ಈಗಾಗಲೇ ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ (Nupur Sharma) ಟಿವಿ ಚರ್ಚೆಯೊಂದರಲ್ಲಿ ಪ್ರವಾದಿಯವರ ಬಗ್ಗೆ ವಿವಾದಾತ್ಮಕ ಹೇಳಿಕೆ (controversial statement) ನೀಡಿ ಅದು ಮುಂದೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದು ದೇಶಾದ್ಯಂತ ಹಲವು ಪ್ರತಿಭಟನೆಗಳುಂಟಾಗುವಂತೆ ಮಾಡಿದ್ದು ಎಲ್ಲರಿಗೂ ಗೊತ್ತೆ ಇದೆ. ಆ ಸಂಬಂಧ ನುಪುರ್ ಅವರ ಹೇಟ್ ಸ್ಪೀಚ್ ಅನ್ನು (Hate Speech) ಖಂಡಿಸಿ ದೇಶಾದ್ಯಂತ ಹಲವಾರು ಸ್ಥಳಗಳಲ್ಲಿ ಅವರ ವಿರುದ್ಧ ದೂರುಗಳನ್ನು ದಾಖಲಿಸಲಾಗಿರುವುದು ಸಹ ಸತ್ಯವಾದ ಮಾತೇ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ನುಪುರ್ ಅವರು ತಮ್ಮ ವಿರುದ್ಧ ದಾಖಲಾದ ಎಲ್ಲ ಹೇಟ್ ಸ್ಪೀಚ್ ಪ್ರಕರಣಗಳನ್ನು ಕ್ಲಬ್ ಮಾಡುವಂತೆ ಕೋರಿ ಸರ್ವೋಚ್ಛ ನ್ಯಾಯಾಲಯಕ್ಕೆ (Supreme Court) ಅರ್ಜಿ ಸಲ್ಲಿಸಿದ್ದರು. ಇದೀಗ ಆ ಅರ್ಜಿಯನ್ನು ಸುಪ್ರೀಮ್ ಕೋರ್ಟ್ ತಿರಸ್ಕರಿಸಿದೆ.
ನುಪುರ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ತೀರ್ಪನ್ನು ನೀಡಲು ನಿರಾಕರಿಸಿದ ನ್ಯಾ. ಸೂರ್ಯಕಾಂತ್ ಹಾಗೂ ನ್ಯಾ. ಜೆ ಬಿ ಪರ್ದಿವಾಲಾ ಅವರಿದ್ದ ದ್ವಿಸದಸ್ಯ ಪೀಠವು ನುಪುರ್ ಅವರು ನೀಡಿದ್ದಂತಹ ಹೇಳಿಕೆಯ ಮೇಲೆ ಹರಿಹಾಯ್ದಿದೆ.
ನುಪುರ್ ಅವರ ಅರ್ಜಿ ಏನಾಗಿತ್ತು?
ಮೇ ಕೊನೆಯ ವಾರದಂದು ಹಲವು ಟಿವಿ ಚರ್ಚಾಗೋಷ್ಠಿಗಳಲ್ಲಿ ಬಿಜೆಪಿ ವಕ್ತಾರೆಯಾಗಿ ಭಾಗವಹಿಸಿದ್ದ ನುಪುರ್ ಶರ್ಮಾ ಅವರು ಮುಸ್ಲಿಮರು ಹಾಗೂ ಆ ಧರ್ಮದ ಪ್ರವಾದಿ ಅವರ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ಇದಾದ ತರುವಾಯ ಅವರ ಹೇಳಿಕೆಯನ್ನು ಖಂಡಿಸಿ ದೇಶಾದ್ಯಂತ ಹಲವು ಕಡೆಗಳಲ್ಲಿ ಉದ್ವಿಘ್ನ ಪರಿಸ್ಥಿತಿ ಉಂಟಾಯಿತು ಹಾಗೂ ವಿವಾದ ಹುಟ್ಟಿಕೊಂಡಿತು. ಏತನ್ಮಧ್ಯೆ ಬಿಜೆಪಿ ಪಕ್ಷವು ಕೂಡಲೆ ಅವರ ಮೇಲೆ ಕ್ರಮ ಕೈಗೊಂಡು ಅವರನ್ನು ಪಕ್ಷದ ವಕ್ತಾರೆಯ ಸ್ಥಾನದಿಂದ ಪದಚ್ಯುತಿಗೊಳಿಸಿತು ಹಾಗೂ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸುತ್ತ ಕ್ಷಮೆ ಕೋರಿ ತಮ್ಮೆಲ್ಲ ಹೇಳಿಕೆಯನ್ನು ಹಿಂಪಡೆಯುತ್ತಿರುವುದಾಗಿ ನೂಪುರ್ ಅವರು ಸ್ವತಃ ಹೇಳಿದರು.
ಆದಾಗ್ಯೂ, ದೇಶದ ದೆಹಲಿ, ಮುಂಬೈ, ಪಶ್ಚಿಮ ಬಂಗಾಳ, ಅಸ್ಸಾಂ ಸೇರಿದಂತೆ ಹಲವೆಡೆಗಳಲ್ಲಿ ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಯಿತು. ಹೀಗೆ ಎಲ್ಲೆಡೆ ದಾಖಲಾದ ಪ್ರಕರಣಗಳನ್ನು ಕ್ಲಬ್ ಮಾಡಿ ದೆಹಲಿಯೊಂದರಲ್ಲೇ ನಡೆಸಬೇಕೆಂದು ಕೋರಿ ನೂಪುರ್ ಶರ್ಮಾ ಅವರು ಸರ್ವೋಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಸರ್ವೋಚ್ಛ ನ್ಯಾಯಾಲಯ ಹೇಳಿದ್ದೇನು?
ಅವರ ಅರ್ಜಿಯನ್ನು ಆಲಿಸಿದ ಮಾನ್ಯ ಸರ್ವೋಚ್ಛ ನ್ಯಾಯಾಲಯವು ಈ ಬಗ್ಗೆ ಮಧ್ಯಂತರ ಆದೇಶವನ್ನು ನೀಡಲು ನಿರಾಕರಿಸಿದ್ದಲ್ಲದೆ ಈ ಕುರಿತು ಉಚ್ಛ ನ್ಯಾಯಾಲಯದ ಮೊರೆ ಹೋಗುವಂತೆ ಹೇಳಿತು. ಈ ಮಧ್ಯೆ ನೂಪುರ್ ಅವರು ನೀಡಿದ್ದ ಹೇಳಿಕೆಗಳ ಬಗ್ಗೆ ಸುಪ್ರೀಮ್ ನ್ಯಾಯಾಲಯ ತನ್ನ ಅಸಮ್ಮತಿ ವ್ಯಕ್ತಪಡಿಸುತ್ತ ಇದನ್ನು "ಅಜವಾಬ್ದಾರಿಯುತ" ಎಂದು ಅಭಿಪ್ರಾಯಪಟ್ಟಿತು.
ಇದನ್ನೂ ಓದಿ: Kullu Accident: ಶಿಮ್ಲಾ ಬಳಿ ಪ್ರಪಾತಕ್ಕೆ ಉರುಳಿದ ಶಾಲಾ ಮಕ್ಕಳಿದ್ದ ಬಸ್; 9ಕ್ಕೂ ಹೆಚ್ಚು ಸಾವು!
"ದೇಶಾದ್ಯಂತ ಜನರ ಭಾವನೆಗಳಿಗೆ ಯಾವ ರೀತಿ ಕಿಚ್ಚು ಹಚ್ಚಲಾಗಿದೆ ಎಂಬುದನ್ನು ನೋಡಿದರೆ ಈ ಎಲ್ಲ ನಡೆಯುತ್ತಿರುವ ವಿದ್ಯಮಾನಗಳಿಗೆ ಈ ಮಹಿಳೆಯೊಬ್ಬಳೇ ಕಾರಣಕರ್ತರಾಗಿದ್ದಾರೆ" ಎಂದು ಹೇಳುವ ಮೂಲಕ ನ್ಯಾ. ಸೂರ್ಯ ಕಾಂತ್ ಅವರು ತಮ್ಮ ಆಕ್ರೋಶವನ್ನು ಹೊರಹಾಕಿದರು.
ಯಾವ ಆಧಾರದ ಮೇಲೆ ಈ ರೀತಿ ಪ್ರಕರಣಗಳನ್ನು ಕ್ಲಬ್ ಮಾಡಬಹುದು?
ವ್ಯಕ್ತಿಯೊಬ್ಬರನ್ನು ಒಂದೇ ರೀತಿಯ ಅಪರಾಧದ ಮೇಲೆ ಒಂದಕ್ಕಿಂತ ಹೆಚ್ಚು ಬಾರಿ ವಿಚಾರಣೆ ಮಾಡಲಾಗದು. ಸಂವಿಧಾನದ ಅನುಚ್ಛೇದ 20(2) ಈ ಕುರಿತು ವ್ಯಕ್ತಿಗೆ ಏಕ ರೀತಿಯ ಅಪರಾಧಕ್ಕೆ ಸಂಬಂಧಿಸಿದಂತೆ ಒಂದಕ್ಕಿಂತ ಹೆಚ್ಚು ಬಾರಿ ವಿಚಾರಣೆ ಎದುರಿಸದಂತೆ ಖಾತರಿ ನೀಡುತ್ತದೆ.
ಒಂದೇ ಒಂದು ಘಟನೆ ಅಥವಾ ಅಪರಾಧಕ್ಕೆ ಸಂಬಂಧಿಸಿದಂತೆ ಹಲವು ಕಡೆಗಳಲ್ಲಿ ಎಫ್ ಐಆರ್ ದಾಖಲಾದರೆ ಅದು ಎಲ್ಲೆಲ್ಲಿ ಎಷ್ಟು ಎಫೈಆರ್ ದಾಖಲಾಗಿವೆಯೋ ಅಷ್ಟು ಬಾರಿ ವಿಚಾರಣೆ ಎಂಬುದನ್ನು ಸೂಚಿಸುತ್ತದೆ. ಹೀಗೆ ಒಂದೇ ಅಪರಾಧಕ್ಕೆ ಸಂಬಂಧಿಸಿದಂತೆ ಹೆಚ್ಚು ಹೆಚ್ಚು ವಿಚಾರಣೆ ಅನುಭವಿಸುವುದನ್ನು ತಡೆಯುವ ನಿಟ್ಟಿನಲ್ಲಿ ವ್ಯಕ್ತಿ ಸುಪ್ರೀಮ್ ನ್ಯಾಯಾಲಯಕ್ಕೆ ಮೊರೆ ಹೋಗಿ ಆ ಎಲ್ಲ ಪ್ರಕರಣಗಳನ್ನು ಕೇವಲ ಒಂದೆಡೆಯಷ್ಟೆ ವಿಚಾರಣೆ ಎದುರಿಸಲು ಅನುಕೂಲವಾಗುವಂತೆ ಕ್ಲಬ್ ಮಾಡುವ ಬಗ್ಗೆ ಅರ್ಜಿ ಸಲ್ಲಿಸಿ ಕೋರಬಹುದಾಗಿದೆ.
ಈ ಬಗ್ಗೆ ಸುಪ್ರೀಂ ಕೋರ್ಟ್ ಏನು ಹೇಳಿದೆ
ಟಿ ಟಿ ಅಂಥೋನಿ ವರ್ಸಸ್ ಕೇರಳ ರಾಜ್ಯದ, 2001 ರ ತೀರ್ಪಿನಲ್ಲಿ, ಈ ವಿಷಯಕ್ಕೆ ಸಂಬಂಧಿಸಿದಂತೆ "ಎರಡನೇ ಎಫ್ಐಆರ್" ಇರುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿರುವುದನ್ನು ಇಲ್ಲಿ ಗಮನಿಸಬಹುದು.
ಈ ಸಂದರ್ಭದಲ್ಲಿ ನ್ಯಾಯಾಲಯವು "ಎರಡನೇ ಎಫ್.ಐ.ಆರ್ ಇರುವಂತಿಲ್ಲ. ಒಂದು ಅಥವಾ ಹೆಚ್ಚು ಬಾರಿ ವಿಚಾರಣೆಗೆ ಒಳಪಡಲು ಕಾರಣವಾಗುವ ಅದೇ ಅಪರಾಧ ಅಥವಾ ಘಟನೆಗೆ ಸಂಬಂಧಿಸಿದಂತೆ ಪ್ರತಿ ಬಾರಿ ಪ್ರಕರಣ ಸ್ವೀಕೃತಿಯ ಮೇಲೆ ಯಾವುದೇ ಹೊಸ ತನಿಖೆ ಇರುವುದಿಲ್ಲ. ಕಾಗ್ನಿಜೇಬಲ್ ಅಪರಾಧ ಅಥವಾ ಅಪರಾಧಕ್ಕೆ ಕಾರಣವಾಗುವ ಘಟನೆಯ ಬಗ್ಗೆ ಎಫ್.ಐ.ಆರ್ ದಾಖಲಿಸುವಾಗ ಸ್ಟೇಷನ್ ಹೌಸ್ ಡೈರಿಯಲ್ಲಿ, ಆ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಯು ಕೇವಲ ಎಫ್‌ಐಆರ್‌ನಲ್ಲಿ ವರದಿ ಮಾಡಲಾದ ಕಾಗ್ನಿಜಬಲ್ ಅಪರಾಧವನ್ನು ಮಾತ್ರವಲ್ಲದೆ ಅದೇ ಘಟನೆಯ ಸಂದರ್ಭದಲ್ಲಿ ಎಸಗಿರುವ ಇತರ ಸಂಬಂಧಿತ ಅಪರಾಧಗಳ ಬಗ್ಗೆಯೂ ತನಿಖೆ ನಡೆಸಿ ಒಂದನ್ನು ಅಥವಾ ಹೆಚ್ಚಿನ ಪ್ರಕರಣಗಳನ್ನು ಸಿಆರ್ಪಿಸಿ ಸೆಕ್ಷನ್ 173 ರಲ್ಲಿ ಉಲ್ಲೇಖಿಸಿದಂತೆ ದಾಖಲಿಸಬೇಕು” ಎಂದು ಹೇಳಿತ್ತು.
ಇದನ್ನೂ ಓದಿ: Viral Video: ಮೊಸಳೆ ಜೊತೆ ಮೇಯರ್ ಮದುವೆ! ಅದ್ಧೂರಿ ಕಲ್ಯಾಣೋತ್ಸವಕ್ಕೆ ಸಾಕ್ಷಿಯಾದ ಜನ
ಇನ್ನು 2020ರ ಅರ್ನಬ್ ಗೋಸ್ವಾಮಿ ವರ್ಸಸ್ ಯುನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಇದೇ ತೀರ್ಪನ್ನು ನೀಡುವ ಮೂಲಕ ಒಂದೇ ರೀತಿಯ ಅಪರಾಧದ ಮೇಲೆ ವಿವಿಧ ನ್ಯಾಯಾಲಯ ವ್ಯಾಪ್ತಿಗಳಲ್ಲಿ ದಾಖಲಾಗುವ ಎಫ್.ಐ.ಆರ್ ಗಳು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯ ಪಟ್ಟಿತ್ತು. "ಒಂದೇ ಕಾರಣದ ಆಧಾರದ ಮೇಲೆ ವಿವಿಧ ನ್ಯಾಯವ್ಯಾಪ್ತಿಯಲ್ಲಿ ಉದ್ಭವಿಸುವ ಹಲವಾರು ಪ್ರಕ್ರಿಯೆಗಳಿಗೆ ವ್ಯಕ್ತಿಯನ್ನು ಒಳಪಡಿಸುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ" ಎಂದು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ಆ ಸಂದರ್ಭದಲ್ಲಿ ಹೇಳಿತ್ತು.
ಇಂತಹ ಪರಿಸ್ಥಿತಿಯಲ್ಲಿ ಅರ್ಜಿದಾರರು ಸುಪ್ರೀಂ ಕೋರ್ಟ್‌ನ ಮೊರೆ ಹೋಗಬಹುದು ಎಂದು ನ್ಯಾಯಾಲಯ ಹೇಳಿದೆ. "ಮೂಲಭೂತ ಹಕ್ಕುಗಳ ಮೇಲಿನ ಯಾವುದೇ ಸಮಂಜಸವಾದ ನಿರ್ಬಂಧವು ಅನುಪಾತದ ಮಾನದಂಡದೊಂದಿಗೆ ಹೊಂದಾಣಿಕೆಯಾಗಬೇಕು ಎಂದು ದೃಢವಾಗಿ ಸ್ಥಾಪಿಸಲ್ಪಟ್ಟಿದ್ದು, ಅದರಲ್ಲಿ ಒಂದು ಅಂಶವೆಂದರೆ ಅಳವಡಿಸಿಕೊಂಡ ಅಳತೆಯು ಕನಿಷ್ಠವಾಗಿರಬೇಕು. ಒಂದೇ ಕಾರಣದ ಆಧಾರದ ಮೇಲೆ ವಿವಿಧ ನ್ಯಾಯವ್ಯಾಪ್ತಿಯಲ್ಲಿ ಉದ್ಭವಿಸುವ ಹಲವಾರು ಪ್ರಕ್ರಿಯೆಗಳಿಗೆ ವ್ಯಕ್ತಿಯನ್ನು ಒಳಪಡಿಸುವುದು ಅಪರಾಧದ ವಿಚಾರಣೆಯಲ್ಲಿ ನ್ಯಾಯಸಮ್ಮತವಾದ ರಾಜ್ಯದ ಗುರಿಯನ್ನು ಸಾಧಿಸುವ ಕನಿಷ್ಠ ನಿರ್ಬಂಧಿತ ಮತ್ತು ಪರಿಣಾಮಕಾರಿ ವಿಧಾನವೆಂದು ಒಪ್ಪಿಕೊಳ್ಳಲಾಗುವುದಿಲ್ಲ, ”ಎಂದು ನ್ಯಾಯಾಲಯ ಹೇಳಿತ್ತು.
ನೂಪುರ್ ಶರ್ಮಾ ಅವರ ಮನವಿಯನ್ನು ಸುಪ್ರೀಂ ಕೋರ್ಟ್ ಏಕೆ ನಿರಾಕರಿಸಿತು?
ಸರ್ವೋಚ್ಛ ನ್ಯಾಯಾಲಯದ ರಜಾಕಾಲದ ಪೀಠವು ಶರ್ಮಾ ಅವರ ಪ್ರಕರಣವನ್ನು ಅರ್ನಾಬ್ ಗೋಸ್ವಾಮಿ ಪ್ರಕರಣದ ಪೂರ್ವನಿದರ್ಶನದಿಂದ ಪ್ರತ್ಯೇಕಿಸಿತು. ಗೋಸ್ವಾಮಿ ಅವರು ಪತ್ರಕರ್ತರಾಗಿದ್ದರಿಂದ ನ್ಯಾಯಾಲಯವು ಅವರಿಗೆ ಪರಿಹಾರವನ್ನು ನೀಡಿದೆ ಮತ್ತು ಪಕ್ಷದ ವಕ್ತಾರರಾಗಿದ್ದ ನೂಪುರ್ ಶರ್ಮಾ ಅವರಿಗೆ ಅದೇ ಸ್ಥಾನಮಾನವನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ಅದು ಸೂಚಿಸಿದೆ.
ಇದನ್ನೂ ಓದಿ: Nupur Sharma: ಪ್ರಧಾನಿ ಮೋದಿ ಅರಬ್ ಎಮಿರೇಟ್ಸ್ ಭೇಟಿಯಿಂದ ನೂಪುರ್ ಶರ್ಮಾ ವಿವಾದ ತಣ್ಣಗಾಯಿತೇ?
ಗೋಸ್ವಾಮಿ ಪ್ರಕರಣದಲ್ಲಿ ಎಸ್‌ಸಿ ಪತ್ರಿಕಾ ಸ್ವಾತಂತ್ರ್ಯವನ್ನು ಒತ್ತಿಹೇಳಿದರೂ, ಸಂವಿಧಾನವು ಎಲ್ಲಾ ನಾಗರಿಕರಿಗೆ ಒಂದೇ ರೀತಿಯ ವಾಕ್ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ ಎಂದು ಅದು ಗಮನಿಸಿದೆ.
ಸದ್ಯ, ನೂಪುರ್ ಅವರು ಮುಂದೆ ಯಾವ ರೀತಿ ವಿಚಾರಣೆ ಎದುರಿಸಬಹುದು ಅಥವಾ ಈ ಕುರಿತು ಇನ್ನೇನಾದರೂ ಹೊಸ ಬೆಳವಣಿಗೆಗಳಾಗಬಹುದೋ ಎಂಬುದನ್ನು ಕಾದು ನೋಡಬೇಕಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ