• Home
 • »
 • News
 • »
 • explained
 • »
 • Mahadayi: ಕರ್ನಾಟಕ-ಗೋವಾ ಮಧ್ಯೆ ಮುಗಿಯದ ಮಹದಾಯಿ ವಿವಾದ! ಉಭಯ ರಾಜ್ಯಗಳ ನಡುವಿನ ಜಲಯುದ್ಧಕ್ಕೆ ಕಾರಣವೇನು?

Mahadayi: ಕರ್ನಾಟಕ-ಗೋವಾ ಮಧ್ಯೆ ಮುಗಿಯದ ಮಹದಾಯಿ ವಿವಾದ! ಉಭಯ ರಾಜ್ಯಗಳ ನಡುವಿನ ಜಲಯುದ್ಧಕ್ಕೆ ಕಾರಣವೇನು?

ಮಹದಾಯಿ ನದಿ

ಮಹದಾಯಿ ನದಿ

2002 ರಲ್ಲಿ, ಪ್ರಸ್ತಾವನೆಯಾಗಿ ಎರಡೂವರೆ ದಶಕಗಳ ನಂತರ, ಎಸ್‌ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೇಂದ್ರವು ಯೋಜನೆಗೆ ಸಮ್ಮತಿ ನೀಡಿದ ನಂತರ ಕರ್ನಾಟಕ ಸರ್ಕಾರವು ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿತು. ಈ ಸಮಯದಲ್ಲಿ ಸಿಎಂ ಮನೋಹರ್ ಪರಿಕ್ಕರ್ ನೇತೃತ್ವದಲ್ಲಿ ಗೋವಾ ಸರಕಾರವು ಕೇಂದ್ರವನ್ನು ಸಂಪರ್ಕಿಸಿದ್ದು, ನದಿಯಲ್ಲಿರುವ ನೀರಿನ ಸೌಲಭ್ಯವನ್ನು ಪರಿಶೀಲಿಸಲು ಹಾಗೂ ಮೂರು ಜಲಾನಯನ ರಾಜ್ಯಗಳಾದ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕಕ್ಕೆ ನೀರು ಹಂಚಿಕೆ ಮಾಡುವಂತೆ ಒತ್ತಾಯಿಸಿತು.

ಮುಂದೆ ಓದಿ ...
 • News18 Kannada
 • 4-MIN READ
 • Last Updated :
 • Karnataka, India
 • Share this:

ಮಹದಾಯಿ ನದಿ ನೀರು ಹಂಚಿಕೆ ಪ್ರಕರಣದಲ್ಲಿ ಕರ್ನಾಟಕ ಹಾಗೂ ಗೋವಾ ಸರಕಾರಗಳ ನಡುವಿನ ವಿವಾದ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಮಹದಾಯಿ (Mahadayi) ನದಿ ನೀರು ತಿರುವು ಯೋಜನೆಯೊಂದಿಗೆ ಮುಂದುವರಿಯಲು ಕರ್ನಾಟಕ ಸರಕಾರ ನಿರ್ಧರಿಸಿದ್ದು ಇದು ನೆರೆಯ ಗೋವಾದೊಂದಿಗಿನ ವಿವಾದದ ಕಿಚ್ಚನ್ನು ಇನ್ನಷ್ಟು ಹೆಚ್ಚಿಸಿದೆ. ನದಿಯಲ್ಲಿ ಸುಮಾರು 188 ಟಿಎಂಸಿ ಅಡಿ ನೀರು ಲಭ್ಯವಿರುವುದಾಗಿ ಕರ್ನಾಟಕ ಸರಕಾರ ತಿಳಿಸಿದ್ದು, ಕಳಸಾ-ಬಂಡೂರಿ (Kalasa Banduri Project) ನಾಲಾ ಯೋಜನೆಯ ಭಾಗವಾಗಿ ಮಹದಾಯಿ ನದಿಯಿಂದ ಮಲಪ್ರಭಾ ನದಿ ಜಲಾನಯದ ಪ್ರದೇಶಕ್ಕೆ ಸ್ವಲ್ಪ ನೀರನ್ನು (Water) ತಿರುವು ಮಾಡಲು ಪ್ರಸ್ತಾಪಿಸಿದೆ. ಅದೂ ಅಲ್ಲದೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡಿಸೆಂಬರ್ 30, 2022 ರಂದು ಕಳಸಾ-ಬಂಡೂರಿ ನಾಲಾ ಯೋಜನಾ (Plan) ವರದಿಗಳಿಗೆ ಕೇಂದ್ರದ ಅನುಮತಿ ಪಡೆಯಲಾಗಿದೆ ಎಂದು ವಿಧಾನಸಭೆಗೆ ತಿಳಿಸಿದ್ದರು.


ವಿರೋಧ ವ್ಯಕ್ತಪಡಿಸಿರುವ ಗೋವಾ ಸರಕಾರ


ಈ ಸಮಯದಲ್ಲಿ ಇದಕ್ಕೆ ವಿರೋಧವನ್ನು ವ್ಯಕ್ತಪಡಿಸಿರುವ ಗೋವಾ ಕೆಂಪು ಬಾವುಟ ಹಾರಿಸಿ ಪ್ರತಿರೋಧವನ್ನೊಡ್ಡಿದ್ದು, ಮೋದಿಯವರೊಂದಿಗೆ ಸರ್ವಪಕ್ಷ ಸಭೆ ನಡೆಸುವ ಮೂಲಕ ಜೊತೆಗೆ ಕೇಂದ್ರದ ಇತರ ಸಚಿವರನ್ನು ಭೇಟಿ ಮಾಡುವ ಮೂಲಕ ಯೋಜನೆಗೆ ತಡೆಯೊಡ್ಡುವುದಾಗಿ ತಿಳಿಸಿದೆ.


ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವಿನ ಗಡಿ ವಿವಾದ ಒಂದೆಡೆಯಾದರೆ ಇದೀಗ ಗೋವಾ ಕೂಡ ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ತನ್ನ ಹಳೇ ಜಗಳವನ್ನು ಆರಂಭಿಸಿದೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಹದಾಯಿ ನೀರಿನ ಒಂದೊಂದು ಹನಿಗಾಗಿ ಗೋವಾ ಶತಸಿದ್ಧವಾಗಿ ಹೋರಾಡುತ್ತದೆ ಎಂದು ಗುಡುಗಿದ್ದಾರೆ.


ನದಿ ನೀರು ತಿರುವು ಸಾಧ್ಯವಿಲ್ಲ ಗೋವಾ ಮುಖ್ಯಮಂತ್ರಿ


ಡಿಪಿಆರ್ ಅನುಮೋದನೆಯ ಹೊರತಾಗಿಯೂ, ಕರ್ನಾಟಕವು ಮಹದಾಯಿ ನದಿಯ ನೀರನ್ನು ತೆರುವು ಮಾಡಲು ಸಾಧ್ಯವಿಲ್ಲ ಏಕೆಂದರೆ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 ರ ಪ್ರಕಾರ ಕಳಸಾ ನದಿಯ ನೀರನ್ನು ಯಾವುದೇ ರೀತಿಯಲ್ಲಿ ತಿರುಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.


ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ, ಮಹಾರಾಷ್ಟ್ರದ ಮೂಲಕ ಬಳಸುದಾರಿಯಲ್ಲಿ ಮಾಂಡೋವಿಯಾಗಿ ಗೋವಾ ಪ್ರವೇಶಿಸುವ ಮಹದಾಯಿಯಿಂದ ನೀರನ್ನು ತಿರುಗಿಸುವುದನ್ನು ಗೋವಾ ವಿರೋಧಿಸಿದೆ. ಗೋವಾ ಸರ್ಕಾರವು ಮಹದಾಯಿ ಜಲಾನಯನ ಪ್ರದೇಶ ಮತ್ತು ಗೋವಾದ ಜನರ ಉದ್ದೇಶಕ್ಕಾಗಿ ಸಂಪೂರ್ಣವಾಗಿ ಬದ್ಧವಾಗಿದೆ ಮತ್ತು ಸಮರ್ಪಿತವಾಗಿದೆ ಎಂದು ನಾವು ಭರವಸೆ ನೀಡುತ್ತೇವೆ ಎಂದು ಮುಖ್ಯಮಂತ್ರಿ ಸಾವಂತ್ ತಿಳಿಸಿದ್ದಾರೆ.


ಇದನ್ನೂ ಓದಿ: Vijayanagara: ಉತ್ತರ ಕರ್ನಾಟಕದಲ್ಲಿ ಅಡಿಕೆ ತೋಟದ ನಡುವೆ ಕಾಫಿ ಕೃಷಿ!


ಯೋಜನೆಗೆ ಶೀಘ್ರವೇ ಟೆಂಡರ್ ಕರೆಯಲಾಗುತ್ತದೆ


ಗೋವಾದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇದ್ದು ಈ ಸಮಯದಲ್ಲಿ ಗೋವಾದ ವಿರೋಧ ಪಕ್ಷಗಳು ಮುಖ್ಯಮಂತ್ರಿಯನ್ನು ಟೀಕಿಸಿವೆ ಹಾಗೂ ಮುಖ್ಯಮಂತ್ರಿಗಳು ಗೋವಾದ ಹಿತಾಸಕ್ತಿಯನ್ನು ರಕ್ಷಿಸಲು ವಿಫಲವಾಗಿದ್ದು, ಕರ್ನಾಟಕವನ್ನು ಸಮಾಧಾನಪಡಿಸುವ ಯತ್ನದಲ್ಲಿದ್ದಾರೆ ಎಂದು ಹರಿಹಾಯ್ದಿವೆ.


ಗೋವಾ ಸರಕಾರದ ಪ್ರತಿರೋಧದ ನಡುವೆಯೇ ಯೋಜನೆಗೆ ಶೀಘ್ರವೇ ಟೆಂಡರ್‌ ಕರೆಯಲಾಗುವುದು ಮತ್ತು ಒಂದು ತಿಂಗಳೊಳಗೆ ಕಾಮಗಾರಿ ಆರಂಭಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ್‌ ಕಾರಜೋಲ್ ತಿಳಿಸಿದ್ದಾರೆ.


ಹಾಗಿದ್ದರೆ ಮಹದಾಯಿ ನದಿನೀರು ವಿವಾದ ಕಳಸಾ ಬಂಡೂರಿ ನಾಲಾ ಯೋಜನೆಯ ಕುರಿತು ಮತ್ತಷ್ಟು ಸಮಗ್ರವಾಗಿ ತಿಳಿದುಕೊಳ್ಳೋಣ


ಏನಿದು ಕಳಸಾ-ಬಂಡೂರಿ ನಾಲಾ ಯೋಜನೆ, ವಿವಾದ ಹುಟ್ಟಿಕೊಂಡಿದ್ದೇಕೆ?


ಕಳಸಾ ಬಂಡೂರಿ ನಾಲಾ ಯೋಜನೆಯು ಬೆಳಗಾವಿ, ಧಾರವಾಡ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಲು ಮಹದಾಯಿಯಿಂದ ನೀರನ್ನು ತಿರುಗಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯನ್ನು ಮೊದಲು 1980 ರ ದಶಕದ ಆರಂಭದಲ್ಲಿ ಪ್ರಸ್ತಾಪಿಸಲಾಗಿದ್ದರೂ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ನಡುವಿನ ವಿವಾದದಿಂದಾಗಿ ಕಾರ್ಯರೂಪಕ್ಕೆ ಬರದೆ ಹಾಗೆಯೇ ಉಳಿದಿದೆ.


ಇದನ್ನೂ ಓದಿ: Santro Ravi: ಮಂಡ್ಯದಿಂದ ಓಡಿ ಬಂದ ಕಳ್ಳ ಗೋವಿಂದ! ಮಂಜುನಾಥ ಆಗಿದ್ದವ 'ಸ್ಯಾಂಟ್ರೋ ರವಿ' ಹೇಗಾದ?


ಯೋಜನೆಗಳ ಪ್ರಕಾರ, ಮಹದಾಯಿಯ ಉಪನದಿಗಳಾದ ಕಳಸಾ ಮತ್ತು ಬಂಡೂರಿ ಹೊಳೆಗಳ ವಿರುದ್ಧ ಅಣೆಕಟ್ಟುಗಳನ್ನು ನಿರ್ಮಿಸಬೇಕು ಮತ್ತು ಕರ್ನಾಟಕದ ಬರಡು ಜಿಲ್ಲೆಗಳ ಕಡೆಗೆ ನೀರನ್ನು ತಿರುವು ಮಾಡಿ ಆ ಜಿಲ್ಲೆಗಳ ನೀರಿನ ಕೊರತೆಯನ್ನು ನಿವಾರಿಸುವುದು ಉದ್ದೇಶವಾಗಿದೆ. ಮಹದಾಯಿ ಕರ್ನಾಟಕದ ಬೆಳಗಾವಿ ಜಿಲ್ಲೆಯ ಭೀಮಗಡ ವನ್ಯಜೀವಿ ಅಭಯಾರಣ್ಯದಲ್ಲಿ ಹುಟ್ಟಿ ಗೋವಾದಲ್ಲಿ ಅರಬ್ಬಿ ಸಮುದ್ರಕ್ಕೆ ಹರಿಯುತ್ತದೆ.


ಮೂರು ರಾಜ್ಯಗಳಿಗೆ ನದಿ ನೀರು ಹಂಚಲು ಒತ್ತಾಯ


2002 ರಲ್ಲಿ, ಪ್ರಸ್ತಾವನೆಯಾಗಿ ಎರಡೂವರೆ ದಶಕಗಳ ನಂತರ, ಎಸ್‌ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೇಂದ್ರವು ಯೋಜನೆಗೆ ಸಮ್ಮತಿ ನೀಡಿದ ನಂತರ ಕರ್ನಾಟಕ ಸರ್ಕಾರವು ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿತು. ಈ ಸಮಯದಲ್ಲಿ ಸಿಎಂ ಮನೋಹರ್ ಪರಿಕ್ಕರ್ ನೇತೃತ್ವದಲ್ಲಿ ಗೋವಾ ಸರಕಾರವು ಕೇಂದ್ರವನ್ನು ಸಂಪರ್ಕಿಸಿದ್ದು, ನದಿಯಲ್ಲಿರುವ ನೀರಿನ ಸೌಲಭ್ಯವನ್ನು ಪರಿಶೀಲಿಸಲು ಹಾಗೂ ಮೂರು ಜಲಾನಯನ ರಾಜ್ಯಗಳಾದ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕಕ್ಕೆ ನೀರು ಹಂಚಿಕೆ ಮಾಡುವಂತೆ ಒತ್ತಾಯಿಸಿತು.


ಗೋವಾದಲ್ಲಿ ನಡೆದ ಪ್ರತಿಭಟನೆಗಳಿಂದಾಗಿ ಮತ್ತು ಪರಿಸರ ಹಾನಿಯ ಬಗೆಗಿನ ಮುತುವರ್ಜಿಯಿಂದ ಅಂದಿನ ಎನ್‌ಡಿಎ ಸರಕಾರವು ಯೋಜನೆಯನ್ನು ಸ್ಥಗಿತಗೊಳಿಸಿತು. 2006 ರಲ್ಲಿ ಕರ್ನಾಟಕದ JD(S)-BJP ಸಮ್ಮಿಶ್ರ ಸರ್ಕಾರವು ಯೋಜನೆಯ ಕೆಲಸವನ್ನು ಪ್ರಾರಂಭಿಸಲು ನಿರ್ಧರಿಸಿದಾಗ ವಿವಾದವು ಇನ್ನಷ್ಟು ಕಾವು ಪಡೆಯಿತು.


ಸುಪ್ರೀಂ ಕೋರ್ಟ್‌ಗೆ ಸಮೀಪಿಸಿದ ಗೋವಾ


ಈ ಸಮಯದಲ್ಲಿ ಗೋವಾ ಸರಕಾರವು ನೀರು ಹಂಚಿಕೆ ವಿವಾದವನ್ನು ಪರಿಹರಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿತ್ತು ಕೊನೆಗೆ ಅಂತಿಮವಾಗಿ ನವೆಂಬರ್ 2010 ರಲ್ಲಿ ಯುಪಿಎ ಸರ್ಕಾರವು ನ್ಯಾಯಮಂಡಳಿಯನ್ನು ಸ್ಥಾಪಿಸಿತು.


ನ್ಯಾಯಮಂಡಳಿಯ ತೀರ್ಪು ಏನಾಗಿತ್ತು?


2018 ರಲ್ಲಿ ನ್ಯಾಯಮಂಡಳಿಯು ಮಹದಾಯಿ ನದಿ ಜಲಾನಯನ ಪ್ರದೇಶದಿಂದ ಕರ್ನಾಟಕಕ್ಕೆ 13.42 ಟಿಎಂಸಿ, ಮಹಾರಾಷ್ಟ್ರಕ್ಕೆ 1.33 ಟಿಎಂಸಿ ಮತ್ತು ಗೋವಾಕ್ಕೆ 24 ಟಿಎಂಸಿ ನೀರನ್ನು ನೀಡಿತು. ಕರ್ನಾಟದಕದ ಪಾಲಿಗೆ ದೊರೆತ ನೀರು 5.5 TMC ಕುಡಿಯುವ ನೀರಿನ ಪೂರೈಕೆ ಹಾಗೂ 8.02 TMC ನೀರು ಜಲವಿದ್ಯುತ್ ಉತ್ಪಾದನೆಗೆ ಎಂದು ಹಂಚಿಕೆಯಾಗಿತ್ತು.


ಕಳಸಾ ಬಂಡೂರಿ ಯೋಜನೆ


5.5 ಟಿಎಂಸಿಯಲ್ಲಿ 3.8 ಟಿಎಂಸಿಯನ್ನು ಕಳಸಾ ಮತ್ತು ಬಂಡೂರಿ ನಾಲಾಗಳ ಮೂಲಕ ಮಲಪ್ರಭಾ ಜಲಾನಯನ ಪ್ರದೇಶಕ್ಕೆ ಹರಿಸಬೇಕಿತ್ತು. ಇದನ್ನು ಫೆಬ್ರವರಿ 2020 ರಲ್ಲಿ ಕೇಂದ್ರ ಸರ್ಕಾರವು ಕರ್ನಾಟಕ ಸರಕಾರಕ್ಕೆ ಸೂಚಿಸಿದೆ.


ಸೂಚನೆಯ ನಂತರ ಏನು ಸಂಭವಿಸಿತು?


ನ್ಯಾಯಾಲಯದ ತೀರ್ಪಿನ, ಹಂಚಿಕೆ ಪ್ರಮಾಣವನ್ನು ಪ್ರಶ್ನಿಸಿ ಗೋವಾ ಜುಲೈ 2019 ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ರಜೆ ಅರ್ಜಿಯನ್ನು ಸಲ್ಲಿಸಿತು. ತರುವಾಯ, ಅಕ್ಟೋಬರ್ 2020 ರಲ್ಲಿ, ಕರ್ನಾಟಕವು ಮಹದಾಯಿ ಜಲಾನಯನ ಪ್ರದೇಶದಿಂದ ಅಕ್ರಮವಾಗಿ ನೀರನ್ನು ತಿರುಗಿಸುತ್ತಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ಮುಂದೆ ನಿಂದನೆ ಅರ್ಜಿಯನ್ನು ಸಲ್ಲಿಸಿತು. ವಿವಾದದ ಕುರಿತು ಮಹಾರಾಷ್ಟ್ರದಿಂದ ಸಿವಿಲ್ ಮೇಲ್ಮನವಿಗಳನ್ನು ಸಹ ಸಲ್ಲಿಸಲಾಯಿತು.


MoEF ಅನುಮತಿಗಾಗಿ ಕಾಯುತ್ತಿರುವ ಕರ್ನಾಟಕ


ಈ ಯೋಜನೆಯಿಂದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುವುದು ಕರ್ನಾಟಕದ ನಿವಾಸಿಗಳ ಬಹುಕಾಲದ ಬೇಡಿಕೆಯಾಗಿತ್ತು. ಈ ವರ್ಷ ಅಸೆಂಬ್ಲಿ ಚುನಾವಣೆ ಇರುವುದರಿಂದ, ಎಸ್‌ಸಿಯಲ್ಲಿ ಅರ್ಜಿಗಳು ಬಾಕಿ ಉಳಿದಿದ್ದರೂ, ಕೇಂದ್ರ ಜಲ ಆಯೋಗದಿಂದ (ಸಿಡಬ್ಲ್ಯೂಸಿ) ಅನುಮತಿ ಪಡೆದ ನಂತರ ರಾಜ್ಯ ಸರ್ಕಾರವು ಯೋಜನೆಯನ್ನು ಮುಂದುವರಿಸಲು ನಿರ್ಧರಿಸಿದೆ. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ (MoEF) ಅನುಮತಿಗಾಗಿ ಇನ್ನೂ ಕಾಯಲಾಗುತ್ತಿದೆ.


ಮಹದಾಯಿ ವಿವಾದ ರಾಜಕೀಯವಾಗಿ ಹೇಗೆ ಚರ್ಚೆಯಾಗುತ್ತಿದೆ


ಮಹದಾಯಿ ವಿಷದಯ ಕುರಿತು ತುರ್ತು ಘೋಷಣೆಯನ್ನು ಸರಕಾರವು ಮಾಡಿದ್ದಕ್ಕೆ ಕಾರಣ ಕಾಂಗ್ರೆಸ್ ಪಕ್ಷ ಎಂಬುದಾಗಿ ಹೇಳಿಕೊಂಡಿದ್ದು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಬೆದರಿಕೆಯೊಡ್ಡಿದ್ದು ಈ ಬೆದರಿಕೆಗೆ ಸರಕಾರ ಬಗ್ಗಿದೆ ಎಂದು ಹೇಳಿಕೊಳ್ಳುತ್ತಿದೆ.


ಬಿಜೆಪಿಯು ಪ್ರತಿಯೊಂದು ಸಮಸ್ಯೆಯ ಕುರಿತು ಸುಳ್ಳು ಹೇಳಿಕೆಗಳನ್ನು ನೀಡುತ್ತಿದೆ ಎಂದು ಮೂದಲಿಸಿರುವ ಕಾಂಗ್ರೆಸ್ ಪಕ್ಷ, ದಿನಾಂಕ ರಹಿತವಾಗಿರುವ DPR ಆದೇಶವನ್ನು ಹಂಚಿಕೊಂಡಿದೆ ಎಂದು ತಿಳಿಸಿದೆ. ಬಿಜೆಪಿಯು ಈ ಯೋಜನೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಯತ್ನಿಸುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.


ಮಹಾರಾಷ್ಟ್ರದೊಂದಿಗೆ ನಡೆಯುತ್ತಿರುವ ಗಡಿ ವಿವಾದ


ನ್ಯಾಯಾಲಯದ ವಿವಿಧ ಸಮಸ್ಯೆಗಳ ಹೊರತಾಗಿ ಯೋಜನೆಗೆ MoEF ಅನುಮತಿ ಬಾಕಿ ಉಳಿದಿದೆ ಎಂದು ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ತಿಳಿಸಿದ್ದು, ರಾಜ್ಯ ಸರಕಾರ ಈ ವಿಷಯದಲ್ಲಿ ವಿಳಂಬ ನೀತಿ ಪಾಲಿಸಬಾರದು ಹಾಗೂ ಯೋಜನೆಯನ್ನು ಆದಷ್ಟು ಶೀಘ್ರವೇ ಅನುಷ್ಟಾನಗೊಳಿಸಬೇಕು ಎಂದು ತಿಳಿಸಿದ್ದಾರೆ.


ನದಿ


ಮಹಾರಾಷ್ಟ್ರದೊಂದಿಗೆ ನಡೆಯುತ್ತಿರುವ ಗಡಿ ವಿವಾದದ ಬೆನ್ನಲ್ಲೇ ಇತ್ತೀಚಿನ ಅಂತರರಾಜ್ಯ ವಿವಾದ ಕರ್ನಾಟಕದಲ್ಲಿ ಬಿಜೆಪಿ ಪಕ್ಷಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದೆ. ಗೋವಾ, ಮಹಾರಾಷ್ಟ್ರ, ಕರ್ನಾಟಕ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ವಿವಾದಗಳನ್ನು ಬಗೆಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಪ್ರತಿಪಕ್ಷ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

First published: