• ಹೋಂ
 • »
 • ನ್ಯೂಸ್
 • »
 • Explained
 • »
 • Explained: ಕನ್ನಡಿಗರು ಬೆಳಗೆದ್ದು ನೆನೆಯಲೇ ಬೇಕಾದ ನಾಲ್ವಡಿ ಕೃಷ್ಣರಾಜ ಒಡೆಯರ್, 'ರಾಜರ್ಷಿ' ಹೆಜ್ಜೆ ಗುರುತು ಇಲ್ಲಿದೆ

Explained: ಕನ್ನಡಿಗರು ಬೆಳಗೆದ್ದು ನೆನೆಯಲೇ ಬೇಕಾದ ನಾಲ್ವಡಿ ಕೃಷ್ಣರಾಜ ಒಡೆಯರ್, 'ರಾಜರ್ಷಿ' ಹೆಜ್ಜೆ ಗುರುತು ಇಲ್ಲಿದೆ

ನವ ಮೈಸೂರಿನ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್

ನವ ಮೈಸೂರಿನ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್

ಕನ್ನಡಿಗರು ಬೆಳಗೆದ್ದು ನೆನಸಿಕೊಳ್ಳಲೇ ಬೇಕಾದ ಮಹನೀಯರಲ್ಲಿ, ಪ್ರಾತಃ ಸ್ಮರಣೀಯರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕೂಡ ಒಬ್ಬರು. ಆಧುನಿಕ ಮೈಸೂರಿನ ನಿರ್ಮಾಣಕ್ಕೆ, ಕರುನಾಡ ಅಭಿವೃದ್ಧಿಗೆ ಒಡೆಯರ್ ಕೊಡುಗೆ ಅಪಾರ. ಇಂದು ಅವರ ಜನ್ಮದಿನದ ನಿಮಿತ್ತ ‘ರಾಜರ್ಷಿ’ಯ ಬದುಕು, ಸಾಧನೆ ಒಂದಿಷ್ಟು ಮಾಹಿತಿ ಇಲ್ಲಿದೆ…

ಮುಂದೆ ಓದಿ ...
 • Share this:

ನಾಲ್ವಡಿ ಕೃಷ್ಣರಾಜ ಒಡೆಯರ್ (Nalvadi Krishnaraja Wodeyar) .. ಕನ್ನಡಿಗರೆಲ್ಲರೂ ಎದ್ದು ನಿಂತು ಕೈ ಎತ್ತಿ ಮುಗಿಯಬೇಕಾದ ಹೆಸರು ಇದು. ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರಿನ (Mysuru) ಒಡೆಯರ ಸಂಸ್ಥಾನದ ಪ್ರಸಿದ್ಧ ದೊರೆ. ಮೈಸೂರು ರಾಜ್ಯವನ್ನು (Mysore State) ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದರು ನಾಲ್ವಡಿ ಕೃಷ್ಣರಾಜ ಒಡೆಯರ್. ಜನರು (People) ಅವರನ್ನು ಪ್ರೀತಿಯಿಂದ ಕರೆಯುತ್ತಾ ಇದ್ದುದು ‘ರಾಜರ್ಷಿ’ ಅಂತ. ಒಡೆಯರ್ ಕೊಡುಗೆ ನೀಡದ ಕ್ಷೇತ್ರಗಳೇ ಇಲ್ಲ. ಕೃಷಿ, ಕೈಗಾರಿಕೆ, ನೀರಾವರಿ, ಜಲ ವಿದ್ಯುತ್‌, ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ವಲಯಗಳಲ್ಲಿ ಅಂದಿನ ಮೈಸೂರು ರಾಜ್ಯ ಮುಂಚೂಣಿಯಲ್ಲಿತ್ತು. ಇದರ ಹಿಂದೆ ಇವರ ಕೊಡುಗೆ ಅಪಾರವಾಗಿತ್ತು. ಅಂದು ಬೆಂಗಳೂರು (Bengaluru), ಮೈಸೂರು ನಗರಗಳು (Mysuru City) ಎಲ್ಲರ ಆಕರ್ಷಣೆಯ ಕೇಂದ್ರವಾಗುವಂತೆ ಮಾಡಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್. ಕನ್ನಡಿಗರು (Kannadigas) ಬೆಳಗೆದ್ದು ನೆನಸಿಕೊಳ್ಳಲೇ ಬೇಕಾದ ಮಹನೀಯರಲ್ಲಿ, ಪ್ರಾತಃ ಸ್ಮರಣೀಯರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕೂಡ ಒಬ್ಬರು. ಆಧುನಿಕ ಮೈಸೂರಿನ ನಿರ್ಮಾಣಕ್ಕೆ, ಕರುನಾಡ ಅಭಿವೃದ್ಧಿಗೆ ಒಡೆಯರ್ ಕೊಡುಗೆ ಅಪಾರ. ಇಂದು ಅವರ ಜನ್ಮದಿನದ ನಿಮಿತ್ತ ‘ರಾಜರ್ಷಿ’ಯ ಬದುಕು, ಸಾಧನೆ ಒಂದಿಷ್ಟು ಮಾಹಿತಿ ಇಲ್ಲಿದೆ…


ಬಾಲಕನಾಗಿದ್ದಾಗಲೇ ಸಿಂಹಾಸನ ಏರಿದ ಒಡೆಯರ್


ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹುಟ್ಟಿದ್ದು 1884ರ ಜೂನ್ 4ರಂದು. ತಂದೆ ಚಾಮರಾಜ ಒಡೆಯರ್, ಅವರ ತಾಯಿ ಕೆಂಪನಂಜಮ್ಮಣ್ಣಿಯವರು. 1894ರಲ್ಲಿ ತಂದೆ ಚಾಮರಾಜ ಒಡೆಯರ್ ಅವರ ನಿಧನದಿಂದಾಗಿ ಬಾಲಕ ನಾಲ್ವಡಿ ಕೃಷ್ಣರಾಜ ಅನಿವಾರ್ಯವಾಗಿ ಸಿಂಹಾಸನ ಏರಬೇಕಾಯ್ತು. ಆಗ ಅವರಿಗೆ ಕೇವಲ 10 ವರ್ಷ. ಪೆಬ್ರವರಿ 1, 1895ರಲ್ಲಿ ಯುವರಾಜ ಕೃಷ್ಣರಾಜರಿಗೆ ಪಟ್ಟಾಭಿಷೇಕ ಮಹೋತ್ಸವ ಎಲ್ಲರೂ ಮೆಚ್ಚುವಂತೆ ವೈಭವೋಪೇತವಾಗಿ ನಡೆಯಿತು. ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯ 24ನೇ ರಾಜರು. ಇವರ ಆಳ್ವಿಕೆ 1902 ರಿಂದ 1940ರವರೆಗೆ ನಡೆಯಿತು.


ಮಗನ ಪರವಾಗಿ ಆಡಳಿತ ನೋಡಿಕೊಳ್ಳುತ್ತಿದ್ದ ತಾಯಿ


ನಾಲ್ವಡಿ ಕೃಷ್ಣರಾಜ ಒಡೆಯರು 1895ರಲ್ಲಿ ಪಟ್ಟಾಭಿಷಿಕ್ತರಾದರೂ ಸಹ, ಕೇವಲ 10 ವರ್ಷದ ಬಾಲಕರಾಗಿದ್ದುದರಿಂದ ಆಡಳಿತ ಮಾಡುವುದು ಸಾಧ್ಯವಿರಲಿಲ್ಲ. ಹೀಗಾಗಿ ಅವರ ತಾಯಿಯವರಾದ ಮಹಾರಾಣಿ ಕೆಂಪನಂಜಮ್ಮಣ್ಣಿಯವರು ಆಡಳಿತ ನೋಡಿಕೊಳ್ಳುತ್ತಿದ್ದರು. ರಾಜಕುಮಾರನಿಗೆ ಸೂಕ್ತ ವಿದ್ಯಾಭ್ಯಾಸ , ಆಡಳಿತ ತರಬೇತಿ ಇವುಗಳನ್ನು ಮಹಾರಾಣಿಯವರು ತೀವ್ರ ನಿಗಾ ವಹಿಸಿ ನಡೆಸಿದುದರ ಪರಿಣಾಮವಾಗಿ, ಮೈಸೂರು ರಾಜ್ಯಕ್ಕೆ ಒಬ್ಬ ಸಮರ್ಥ ಆಡಳಿತಗಾರರಾಗಿ ನಾಲ್ವಡಿ ಕೃಷ್ಣರಾಜ ಒಡೆಯರು ದೊರಕಿದರು.


ಇದನ್ನೂ ಓದಿ: Veer Savarkar Jayanti 2022: ಹಿಂದೂಸ್ಥಾನವೂ ಎಂದೂ ಮರೆಯದ 'ವೀರ್‌ ಸಾವರ್ಕರ್‌': ಹೇಗಿತ್ತು ಈ ಕ್ರಾಂತಿಕಾರಿಯ ಜೀವನ?


ಆರಂಭದಿಂದಲೂ ಜನಾನುರಾಗಿಯಾಗಿದ್ದ ಒಡೆಯರ್


1902ರ ಆಗಸ್ಟ್ 8ನೇ ತಾರೀಖಿನಿಂದ ಮೈಸೂರು ರಾಜ್ಯದ ನೇರ ಉಸ್ತುವಾರಿ ಕೃಷ್ಣರಾಜ ಒಡೆಯರ ಸುಪರ್ದಿಗೆ ಬಂದಿತು. ನಾಲ್ವಡಿ ಕೃಷ್ಣರಾಜ ಒಡೆಯರು ಅರಸು ಮನೆತನದಿಂದ ಬಂದವರಾಗಿದ್ದರೂ ಸಹ, ಜನತೆ ಆಡಳಿತದಲ್ಲಿ ಪಾಲ್ಗೊಳ್ಳುವಿಕೆಯ ಪರವಾಗಿದ್ದರು. ಅವರ ಕಾಲದಲ್ಲಿ, ಮೈಸೂರು ರಾಜ್ಯದಲ್ಲಿ ಹೆಸರಿಗೆ ಮಾತ್ರ ಇದ್ದ ‘ಪ್ರಜಾ ಪ್ರತಿನಿಧಿ ಸಭೆ’ಯು ನೂತನ ರೂಪವನ್ನು ಪಡೆದು, ನಿಜವಾದ ಜನ ಪ್ರತಿನಿಧಿ ಸಭೆಯಾಗಿ ಪರಿವರ್ತನೆಯಾಯಿತು. ಇದರ ಜೊತೆಗೆ ‘ನ್ಯಾಯ ವಿಧಾಯಕ’ ಸಭೆಯನ್ನೂ ಸಹ ಸ್ಥಾಪಿಸಲಾಯಿತು. ರಾಜ್ಯದ ಸಣ್ಣ ಸಣ್ಣ ಪಟ್ಟಣಗಳಲ್ಲಿಯೂ ಸಹ ಮುನಿಸಿಪಾಲಿಟಿಗಳು ರಚನೆಯಾದವು. ಹಳ್ಳಿಗಳಲ್ಲಿ ಪ್ರಥಮ ಬಾರಿಗೆ ಗ್ರಾಮ ಪಂಚಾಯಿತಿಗಳು ಕಾರ್ಯ ನಿರ್ವಹಿಸಲು ಆರಂಭ ಮಾಡಿದುದರಿಂದ, ಗ್ರಾಮೀಣ ಪ್ರದೇಶಗಳಲ್ಲಿ ಆಡಳಿತದಲ್ಲಿ ಜನರ ಭಾಗವಹಿಸುವಿಕೆಗೆ ಅಪಾರ ಉತ್ತೇಜನ ನೀಡಲಾಯಿತು .


ಶಿಕ್ಷಣಕ್ಕೆ ಅಪಾರ ಕೊಡುಗೆ


ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪ್ರಮುಖವಾಗಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದರು. ಶಿಕ್ಷಣವೇ ಎಲ್ಲರ ಅಭಿವೃದ್ಧಿಗೂ ಮೂಲ ಎಂದು ಭಾವಿಸಿ, ಶಿಕ್ಷಣಕ್ಕೆ ಹೆಚ್ಚು ಒತ್ತುಕೊಟ್ಟಿದ್ದರು. 1916 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಪ್ರಾರಂಭಿಸಿದರು. ಬೆಂಗಳೂರಿನಲ್ಲಿ ಕೃಷಿ ವಿ.ವಿ ಸ್ಥಾಪಿಸಿದರು. 1911 ರಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭಕ್ಕೆ ಕಾರಣೀಭೂತರಾದರು. ಕಡ್ಡಾಯ ಪ್ರಾಥಮಿಕ ಶಿಕ್ಷಣ ಕಾಯಿದೆ ಜಾರಿ, ವಯಸ್ಕರಿಗಾಗಿ 7000 ವಯಸ್ಕರ ಶಾಲೆ ತೆರೆದರು. ಜೊತೆಗೆ ಅಸ್ಷೃಶ್ಯರ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದರು.


ನೀರಾವರಿಗೆ ಆದ್ಯತೆ


1907ರಲ್ಲಿ ರಲ್ಲಿ ‘ವಾಣೀವಿಲಾಸ ಸಾಗರ’ (ಮಾರಿ ಕಣಿವೆ) ಕಟ್ಟಲ್ಪಟ್ಟಿತು, 1911ರಲ್ಲಿ ಆರಂಭವಾದ ‘ಕೃಷ್ಣರಾಜ ಸಾಗರ’ (KRS) ಭಾರತದ ಮೊಟ್ಟ ಮೊದಲ ಬೃಹತ್ ಜಲಾಶಯ. 1900ರಲ್ಲಿಯೇ ಶಿವನ ಸಮುದ್ರದ ಬಳಿ ಕಾವೇರಿ ನದಿಯಿಂದ ಜಲ ವಿದ್ಯುತ್ ಕೇಂದ್ರ ಆರಂಭವಾಯಿತು, ಇದು ಭಾರತದ ಮೊದಲ ಬೃಹತ್ ಜಲ ವಿದ್ಯುತ್ ಕೇಂದ್ರವಾಗಿದೆ.


ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ


ಅವರ ಕಾಲದಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ 270 ಉಚಿತ ಆಸ್ಪತ್ರೆಗಳು ಕಾರ್ಯಾರಂಭ ಮಾಡಿದವು. ಬೆಂಗಳೂರಿನ ಮಿಂಟೊ ಕಣ್ಣಾಸ್ಪತ್ರೆ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿತ್ತು. ಮೈಸೂರಿನ ಕ್ಷಯರೋಗ ಆಸ್ಪತ್ರೆ ಉತ್ತಮಗೊಂಡಿತು.


ವಾಣಿಜ್ಯ ರಂಗದಲ್ಲೂ ಸಾಧನೆ


ವಾಣಿಜ್ಯ ಕ್ಷೇತ್ರದಲ್ಲಿ ಮೈಸೂರು ಬ್ಯಾಂಕ್ ಖಾಸಗೀ ಸಹಭಾಗಿತ್ವದೊಡನೆ ಕಾರ್ಯಾರಂಭ ಮಾಡಿತು. 1906 ರಲ್ಲಿಯೇ ಸಹಕಾರ ಸಂಘಗಳನ್ನು ಸ್ಥಾಪಿಸಲಾಯಿತು. ರೈತರಿಗಾಗಿ ಜಮೀನು ಅಡಮಾನ ಬ್ಯಾಂಕುಗಳು ಆರಂಭವಾದವು.


ಬೆಂಗಳೂರು, ಮೈಸೂರಿನ ಅಭಿವೃದ್ಧಿಗೆ ಕೊಡುಗೆ


ಮೈಸೂರು ಬೆಂಗಳೂರು ಪ್ರದೇಶಗಳಂತಹ ನಗರಗಳಲ್ಲಿ ರಚಿತವಾದ ಶ್ರೇಷ್ಠ ಕಟ್ಟಡಗಳು, ರಸ್ತೆಗಳು, ವಿದ್ಯುತ್ ದೀಪಗಳು, ಉದ್ಯಾನವನಗಳು, ಜಲ ಕಾರಂಜಿಗಳು, ವಿಹಾರಿ ಧಾಮಗಳು, ಶ್ರೇಷ್ಠ ವಿದ್ಯಾ ಸಂಸ್ಥೆಗಳು, ವಿದ್ಯಾರ್ಥಿ ನಿಲಯಗಳು, ಅನಾಥಾಶ್ರಮಗಳು, ಛತ್ರಗಳು, ಶುಲ್ಕ ವಿಧಿಸದೆ ಉತ್ತಮ ಸೇವೆ ನೀಡುತ್ತಿದ್ದ ಆಸ್ಪತ್ರೆಗಳು, ಶುಶ್ರೂಷಾ ಧಾಮಗಳು, ಸಂಪರ್ಕ ವ್ಯವಸ್ಥೆಗಳು, ಪ್ರಯಾಣ ಸೌಲಭ್ಯಗಳು ಬಹುಷಃ ಇಷ್ಟು ಶ್ರೇಷ್ಠ ಮಟ್ಟದಲ್ಲಿದ್ದುದು ನಾಲ್ವಡಿ ಕೃಷ್ಣ ರಾಜ ಒಡೆಯರ್ ಕಾಲದಲ್ಲಿ.  ಈ ಪ್ರಾಂತ್ಯದಲ್ಲಿದ್ದ ಸರ್ವ ಭಾಷಿಗರ ಸಮನ್ವಯ, ಸರ್ವ ಧರ್ಮೀಯರ ಸಮನ್ವಯ, ಎಲ್ಲಾ ವರ್ಗದವರ ಹಿತಕಾಯುವ ಮನೋಭಾವ ಇತ್ಯಾದಿಗಳು ಸಾರ್ವಕಾಲಿಕವಾಗಿ ಮಹೋನ್ನತವಾದ ಗಳಿಗೆಗಳು.  ಈ ಸಂಸ್ಥಾನದಲ್ಲಿ ಕಲೆ, ಸಂಗೀತ, ಸಾಹಿತ್ಯ ಮತ್ತು ಸಂಸ್ಕೃತಿಗಳ ಪೋಷಣೆ ಅದ್ವಿತೀಯವಾಗಿತ್ತು.


ಉದ್ಯಮಕ್ಕೆ ಅಪಾರ ಕೊಡುಗೆ


ಸಹಕಾರಿ ಕಾರ್ಮಿಕ ಪರಿಹಾರ ಕಾಯ್ದೆ, ಮೈಸೂರು ಗ್ರಾಮ ನ್ಯಾಯಾಲಯ ಕಾಯ್ದೆ, ಗ್ರಾಮ ಪಂಚಾಯ್ತಿಗಳ ಕಾಯ್ದೆಯನ್ನು ನಾಲ್ವಡಿಯವರ ಕಾಲದಲ್ಲಿ ಜಾರಿಗೆ ತರಲಾಯ್ತು. ಭದ್ರಾವತಿಯ ಮೈಸೂರು ಕಬ್ಬಿಣದ ಕಾರ್ಖಾನೆ, ಬೆಂಗಳೂರಿನ ಸಾಬೂನು ಕಾರ್ಖಾನೆ, ಮೈಸೂರಿನ ಗಂಧದೆಣ್ಣೆ ಕಾರ್ಖಾನೆ, ಸಿಮೆಂಟ್ ಕಾರ್ಖಾನೆ, ಮಂಡ್ಯದಲ್ಲಿ ಮೈಸೂರು ಸಕ್ಕರೆ ಕಂಪನಿ, ಮೈಸೂರು ಪೇಪರ್ ಮಿಲ್, ಮಂಗಳೂರು ಹೆಂಚು ಕಾರ್ಖಾನೆ, ಷಹಬಾದಿನ ಸಿಮೆಂಟ್ ಕಾರ್ಖಾನೆ, ಮೈಸೂರಿನ ಅರಗು ಮತ್ತು ಬಣ್ಣದ ಕಾರ್ಖಾನೆ, ಕೊಡಗಿನ ಕಾಫಿ ಸಂಶೋಧನಾ ಕೇಂದ್ರಗಳು ಇವರ ಕಾಲದಲ್ಲಿಯೇ ಪ್ರಾರಂಭಗೊಂಡವು.


ಮಹನೀಯರ ಕಣ್ಣಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್


ಡಿ.ವಿ.ಜಿಯವರು "ನನ್ನ ತಿಳುವಳಿಕೆಯಲ್ಲಿ 1881 ರಿಂದ 1940ರ ಅವಧಿಯ ವರ್ಷಗಳು ಮೈಸೂರಿನ ಸುವರ್ಣ ಯುಗ" ಎಂದು ಹೇಳಿದರೆ ಉತ್ಪ್ರೇಕ್ಷೆಯಾಗಲಾರದು ಎಂದಿದ್ದಾರೆ. ಇನ್ನು ಇಂಗ್ಲೆಂಡಿನ ಗ್ರಾಫಿಕ್ ಪತ್ರಿಕೆ, ಮಾದರಿ ಸಂಸ್ಥಾನ ಎಂಬ ಹೆಮ್ಮೆಯ ಹೆಸರಿಗೆ ಮತ್ತ್ಯಾವ ಭಾರತೀಯ ಸಂಸ್ಥಾನಕ್ಕೂ ಆ ಅರ್ಹತೆ ಇಲ್ಲ ಅಂತ ಬರೆದಿದೆ. ಮತ್ತೊಂದೆಡೆ ಎನ್‍ಸೈಕ್ಲೋಪಿಡಿಯಾ ಬ್ರಿಟಾನಿಕಾದ ಬೃಹತ್ ಕೃತಿಯಲ್ಲಿ-ಭಾರತ ಖಂಡದಲ್ಲಿ ಅತ್ಯಂತ ಹೆಚ್ಚಿನ ಪ್ರಗತಿಯನ್ನು ಮುಂದುವರೆಸುತ್ತಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ನ್ಯಾಯವಾದ ಅರ್ಹತೆಯನ್ನು ಪಡೆದಿರುವ ಮೈಸೂರು ಮಾದರಿ ಸಂಸ್ಥಾನವಾಗಿದೆ ಅಂತ ಹಾಡಿ ಹೊಗಳಿದೆ.


1940ರಲ್ಲಿ ಒಡೆಯರ್ ಯುಗಾಂತ್ಯ


ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 38 ವರ್ಷಗಳ ಕಾಲ ದಕ್ಷ ಆಡಳಿತ ನಡೆಸಿ ಪ್ರಜೆಗಳಿಂದ "ರಾಜರ್ಷಿ" ಬಿರುದು ಪಡೆದರು. ತಮ್ಮ ಸಂಸ್ಥಾನದ ಏಳಿಗೆಗಾಗಿ, ತಮ್ಮ ಪ್ರಜೆಗಳ ನೆಮ್ಮದಿ ಬದುಕಿಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟರು. ಸಾಮಾಜಿಕ ಪರಿವರ್ತನೆಯ ರೂವಾರಿಯಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆಗಸ್ಟ್ 3, 1940ರಂದು ತಮ್ಮ ಇಹಲೋಕದ ಯಾತ್ರೆ ಮುಗಿಸಿದರು.


ಇದನ್ನೂ ಓದಿ: Explained: ಮೆಟ್ ಗಾಲಾದಲ್ಲಿ ಈ ‘ಎಮ್ಮ’ ಧರಿಸಿದ್ದು ಯಾರ ನೆಕ್ಲೆಸ್? ಏನಿದು ಅಮೂಲ್ಯ ವಜ್ರದ ಕಥೆ?


ಜನರ ಬಾಯಲ್ಲಿ ಪ್ರೀತಿಯಿಂದ ರಾಜರ್ಷಿಯಾದ ಒಡೆಯರ್


ಇಷ್ಟೆಲ್ಲಾ ಕೊಡುಗೆ ನೀಡಿ, ಜನರ ಅಭಿವೃದ್ಧಿಗೆ ಕಾರಣರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ತಾವೆಂದೂ ರಾಜನೆಂದು ಮೆರೆಯಲೇ ಇಲ್ಲ. ಹೀಗಾಗಿ ಅವರನ್ನು ಜನರು ಒಡೆಯ ಅಂತ ಕರೆದರು, ರಾಜರ್ಷಿ ಅಂತ ಗೌರವಿಸಿದರು. ಐತಿಹಾಸ ಅವರನ್ನು ಆಧುನಿಕ ಮೈಸೂರಿನ  ನಿರ್ಮಾತೃ, ಆಧುನಿಕ ಕರ್ನಾಟಕದ ರೂವಾರಿ ಅಂತಲೇ ಗುರುತಿಸುತ್ತದೆ. ಇಂತಹ ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ನಡಿಗರ ಮನಸ್ಸಲ್ಲಿ ಎಂದೆಂದಿಗೂ ಅಮರ

top videos


  (ಮಾಹಿತಿ: ವಿವಿಧ ಮೂಲಗಳಿಂದ)

  First published: