• Home
  • »
  • News
  • »
  • explained
  • »
  • HS Doreswamy: ಕಸ ತಿನ್ನುವವರು ಇರುವವರೆಗೂ ಆ ಸಮಸ್ಯೆ ಜೀವಂತವಾಗೆ ಇರುತ್ತದೆ ಎಂದಿದ್ದರು ದೊರೆಸ್ವಾಮಿ...!

HS Doreswamy: ಕಸ ತಿನ್ನುವವರು ಇರುವವರೆಗೂ ಆ ಸಮಸ್ಯೆ ಜೀವಂತವಾಗೆ ಇರುತ್ತದೆ ಎಂದಿದ್ದರು ದೊರೆಸ್ವಾಮಿ...!

ಒಡನಾಟದ ನೆನಪು.

ಒಡನಾಟದ ನೆನಪು.

ಕೊನೆ ದಿನಗಳಲ್ಲಿ ನಾನು ಅವರಿಗೆ ಹೇಳಿದ್ದೆ, "ನಮ್ಮ ಮನೆಗೆ ಬಂದು ಇದ್ದು ಬಿಡಿ," ಎಂದು ಹೇಳಿದ್ದೆ. ಅದಕ್ಕೆ ಅವರು, "ನಾನು ಇಲ್ಲಿ ಬಂದು ಇದ್ದುಬಿಟ್ಟರೆ ಹೋರಾಟಗಳಿಗೆ ಹೋಗುವುದು ಹೇಗೆ," ಎಂದು ಹೇಳುತ್ತಿದ್ದರು. ಮೂರು ಬಾರಿ ನಮ್ಮ ಮನೆಗೆ ಬಂದು ಹೋಗಿದ್ದರು.

  • Share this:

ಎಚ್ ಎಸ್ ದೊರೆಸ್ವಾಮಿ ಇಂದು ನಿಧನರಾಗಿದ್ದಾರೆ. ಇದು ನನಗೆ ಅತ್ಯಂತ ದುಃಖ ಮತ್ತು ನೋವನ್ನುಂಟು ಮಾಡಿದೆ. ಕಾರಣ ನಮಗೆ ಅವರು ಮಾರ್ಗದರ್ಶಕರಾಗಿದ್ದರು. ಹೋರಾಟಗಳಲ್ಲಿ ಭಾಗವಹಿಸಿ ಮಾರ್ಗದರ್ಶನ ಮಾಡುತ್ತಿದ್ದರು. ಎಲ್ಲ ಹೋರಾಟಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ದೊರೆಸ್ವಾಮಿ ಅವರು ಅತ್ಯಂತ ಸರಳ ವ್ಯಕ್ತಿತ್ವದವರು. ಬಹಳ ದೊಡ್ಡ ವ್ಯಕ್ತಿಗಳು ಸರಳವಾಗಿ ಇರುವುದನ್ನು ನಾವು ಕಂಡಿದ್ದೇವೆ. ಇವರು ಅದೇ ರೀತಿ ಇದ್ದವರು. ಇವರ ನಿಲುವು ಬಹಳ ಅಚಲವಾಗಿ ಇರುತ್ತಿತ್ತು. ಅವರ ಜೀವನದಲ್ಲಿ ಐಡಿಯಾಲಾಜಿ ಅಥವಾ ಫಿಲಾಸಫಿಗಳನ್ನು ದೃಢವಾಗಿ ನಂಬಿದ್ದರು. ಬಹಳ ನೇರ ಮತ್ತು ನಿಷ್ಠುರವಾದಿ. ಯಾರ ಮುಲಾಜಿಗೂ ಕೂಡ ಒಳಗಾಗುತ್ತಿರಲಿಲ್ಲ. ಮುಖ ನೋಡಿ ಕೂಡ ಮಾತನಾಡುತ್ತಿರಲಿಲ್ಲ. ಇದ್ದುದ್ದನ್ನು ಇದ್ದ ಹಾಗೆ ಹೇಳುತ್ತಿದ್ದರು. ವಸೂಲಿಬಾಜಿ ಮನೋಭಾವದವರಲ್ಲ. ಯಾವಾಗಲೂ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದರು. ಸತ್ಯಕ್ಕೆ ಬಹಳ ಬೆಲೆ ಕೊಟ್ಟವರು. ಗಾಂಧಿ ವಾದ ಮತ್ತು ಅಹಿಂಸಾ ವಾದ ಕೆಲಸ ಮಾಡುತ್ತಿಲ್ಲ ಎಂಬ ಭಾವನೆ ಇವತ್ತಿನ ಜನಸಾಮಾನ್ಯರಲ್ಲಿ ಇದೆ. ಆದರೆ, ಅದಕ್ಕೆ ಅಪವಾದ ಎಂಬಂತೆ ಅವಕ್ಕೆ ಜಯ ಇದೆ ಎಂಬುದನ್ನು ತೋರಿಸಿಕೊಟ್ಟರು. ಸತ್ಯಾಗ್ರಹಕ್ಕೆ ಬಲ, ಬೆಲೆ ಕೊಟ್ಟವರು ಅವರು. ಸುಖ ಜೀವನ ಮಾಡಬಹುದಿತ್ತು. ಆದರೆ, ಸುಖ ಜೀವನಕ್ಕಿಂತ ತ್ಯಾಗ ಜೀವನವೇ ಶ್ರೇಷ್ಠ ಎಂಬ ಅಚಲವಾದ ಮನೋಭಾವನೆ ಇಟ್ಟುಕೊಂಡವರು. ಸತ್ಯ ಮತ್ತು ಅಹಿಂಸೆ ಅವರ ಜೀವನದ ಸತ್ವಗಳಾಗಿದ್ದವು.


ಬೆಂಗಳೂರು ಕಸದ ಸಮಸ್ಯೆ ಉದ್ಬವವಾದಾಗ ನಾನು ಅವರನ್ನು ಭೇಟಿಯಾಗಿ ಚರ್ಚೆ ನಡೆಸುವಾಗ ಹೇಳಿದರು, "ಕಸದ ಸಮಸ್ಯೆ ದೊಡ್ಡ ಸಮಸ್ಯೆಯಲ್ಲ. ಆ ಸಮಸ್ಯೆ ಉಂಟಾಗಿರುವುದು ಆ ಕಸ ತಿನ್ನುವವರಿಂದ. ಕಸ ತಿನ್ನುವವರು ಇರುವವರೆಗೂ ಕಸದ ಸಮಸ್ಯೆ ಹಾಗೆ ಇರುತ್ತದೆ," ಎಂದು ಹೇಳಿದ್ದರು.


ಅನೇಕ ಹೋರಾಟಗಳಲ್ಲಿ ಅವರು ಭಾಗವಹಿಸಿದ್ದರು. ಕೈಗಾ ಅಣು ಸ್ಥಾವರ ಸ್ಥಾಪನೆ ವಿರುದ್ಧ ಚಳವಳಿ, ಸಾರಾಯಿ ಅಂಗಡಿಗಳ ವಿರುದ್ಧ ಹೋರಾಟ ತೀವ್ರಗೊಳಿಸಿದ್ದರು. ಕುಡಿಯುವ ನೀರಿನ ಬಗ್ಗೆ ಹೋರಾಟದಲ್ಲಿ ಭಾಗವಹಿಸಿದ್ದರು. ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ, ಕರ್ನಾಟಕದಲ್ಲಿ ಸಂಘಟನೆ ಮಾಡಿದ್ದರು. ವಿನೋಬಾ ಭಾವೆ ಅವರ ಭೂ ದಾನ ಚಳವಳಿಯಲ್ಲಿ ಭಾಗವಹಿಸಿದ್ದರು. ಅಣ್ಣಾ ಹಜಾರೆ ಅವರ ಲೋಕಪಾಲ್ ಮಸೂದೆ ಹೋರಾಟ ಬೆಂಬಲಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರಬಲ ಹೋರಾಟ ಮಾಡಿದ್ದರು. ನಮ್ಮಲ್ಲಿ 2014ರಂದು ಭೂಗಳ್ಳರ ಹೋರಾಟದಲ್ಲಿ ಪಾಲ್ಗೊಂಡು ನಮಗೆ ಮಾರ್ಗದರ್ಶನ ನೀಡುತ್ತಿದ್ದರು. 2015ರಲ್ಲಿ ಲೋಕಾಯುಕ್ತದಲ್ಲಿ ನಡೆಯುತ್ತಿದ್ದ ಬ್ರಹ್ಮಾಂಡ ಭ್ರಷ್ಟಾಚಾರ ವಿರುದ್ಧ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದರು. ಹೀಗೆ ಎಲ್ಲ ಹೋರಾಟಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡು ಮಾರ್ಗದರ್ಶನ ನೀಡುತ್ತಿದ್ದ ಸರಳ ಸಜ್ಜನಿಕೆಯ, ನೇರ ನಡೆ-ನುಡಿಯ ಹಿರಿಯ ಚೇತನ ಅವರು. ಭ್ರಷ್ಟರ ವಿರುದ್ಧ ಸಟೆದು ನಿಂತು ಹೋರಾಡುತ್ತಿದ್ದರು.


ಇವರು ಸ್ವಾತಂತ್ರ್ಯ ಹೋರಾಟಗಾರರು ಅಷ್ಟೇ ಅಲ್ಲ, ಸಾರ್ವಜನಿಕ ಜೀವನ, ಸಾಮಾಜಿಕ ಸ್ವಾಸ್ಥ್ಯದ ಬಗ್ಗೆ ಅಪಾರವಾದ ಕಳಕಳಿ ಇಟ್ಟುಕೊಂಡಿದ್ದವರು. ನಮ್ಮ ಇಂದಿನ ಯುವ ಪೀಳಿಗೆಗೆ ಎಚ್ಚೆತ್ತುಕೊಳ್ಳುವ ಸಂದೇಶವನ್ನು ಯಾವಾಗಲೂ ನೀಡುತ್ತಿದ್ದವರು. ಇವತ್ತು ನಾವು ಹಿರಿಯ ಅನೇಕ ನಾಯಕರುಗಳನ್ನು ಪೂಜಿಸುವ ದೇವರುಗಳಾಗಿ ಮಾಡಿಕೊಂಡು ಬಿಟ್ಟೆದ್ದೇವೆ. ಆದರೆ, ಅವರ ಆದರ್ಶಗಳನ್ನು ಪಾಲಿಸುವಂತರಾಗಬೇಕಲ್ಲ. ಆಗ ಮಾತ್ರ ಅವರಿಗೆ ಗೌರವ ಕೊಟ್ಟಂತೆ ಆಗುತ್ತದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ಕೊಡಲಿ ಅಂತ ಪ್ರಾರ್ಥನೆ ಮಾಡುತ್ತೇನೆ.


ಈಗ ಐದು ದಿನದ ಹಿಂದೆ ದೂರವಾಣಿಯಲ್ಲಿ ದೊರೆಸ್ವಾಮಿ ಅವರು ನನ್ನ ಜೊತೆ ಮಾತನಾಡಿದ್ದರು. ಐದು ದಿನದ ಹಿಂದೆಯೇ ಹೇಳಿದ್ದರು, "ರಾಮಸ್ವಾಮಿ ಅವರೇ, ನಾನು ಹೋಗ್ತಾ ಇದೀನಿ. ಆನಂದದಿಂದ ಹೋಗಿ ಬರುತ್ತೇನೆ. ನಿಮ್ಮ ಸ್ಮರಣೆ ಈಗಲೂ ಮಾಡ್ತಿನಿ. ಅಲ್ಲಿಗೆ ನಾನು ಹೋದ ಮೇಲೂ ಮಾಡ್ತಿನಿ," ಅಂತ ಹೇಳಿದಾಗ ನಾನು ಅತ್ಯಂತ ದುಃಖಭರಿತನಾದೆ. ನನ್ನ ಕಣ್ಣುಗಳು ತೆವಗೊಂಡವು. ನೆನ್ನೆ ದಿನ ಕೂಡ "ರಾಮಸ್ವಾಮಿ ಅವರೊಂದಿಗೆ ಮಾತನಾಡಬೇಕು. ಫೋನ್ ಕೊಡಿ," ಅಂತ ರವಿಕೃಷ್ಣಾ ರೆಡ್ಡಿ ಅವರ ಬಳಿ ಹೇಳಿಕೊಂಡಿದ್ದರಂತೆ. ಆಗ ಅವರು, "ಹಿಂದೆ ನೀವು ಮಾತನಾಡಿದ್ದಕ್ಕೆ ಅವರು ತುಂಬಾ ದುಃಖತಪ್ತರಾಗಿದ್ದರು," ಎಂದು ಹೇಳಿದಾಗ "ಬೇಡ ಬೇಡ ಹಾಗಾದರೆ... ಕೊಡಬೇಡ" ಎಂದು ಹೇಳಿದ್ದರಂತೆ. ಹೀಗೆ ನನ್ನ ಬಗ್ಗೆ ಅತ್ಯಂತ ಪ್ರೀತಿ ಇಟ್ಟುಕೊಂಡಿದ್ದರು ಅನ್ನೋದಕ್ಕಿಂತ ಇಡೀ ಸಮಾಜದ ಕೆಳವರ್ಗದ ಜನರಿಗೆ ಅನ್ಯಾಯ ಆದಾಗ ಸ್ಪಂದಿಸುತ್ತಾ ಇದ್ದಾ ದೊಡ್ಡ ವ್ಯಕ್ತಿ. ಅವರು ಯಾವುದಕ್ಕೂ ಆಸೆ ಪಟ್ಟವರಲ್ಲ. ಎಂದೂ ಕೂಡ ಆಸೆ ಪಟ್ಟು ಅದರ ಹಿಂದೆ ಹೋದವರಲ್ಲ. ಅವರು ಆಸೆ ಪಟ್ಟಿದ್ದರೆ ಏನು ಬೇಕಾದರೂ ಆಗಬಹುದಿತ್ತು. ಆದರೆ, ಯಾವುದಕ್ಕೂ ಆಸೆ ಪಡೆದ ಮಹಾನ್ ಚೇತನ, ಮುತ್ಸದ್ಧಿ. ಸಮಾಜಮುಖಿಯಾಗಿ ಕೆಲಸ ಮಾಡಿದವರು. ವಸೂಲಿಬಾಜಿ ಮನೋಭಾವದವರಲ್ಲ. ಅಂತಹ ವ್ಯಕ್ತಿ ಇಂದು ನಮ್ಮಿಂದ ದೂರವಾಗಿರುವುದು ತುಂಬಾ ನೋವಿನ ಸಂಗತಿ.


ಇದನ್ನು ಓದಿ: Freedom Fighter Doreswamy: ಸ್ವಾತಂತ್ರ್ಯ ಚಳುವಳಿಯಿಂದ ಸಮಾಜಮುಖಿ ಹೋರಾಟದವರೆಗೆ ಹೆಚ್​.ಎಸ್. ದೊರೆಸ್ವಾಮಿ ಅವರ ಮೈಲುಗಲ್ಲು!


ಕೊನೆ ದಿನಗಳಲ್ಲಿ ನಾನು ಅವರಿಗೆ ಹೇಳಿದ್ದೆ, "ನಮ್ಮ ಮನೆಗೆ ಬಂದು ಇದ್ದು ಬಿಡಿ," ಎಂದು ಹೇಳಿದ್ದೆ. ಅದಕ್ಕೆ ಅವರು, "ನಾನು ಇಲ್ಲಿ ಬಂದು ಇದ್ದುಬಿಟ್ಟರೆ ಹೋರಾಟಗಳಿಗೆ ಹೋಗುವುದು ಹೇಗೆ," ಎಂದು ಹೇಳುತ್ತಿದ್ದರು. ಮೂರು ಬಾರಿ ನಮ್ಮ ಮನೆಗೆ ಬಂದು ಹೋಗಿದ್ದರು.


39 ದಿನಗಳ ಕಾಲ ನಿರಂತರವಾಗಿ ಪುರಭವನದ ಮುಂದೆ ಭೂಗಳ್ಳರ ವಿರುದ್ಧ  ಚಳವಳಿ ಮಾಡಿದ್ದೆವು. ಅವರು ಒಂದು ದಿನವೂ ತಪ್ಪದೇ ಸಕಾಲದಲ್ಲಿ ಹಾಜರಾಗುತ್ತಿದ್ದರು. ಮಧ್ಯಾಹ್ನ ನಾವು ಜೊತೆಯಲ್ಲಿಯೇ ಕುಳಿತು ಚಿತ್ರಾನ್ನ, ಪುಳಿಯೊಗರೆ ತಿನ್ನುತ್ತಿದ್ದೆವು. ಹೋರಾಟ ಮುಗಿದ ಮೇಲೆ ರಾತ್ರಿ ಮನೆಗೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಒಮ್ಮೆ ನಾನು ಅವರಿಗೆ, "ನಿಮ್ಮ ಆರೋಗ್ಯದ ಗುಟ್ಟೇನು?" ಅಂತ ಪ್ರಶ್ನೆ ಮಾಡಿದ್ದೆ. ಅದಕ್ಕೆ ಅವರು ನಕ್ಕು ಸುಮ್ಮನಾದರೂ. ನಾನು ನಗುತ್ತಲೇ "ಹೇಳಿ ಸಾರ್, ನಿಮ್ಮ ಆರೋಗ್ಯದ ಗುಟ್ಟನ್ನು ನಾವು ಪಾಲನೆ ಮಾಡುತ್ತೇವೆ," ಎಂದು ಮತ್ತೆ ಒತ್ತಾಯಿಸಿದೆ. ಆಗ ಅವರು ಹೇಳಿದರು, "ಬಡತನವೇ ನನ್ನ ಆರೋಗ್ಯದ ಗುಟ್ಟು," ಎಂದು ಹೇಳಿದ ಮಹಾನ್ ವ್ಯಕ್ತಿ ಅವರು.


(ಲೇಖಕರು: ಅರಕಲಗೂಡು ಕ್ಷೇತ್ರದ ಹಾಲಿ ಶಾಸಕರು)


  • ನಿರೂಪಣೆ: ರಮೇಶ್ ಹಂಡ್ರಂಗಿ

Published by:HR Ramesh
First published: