ಕರ್ನಾಟಕ ಕುರುಕ್ಷೇತ್ರಕ್ಕೆ (Karnataka Assembly Elections) ಬಾಕಿ ಇರೋದು ಕೆಲ ಸಮಯವಷ್ಟೇ. ಚುನಾವಣೆಯ ಕುತೂಹಲ ಕ್ಷಣ ಕ್ಷಣಕ್ಕೂ ಹೆಚ್ಚಾಗ್ತಿದೆ. ಕರುನಾಡ ಕದನ ಕಣ ಕ್ಲೈಮ್ಯಾಕ್ಸ್‌ಗೆ ತೆರಳಿದ್ದು, ಫೈನಲ್ ಆಟಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಎಂಟ್ರಿ ಆಗಿದ್ದಾರೆ. ರಾಜ್ಯದಲ್ಲಿ ಮತ್ತೆ ಕಮಲ (BJP) ಅರಳಿಸಲು ಟೊಂಕ ಕಟ್ಟಿದ್ದಾರೆ. ರಾಜ್ಯದಲ್ಲಿ ಎರಡು ದಿನ ಮತಬೇಟೆ ಮಾಡಲಿರುವ ನರೇಂದ್ರ ಮೋದಿ, ಬಿಜೆಪಿ ಅಧಿಕಾರಕ್ಕೆ ತರಲು ಭರ್ಜರಿ ರಣತಂತ್ರ ರೂಪಿಸಿದ್ದಾರೆ. ಹಾಗಾದ್ರೆ ಮೋದಿ ಎಂಟ್ರಿ ಹಿಂದಿನ ರಹಸ್ಯವೇನು? ಮೋದಿ ಅಲೆಯಲ್ಲಿ ಕೊಚ್ಚಿ ಹೋಗುತ್ತಾ ವಿಪಕ್ಷಗಳು? ವಿಪಕ್ಷಗಳಿಗೆ ಮೋದಿ ಕೊಟ್ಟ ತ್ರಿಸೂತ್ರದ ಟಕ್ಕರ್ ಏನು? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ…
ಕರುನಾಡಲ್ಲಿ ನಮೋ ಮತಶಿಕಾರಿ!
ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ 10ಕ್ಕೆ ಮತದಾನ ನಡೆಯಲಿದ್ದು ಇನ್ನೇನು ಅಂತಿಮ ಘಟ್ಟ ತಲುಪಿದೆ. ಅಭ್ಯರ್ಥಿಗಳಿಂದ ಪ್ರಚಾರದ ಭರಾಟೆಯೂ ಜೋರಾಗಿದೆ. ಈ ಹೊತ್ತಲ್ಲೇ ಕರುನಾಡಿಗೆ ಎಂಟ್ರಿ ಕೊಟ್ಟಿರೋ ನಮೋ ,ವಿಪಕ್ಷಗಳ ಮೇಲೆ ಮಾತಿನ ಮಿಸೈಲ್‌ಗಳನ್ನೇ ಬಿಟ್ಟಿದ್ದಾರೆ. ವಿಪಕ್ಷ ನಾಯಕರ ಹೇಳಿಕೆಗಳನ್ನೇ ಅಸ್ತ್ರ ಮಾಡಿಕೊಂಡು ಮತಶಿಕಾರಿಗೆ ಮುಂದಾಗಿದ್ದಾರೆ.
ಮೋದಿಯ ‘ತ್ರಿಸೂತ್ರ ಮಂತ್ರ’
ಬೀದರ್‌ನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತಬೇಟೆ ಮಾಡಿದ ನರೇಂದ್ರ ಮೋದಿ, ತ್ರಿಸೂತ್ರ ಮಂತ್ರ ಜಪಿಸಿದ್ದಾರೆ. ಮಾತಿನುದ್ದಕ್ಕೂ ವಿಪಕ್ಷಗಳನ್ನ ತರಾಟೆಗೆ ತೆಗೆದುಕೊಂಡ ನಮೋ, ಮಹಾತ್ಮರು, ದಲಿತ, ಲಿಂಗಾಯತ ಅಸ್ತ್ರದ ಮೂಲಕ ಕೌಂಟರ್ ಕೊಟ್ಟಿದ್ದಾರೆ.
ಇದನ್ನೂ ಓದಿ: Yogi Adityanath: ಒಕ್ಕಲಿಗರನ್ನು ಸೆಳೆಯಲು ಯೋಗಿ ಆದಿತ್ಯ'ನಾಥ' ಅಸ್ತ್ರ! ಸಕ್ಸಸ್ ಆಗುತ್ತಾ ಕೇಸರಿ ಪಾಳೆಯದ ರಣತಂತ್ರ?
ವಿಪಕ್ಷಗಳಿಗೆ ಮಾತಿನ ತಿರುಗುಬಾಣ!
ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದ ‘ಲಿಂಗಾಯತರು ಭ್ರಷ್ಟರು’ ಎಂಬ ಹೇಳಿಕೆ ಹಾಗೂ ಖರ್ಗೆ ಮೋದಿ ‘ವಿಷದ ಹಾವು’ ಹೇಳಿಕೆ ಈಗಾಗಲೇ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ಮೊದಲ ಟಾರ್ಗೆಟ್ ಈ ಎರಡು ಹೇಳಿಕೆಗಳಾಗಿವೆ. ಕಾಂಗ್ರೆಸ್ ನಾಯಕರ ಈ ಎರಡು ಸ್ಟೇಟ್‌ಮೆಂಟ್ ಕಾಂಗ್ರೆಸ್‌ಗೆ ತಿರುಗುಬಾಣವಾಗುತ್ತೆ ಅಂಥ ವಿಶ್ಲೇಷಣೆ ಮಾಡೋವಾಗಲೇ ಮೋದಿ ರಾಜ್ಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಬೀದರ್‌ನಲ್ಲಿ ಮಾತನಾಡಿರುವ ಮೋದಿ ಆ ಇಬ್ಬರು ನಾಯಕರ ಹೇಳಿಕೆಗಳಿಗೆ ತುಂಬಾ ಸೂಕ್ಷ್ಮವಾಗಿಯೇ ಕೌಂಟರ್ ಕೊಟ್ಟಿದ್ದಾರೆ. ಯಾರು ದಲಿತರು, ಹಿಂದುಳಿದವರ ಪರವಾಗಿ ಕೆಲ್ಸ ಮಾಡುತ್ತಾರೋ ಅಂಥವರ ವಿರುದ್ಧ ಮಾತನಾಡುವ ಚಾಳಿ ಕಾಂಗ್ರೆಸ್ ನಾಯಕರಿಗಿದೆ ಎಂದಿದ್ದಾರೆ. ಭಾಷಣದಲ್ಲಿ ಮಹಾಪುರುಷ ಅಂಬೇಡ್ಕರ್ ಅವರನ್ನ ಸ್ಮರಿಸಿದ ಮೋದಿ ಕಾಂಗ್ರೆಸ್‌ನವರು ಅಂಬೇಡ್ಕರ್‌ರವರನ್ನೇ ಬಿಟ್ಟಿಲ್ಲ.. ಮಹಾಪುರುಷನನ್ನೇ ಬೈದಿದ್ರು.. ಅಂಥವರು ನನ್ನ ವಿರುದ್ಧ 91 ಬಾರಿ ಬೈಗುಳಗಳ ಮೂಲಕ ಪ್ರಹಾರ ಮಾಡಿದ್ದಾರೆ. ಆ ಮೂಲಕ ತಮಗೆ ಬೈದಿದ್ದನ್ನೇ ಮುಂದೆ ಇಟ್ಟುಕೊಂಡು ಪ್ರಧಾನಿ ಭಾವನಾತ್ಮಕ ಅಸ್ತ್ರದ ಪ್ರಯೋಗ ಮಾಡಿದ್ದಾರೆ.
ಖರ್ಗೆ, ಸಿದ್ದು ಸಮುದಾಯದ ಮತದ ಮೇಲೆ ಕಣ್ಣು!
ರಾಜ್ಯ ರಾಜಕಾರಣದಲ್ಲಿ ವಿಪಕ್ಷಗಳನ್ನ ಟಾರ್ಗೆಟ್ ಮಾಡಬೇಕಿರೋ ಇಂಥ ಸಂದರ್ಭದಲ್ಲಿ ಆ ಹೇಳಿಕೆಗಳನ್ನೇ ಮುಂದಿಟ್ಟುಕೊಂಡು ಮೋದಿ ಮತಬ್ಯಾಂಕ್‌ಗೆ ಗುರಿಯಿಟ್ಟಿದ್ದಾರೆ. ಖರ್ಗೆ ಹಾಗೂ ಸಿದ್ದರಾಮಯ್ಯ ಹೇಳಿಕೆಯನ್ನ ಪ್ರಚಾರದಲ್ಲಿ ಮುಂದೆ ತಂದು, ಆ ಮೂಲಕ ಸಮುದಾಯದ ಮತಗಳ ಕ್ರೊಢೀಕರಣ ಹಾಗೂ ಬಿಜೆಪಿಗೆ ಎಲ್ಲೆಲ್ಲಿ ಆತಂಕವಿದೆಯೋ ಅಂತ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಆತಂಕ ನಿವಾರಿಸಿ ಮತಗಳನ್ನ ಸೆಳೆಯುವ ಜಂಟಿ ರಣತಂತ್ರಕ್ಕೆ ಮೋದಿ ಮುಂದಾಗಿದ್ದಾರೆ ಅಂಥ ವಿಶ್ಲೇಷಿಸಬಹುದಾಗಿದೆ.
ಅಚ್ಚುಕಟ್ಟಾಗಿ ಪರಿಸ್ಥಿತಿ ನಿರ್ವಹಿಸಿದ ಮೋದಿ
ಒಳಮೀಸಲಾತಿಯ ಕೆಂಡಕ್ಕೆ ಕೈ ಹಾಕಿದ್ದ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಬಂಜಾರ ಸಮುದಾಯ ತಿರುಗಿ ಬಿದ್ದಿತ್ತು. ಆ ಸಮುದಾಯದ ಆಕ್ರೋಶದ ಬೆಂಕಿಯನ್ನೂ ತಣಿಸುವ ಕೆಲಸ ಮಾಡಿದ್ದಾರೆ ಮೋದಿ. ಬಂಜಾರ ಸಮುದಾಯಕ್ಕೆ ಬಿಜೆಪಿ ಸರ್ಕಾರ ನೀಡಿರುವ ಅಭಿವೃದ್ಧಿ ಕೊಡುಗೆಗಳನ್ನ ನೆನಪಿಸಿದ ಮೋದಿ ಜೊತೆಜೊತೆಯಲ್ಲೇ ಸಿದ್ದರಾಮಯ್ಯರ ಲಿಂಗಾಯತ ವಿರೋಧಿ ಹೇಳಿಕೆಯನ್ನ ಪ್ರಸ್ತಾಪಿಸಿ, ಲಿಂಗಾಯತ ಮತಗಳು ಚದುರಿ ಹೋಗದಂತೆ ತಡೆಯುವ ಕೆಲಸವನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ: Caste Politics: ಬಿಜೆಪಿ-ಕಾಂಗ್ರೆಸ್‌ನಿಂದ ಜಾತಿ ಲೆಕ್ಕಾಚಾರ, ರಣತಂತ್ರಕ್ಕೆ ಮಣಿಯುತ್ತಾನಾ ಮತದಾರ?
ಒಟ್ಟಾರೆ ತನ್ನದೇ ಆದ ವರ್ಚಸ್ಸು ಹೊಂದಿರೋ ಜನಪ್ರಿಯ ಪ್ರಧಾನಮಂತ್ರಿ ನರೇಂದ್ರ ಮೋದಿ ಕರುನಾಡಿನ ಕುರುಕ್ಷೇತ್ರಕ್ಕೆ ಕಾಲಿಟ್ಟು ಗುಡುಗಿದ್ದಾರೆ. ಒಂದೇ ಭಾಷಣದಲ್ಲಿ ಮೂರು ಅಂಶಗಳನ್ನ ಪ್ರಸ್ತಾಪಿಸಿ ವಿಪಕ್ಷಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದಾರೆ.
(ವರದಿ: ಹನುಮಂತ ಜೋಳದಾಳ, ನ್ಯೂಸ್ 18, ಕನ್ನಡ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ