನು?

Explained: ಇಂದು ನ್ಯಾಷನಲ್ ಸೈನ್ಸ್​ ಡೇ- ವಿಜ್ಞಾನ ಜಗತ್ತಿಗೆ ಸರ್ ಸಿ. ವಿ. ರಾಮನ್‌ ಕೊಡುಗೆಗಳೇನು?

ಸರ್​ ಸಿ.ವಿ.ರಾಮನ್

ಸರ್​ ಸಿ.ವಿ.ರಾಮನ್

ರಾಷ್ಟ್ರೀಯ ವಿಜ್ಞಾನ ದಿನವನ್ನು ಭಾರತೀಯರು ಮಾತ್ರವಲ್ಲದೆ ಇತರ ದೇಶಗಳ ಜನರು ಸಹ ವ್ಯಾಪಕವಾಗಿ ಆಚರಿಸುತ್ತಾರೆ. 2013 ರಲ್ಲಿ, ಗೂಗಲ್‌ ರಾಮನ್ ಅವರ 125 ನೇ ಜನ್ಮದಿನದ ನೆನಪಿಗಾಗಿ ಡೂಡಲ್‌ ಗೌರವ ನೀಡಿತ್ತು.

  • Trending Desk
  • 2-MIN READ
  • Last Updated :
  • Share this:

ವಿಜ್ಞಾನ(Science) ಎಂಬುವುದು ಸಂಶೋಧನೆ(Research) ಮತ್ತು ಪರೀಕ್ಷೆಯ(Exam) ಮೂಲಕ ನಮ್ಮ ಪರಿಸರದ ಭೌತಿಕ ಮತ್ತು ನೈಸರ್ಗಿಕ ಅಂಶಗಳ ಕ್ರಮಬದ್ಧ ಅಧ್ಯಯನವಾಗಿದೆ. ನಮ್ಮ ದಿನನಿತ್ಯದ ಜೀವನದಲ್ಲಿ ವಿಜ್ಞಾನವು ಹಾಸು ಹೊಕ್ಕಾಗಿದೆ. ವಿಜ್ಞಾನದ ಆವಿಷ್ಕಾರಗಳು ನಮ್ಮ ಜೀವನ ಶೈಲಿಯಲ್ಲಿ(Lifestyle) ನಿರಂತರ ಬದಲಾವಣೆಗಳನ್ನು ತರುತ್ತಿದ್ದು, ದೇಶದ ಅಭಿವೃದ್ಧಿಯಲ್ಲಿ (Development) ಕೂಡ ಮಹತ್ತರ ಪಾತ್ರ ವಹಿಸುತ್ತಿವೆ.


ಸಮಾಜದಲ್ಲಿ ಎದುರಾಗುವ ಅನೇಕ ಸಮಸ್ಯೆಗೆ ವಿಜ್ಞಾನದಿಂದ ಪರಿಹಾರ ಕಂಡುಕೊಳ್ಳಬಹುದು. ಜಗತ್ತಿನಲ್ಲಿ ಆಗುವ ಪ್ರತಿ ಬೆಳವಣಿಗೆಗೂ ವೈಜ್ಞಾನಿಕ ಕಾರಣವಿರುತ್ತದೆ. ವಿಜ್ಞಾನದ ಅದ್ಭುತಗಳನ್ನು ನಾವು ಪ್ರತಿದಿನ ನಮ್ಮ ಸುತ್ತಲೂ ನೋಡುತ್ತೇವೆ. ವಿಜ್ಞಾನವಿಲ್ಲದ ನಮ್ಮ ಆಧುನಿಕ ಜೀವನವನ್ನು ನಾವು ಊಹಿಸಲು ಕೂಡ ಸಾಧ್ಯವಿಲ್ಲ ಎನ್ನಬಹುದು. ಜಗತ್ತಿನಲ್ಲಿ ಪ್ರತಿಯೊಂದು ವಿಷಯಕ್ಕೂ ಕೊಡುಗೆ ನೀಡಿರುವ ವಿಜ್ಞಾನ ನಮ್ಮೆಲ್ಲರ ದೈನಂದಿನ ಜೀವನದ ಅಗತ್ಯ ಅಂಶಗಳಾಗಿವೆ.


ರಾಷ್ಟ್ರೀಯ ವಿಜ್ಞಾನ ದಿನ


ಹೀಗೆ ವಿಶ್ವದ ಪ್ರತಿಯೊಂದು ಕ್ಷೇತ್ರದಲ್ಲೂ ಅತ್ಯದ್ಭುತಗಳನ್ನು ಸೃಷ್ಟಿ ಮಾಡಿರುವ ವಿಜ್ಞಾನ ಮತ್ತು ಅದರ ಉಡುಗೊರೆಯನ್ನು ಸಾರ್ವಕಾಲಿಕವಾಗಿ ನಮ್ಮೊಂದಿಗೆ ಇರಿಸಿಕೊಳ್ಳಲು ಅದಕ್ಕೆ ಅಂತಾ ಒಂದು ದಿನ ಇದ್ದು, ಅದನ್ನು ನಾವು ನಮ್ಮ ದೇಶದಲ್ಲಿ ʼರಾಷ್ಟ್ರೀಯ ವಿಜ್ಞಾನ ದಿನʼವನ್ನಾಗಿ ಆಚರಣೆ ಮಾಡುತ್ತೇವೆ.


ಹೌದು, ಪ್ರತಿವರ್ಷ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಣೆ ಮಾಡಲಾಗುತ್ತದೆ. ವಿಜ್ಞಾನ ಮತ್ತು ಅದರ ಪ್ರಾಮುಖ್ಯತೆ, ಅರಿವನ್ನು ಪ್ರತಿಯೊಬ್ಬರಲ್ಲೂ ಮೂಡಿಸಿ ಅವರನ್ನು ಸುಜ್ಞಾನಿಗಳನ್ನಾಗಿ ಮಾಡುವ ಮೂಲ ಉದ್ದೇಶದಿಂದ ಈ ಮಹತ್ವದ ದಿನ ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯನ್ನು ಮಾಡಲಾಗುತ್ತದೆ.


ಸರ್ ಸಿ ವಿ ರಾಮನ್ ಅವರ ಗೌರವಾರ್ಥವಾಗಿ ಈ ದಿನ ಆಚರಣೆ


ಪ್ರತಿ ವರ್ಷ ಫೆಬ್ರವರಿ 28 ರಂದು ಸರ್ ಸಿ ವಿ ರಾಮನ್ ರ 'ರಾಮನ್ ಪರಿಣಾಮ' ಅವಿಷ್ಕಾರದ ಸ್ಮರಣಾರ್ಥವಾಗಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಗುತ್ತದೆ.


ರಾಷ್ಟ್ರೀಯ ವಿಜ್ಞಾನ ದಿನವನ್ನು ಭಾರತೀಯರು ಮಾತ್ರವಲ್ಲದೆ ಇತರ ದೇಶಗಳ ಜನರು ಸಹ ವ್ಯಾಪಕವಾಗಿ ಆಚರಿಸುತ್ತಾರೆ. 2013 ರಲ್ಲಿ, ಗೂಗಲ್‌ ರಾಮನ್ ಅವರ 125 ನೇ ಜನ್ಮದಿನದ ನೆನಪಿಗಾಗಿ ಡೂಡಲ್‌ ಗೌರವ ನೀಡಿತ್ತು.


ವಿಜ್ಞಾನ ದಿನವು ವಿಜ್ಞಾನದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಮಕ್ಕಳನ್ನು ಪ್ರೇರೇಪಿಸುವುದು ಮತ್ತು ಜನಸಾಮಾನ್ಯರಿಗೆ ವಿಜ್ಞಾನದ ಬಗೆಗಿನ ಅರಿವು ಮೂಡಿಸುವ ಗುರಿಯನ್ನು ಈ ದಿನ ಹೊಂದಿದೆ.


ಇದನ್ನೂ ಓದಿ: Russia Ukraine War: 1 ವರ್ಷವಾದರೂ ನಿಲ್ಲದ ರಷ್ಯಾ-ಉಕ್ರೇನ್ ಯುದ್ಧ! ಭಾರತದ ಮೇಲೂ ಹೆಚ್ಚಲಿದ್ಯಾ ವಾರ್ ಎಫೆಕ್ಟ್?


2023 ರ ರಾಷ್ಟ್ರೀಯ ವಿಜ್ಞಾನ ದಿನ:‌ ಆಚರಣೆ ಮತ್ತು ಥೀಮ್


ಈ ದಿನದಂದು ವಿಜ್ಞಾನಕ್ಕೆ ಸಂಬಂಧಪಟ್ಟ ಉಪನ್ಯಾಸಗಳು, ಚರ್ಚಾಸ್ಪರ್ಧೆಗಳು, ರಸಪ್ರಶ್ನೆ, ವಸ್ತುಪ್ರದರ್ಶನ ಹೀಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಣೆ ಮಾಡಲಾಗುತ್ತದೆ.


ಇನ್ನೂ "ಗ್ಲೋಬಲ್ ಸೈನ್ಸ್ ಫಾರ್ ಗ್ಲೋಬಲ್ ವೆಲ್ನೆಸ್" ಎಂಬುವುದು 2023 ರ ರಾಷ್ಟ್ರೀಯ ವಿಜ್ಞಾನ ದಿನದ ವಿಷಯವಾಗಿದೆ. ವಿಷಯವು ದೇಶದ ವಿಸ್ತರಿಸುತ್ತಿರುವ ಜಾಗತಿಕ ಸ್ಥಾನ ಮತ್ತು ಹೆಚ್ಚುತ್ತಿರುವ ಅಂತರರಾಷ್ಟ್ರೀಯ ಮಾನ್ಯತೆಯನ್ನು ಪ್ರತಿಬಿಂಬಿಸುತ್ತದೆ.


ಸರ್ ಸಿ ವಿ ರಾಮನ್


ಸಿವಿ. ರಾಮನ್ ಅಥವಾ ಸರ್ ಚಂದ್ರಶೇಖರ ವೆಂಕಟ ರಾಮನ್ ಒಬ್ಬ ಭಾರತೀಯ ಭೌತಶಾಸ್ತ್ರಜ್ಞರಾಗಿದ್ದು, ಅವರ ಪ್ರತಿ ಕೆಲಸವು ಭಾರತದ ವಿಜ್ಞಾನ ಲೋಕದಲ್ಲಿ ಅಚ್ಚಳಿಯದೇ ಉಳಿದಿದೆ.


ಇವರ ಕೊಡುಗೆಗಳಲ್ಲಿ ರಾಮನ್ ಎಫೆಕ್ಟ್ ಅಗ್ರಗಣ್ಯವಾಗಿದೆ. ರಾಮನ್ ಎಫೆಕ್ಟ್ ಕೇವಲ ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಮಾತ್ರವಲ್ಲ, ಮನು ಕುಲದ ಉದ್ಧಾರಕ್ಕೆ ಹೆಚ್ಚು ಸಹಕಾರಿ. ಲೇಸರ್ ಆವಿಷ್ಕಾರ ಮತ್ತು ಕಂಪ್ಯೂಟರ್ ತಂತ್ರಜ್ಞಾನ ಬೆಳೆದಂತೆ ರಾಮನ್ ಎಫೆಕ್ಟ್ ಉಪಯೋಗ ಹೆಚ್ಚಾಗುತ್ತಾ ಇದೆ.


ಜನನ ಮತ್ತು ವಿದ್ಯಾಭ್ಯಾಸ


ಸಿ.ವಿ ರಾಮನ್ ಎಂದೇ ಪ್ರಸಿದ್ಧರಾದ ಮಹಾನ್ ಭಾರತೀಯ ಭೌತಶಾಸ್ತ್ರಜ್ಞ ಚಂದ್ರಶೇಖರ್ ವೆಂಕಟ ರಾಮನ್ ಅವರು ನವೆಂಬರ್ 7, 1888 ರಂದು ತಮಿಳುನಾಡಿನ ತಿರುಚಿರಾಪಲ್ಲಿಯಲ್ಲಿ ಜನಿಸಿದರು. ಅವರ ತಂದೆ ಭೌತಶಾಸ್ತ್ರ ಶಿಕ್ಷಕರಾಗಿದ್ದರಿಂದ ಸಹಜವಾಗಿಯೇ ಇವರಿಗೂ ವಿಜ್ಞಾನದ ಮೇಲೆ ಆಸಕ್ತಿ ಮೊದಲಿನಿಂದಲೂ ತುಸು ಹೆಚ್ಚೇ ಇತ್ತು.


1907 ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ನಂತರ ರಾಮನ್ ಅವರು ಭಾರತೀಯ ಸರ್ಕಾರದ ಹಣಕಾಸು ವಿಭಾಗಕ್ಕೆ ಸೇರಿದರು. 1917 ರಲ್ಲಿ ಅವರು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ನೇಮಕಗೊಂಡರು.


ಸಿ ವಿ ರಾಮನ್‌ ಪ್ರಮುಖ ಕೊಡುಗೆಗಳು


*ಸಿ ವಿ ರಾಮನ್ ಅವರು ವಿವಿಧ ದ್ರವ್ಯ ಮಾಧ್ಯಮಗಳಲ್ಲಿ ಬೆಳಕಿನ ಚದರುವಿಕೆ ಹೇಗಾಗುತ್ತದೆ ಎಂದು ಕ್ರಮಬದ್ಧವಾಗಿ ನಡೆಸಿದ ಅನ್ವೇಷಣೆಗೆ 1930 ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದರು.


* ರಾಮನ್ ಘೋಷಿಸಿದ ಆ ವಿದ್ಯಮಾನ ಮುಂದೆ ರಾಮನ್ ಪರಿಣಾಮ (Raman Effect) ಎಂಬ ಹೆಸರಿನಲ್ಲಿ ಸುಪ್ರಸಿದ್ಧವಾಯಿತು. ರಾಮನ್ ಪರಿಣಾಮವನ್ನು ಪ್ರಪಂಚಕ್ಕೆ ಪರಿಚಯಿಸಲಾದ ಫೆಬ್ರವರಿ 28ನ್ನು ದೇಶದಾದ್ಯಂತ ವಿಜ್ಞಾನ ದಿನವಾಗಿ 1987ರಿಂದ ಆಚರಿಸಲಾಗುತ್ತಿದೆ.


ಇದನ್ನೂ ಓದಿ: Explained: ಅಮೃತಪಾಲ್ ಸಿಂಗ್ ಆಪ್ತ ಸಹಾಯಕ ಲವ್‌ಪ್ರೀತ್ ಜೈಲಿನಿಂದ ಬಿಡುಗಡೆ! ಯಾರೀತ? ಏನಿವನ ಹಿನ್ನೆಲೆ?


* ಲೇಸರ್ ಕಿರಣಗಳ ಆವಿಷ್ಕಾರವಾದ ಮೇಲೆ ಮೇಲೆ ರಾಮನ್ ಪರಿಣಾಮದ ಉಪಯುಕ್ತತೆ ಇನ್ನಷ್ಟು ವಿಸ್ತರಿಸಿತು. ಲೇಸರ್, ಇನ್ಫ್ರಾರೆಡ್, ಆಲ್ಟ್ರಾವಯೋಲೆಟ್ ಮತ್ತು ಎಕ್ಸ್‌ರೇ ರಾಮನ್ ಸ್ಪೆಕ್ಟ್ರೋಸ್ಕೋಪಿ ಇಂದು ಮುಂಚೂಣಿಯಲ್ಲಿರುವ ಸಂಶೋಧನಾ ಕ್ಷೇತ್ರಗಳು.


* ಭೌತಶಾಸ್ತ್ರ, ಜೀವಶಾಸ್ತ್ರ, ರಸಾಯನ ಮತ್ತು ಖಗೋಳ ವಿಜ್ಞಾನ ಹಾಗೂ ನ್ಯಾನೋ ತಂತ್ರಜ್ಞಾನದ ಹಲವು ವಿಭಾಗಗಳಲ್ಲಿ ರಾಮನ್ ಪರಿಣಾಮ ಪ್ರಮುಖ ಪಾತ್ರ ವಹಿಸುತ್ತಿದೆ.
* ಜೊತೆಗೆ ರಾಮನ್‌ ಎಫೆಕ್ಟ್‌ ಆಧಾರದಲ್ಲಿ ಕ್ಯಾನ್ಸರ್, ಡಯಾಬಿಟೀಸ್, ಮಲೇರಿಯಾ, ಆಸ್ತಮಾದ ಪತ್ತೆ ಮತ್ತು ಚಿಕಿತ್ಸೆಯಲ್ಲಿ ರೆಸೊನೆಂಟ ರಾಮನ್ ಸ್ಪಕ್ಟ್ರೋಸ್ಕೋಪಿ ಮಹತ್ತರ ಪಾತ್ರ ವಹಿಸುತ್ತಿದೆ.


* ರಾಸಾಯನಿಕ ಸಂಯುಕ್ತಗಳ ಅಣುರಚನೆ (molecular structure) ಯನ್ನು ಅರ್ಥಮಾಡಿಕೊಳ್ಳಲು ಅದು ಅತಿ ಮುಖ್ಯವೆಂಬುದು ಈಗ ತಿಳಿದಿದೆ.


* ರಾಮನ್ ಪರಿಣಾಮವನ್ನು ಕಂಡುಹಿಡಿದ ಫಲವಾಗಿ ಒಂದು ದಶಕದ ಒಳಗೆ ಸುಮಾರು 2000 ರಾಸಾಯನಿಕ ಸಂಯುಕ್ತಗಳ ಆಂತರಿಕ ರಚನೆಗಳನ್ನು ಪತ್ತೆ ಹಚ್ಚಲು ನೆರವಾಯಿತು.


* 1948 ರಲ್ಲಿ, ಅವರು ಸ್ಫಟಿಕ ಡೈನಾಮಿಕ್ಸ್‌ನ ಮೂಲಭೂತ ಸಮಸ್ಯೆಗಳನ್ನು ಸಹ ಅಧ್ಯಯನ ಮಾಡಿದರು. ಅವರ ಪ್ರಯೋಗಾಲಯವು ವಜ್ರಗಳ ರಚನೆ ಮತ್ತು ಗುಣಲಕ್ಷಣಗಳೊಂದಿಗೆ ವ್ಯವಹರಿಸುತ್ತದೆ.


ವಿಜ್ಞಾನಕ್ಕೆ ಸಂಬಂಧಿಸಿದ ಇತರೆ ಕೆಲಸಗಳು


ರಾಮನ್ ಅವರು 1929 ರಲ್ಲಿ ನೈಟ್ ಪದವಿ ಪಡೆದರು ಮತ್ತು 1933 ರಲ್ಲಿ ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಭೌತಶಾಸ್ತ್ರ ವಿಭಾಗದ ನಿರ್ದೇಶಕರಾದರು.


1947 ರಲ್ಲಿ, ಅವರು ರಾಮನ್ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ನೇಮಕಗೊಂಡರು ಮತ್ತು 1961 ರಲ್ಲಿ ಅವರು ಪಾಂಟಿಫಿಕಲ್ ಅಕಾಡೆಮಿ ಆಫ್ ಸೈನ್ಸ್‌ಗೆ ಆಯ್ಕೆಯಾದರು.


ಅವರ ಅವಧಿಯಲ್ಲಿ, ಅವರು ಪ್ರಾಯೋಗಿಕವಾಗಿ ಭಾರತೀಯ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಲು ಸಹಾಯ ಮಾಡಿದರು, ಇಂಡಿಯನ್ ಜರ್ನಲ್ ಆಫ್ ಫಿಸಿಕ್ಸ್ ಮತ್ತು ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ ಅನ್ನು ಸ್ಥಾಪಿಸಿದರು ಮತ್ತು ಭಾರತ ಮತ್ತು ಮ್ಯಾನ್ಮಾರ್ (ಬರ್ಮಾ) ನಲ್ಲಿ ಕಾಲೇಜುಗಳು ಮತ್ತು ಸರ್ಕಾರದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.




ಸಿ ವಿ ರಾಮನ್‌ ಕುರಿತ ಕೆಲವು ಆಸಕ್ತಿಕರ ಸಂಗತಿಗಳು


* 1930 ರಲ್ಲಿ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ರಾಮನ್‌ ಅವರಿಗೆ ನೀಡಲಾಯಿತು. ಈ ಪ್ರತಿಷ್ಠಿತ ಗೌರವವನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.
* ರಾಮನ್ ಅವರು 1921 ರಲ್ಲಿ ಯುರೋಪ್‌ಗೆ ನೌಕಾಯಾನ ಮಾಡುವಾಗ ಸಿವಿ ರಾಮನ್‌ ಅವರಿಗೆ ಸಮುದ್ರ ಏಕೆ ನೀಲಿಯಾಗಿದೆ ಎಂಬ ಪ್ರಶ್ನೆ ಉದ್ಭವಿಸಿತಂತೆ. ನಂತರ ರಾಮನ್ ಭಾರತಕ್ಕೆ ಹಿಂದಿರುಗಿದ ಮೇಲೆ ನೀರಿನಿಂದ ಬೆಳಕಿನ ಪ್ರಸರಣ ಮತ್ತು ಮಂಜುಗಡ್ಡೆಯ ಪಾರದರ್ಶಕ ಚಪ್ಪಡಿಗಳ ಮೇಲೆ ಹಲವಾರು ಪರೀಕ್ಷೆಗಳನ್ನು ನಡೆಸಿದರು. ನಂತರ ಹಲವು ಪ್ರಯೋಗಗಳ ಬಳಿಕ ರಾಮನ್‌ ಸೂರ್ಯನ ಬೆಳಕು ನೀರಿನಲ್ಲಿ ಚದುರಿಹೋಗುವುದೇ ಸಮುದ್ರದ ನೀರು ನೀಲಿಯಾಗಿ ಕಾಣಲು ಕಾರಣ ಎಂಬ ವಿಷಯವನ್ನು ಕಂಡುಹಿಡಿದರು. ರಾಮನ್ ಅವರು ಕೇವಲ 200 ರೂ.ಗಳ ಉಪಕರಣದಿಂದ ಈ ಆವಿಷ್ಕಾರವನ್ನು ಮಾಡಿದ್ದಾರೆ ಎಂದು ವರದಿ ಹೇಳುತ್ತದೆ.
* ಈ ಪ್ರಯೋಗದಲ್ಲಿ ರಾಮನ್ ಅವರ ಸಹೋದ್ಯೋಗಿ ಕೂಡ ಕೈಜೋಡಿಸಿದ್ದರಂತೆ. ವೃತ್ತಿಪರ ವಿವಾದಗಳ ಕಾರಣ, ರಾಮನ್ ಅವರ ಸಹೋದ್ಯೋಗಿ ಕೆ.ಎಸ್.ಕೃಷ್ಣನ್ ಅವರು ನೊಬೆಲ್ ಪ್ರಶಸ್ತಿಯನ್ನು ರಾಮನ್‌ ಜೊತೆ ಹಂಚಿಕೊಳ್ಳಲಿಲ್ಲ. ಆದರೂ, ತಮ್ಮ ನೊಬೆಲ್ ಸ್ವೀಕಾರ ಭಾಷಣದಲ್ಲಿ, ರಾಮನ್, ಕೃಷ್ಣನ್ ಅವರ ಕೊಡುಗೆಗಳನ್ನು ಉಲ್ಲೇಖಿಸಿದ್ದರಂತೆ.


ಗೌರವ ಮತ್ತು ಪ್ರಶಸ್ತಿಗಳು
- 1924 ರಲ್ಲಿ, ಅವರು ತಮ್ಮ ವೃತ್ತಿಜೀವನದ ಆರಂಭದಲ್ಲಿ ರಾಯಲ್ ಸೊಸೈಟಿಯ ಫೆಲೋ ಆಗಿ ಆಯ್ಕೆಯಾದರು ಮತ್ತು 1929ರಲ್ಲಿ ನೈಟ್ ಪದವಿ ಪಡೆದರು.
- 1930 ರಲ್ಲಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದರು
- 1941 ರಲ್ಲಿ ಫ್ರಾಂಕ್ಲಿನ್ ಪದಕ
- 1954 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ನೀಡಲಾಯಿತು.
- 1957ರಲ್ಲಿ ಲೆನಿನ್ ಶಾಂತಿ ಪ್ರಶಸ್ತಿ

Published by:Latha CG
First published: