Explained Myths: ಲಸಿಕೆ ತೆಗೆದುಕೊಳ್ಳದಂತೆ ತಡೆಯಲು ಸಾವಿರ ಸುಳ್ಳುಗಳು ಎಲ್ಲೆಡೆ ಹರಿಡಾಡುತ್ತಿವೆ, ಈ ಮಿಥ್ಯಗಳಿಗೆ ಬಲಿಯಾದೀರಿ ಜೋಕೆ !

ಲಸಿಕೆಯ ಬಗ್ಗೆ ಅದೆಷ್ಟೇ ಮಾಹಿತಿ, ಜಾಗೃತಿ ನೀಡಿದ್ದರೂ ಒಂದಷ್ಟು ಅನುಮಾನಗಳು ಹಾಗೇ ಉಳಿದು ಹೋಗಿಬಿಡುತ್ತವೆ. ಸಾಲದ್ದಕ್ಕೆ ಎಲ್ಲೆಲ್ಲೂ ಈ ತಪ್ಪುಕಲ್ಪನೆಗಳ ಸಾಮ್ರಾಜ್ಯವೂ ವಿಸ್ತರಿಸುತ್ತಾ ಇದೆ. ಇಂಥಾ ಸಂದರ್ಭದಲ್ಲಿ ಲಸಿಕೆಯ ಬಗ್ಗೆ ಜನರಲ್ಲಿಇರುವ ಸಾಮಾನ್ಯ ಅಪನಂಬಿಕೆಗಳು ಮತ್ತು ಅವುಗಳಿಗೆ ಸರಿಯಾದ ಉತ್ತರ ಎರಡರ ವಿವರಣೆಯೂ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Corona Vaccine: ಕೊರೊನಾ ಸೋಂಕಿನ ವಿರುದ್ಧ ಗೆಲ್ಲುವುದಕ್ಕೆ ಇರುವ ಏಕೈಕ ಅಸ್ತ್ರ ಲಸಿಕೆ. ಇಂದಿನಿಂದಲೇ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಪಡೆಯಲು ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಆದ್ರೆ ಇನ್ನೂ ಅದೆಷ್ಟೋ ಜನ ಲಸಿಕೆ ಪಡೆಯುವುದಾ ಬೇಡವಾ ಎನ್ನುವ ಅನುಮಾನದಲ್ಲೇ ಇದ್ದಾರೆ. ಲಸಿಕೆಯ ಬಗ್ಗೆ ಅದೆಷ್ಟೇ ಮಾಹಿತಿ, ಜಾಗೃತಿ ನೀಡಿದ್ದರೂ ಒಂದಷ್ಟು ಅನುಮಾನಗಳು ಹಾಗೇ ಉಳಿದು ಹೋಗಿಬಿಡುತ್ತವೆ. ಸಾಲದ್ದಕ್ಕೆ ಎಲ್ಲೆಲ್ಲೂ ಈ ತಪ್ಪುಕಲ್ಪನೆಗಳ ಸಾಮ್ರಾಜ್ಯವೂ ವಿಸ್ತರಿಸುತ್ತಾ ಇದೆ. ಇಂಥಾ ಸಂದರ್ಭದಲ್ಲಿ ಲಸಿಕೆಯ ಬಗ್ಗೆ ಜನರಲ್ಲಿಇರುವ ಸಾಮಾನ್ಯ ಅಪನಂಬಿಕೆಗಳು ಮತ್ತು ಅವುಗಳಿಗೆ ಸರಿಯಾದ ಉತ್ತರ ಎರಡರ ವಿವರಣೆಯೂ ಇಲ್ಲಿದೆ.

HIV, ಕಿಡ್ನಿ ಸಮಸ್ಯೆ, ಹೃದಯ ಸಮಸ್ಯೆ ಇದ್ದವರು ಲಸಿಕೆ ಪಡೆಯಬಾರದು

ಇದು ಸಂಪೂರ್ಣವಾಗಿ ತಪ್ಪು ಗ್ರಹಿಕೆ ಎನ್ನುತ್ತಾರೆ ವೈದ್ಯರು. ಬದಲಿಗೆ, ಎಚ್​ಐವಿ ಸೋಂಕು, ಮೂತ್ರಪಿಂಡ ಸಮಸ್ಯೆ, ಹೃದ್ರೋಗ ಇರುವವರು ತಪ್ಪದೇ ಲಸಿಕೆಯನ್ನು ಪಡೆಯಬೇಕು. ಇವರಲ್ಲಿ ಈಗಾಗಲೇ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ, ಹಾಗಾಗಿ ಕೊರೊನಾ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಇಂಥವರು ಲಸಿಕೆ ಪಡೆದರೆ ಕೋವಿಡ್ ನಿಂದಲೂ ಪಾರಾಗಲು ಸಹಕಾರಿಯಾಗುತ್ತದೆ.

ಋತುಸ್ರಾವದ ಸಂದರ್ಭದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ, ಆಗ ಲಸಿಕೆ ಪಡೆಯಬಾರದು

ಇದೊಂದು ಸುದ್ದಿ ಇತ್ತೀಚೆಗೆ ಬಹಳ ವ್ಯಾಪಕವಾಗಿ ಹರಡುತ್ತಿದೆ. ಇದರಲ್ಲಿ ಎಳ್ಳಷ್ಟೂ ಸತ್ಯವಿಲ್ಲ ಎನ್ನುತ್ತಾರೆ ವೈದ್ಯರು. ಋತುಸ್ರಾವಕ್ಕೂ ಲಸಿಕೆಗೂ ಯಾವುದೇ ರೀತಿಯ ಸಂಬಂಧವಿಲ್ಲ. ಋತುಸ್ರಾವ ನಿಯಮಿತವಾದ ದೈಹಿಕ ಪ್ರಕ್ರಿಯೆ. ಇದಕ್ಕೂ ಕೋವಿಡ್ ಲಸಿಕೆಗೂ ಸಂಬಂಧ ಕಲ್ಪಿಸಬಾರದು, ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ ಎನ್ನುವ ಮಾತಂತೂ ಖಂಡಿತಾ ತಪ್ಪು ಎನ್ನುತ್ತಾರೆ ವೈದ್ಯರು.

ಈಗಾಗಲೇ ಒಮ್ಮೆ ಕೋವಿಡ್ ಸೋಂಕಿಗೆ ತುತ್ತಾಗಿದ್ದರೆ ನಿಮಗೆ ಲಸಿಕೆಯ ಅವಶ್ಯಕತೆ ಇಲ್ಲ

ಒಮ್ಮೆ ಸೋಂಕಿಗೆ ತುತ್ತಾಗಿದ್ದರೆ ನೈಸರ್ಗಿಕವಾಗಿ ನಿಮ್ಮ ದೇಹದಲ್ಲಿ ವೈರಸ್ ವಿರುದ್ಧ ಹೋರಾಡುವ ಆಂಟಿಬಾಡಿಗಳು ಉತ್ಪತ್ತಿಯಾಗಿರುತ್ತವೆ. ಆದ್ದರಿಂದ ಇನ್ನು ನಿಮಗೆ ಲಸಿಕೆ ಬೇಡ ಎನ್ನುವ ಲೆಕ್ಕಾಚಾರ ಹಲವರದ್ದು. ಆದರೆ ಸೋಂಕಿನಿಂದ ಉತ್ಪತ್ತಿಯಾದ ಆಂಟಿಬಾಡಿ ಗರಿಷ್ಠ 6 ತಿಂಗಳವರಗೆ ಮಾತ್ರ ದೇಹದಲ್ಲಿ ಇರುತ್ತವೆ. ಆದರೆ ಲಸಿಕೆ ದೀರ್ಘಕಾಲದವರಗೆ ಸೋಂಕಿನಿಂದ ರಕ್ಷಣೆ ಕೊಡುತ್ತದೆ. ಹಾಗಾಗಿ ನಿಮಗೆ ಸೋಂಕು ತಗುಲಿದ್ದರೂ, ಚಿಕಿತ್ಸೆ ಮತ್ತು ಕ್ವಾರಂಟೈನ್ ಅವಧಿ ಮುಗಿದ ನಂತರ ತಪ್ಪದೇ ಲಸಿಕೆ ಪಡೆದುಕೊಳ್ಳಿ.

ಇದನ್ನೂ ಓದಿhttps://kannada.news18.com/news/coronavirus-latest-news/no-walk-in-vaccination-for-18-to-44-years-online-only-clears-center-on-corona-vaccine-sktv-557755.html

ಲಸಿಕೆ ನಿಮ್ಮ ಫಲವತ್ತತೆಯನ್ನು ಕುಂಠಿತಗೊಳಿಸುತ್ತದೆ

ಕೊರೊನಾ ಲಸಿಕೆ ವೈರಸ್ ವಿರುದ್ಧ ಹೋರಾಡುವ ಅಸ್ತ್ರವೇ ಹೊರತು ಮನುಷ್ಯನ ಫಲವತ್ತತೆಯ ವಿರುದ್ಧ ಹೋರಾಡುವ ವಸ್ತುವಲ್ಲ. ಇದುವರೆಗೂ ಪ್ರಪಂಚದ ಯಾವ ಭಾಗದಲ್ಲೂ ಕೋವಿಡ್ ಲಸಿಕೆಯಿಂದ ಪುರುಷರ ಅಥವಾ ಸ್ತ್ರೀಯರ ಫಲವತ್ತತೆ ಕುಂಠಿತವಾಗುತ್ತದೆ ಎನ್ನುವ ವಿಚಾರ ನಿರೂಪಿಸಲಾಗಿಲ್ಲ. ಆದ್ದರಿಂದ ಇದು ಸತ್ಯಕ್ಕೆ ದೂರವಾದ ಮಾತು ಎನ್ನುತ್ತಾರೆ ವೈದ್ಯರು.

ಒಂದು ಒಳ್ಳೆ ಕೆಲಸ ನಡೆಯುವಾಗ ಅದಕ್ಕೆ ಹತ್ತಾರು ಕಡೆಯಿಂದ ಅಡೆತಡೆ ಬರುವುದು ಸರ್ವೇಸಾಮಾನ್ಯ. ಕೋವಿಡ್ ಲಸಿಕೆಯನ್ನು ಇಡೀ ದೇಶದ ಜನರಿಗೆ ಕೊಡಲು ಸರ್ಕಾರ ನಿರ್ಧರಿಸುವ ಮುನ್ನವೇ ಇದರ ಬಗ್ಗೆ ಸಂಪೂರ್ಣವಾಗಿ ಅರಿತು ತಿಳಿದಿರುತ್ತದೆ. ಸಂಬಂಧಿಸಿದ ವಿಜ್ಞಾನಿಗಳು, ತಜ್ಞರು ಎಲ್ಲರೂ ಕೂಲಂಕುಷವಾಗಿ ಗಮನಿಸಿ, ಒಪ್ಪಿಗೆ ಕೊಟ್ಟ ಮೇಲೆಯೇ ಲಸಿಕೆ ವಿತರಣೆ ಆರಂಭವಾದದ್ದು. ಆದ್ದರಿಂದ ಅಸಂಬದ್ಧ ಮಿಥ್ಯಗಳಿಗೆ ಗಮನ ಹರಿಸದೇ ಲಸಿಕೆ ಪಡೆಯಬೇಕು ಎನ್ನುತ್ತಾರೆ ವೈದ್ಯರು.
Published by:Soumya KN
First published: