Corona Vaccine in India: ಭಾರತದ ಕೋವಿಡ್-19 ಲಸಿಕಾ ಕಾರ್ಯಕ್ರಮವು (Vaccination Drive) ಕಳೆದ ಒಂಭತ್ತು ತಿಂಗಳ ಹಿಂದೆ ಆರಂಭವಾದಂದಿಗೆ ಹೋಲಿಸಿದಲ್ಲಿ ವೇಗವನ್ನು ಪಡೆದುಕೊಂಡಿದೆ. ಇಲ್ಲಿವರೆಗೆ ಒಟ್ಟು 87 ಕೋಟಿ ಡೋಸ್ಗಳನ್ನು ನೀಡಲಾಗಿದೆ. ಇತ್ತೀಚಿನ ದತ್ತಾಂಶಗಳನ್ನು (Data) ಗಮನಿಸಿದರೆ, ಲಸಿಕೆ ನೀಡಿಕೆಯಲ್ಲಿ ಲಿಂಗ ಅಸಮಾನತೆ (Gender Disparity) ಇರುವುದು ಕಂಡುಬರುತ್ತಿದೆ. ಇಲ್ಲಿಯವರೆಗೆ ವಿತರಣೆಯಾಗಿರುವ ಒಟ್ಟು ಡೋಸ್ಗಳಲ್ಲಿ ಪುರುಷರಿಗೆ 45.14 ಕೋಟಿ ಹಾಗೂ ಮಹಿಳೆಯರಿಗೆ 41.51 ಕೋಟಿ ಡೋಸ್ (Men and Women) ನೀಡಲಾಗಿದೆ. ಅಂದರೆ 51.88 % ಪುರುಷರಿಗೆ ಹಾಗೂ 47.70% ಮಹಿಳೆಯರಿಗೆ ದೊರಕಿದೆ. ಮಹಿಳೆಯರಿಗೆ ಹೋಲಿಸಿದಲ್ಲಿ, ಪುರುಷರಿಗೆ ಮೂರು ಕೋಟಿಗಿಂತಲೂ ಹೆಚ್ಚಿನ (More Doses) ಡೋಸ್ಗಳನ್ನು ನೀಡಲಾಗಿದೆ.
ಭಾರತದಲ್ಲಿ ಮಹಿಳೆಯರಿಗಿಂತಲೂ ಪುರುಷರ ಜನಸಂಖ್ಯೆ ಹೆಚ್ಚಿದೆ. ಆದರೆ, ಈ ವಿಚಾರವೇ ಲಸಿಕೆ ಅಸಮಾನತೆಗೆ ಕಾರಣ ಎಂಬುದನ್ನು ಹಿಂದೂಸ್ಥಾನ್ ಟೈಮ್ಸ್ನ ವಿಶ್ಲೇಷಣೆಯೊಂದು ತಳ್ಳಿಹಾಕಿದೆ. ಲಸಿಕೆ ಅಭಿಯಾನದ ಆರಂಭದಲ್ಲಿ, ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿರನ್ನು ಒಳಗೊಂಡಿರಲಿಲ್ಲ. ಈಗ ಇವರೂ ಲಸಿಕೆ ಪಡೆಯುವುದು ಸುರಕ್ಷಿತ ಎಂಬುದು ಸಾಬೀತಾದ ನಂತರದಲ್ಲಿ, ಲಸಿಕೆ ಪಡೆಯುವಿಕೆಯ ಕುರಿತು ಸುಳ್ಳುಗಳು ಹರಿದಾಡುತ್ತಲೇ ಇದ್ದು, ಗರ್ಭಿಣಿಯರು ಹಾಗೂ ಬಾಣಂತಿಯರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.
ಋತುಸ್ರಾವ ಹಾಗೂ ಲಸಿಕೆ ಪಡೆಯುವಿಕೆಯ ಕುರಿತೂ ಅನೇಕ ಸುಳ್ಳುಗಳು ಹರಿದಾಡುತ್ತಿವೆ. ಋತುಚಕ್ರದ ಸಮಯದಲ್ಲಿ ಮಹಿಳೆಯರು ಲಸಿಕೆ ಪಡೆಯುವುದರಿಂದ ಹಿಂಜರಿಯುತ್ತಿದ್ದಾರೆ. ಮಕ್ಕಳಾಗುವಿಕೆಯ ಸಾಮರ್ಥ್ಯದ ಮೇಲೆ ಲಸಿಕೆ ಪ್ರಭಾವ ಬೀರುತ್ತದೆ ಎನ್ನುವುದು ಲಸಿಕೆ ಕುರಿತು ಹರಿದಾಡುತ್ತಿರುವ ಮತ್ತೊಂದು ಸುಳ್ಳು. ಈದು ವಿಶೇಷವಾಗು ಗ್ರಾಮೀಣ ಮಹಿಳೆಯರಲ್ಲಿ ಹೆಚ್ಚಾಗಿ ಹರಿದಾಡುತ್ತಿದೆ. ಮಕ್ಕಳನ್ನು ಹಡೆಯುವ ತಮ್ಮ ಸಾಮರ್ಥ್ಯದ ಮೇಲೆ ಲಸಿಕೆ ಪರಿಣಾಮ ಉಂಟುಮಾಡುತ್ತದೆ ಎನ್ನುವುದು ಅವರ ಮನಸ್ಸಿನಲ್ಲಿ ಬೇದರೂರಿದ್ದು, ಲಸಿಕೆ ಪಡೆಯುವಿಕೆಯಿಂದ ದೂರ ಉಳಿಯುತ್ತಿದ್ದಾರೆ. ಈ ಸುದ್ದಿಗಳು ಸುಳ್ಳು ಎಂದು ಜಾಗೃತಿ ಮೂಡಿಸಲು ಎಷ್ಟು ಪ್ರಯತ್ನಗಳು ನಡೆದರೂ ಗ್ರಾಮೀಣ ಪ್ರದೇಶದ ಜನರು ಊಹಾಪೋಹದ ಸುದ್ದಿಗಳನ್ನೇ ನಂಬುತ್ತಿದ್ದಾರೆ.
ಅನೇಕ ಕುಟುಂಬಗಳಲ್ಲಿ ಪುರುಷರು ಮಾತ್ರವೇ ದುಡಿಯುವವರಾಗಿದ್ದಾರೆ. ತಮ್ಮ ಕೆಲಸಗಳಿಗೆ ತೆರಳುವ ಸಲುವಾಗಿ ಮೊದಲಿಗೆ ಅವರೇ ಲಸಿಕೆ ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಹಳ್ಳಿಗಳಲ್ಲಿ ಲಸಿಕಾ ಕೇಂದ್ರಗಳು ದೂರದಲ್ಲಿರುವುದೂ ಸಹ ಮಹಿಳೆಯರು ಲಸಿಕೆ ಪಡೆಯಲು ಹಿಂದೇಟು ಹಾಕಲು ಕಾರಣವಿರಬಹುದು. ಅನೇಕ ಕುಟುಂಬಗಳಲ್ಲಿ ಮಹಿಳೆಯರು ಮನೆಯಿಂದ ಹೊರಹೋಗಲು ಅನುಮತಿ ಪಡೆಯಬೇಕಿದೆ ಹಾಗೂ ಒಬ್ಬರೇ ಲಸಿಕಾ ಕೇಂದ್ರಕ್ಕೆ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ.
ಕುಟುಂಬದ ಮತ್ತೊಬ್ಬ ಪುರುಷ ಸದಸ್ಯನು ಜತೆಗೆ ಬಾರದೇ ತಾವೇ ಲಸಿಕೆ ಪಡೆಯಲು ಹೋಗಲು ಅಸಾಧ್ಯವಾಗುತ್ತಿದೆ. ಕುಟುಂಬದ ಎಲ್ಲರ ಕಾಳಜಿಯನ್ನೂ ತಾನೇ ವಹಿಸಬೇಕಿರುವ ಕಾರಣ, ಲಸಿಕೆ ನಂತರದ ಪರಿಣಾಮದಿಂದಾಗಿ ಮನೆಯ ಕೆಲಸಗಳಿಗೆ ಬಾಧೆಯಾಗಬಹುದು ಎಂಬುದಕ್ಕೆ ಮಹಿಳೆಯು ಲಸಿಕೆ ಪಡೆಯುವುದನ್ನು ಮುಂದೂಡುತ್ತಿರುತ್ತಾರೆ. ಅನೇಕ ಕುಟುಂಬಗಳಲ್ಲಿ ಮಹಿಳೆಯರಿಗೆ ಸ್ಮಾರ್ಟ್ಫೋನ್ಗಳು ಲಭ್ಯವಿಲ್ಲ. ತಂತ್ರಜ್ಞಾನದಿಂದ ದೂರವಿರುವ ಈ ಕಾರಣವೂ ಅನೇಕ ಬಾರಿ ಲಸಿಕೆಗೆ ನೋಂದಣಿ ಮಾಡಿಸಿಕೊಳ್ಳಲು ಹಾಗೂ ಲಸಿಕೆ ಪಡೆಯುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಲಸಿಕೆ ಕಾರ್ಯಕ್ರಮದ ಆರಂಭದಲ್ಲಿ, ಲಸಿಕೆ ನೀಡಿಕೆಯ ಲಿಂಗ ಅಸಮಾನತೆಯು ಅಗಾಧ ಪ್ರಮಾಣದಲ್ಲಿತ್ತು. ಈ ಅಂತರವು ನಿಧಾನವಾಗಿ ಕಡಿಮೆ ಆಗುತ್ತ ಬಂದಿದೆ. ಆಂಧ್ರಪ್ರದೇಶ, ಕೇರಳ, ತಮಿಳುನಾಡು, ಮಿಜೋರಾಮ್ ರಾಜ್ಯಗಳು ಹಾಗೂ ಪುದುಚೆರಿ ಕೇಂದ್ರಾಡಳಿತ ಪ್ರದೇಶವು ಪುರುಷರಿಗಿಂತ ಹೆಚ್ಚಿನ ಡೋಸ್ಗಳನ್ನು ಮಹಿಳೆಯರಿಗೆ ನೀಡಿವೆ.
ಕಡಿಮೆ ಆದಾಯವಿರುವ ಹಾಗೂ ಗ್ರಾಮೀಣ ಪ್ರದೇಶದ ಸಮುದಾಯಗಳಿಗೆ ಲಸಿಕೆ ಲಭ್ಯತೆಯನ್ನು ಹೆಚ್ಚಿಸಲು ಕೈಗೊಂಡ ಉಪಕ್ರಮಗಳಿಂದಾಗಿ ಮಹಿಳೆಯರಿಗೂ ಅನುಕೂಲವಾಗಿದೆ. ಕೆಲವು ರಾಜ್ಯಗಳಲ್ಲಿ ಗ್ರಾಮ ಮತ್ತು ಸಮುದಾಯದ ಹಂತದಲ್ಲಿ ವಿಕೇಂದ್ರೀಕೃತ ಲಸಿಕಾ ಶಿಬಿರಗಳನ್ನು ಆಯೋಜನೆ ಮಾಡಲಾಗಿದ್ದು, ದೂರದಲ್ಲಿರುವ ಲಸಿಕಾ ಕೇಂದ್ರಗಳಿಗೆ ತೆರಳಬೇಕಾದ ಅನಿವಾರ್ಯತೆಯನ್ನು ಇದು ಇಲ್ಲವಾಗಿಸಿದೆ.
ಇದರಿಂದಾಗಿ ಹೆಚ್ಚು ಮಹಿಳೆಯಯರು ಲಸಿಕೆ ಪಡೆಯಲು ಉತ್ತೇಜಿಸುತ್ತಿದೆ. ಲಸಿಕಾ ಕೇಂದ್ರಗಳಲ್ಲಿ ಈಗ ಸ್ಥಳದಲ್ಲೆ ನೋಂದಣಿ ಹಾಗೂ ನೇರವಾಗಿ ಆಗಮಿಸಿ ಲಸಿಕೆ ಪಡೆಯಲು ಅವಕಾಶವಿದೆ. ಹಾಗಾಗಿ, ಕೋವಿನ್ ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗದ ಮಹಿಳೆಯರು ನೇರವಾಗಿ ಆಗಮಿಸಿ ಕೇಂದ್ರಗಳಲ್ಲಿ ಲಸಿಕೆ ಪಡೆಯಬಹುದಾಗಿದೆ. ಮುಂಬೈಯಲ್ಲಿ ವಿವಿಧ ಕೇಂದ್ರಗಳಲ್ಲಿ, ವಿಶೇಷವಾಗಿ ಮಹಿಳೆಯರಿಗಾಗಿ ಇಂತಹ ಲಸಿಕಾ ಶಿಬಿರಗಳನ್ನು ಆಯೋಜನೆ ಮಾಡಲಾಯಿತು.
ಲಿಂಗ ಅಸಮಾನತೆಯನ್ನು ಹೋಗಲಾಡಿಸಲು ಇವುಗಳು ಪೂರಕ ಹೆಜ್ಜೆಗಳಾದರೂ ಎಲ್ಲರಿಗೂ ಲಸಿಕೆ ದೊರಕುವಂತಾಗಲು ಎಲ್ಲ ರಾಜ್ಯಗಳಲ್ಲೂ ಕ್ರಿಯಾಶೀಲವಾದ ಕ್ರಮ ಕೈಗೊಳ್ಳಬೇಕಿದೆ. ರಾಷ್ಟ್ರೀಯ ಮಹಿಳಾ ಆಯೋಗದ(ಎನ್ಸಿಡಬ್ಲ್ಯು) ಪ್ರಕಾರ, ಸಾರ್ವಜನಿಕರಲ್ಲಿ ಲಸಿಕೆ ಕುರಿತು ಹೆಚ್ಚು ಜಾಗೃತಿ ಮೂಡಿಸುವ ಮೂಲಕ ಹೆಚ್ಚೆಚ್ಚು ಮಹಿಳೆಯರನ್ನು ಕೇಂದ್ರಗಳತ್ತ ಆಗಮಿಸುವಂತೆ ಪ್ರೋತ್ಸಾಹಿಸಬೇಕು.
ಅಕ್ರಿಡಿಟೆಡ್ ಸೋಷಿಯಲ್ ಹೆಲ್ತ್ ಆಕ್ಟಿವಿಸ್ಟ್ಗಳು(ಆಶಾ ಕಾರ್ಯಕರ್ತೆಯರು), ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಇನ್ನಿತರ ಸಾಮಾಜಿಕ ಆರೋಗ್ಯ ಕಾರ್ಯಕರ್ತರು ಈ ಗುರಿ ಸಾಧನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಹಿಂದಿನ ಕಾಲದಿಂದ ರೂಢಿಯಲ್ಲಿ ಬಂದಿರುವ ಲಿಂಗ ತಾರತಮ್ಯ ಸ್ವಭಾವವನ್ನು ಈಗ ಮುರಿಯಬೇಕಿದೆ ಹಾಗೂ ದೇಶದಲ್ಲಿ ಮಹಿಳೆಯರ ಆರೋಗ್ಯ ಹಾಗೂ ಯೋಗಕ್ಷೇಮವನ್ನು ಆದ್ಯತೆಯನ್ನಾಗಿಸಬೇಕಿದೆ.
ಸದ್ಯ ತೃತೀಯ ಲಿಂಗಿಗಳು, ನಾನ್ ಬೈನರಿ ಲಿಂಗ ಮುಂತಾದವರ ಲಸಿಕೆ ಪಡೆಯುವಿಕೆ ಕುರಿತು ದತ್ತಾಂಶಗಳು ಸೂಕ್ತ ಪ್ರಮಾಣದಲ್ಲಿ ಲಭ್ಯವಾಗಿಲ್ಲ. ಕೋವಿನ್ ಡ್ಯಾಷ್ಬೋರ್ಡ್ನಲ್ಲಿ “ಇತರರು” ಎಂಬುದರಲ್ಲಿ ಎಲ್ಲರನ್ನೂ ಒಟ್ಟುಗೂಡಿಸಲಾಗಿದೆ. ಈ ಗುಂಪಿಗೆ 191690 ಡೋಸ್ ಲಸಿಕೆಗಳನ್ನು ನೀಡಲಾಗಿದೆ6.
- ಐಶ್ವರ್ಯ ಅಯ್ಯರ್
ಸಮನ್ವಯಗಾರರು- ಸಮುದಾಯ ಹೂಡಿಕೆ,
ಯುನೈಟೆಡ್ ವೇ ಮುಂಬೈ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ