ಫೆಬ್ರವರಿ 24 ರಂದು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ ಅಹಮದಾಬಾದ್ನ ಮೊಟೇರಾ ಸ್ಡೇಡಿಯಂ ಅನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಔಪಚಾರಿಕವಾಗಿ ಉದ್ಘಾಟಿಸಿದರು. ಇದರ ಬೆನ್ನಲ್ಲೇ ನೂತನ ಸ್ಟೇಡಿಯಂಗೆ ನರೇಂದ್ರ ಮೋದಿ ಕ್ರೀಡಾಂಗಣ ಎಂದು ಮರುನಾಮಕರಣ ಮಾಡಲಾಗಿದೆ ಘೋಷಿಸಲಾಗಿದೆ. ಈ ಹಿಂದೆ ಈ ಕ್ರೀಡಾಂಗಣವನ್ನು ಸರ್ದಾರ್ ಪಟೇಲ್ ಕ್ರಿಕೆಟ್ ಕ್ರೀಡಾಂಗಣ ಎಂದು ಕರೆಯಲಾಗುತ್ತಿತ್ತು. ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕು ಟೆಸ್ಟ್ ಸರಣಿಯ ಮೂರನೇ ಪಂದ್ಯ ಬುಧವಾರದಿಂದ ಇದೇ ಕ್ರೀಡಾಂಗಣದಲ್ಲಿ ಆರಂಭವಾಗಿದ್ದು, ಇದು ಭಾರತದಲ್ಲಿ ನಡೆಯುತ್ತಿರುವ ಎರಡನೇ ಪಿಂಕ್ ಬಾಲ್ ಟೆಸ್ಟ್ ಆಗಿದೆ.
ವಿಶ್ವದ ಅತಿದೊಡ್ಡ ಮತ್ತು ಅತ್ಯಾಧುನಿಕ ಕ್ರಿಕೆಟ್ ಕ್ರೀಡಾಂಗಣ ಎಂದು ಗುರುತಿಸಿಕೊಂಡಿರುವ ಈ ಸ್ಟೇಡಿಯಂನಲ್ಲಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ಕ್ರೀಡಾ ಸಚಿವ ಕಿರೆನ್ ರಿಜಿಜು ಸೇರಿದಂತೆ ಹಲವಾರು ವಿಶೇಷ ಅತಿಥಿಗಳ ಭಾಗವಹಿಸಿದ್ದರು. 63 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಕ್ರೀಡಾಂಗಣದಲ್ಲಿ ಒಂದು ಲಕ್ಷ 32 ಸಾವಿರ ಪ್ರೇಕ್ಷಕರು ಕುಳಿತುಕೊಳ್ಳಬಹುದು. ಈ ಮೂಲಕ ಅತೀ ದೊಡ್ಡ ಕ್ರಿಕೆಟ್ ಮೈದಾನ ಎಂಬ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಸ್ಡೇಡಿಯಂ (90 ಸಾವಿರ ಪ್ರೇಕ್ಷಕರು) ನ ದಾಖಲೆಯನ್ನು ನರೇಂದ್ರ ಮೋದಿ ಕ್ರೀಡಾಂಗಣ ಮುರಿದಿದೆ.
ಈ ಮೈದಾನವನ್ನು ನವೀಕರಣಕ್ಕಾಗಿ 2015 ರಲ್ಲಿ ಮುಚ್ಚಲಾಗಿತ್ತು. ಅಲ್ಲದೆ ಈ ಕ್ರಿಕೆಟ್ ಮೈದಾನವು ಅನೇಕ ಅದ್ಭುತ ಕ್ಷಣಗಳಿಗೆ ಸಾಕ್ಷಿಯಾಗಿದೆ. ಅದರಲ್ಲಿ 1987 ರಲ್ಲಿ ಸುನೀಲ್ ಗವಾಸ್ಕರ್ 10000 ಟೆಸ್ಟ್ ರನ್ ಗಳಿಸಿದ್ದು, 1994 ರಲ್ಲಿ ಸರ್ ರಿಚರ್ಡ್ ಹೆಡ್ಲಿ ಅವರ ದಾಖಲೆಯನ್ನು ಮುರಿದು ಕಪಿಲ್ ದೇವ್ (432 ಟೆಸ್ಟ್ ವಿಕೆಟ್) ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದಿರುವುದು ಇದೇ ಮೈದಾನದಲ್ಲಿ ಎಂಬುದು ವಿಶೇಷ. ಇನ್ನು ಮೆಲ್ಬೋರ್ನ್ ಕ್ರಿಕೆಟ್ ಮೈದಾನವನ್ನು ವಿನ್ಯಾಸಗೊಳಿಸಿದ ಆಸ್ಟ್ರೇಲಿಯಾದ ಡಿಸೈನಿಂಗ್ ಸಂಸ್ಥೆ ಪಾಪ್ಯುಲಸ್ ಸೇರಿದಂತೆ ಅನೇಕ ತಜ್ಞರು ಇದರ ನಿರ್ಮಾಣದಲ್ಲಿ ಭಾಗಿಯಾಗಿದ್ದರು.
ಕಳೆದ ಕೆಲವು ದಿನಗಳಿಂದ ಇಲ್ಲಿ ಅಭ್ಯಾಸ ಮಾಡುತ್ತಿರುವ ಭಾರತ ಮತ್ತು ಇಂಗ್ಲೆಂಡ್ನ ಆಟಗಾರರು ಕೂಡ ಈ ಮೈದಾನದ ಸೌಕರ್ಯಗಳನ್ನು ಹಾಡಿ ಹೊಗಳಿದ್ದಾರೆ. ನಾಲ್ಕು ಡ್ರೆಸ್ಸಿಂಗ್ ಕೊಠಡಿಗಳನ್ನು ಹೊಂದಿರುವ ಏಕೈಕ ಕ್ರಿಕೆಟ್ ಕ್ರೀಡಾಂಗಣ ಇದಾಗಿದೆ. ಇದಲ್ಲದೆ ಕ್ರಿಕೆಟ್ ಅಕಾಡೆಮಿಗಳು, ಒಳಾಂಗಣ ಅಭ್ಯಾಸ ಪಿಚ್ಗಳು ಮತ್ತು ಎರಡು ಪ್ರತ್ಯೇಕ ಅಭ್ಯಾಸ ಮೈದಾನಗಳಿವೆ.
ಡ್ರೆಸ್ಸಿಂಗ್ ಕೊಠಡಿಯಿಂದ ಮೈದಾನಕ್ಕೆ ತಲುಪಲು ಆಟಗಾರರು 80 ಮೆಟ್ಟಿಲುಗಳನ್ನು ಇಳಿಯಬೇಕು ಎಂದರೆ ಈ ಮೈದಾನವು ಎಷ್ಟು ದೊಡ್ಡದು ಎಂದು ಅಂದಾಜಿಸಬಹುದು. ಇದಲ್ಲದೆ ಪಿಚ್ ಬಳಿ ತಲುಪಲು ಕೂಡ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. 800 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಕ್ರೀಡಾಂಗಣದಲ್ಲಿ ಎರಡು ಅಭ್ಯಾಸ ಮೈದಾನಗಳಿವೆ. ಇದಲ್ಲದೆ ಕೆಂಪು ಮತ್ತು ಕಪ್ಪು ಮಣ್ಣಿನಿಂದ ಮಾಡಿದ 11 ವಿಭಿನ್ನ ಪಿಚ್ಗಳಿವೆ.
ಈ ಮೈದಾನವನ್ನು ಹಚ್ಚ ಹಸಿರಿನಿಂದ ಕಂಗೊಳಿಸುವಂತೆ ಮಾಡಲು ಬರ್ಮುಡಾ ಹುಲ್ಲನ್ನು ಆಸ್ಟ್ರೇಲಿಯಾದಿಂದ ಆಮದು ಮಾಡಲಾಗಿದೆ. ಕ್ರೀಡಾಂಗಣದ ಕ್ಲಬ್ ಹೌಸ್ 55 ಕೊಠಡಿಗಳನ್ನು ಹೊಂದಿದೆ. 3 ಡಿ ಮಿನಿ ಥಿಯೇಟರ್ ಸಹ ಇದರಲ್ಲಿದೆ. ಒಲಿಂಪಿಕ್ ಗಾತ್ರದ ಈಜುಕೊಳ, ಸೌರ ಸ್ನಾನದ ವ್ಯವಸ್ಥೆಯನ್ನೂ ಇಲ್ಲಿ ಮಾಡಲಾಗಿದೆ. ಇದಲ್ಲದೆ ಒಳಾಂಗಣ ಕ್ರೀಡೆಗಳಿಗಾಗಿ ಸ್ಕ್ವ್ಯಾಷ್ ಕೋರ್ಟ್ಗಳನ್ನು ಸಹ ಮಾಡಲಾಗಿದೆ. ಆಟಗಾರರಿಗಾಗಿ ವಿಶೇಷ ಡ್ರೆಸ್ಸಿಂಗ್ ಕೊಠಡಿ ಹಾಗೂ ಜಿಮ್ಗಳನ್ನು ಸಿದ್ಧಪಡಿಸಲಾಗಿದೆ. ಹಾಗೆಯೇ ಕ್ರೀಡಾಂಗಣದಲ್ಲಿ 76 ಎಸಿ ಕಾರ್ಪೊರೇಟ್ ಪೆಟ್ಟಿಗೆಗಳಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ