HOME » NEWS » Explained » KNOW REASONS WHY BENGALURU SEEING HOT TEMPERATURE SNVS SKTV

Explainer: ಸುಡುತ್ತಿದೆ ಸಿಲಿಕಾನ್ ಸಿಟಿ – ದಾಖಲೆ ಮಟ್ಟಕ್ಕೆ ತಾಪಮಾನ ಏರಲು ನಾವೇ ಕಾರಣ!

ಬೆಂಗಳೂರಿನಲ್ಲಿ ಅಭಿವೃದ್ಧಿ ಯೋಜನೆ ಇತ್ಯಾದಿ ನಾನಾ ಕಾರಣಗಳನ್ನೊಡ್ಡಿ ದಿನನಿತ್ಯವೂ ನೂರಾರು ವರ್ಷದ ಹಳೆಯ ಮರಗಳನ್ನ ನೆಲಸಮ ಮಾಡಲಾಗುತ್ತಿದೆ. ವಾತಾವರಣದ ಉಷ್ಣಾಂಶವನ್ನು ತಡೆಯುತ್ತಿದ್ದ ಈ ಮರಗಳ ನಾಶದಿಂದಾಗಿ ಸಿಲಿಕಾನ್ ಸಿಟಿಯಲ್ಲಿ ತಾಪಮಾನ ಅಸಹಿಷ್ಣು ಮಟ್ಟಕ್ಕೆ ಏರುತ್ತಿದೆ.

news18-kannada
Updated:April 1, 2021, 1:40 PM IST
Explainer: ಸುಡುತ್ತಿದೆ ಸಿಲಿಕಾನ್ ಸಿಟಿ – ದಾಖಲೆ ಮಟ್ಟಕ್ಕೆ ತಾಪಮಾನ ಏರಲು ನಾವೇ ಕಾರಣ!
ಬೆಂಗಳೂರಿನ ಟ್ರಾಫಿಕ್
  • Share this:
ಬೆಂಗಳೂರು (ಏಪ್ರಿಲ್ 01): ಮಾರ್ಚ್ 31ರ ಬುಧವಾರ ಬೆಂಗಳೂರಿನ ತಾಪಮಾನ (Temperature of Bengaluru) 37.2 ಡಿಗ್ರಿ ಸೆಲ್ಶಿಯಸ್ ಇತ್ತು. ಇದು ಕಳೆದ ನಾಲ್ಕು ವರ್ಷಗಳಲ್ಲಿ ಬೆಂಗಳೂರು ಕಂಡ ಗರಿಷ್ಠ ತಾಪಮಾನ ಎಂದು ರಾಜ್ಯ ಹವಾಮಾನ ಇಲಾಖೆ ದೃಢಪಡಿಸಿದೆ. ಕಳೆದ ವರ್ಷ ಎಂದೂ ಬೆಂಗಳೂರಿನಲ್ಲಿ ತಾಪಮಾನ ಇಷ್ಟೊಂದು ಏರಿಕೆ ಆಗಿರಲೇ ಇಲ್ಲ. ಬಹುಶಃ ಇನ್ನೂ ಹಲವು ದಿನ 32 ರಿಂದ 37 ಡಿಗ್ರಿಗಳ ನಡುವೆಯೇ ಇಲ್ಲಿನ ಉಷ್ಣತೆ ಮುಂದುವರೆಯಲಿದೆ ಎಂದು ಕರ್ನಾಟಕ ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಡಾ ಸಿ ಎಸ್ ಪಾಟೀಲ್ ತಿಳಿಸಿದ್ದಾರೆ.

ಗಾರ್ಡನ್ ಸಿಟಿ, ಕೂಲ್ ಸಿಟಿ, ಪೆನ್ಶನರ್ಸ್ ಪ್ಯಾರಾಡೈಸ್ ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ಬೆಂಗಳೂರು ಹೀಗೆ ಧಿಡೀರನೆ ಕಾವೇರಿ Hot Bengaluru ಆಗಿದ್ದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರವೂ ನಾವೇ ಎನ್ನುತ್ತಾರೆ ಪರಿಸರ ತಜ್ಞರು. ಬೆಂಗಳೂರಿನಲ್ಲಿ ಹಿಂದೆಂದಿಗಿಂತಲೂ ಕಡಿಮೆ ಮರಗಳಿವೆ. ಪ್ರತಿದಿನ ನೂರಾರು ವರ್ಷಗಳಷ್ಟು ಹಳೆಯ ಮರಗಳ ಮಾರಣಹೋಮ ಆಗುತ್ತಲೇ ಇದೆ. ಇದೆಲ್ಲದರಿಂದಾಗಿ ಸಹಜವಾಗಿಯೇ ವಾತಾವರಣದ ತಾಪಮಾನಕ್ಕೆ ಹತೋಟಿ ಇಲ್ಲದಂತಾಗಿದೆ ಎನ್ನುವುದು ತಜ್ಞರ ಅಭಿಪ್ರಾಯ.

ಪ್ರತೀ ಮರದ ಮೇಲೆ ಕಿರೀಟದಂತೆ ಇರುವ ಎಲೆಗಳ ರಾಶಿ ಕೇವಲ ಮರದ ಉಳಿವಿಗೆ ಮಾತ್ರವಲ್ಲ, ಜನ ಮತ್ತು ಭೂಮಿಯ ಉಳಿವಿನಲ್ಲೂ ಮಹತ್ವದ ಪಾತ್ರ ವಹಿಸುತ್ತವೆ. ಕೆನೊಪಿ ಎಂದು ಕರೆಸಿಕೊಳ್ಳುವ ಈ ಕಿರೀಟ ಮುಂಜಾನೆ ಮತ್ತು ಮುಸ್ಸಂಜೆಯ ಸಂದರ್ಭದಲ್ಲಿ ಎರಡರಿಂದ ಮೂರು ಪಟ್ಟು ಹೆಚ್ಚು ಪ್ರದೇಶಕ್ಕೆ ನೆರಳು ನೀಡುತ್ತದೆ. ಇಡೀ ದಿನ ಮರದ ನೆರಳಿನಲ್ಲಿರುವ ಭೂಮಿಯನ್ನು ತಂಪಾಗಿರಿಸುತ್ತದೆ. ಮರಗಳೇ ಇಲ್ಲದಾಗ ಭೂಮಿಗೆ ನೆರಳೂ ಇಲ್ಲವಾಗಿ ಸೂರ್ಯನ ಪ್ರಕೋಪ ಹೆಚ್ಚಾಗುತ್ತದೆ. ಇದರಿಂದಾಗಿ ವಾತಾವರಣದ ಸೆಖೆಗೆ ಭೂಮಿಯ ಹೊರಮೈಯಿಂದಲೂ ಮೇಲೇಳುವ ಕಾವು ಸೇರಿಕೊಳ್ಳುತ್ತದೆ. ಪರಿಣಾಮವಾಗಿ ಇಡೀ ವಾತಾವರಣದ ಉಷ್ಣಾಂಶ (Temperature) ಏರಿಕೆಯಾಗುತ್ತದೆ.

ಇದನ್ನೂ ಓದಿ: Vaccine Side-effects - ಕೋವಿಡ್ ಲಸಿಕೆಯ ಅಡ್ಡಪರಿಣಾಮಗಳು ಹೆಣ್ಣುಮಕ್ಕಳಿಗೇ ಹೆಚ್ಚಂತೆ

ಮೊದಲೆಲ್ಲಾ ಬೆಂಗಳೂರಿನ ಉದ್ದಗಲಕ್ಕೂ ಸಾಲು ಸಾಲು ಮರಗಳಿದ್ದವು. ಅತ್ತಿ, ಬೇವು, ಸಂಪಿಗೆ, ಹೊಂಗೆ, ಗೋಣಿ, ಬಸರಿ ಮುಂತಾದ ಮರಗಳು ನೂರಾರು ವರ್ಷಗಳವರಗೆ ರಾಜಧಾನಿಯ ಅವಿಭಾಜ್ಯ ಅಂಗವೇ ಆಗಿಹೋಗಿದ್ದವು. ಆದ್ರೆ ಈಗ ಅವೆಲ್ಲವೂ ಕಾಣೆಯಾಗಿವೆ. ಪ್ರತೀ ವರ್ಷ ಮೆಟ್ರೊ ಕಾಮಗಾರಿ, ರಸ್ತೆ ಅಗಲೀಕರಣ, ಕಾಂಕ್ರೀಟ್ ರಸ್ತೆ ಎನ್ನುವ ನಾನಾ ಕಾರಣಗಳಿಂದಾಗಿ ಮರಗಳು ನಾಶವಾಗುತ್ತಲೇ ಇವೆ. ಒಂದು ಮರದ ಬದಲಿಗೆ ಮತ್ತಷ್ಟು ಮರ ನೆಡುತ್ತೇವೆ ಎನ್ನುವುದು ಎಲ್ಲಾ ಇಲಾಖೆಗಳ ರೆಡಿಮೇಡ್ ಉತ್ತರ. ಆದರೆ ಇಂದು ನೆಟ್ಟ ಮರ ಅಷ್ಟಗಲ ಬೆಳೆದು ನೆರಳು ನೀಡೋಕೆ ಕನಿಷ್ಟ 20 ವರ್ಷಗಳಾದರೂ ಬೇಕೇ ಬೇಕು. ಅಲ್ಲಿವರೆಗೆ ಭೂಮಿಯನ್ನು ಕಾಯುವವರಾರು ಎಂದು ಪ್ರಶ್ನಿಸುತ್ತಾರೆ ಪರಿಸರ ತಜ್ಞ ಡಾ ಎಲ್ಲಪ್ಪ ರೆಡ್ಡಿ.

ಇನ್ನು ಬೆಂಗಳೂರು ಕಾಂಕ್ರೀಟ್ ಕಾಡಾಗಿ ಬದಲಾಗಿರೋದು ಕೂಡಾ ತಾಪಮಾನ ಏರಿಕೆಗೆ ಬಹುದೊಡ್ಡ ಕಾರಣ. ಕಟ್ಟಡಗಳು, ರಸ್ತೆಗಳು, ಫುಟ್ಪಾತ್ ಗಳು ಹೀಗೆ ಎಲ್ಲಾ ಕಡೆಗಳಲ್ಲಿ ಸ್ಟೀಲ್, ಅಲ್ಯುಮಿನಿಯಂ ಮತ್ತು ಕಾಂಕ್ರೀಟ್ ಮಾತ್ರವೇ ಕಾಣುತ್ತದೆ. ಸಾಲದ್ದಕ್ಕೆ ಬಹುತೇಕ ಕಟ್ಟಡಗಳಲ್ಲಿ ಗಾಜುಗಳನ್ನೂ ಯಥೇಚ್ಛವಾಗಿ ಬಳಸಲಾಗಿದೆ. ಗಾಜುಗಳು ಉಷ್ಣಾಂಷವನ್ನು ಒಳಗೆ ಹಿಡಿದಿಟ್ಟುಕೊಳ್ಳುತ್ತವೆ. ಹಾಗಾಗಿ ಕಟ್ಟಡದ ಒಳಗೆ ಸೆಖೆ ಹೆಚ್ಚು ಎಂದು ಜನ ಎಸಿ ಬಳಸೋಕೆ ಶುರು ಮಾಡ್ತಾರೆ. ಎಸಿಯಿಂದ ಹೊರಡುವ ಹಾನಿಕಾರಕ ವಿಷಾನಿಲ ವಾತಾವರಣವನ್ನು ಮತ್ತಷ್ಟು ಬಿಸಿ ಮಾಡುತ್ತದೆ.

ಇದನ್ನೂ ಓದಿ: ಕಾಫಿತೋಟದಲ್ಲಿ ಅರಳಿದ ನಿಷ್ಕಲ್ಮಷ ಪ್ರೇಮಕಥನ; ಸ್ನಪ್ನ-ಮನು ಲವ್ ಸ್ಟೋರಿ ಎಲ್ಲರಿಗೂ ಮಾದರಿಇವೆಲ್ಲಾ ಯಾರಿಗೂ ತಿಳಿಯದ ವಿಚಾರಗಳೇನಲ್ಲ. ಆದರೆ ಇದಕ್ಕೆ ಪರಿಹಾರ ಕಂಡುಕೊಳ್ಳಲು ಹೆಚ್ಚಿನವರಿಗೆ ಆಸಕ್ತಿ ಇಲ್ಲ ಅಷ್ಟೇ. ಇದೊಂಥರಾ ನಿಮಗೆ ಮನೆ ಬೇಕಾ, ಗಾಳಿ ಬೇಕಾ ಎನ್ನುವ ಆಯ್ಕೆಯಂತೆ. ಈ ಕ್ಷಣಕ್ಕೆ ಗಾಳಿಯೇ ಇರಲಿ ಎನಿಸಿದರೂ ಮನೆ ಬೇಡ ಎಂದು ಎನಿಸುವುದೇ ಇಲ್ಲ. ನಮ್ಮದೇ ನೆಲದ, ಇಲ್ಲಿನ ವಾತಾವರಣದ ನೂರಾರು ಬಗೆಯ ಗಿಡಮರಗಳಿವೆ. ಆಯಾ ಪ್ರದೇಶದ ಸ್ಥಳೀಯ ತಳಿಗಳನ್ನೇ ನೆಡುವುದು ಸರಿಯಾದ ವಿಧಾನ. ಆದರೆ ಬೆಂಗಳೂರಿನ ಕೆಲವೇ ಪ್ರದೇಶಗಳಲ್ಲಿ ಬೆರಳೆಣಿಕೆಯಷ್ಟು ಮರಗಳಿಗೆ ಉಳಿಯಲು, ಬೆಳೆಯಲು ಅವಕಾಶವಿದೆ. ಇದು ಒಟ್ಟಾರೆ ಜನಸಂಖ್ಯೆಗೆ ಸಾಕಾಗುವುದಿಲ್ಲ. ಆದ್ದರಿಂದ ಇಡೀ ವಾತಾವರಣದ ಉಷ್ಣವನ್ನು, ಅಂದರೆ ಸೂರ್ಯನ ಕೆಂಗಣ್ಣಿನ ತಾಪವನ್ನು ನಾವೇ ಸಹಿಸಿಕೊಳ್ಳಬೇಕಾದ ದುಸ್ಥಿತಿಗೆ ತಲುಪಿದ್ದೇವೆ ಎಂದು ನಿಟ್ಟುಸಿರಿಡುತ್ತಾರೆ ಡಾ ಎಲ್ಲಪ್ಪ ರೆಡ್ಡಿ.

ರಾಜ್ಯ ಹವಾಮಾನ ಇಲಾಖೆಯ ಲೆಕ್ಕಾಚಾರದಂತೆ ಇನ್ನು ಕನಿಷ್ಠ 4 ದಿನಗಳವರೆಗಾದರೂ ಬೆಂಗಳೂರಿಗೆ ಮಳೆ ಬರುವ ಸೂಚನೆಯಿಲ್ಲ. ಮಾರ್ಚ್ ತಿಂಗಳಲ್ಲಿ ಬರಬೇಕಾಗಿದ್ದ ಬೇಸಿಗೆಯ ಮಳೆ ಈ ಬಾರಿ ಕೈ ಕೊಟ್ಟಿದೆ. ಆ ಮಳೆ ಬಂದಿದ್ದರೆ ವಾತಾವರಣ ತಂಪಾಗಿ ತಾಪಮಾನ ಹತೋಟಿಯಲ್ಲಿ ಇರುತ್ತಿತ್ತು. ಆದರೆ ಏಪ್ರಿಲ್ ತಿಂಗಳಲ್ಲಿ ಬೇಸಿಗೆಯ ಮಳೆ ಬರುವ ನಿರೀಕ್ಷೆ ಇದೆ. ಆದರೆ ಮೇ ಅಂತ್ಯದವರೆಗೂ ಬೆಂಗಳೂರಿನ ತಾಪಮಾನ (Bengaluru Temperature) ಸರಿಸುಮಾರು 32 ರಿಂದ 37 ಡಿಗ್ರಿಗಳ ನಡುವಡೆಯೇ ಇರಲಿದೆ ಎನ್ನುವ ಎಚ್ಚರಿಕೆಯನ್ನೂ ಹವಾಮಾನ ಇಲಾಖೆ ನೀಡಿದೆ.

ವರದಿ: ಸೌಮ್ಯಾ ಕಳಸ
Published by: Vijayasarthy SN
First published: April 1, 2021, 1:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories