Explained: ಪ್ರಧಾನಿ ಮೋದಿಯ ಸಲಹೆಗಾರರಾಗಿ ನೇಮಕಗೊಂಡ NEP 2020 ಹಿಂದಿನ ಮಾಸ್ಟರ್‌ಮೈಂಡ್‌ ಅಮಿತ್‌ ಖರೆ 

Amit Khare, Advisor to Prime Minister Narendra Modi: ಪ್ರಧಾನ ಮಂತ್ರಿಯ ಸಲಹೆಗಾರರಾಗಿ ಶ್ರೀ ಅಮಿತ್ ಖರೆ, ಐಎಎಸ್ (ನಿವೃತ್ತ) ಅವರನ್ನು ನೇಮಿಸಲು ಸಂಪುಟದ ನೇಮಕಾತಿ ಸಮಿತಿಯು ಅನುಮೋದನೆ ನೀಡಿದೆ

ಅಮಿತ್​​ ಖರೆ, ಪ್ರಧಾನಿ ನರೇಂದ್ರ ಮೋದಿ ಸಾಂದರ್ಭಿಕ ಚಿತ್ರ

ಅಮಿತ್​​ ಖರೆ, ಪ್ರಧಾನಿ ನರೇಂದ್ರ ಮೋದಿ ಸಾಂದರ್ಭಿಕ ಚಿತ್ರ

 • Share this:
  1985ನೇ ಬ್ಯಾಚ್‌ನ ಜಾರ್ಖಂಡ್ ಕೇಡರ್‌ನ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಮಾಜಿ ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಮಾಹಿತಿ ಮತ್ತು ಪ್ರಸಾರ (Information and Broadcasting) ಕಾರ್ಯದರ್ಶಿ ಅಮಿತ್ ಖರೆ ಅವರನ್ನು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರ ಸಲಹೆಗಾರರಾಗಿ ನೇಮಕ ಮಾಡಲಾಗಿದೆ. ಸೆಪ್ಟೆಂಬರ್ 30ರಂದು ಅಮಿತ್‌ ಖರೆ (Amit Khare) ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿ ನಿವೃತ್ತರಾಗಿದ್ದರು.

  ಈ ಸಂಬಂಧ ಕೇಂದ್ರ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. “ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ ಪ್ರಧಾನ ಮಂತ್ರಿಯ ಸಲಹೆಗಾರರಾಗಿ ಶ್ರೀ ಅಮಿತ್ ಖರೆ, ಐಎಎಸ್ (ನಿವೃತ್ತ) ಅವರನ್ನು ನೇಮಿಸಲು ಸಂಪುಟದ ನೇಮಕಾತಿ ಸಮಿತಿಯು ಅನುಮೋದನೆ ನೀಡಿದೆ.’’ ಎಂದು ಆದೇಶ ಹೊರಡಿಸಲಾಗಿದೆ.

  ಅಲ್ಲದೆ, ಎರಡು ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಇವರ ನೇಮಕವಾಗಿದ್ದು, ಭಾರತ ಸರ್ಕಾರದ ಕಾರ್ಯದರ್ಶಿ ಮಟ್ಟದ ಮರು-ನೇಮಕಾತಿ ಅಧಿಕಾರಿಗಳ ಸಂದರ್ಭದಲ್ಲಿ ಮುಂದಿನ ಆದೇಶದವರೆಗೆ ಇದು ಅನ್ವಯವಾಗುತ್ತದೆ ಎಂದು ಅಧಿಕೃತ ಆದೇಶದಲ್ಲಿ ಹೇಳಲಾಗಿದೆ.

  ಇನ್ನು, ಅಮಿತ್‌ ಖರೆ ಅವರನ್ನು ರಾಷ್ಟ್ರೀಯ ಶಿಕ್ಷಣ ನೀತಿ 2020ಯ (National Education Policy 2020) ಹಿಂದಿನ ವ್ಯಕ್ತಿ ಅಥವಾ ಮಾಸ್ಟರ್‌ಮೈಂಡ್‌ ಎಂದು ಕರೆಯಲಾಗುತ್ತದೆ. ಮತ್ತು ಅದನ್ನು ಪ್ರಧಾನಿ ಮೋದಿಯ ನಿರ್ದೇಶನದಲ್ಲಿ ಯಶಸ್ವಿಗೊಳಿಸಿದರು. ಡಿಜಿಟಲ್ ಮಾಧ್ಯಮ ನಿಯಮಾವಳಿಗಳಿಗೆ (Digital Media Rules) ಸಂಬಂಧಿಸಿದಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಲ್ಲಿ ಪ್ರಮುಖ ಬದಲಾವಣೆಗಳನ್ನು ತರುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದರು.

  ಇದನ್ನೂ ಓದಿ: Explainer: ಅರಣ್ಯಗಳನ್ನು ಮರು ವ್ಯಾಖ್ಯಾನಿಸಲು ಮೋದಿ ಸರ್ಕಾರ ಮುಂದಾಗಿದ್ದೇಕೆ..? ಇದಕ್ಕೆ ಆತಂಕವೇಕೆ..? ಇಲ್ಲಿದೆ ವಿವರ..

  ಅಮಿತ್‌ ಖರೆಗೂ ಮುನ್ನ ಮಾಜಿ ಕ್ಯಾಬಿನೆಟ್ ಕಾರ್ಯದರ್ಶಿ ಪಿಕೆ ಸಿನ್ಹಾ ಮತ್ತು ಮಾಜಿ ಕಾರ್ಯದರ್ಶಿ ಅಮರ್‌ಜೀತ್ ಸಿನ್ಹಾ ಪ್ರಧಾನ ಮಂತ್ರಿ ಕಚೇರಿಯಲ್ಲಿ ಪ್ರಧಾನಿ ಮೋದಿಗೆ ಸಲಹೆಗಾರರಾಗಿದ್ದರು.

  ಅಮಿತ್‌ ಖರೆ ಸಾಮರ್ಥ್ಯವು ಸ್ಪಷ್ಟವಾದ ನಿರ್ಧಾರಗಳನ್ನು ಅತ್ಯಂತ ಪಾರದರ್ಶಕತೆಯಿಂದ ತೆಗೆದುಕೊಳ್ಳುವಲ್ಲಿ ಇರುತ್ತದೆ ಎಂದು ಹೇಳಲಾಗಿದೆ. ಪ್ರಧಾನಿ ಮೋದಿ ಅಡಿಯಲ್ಲಿ, ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಉನ್ನತ ಶಿಕ್ಷಣ ಮತ್ತು ಶಾಲೆಗಳ ಇಲಾಖೆಯನ್ನು ಮತ್ತು ಮಾಹಿತಿ ಮತ್ತು ಪ್ರಸಾರ ಇಲಾಖೆ (Information and Broadcasting) ಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದರು.

  ಇದನ್ನೂ ಓದಿ: Explained: ಧೂಮಪಾನಿಗಳು COVID-19 ಕೆಟ್ಟ ಪರಿಣಾಮಗಳಿಂದ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯಿದೆ; ಅಧ್ಯಯನಗಳ ವರದಿ ಇಲ್ಲಿದೆ

  ಅಲ್ಲದೆ, ಈ ಹಿಂದೆ, 1990ರ ಉತ್ತರಾರ್ಧದಲ್ಲಿ ಚೈಬಾಸಾದ ಪಶ್ಚಿಮ ಸಿಂಗ್‌ಭೂಮ್‌ನ ಉಪ ಆಯುಕ್ತರಾಗಿ, ಬಿಹಾರದಲ್ಲಿ ಕುಖ್ಯಾತ "ಮೇವು ಹಗರಣ" ವನ್ನು ಪತ್ತೆಹಚ್ಚಿದ ನಂತರ ಅಮಿತ್‌ ಖರೆ ಖ್ಯಾತಿಗೆ ಏರಿದರು. ಅವರು ರಾಂಚಿ ವಿಶ್ವವಿದ್ಯಾಲಯದ ಉಪಕುಲಪತಿ ಮತ್ತು ಜಾರ್ಖಂಡ್‌ನ ಅಭಿವೃದ್ಧಿ ಆಯುಕ್ತರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.

  ಇದರೊಂದಿಗೆ ಸರ್ಕಾರವು ಜಂಟಿ ಕಾರ್ಯದರ್ಶಿ ಮಟ್ಟದಲ್ಲಿ 13 ಬದಲಾವಣೆಗಳನ್ನು ಮಾಡಿದೆ. ನೇಮಕಗೊಂಡ 13 ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳಲ್ಲಿ, ಎಂಟು ಮಂದಿ 2005 ಬ್ಯಾಚ್‌ನ ಐಎಎಸ್ ಅಧಿಕಾರಿಗಳಾಗಿದ್ದಾರೆ. ಕ್ಯಾಬಿನೆಟ್‌ನ ನೇಮಕಾತಿ ಸಮಿತಿಯಿಂದ ಹೊರಡಿಸಲಾದ ಆದೇಶದ ಪ್ರಕಾರ, ಹಿಮಾಚಲ ಕೇಡರ್‌ನಿಂದ 2005ರ ಬ್ಯಾಚ್‌ನ ಮೀರಾ ಮೊಹಂತಿ ಅವರನ್ನು ಪಿಎಂಒನಲ್ಲಿ ಜಂಟಿ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಹಾಗೂ, ಅದೇ ಬ್ಯಾಚ್‌ನ ಇನ್ನೊಬ್ಬರು ಹಿಮಾಚಲ ಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿ ರಿತೇಶ್ ಚೌಹಾಣ್ ಅವರನ್ನು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಸಿಇಒ ಮತ್ತು ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
  Published by:Sharath Sharma Kalagaru
  First published: