ಮಂಗಳ ಗ್ರಹ (Mars) ಎಂದಾಗ ಇನ್ನೇನು ಹೋಗಿ ಅಲ್ಲಿಯೇ ಮನೆ ಕಟ್ಟಿ ವಾಸ ಆಗೇ ಬಿಡ್ತೀವಿ ಅನ್ನೋವಷ್ಟು ಮಾತುಕತೆ ಈ ಗ್ರಹದ ಬಗ್ಗೆ ನಡೆಯುತ್ತಿದೆ. ಭೂಮಿ ನಂತರ ವಾಸಕ್ಕೆ ಯೋಗ್ಯವಾದ ಗ್ರಹ ಅಂತಾ ಖಗೋಳ ವಿಜ್ಞಾನಿಗಳು ಹೇಳಿದ ನಂತರ ಈ ಗ್ರಹದ ಕುರಿತಾಗಿ ಪ್ರತಿನಿತ್ಯ ಅನ್ವೇಷಣೆಗಳು ನಡೆಯುತ್ತಿವೆ. ಮಂಗಳ ಗ್ರಹಕ್ಕೆ ಮಾನವ ಸಹಿತ ಯಾನ ಕೈಗೊಳ್ಳುವುದು ನಾಸಾದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು. ಹೀಗಾಗಿ ನಾಸಾ ಸಂಸ್ಥೆ ಮಂಗಳ ಗ್ರಹದ ಬಗ್ಗೆ ಅಧ್ಯಯನ ನಡೆಸಲು ರಾಶಿ ರಾಶಿ ರೋವರ್‌ಗಳನ್ನ ಅಲ್ಲಿ ಲ್ಯಾಂಡ್ ಮಾಡಿದೆ. ಈ ರೋವರ್‌ಗಳು ಕೂಡ ಅತ್ಯದ್ಭುತ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ಫೋಟೋಗಳನ್ನು ಸೆರೆ ಹಿಡಿದು ಕಳುಹಿಸುವ ಕೆಲಸ ಮಾಡುತ್ತಿವೆ.
ಪೆರ್ಸೆವೆರನ್ಸ್ ರೋವರ್‌ನಿಂದ ಬಂತು ಮಂಗಳ ಗ್ರಹದ ಸುಂದರ ದೃಶ್ಯ
ನಾಸಾ ಸಂಸ್ಥೆಯ ಪೆರ್ಸೆವೆರನ್ಸ್ ರೋವರ್ ಸುಮಾರು ಎರಡು ವರ್ಷಗಳಿಂದ ಮಂಗಳ ಗ್ರಹವನ್ನು ಅನ್ವೇಷಣೆ ನಡೆಸುತ್ತಿದ್ದು, ಈ ಸಮಯದಲ್ಲಿ ಈವರೆಗೂ ಅನೇಕ ದೃಶ್ಯಗಳನ್ನು ಭೂಮಿಗೆ ತಲುಪಿಸಿದೆ. ಇತ್ತೀಚೆಗೆ ಈ ರೋವರ್ ಕಳುಹಿಸಿಕೊಟ್ಟ ಫೋಟೋ ಅದ್ಭುತವಾಗಿದ್ದು ಎಲ್ಲೆಡೆ ವೈರಲ್ ಕೂಡ ಆಗುತ್ತಿದೆ.
ರೋವರ್ ಕಳುಹಿಸಿದ ಫೋಟೋ ಯಾವುದು?
ನಾಸಾ ಸಂಸ್ಥೆಯ ಪೆರ್ಸೆವೆರನ್ಸ್ ರೋವರ್ ಮಂಗಳ ಗ್ರಹದಲ್ಲಿ ಚಲಿಸುತ್ತಿರುವ ಎತ್ತರದ ಮೋಡಗಳ ದೃಶ್ಯಗಳನ್ನು ಸೆರೆಹಿಡಿದು ಕಳುಹಿಸಿ ಕೊಟ್ಟಿದೆ. ರೋವರ್ ಮಂಗಳ ಗ್ರಹದ ಮುಗಿಲಿನಲ್ಲಿ ಮೋಡಗಳ ಸಾಲನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದಿದೆ. ಮೋಡಗಳು ಮಂಗಳ ಗ್ರಹದ ಮೇಲೆ ಮೆಲ್ಲಗೆ ಸಾಗುತ್ತಿರುವ ದೃಶ್ಯಗಳನ್ನು ನಾವಿಲ್ಲಿ ನೋಡಬಹುದಾಗಿದೆ. ರೋವರ್ ಗ್ರಹದ ಭೂಮ್ಯತೀತ ಆಕಾಶದ ಅದ್ಭುತ ನೋಟಗಳ ಚಿತ್ರಗಳನ್ನು ಸೆರೆಹಿಡಿಯಲು ಅದರ ನ್ಯಾವಿಗೇಷನ್ ಕ್ಯಾಮೆರಾಳನ್ನು ಬಳಸಿಕೊಂಡಿದೆ ಎನ್ನಲಾಗಿದೆ.
ಟ್ವಿಟರ್‌ನಲ್ಲಿ ಫೋಟೋ ಹಂಚಿಕೊಂಡ ನಾಸಾ
ಬಾಹ್ಯಾಕಾಶ ಸಂಸ್ಥೆಯು ಮಾರ್ಚ್ 18, 2023 ರಂದು, ಮಿಷನ್‌ನ 738 ನೇ ಮಂಗಳದ ದಿನದಂದು ಸೂರ್ಯೋದಯಕ್ಕೆ ಸ್ವಲ್ಪ ಮೊದಲು ಸೆರೆಹಿಡಿಯಲಾದ ಡಾರ್ಕ್ ಮಾರ್ಸ್ ಆಕಾಶದ ನೋಟ ಈಗ ಎಲ್ಲರನ್ನು ಬೆರಗುಗೊಳಿಸಿದೆ. ಧೂಳು, ಶೀತ ವಾತಾವರಣದಿಂದ ಕೂಡಿದ ಎತ್ತರದಲ್ಲಿ ತೇಲುವ ಮೋಡಗಳ ಫೋಟೋವನ್ನು ನಾಸಾ ತನ್ನ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.
Dusty and cold, sure – but Mars has a certain, raw beauty.
Dawn at the Red Planet, with high clouds floating by. Take time to look up.
Full image: https://t.co/lOIB0GBraf pic.twitter.com/bYreLdR2Fc
— NASA's Perseverance Mars Rover (@NASAPersevere) March 23, 2023
ಹಲವು ಟ್ವಿಟ್ಟರ್ ಬಳಕೆದಾರರು ಇದು ಪ್ರಪಂಚದ ಒಂದು ಅದ್ಭುತ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು ಇದು ಮಂಗಳ ಗ್ರಹದ ಸುಂದರ ದೃಶ್ಯ ಎಂದಿದ್ದಾರೆ. ಮತ್ತೋರ್ವ ಟ್ವಿಟರ್ ಬಳಕೆದಾರರು ಭೂಮಿ ಬಿಟ್ಟು ಮತ್ತೊಂದು ಗ್ರಹದಲ್ಲಿ ಅದರಲ್ಲೂ ಮಂಗಳ ಗ್ರಹದಲ್ಲಿ ಮೋಡಗಳು ತೇಲುತ್ತಿರುವುದನ್ನು ನೋಡುವುದು ನಿಜಕ್ಕೂ ಅತ್ಯದ್ಭುತ ಎಂದಿದ್ದಾರೆ.
ಈ ಮೋಡಗಳ ಬಗ್ಗೆ ವಿವರಿಸಿದ ನಾಸಾ ಮಂಗಳದ ಮೋಡಗಳು ಭೂಮಿಯ ಸಿರಸ್ ಮೋಡಗಳಂತೆ ತೆಳ್ಳಗಿರುತ್ತವೆ ಎಂದು ಹೇಳಿದೆ. "ಭೂಮಿಯ ಮೋಡಗಳು ದ್ರವರೂಪದ ನೀರನ್ನು ಹೊಂದಿರಬಹುದಾದರೂ, ಮಂಗಳ ಗ್ರಹದ ಮೇಲಿನ ಕಡಿಮೆ ತಾಪಮಾನ ಮತ್ತು ಒತ್ತಡಗಳು ನೀರು-ಐಸ್ (ಮತ್ತು CO2 ಐಸ್) ಮೋಡಗಳನ್ನು ರೂಪಿಸಲು ಮಾತ್ರ ಅನುಮತಿಸುತ್ತವೆ. ಆದಾಗ್ಯೂ, ಈ ನೀರು-ಐಸ್ ಮೋಡಗಳು ಕಡಿಮೆ ಪ್ರಮಾಣದ ನೀರಿನ ಕಾರಣದಿಂದಾಗಿ ತೆಳುವಾಗಿರುತ್ತವೆ. ಭೂಮಿ ಮೇಲೆ ಯಥೇಚ್ಛವಾಗಿ ನೀರಿದ್ದರೂ ಮಂಗಳ ಗ್ರಹದಲ್ಲಿ ಅಷ್ಟು ನೀರಿಲ್ಲ. ನೀರು ಇದ್ದರೂ ಮಂಗಳ ಗ್ರಹದ ಒಳಭಾಗದಲ್ಲಿ ಅಡಗಿ ಕೂತಿದೆ. ಹೀಗಾಗಿ ಈ ಮೋಡಗಳು ತೆಳ್ಳಗಿರುತ್ತವೆ" ಎಂದು ಮಂಗಳ ಗ್ರಹದ ವಾತಾವರಣದ ಬಗ್ಗೆ ಬಾಹ್ಯಾಕಾಶ ಸಂಸ್ಥೆ ವಿವರಣೆ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ