ನಮ್ಮ ದೇಶದಲ್ಲಿ ಸಂಪೂರ್ಣ ಲಾಕ್‌ಡೌನ್ ಇಲ್ಲವೇ ತುರ್ತು ಪರಿಸ್ಥಿತಿ ಇದೆ ಎಂದುಕೊಳ್ಳಿ. ಇಂಟರ್ನೆಟ್ ಇಲ್ಲ, ಸಾಮಾಜಿಕ ಜಾಲತಾಣಗಳಿಲ್ಲ ಎಂದು ಊಹಿಸಿಕೊಳ್ಳಿ. ಕೇವಲ ಸರಕಾರಿ ಸ್ವಾಮ್ಯದ ಬೆರಳೆಣಿಕೆಯ ಟಿವಿ ಚಾನೆಲ್‌ಗಳು ಮಾತ್ರ ನಿಮಗೆ ನಮ್ಮ ದೇಶದ, ವಿದೇಶದ ಮಾಹಿತಿಯನ್ನು ನೀಡುತ್ತಿದ್ದು, ದೇಶದ ನಾಯಕರು ಏನು ಹೇಳಬೇಕೆಂದು ಬಯಸುತ್ತಾರೋ ಅಷ್ಟನ್ನು ಮಾತ್ರ ಪ್ರಸಾರ ಮಾಡುತ್ತಿರುತ್ತದೆ. ಅದನ್ನು ಹೊರತುಪಡಿಸಿ ನಿಮಗೆ ಜಗತ್ತಿನ ಆಗುಹೋಗುಗಳು ವರ್ಷಗಟ್ಟಲೆ ಅರಿವಿಗೇ ಬರುತ್ತಿಲ್ಲ. ಹೀಗೊಂದು ಪರಿಸ್ಥಿತಿ ಎದುರಾದರೆ ಪ್ರಜೆಗಳ ಪರಿಸ್ಥಿತಿ ಹೇಗಿರಬೇಡ! ಸದ್ಯ ಉತ್ತರ ಕೊರಿಯಾದ ಸ್ಥಿತಿಯೂ ಹೀಗಿದೆ. ಇಲ್ಲಿನ ಪರಮೋಚ್ಛ ನಾಯಕ ಕಿಮ್ ಜಾಂಗ್ ಉನ್ ಅವರು ತಮ್ಮ ಪ್ರಜೆಗಳಿಗೆ ಏನು, ಎಷ್ಟು ವಿಚಾರಗಳು ತಿಳಿಯಬೇಕು ಎಂದು ನಿರ್ಧರಿಸುತ್ತಾರೆ. ಕಿಮ್ ಅವರು ಇನ್ನೂ ಮುಂದಕ್ಕೆ ಹೋಗಿ ಹೊಸದೊಂದು ಕಾನೂನು ತಂದಿದ್ದಾರೆ. ಅದನ್ನು ಅವರ ಆಡಳಿತ ‘ಪ್ರತಿಗಾಮಿ ಚಿಂತನೆ’ ಎಂದ ವಿವರಿಸಿದೆ.
ಈ ಕಾನೂನಿನ ಪ್ರಕಾರ, ಉತ್ತರ ಕೊರಿಯಾದ ಯಾರಾದರೂ ಪ್ರಜೆಗಳು ದಕ್ಷಿಣ ಕೊರಿಯಾ, ಅಮೆರಿಕ ಅಥವಾ ಜಪಾನ್‌ನ ಹೆಚ್ಚಿನ ಮಾಧ್ಯಮಗಳನ್ನು ಬಳಸಿ ಸಿಕ್ಕಿಬಿದ್ದರೆ ಮರಣ ದಂಡನೆ ಶಿಕ್ಷೆ ಎದುರಿಸುವುದು ಅನಿವಾರ್ಯ. ಇಲ್ಲವೇ 15 ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ಕಾಯಂ ಆಗಲಿದೆ.
ಹಾಗಂತ ಕೇವಲ ನೋಡುವುದಕ್ಕೆ ಮಾತ್ರ ಕಾನೂನಿನ ಕುಣಿಕ ಸೀಮಿತವಾಗಿಲ್ಲ. ಇತ್ತೀಚೆಗೆ ಕಿಮ್ ಜಾಂಗ್ ತನ್ನ ದೇಶದ ಮಾಧ್ಯಮಗಳಿಗೆ ಪತ್ರ ಬರೆದಿದ್ದು, ಜನರ ನಡುವೆ ಅಹಿತಕವಾಗಿ ವರ್ತಿಸುವ, ವೈಯಕ್ತಿಕವಾಗಿ, ಇಲ್ಲವೇ ಗುಂಪಾಗಿ ಸಮಾಜ ವಿರೋಧಿ ನಡವಳಿಕೆಯನ್ನು ತೋರಿಸುವವರನ್ನು ನಿರ್ಮೂಲನೆ ಮಾಡಲು ಕರೆ ನೀಡಿದ್ದರು. ಅಲ್ಲದೆ ವಿದೇಶಿ ಶೈಲಿಯ ಮಾತುಗಾರಿಕೆ, ಕೇಶವಿನ್ಯಾಸ ಹಾಗೂ ಉಡುಪುಗಳನ್ನು “ಅಪಾಯಕಾರಿ ವಿಷ” ಎಂದು ಬಣ್ಣಿಸಿ ಅದನ್ನು ನಿಲ್ಲಿಸುವಂತೆ ಸೂಚಿಸಿದ್ದರು.
ಅಣ್ವಸ್ತ್ರ, ಕ್ಷಿಪಣಿಗಳಿಲ್ಲದ ಯುದ್ಧದಲ್ಲಿ ಕಿಮ್ ಜಾಂಗ್
ಉತ್ತರ ಕೊರಿಯಾದ ಮೂಲಗಳನ್ನು ಉಲ್ಲೇಖಿಸಿ ದಿ ಡೈಲಿ ಎನ್‌ಕೆ ಎಂಬ ಆನ್‌ಲೈನ್ ಪತ್ರಿಕೆಯಲ್ಲಿ ಇತ್ತೀಚೆಗೆ ಒಂದು ಸುದ್ದಿ ಪ್ರಕಟವಾಗಿತ್ತು. ಅದಲ್ಲಿ ವಿದೇಶಿ ಶೈಲಿಯ ಕೇಶ ವಿನ್ಯಾಸ ಹಾಗೂ ಉಡುಪು ಧರಿಸಿದ್ದಕ್ಕೆ ಮೂವರು ಹದಿಹರೆಯದವರನ್ನು ಮರು-ಶಿಕ್ಷಣ ಶಿಬಿರಕ್ಕೆ ಕಳುಹಿಸಲಾಗಿತ್ತು. ಈ ಬೆಳವಣಿಗೆಗಳು ಕಿಮ್ ಜಾಂಗ್ ಅವರು ಅಣ್ವಸ್ತ್ರ ಅಥವಾ ಕ್ಷಿಪಣಿಗಳಿಲ್ಲದೆಯೇ ದೇಶದಲ್ಲಿ ಸಾರಿರುವ ಯುದ್ಧವೆಂದು ತಜ್ಞರು ಅಂದಾಜಿಸುತ್ತಿದ್ದಾರೆ.
ಇದನ್ನೂ ಓದಿ: Bird Flu: ವಿಶ್ವದಲ್ಲೇ ಮೊದಲ ಬಾರಿಗೆ ಚೀನಾದ ಮನುಷ್ಯನಲ್ಲಿ H10N3 ಹಕ್ಕಿ ಜ್ವರ ಪತ್ತೆ; ಏನಿದು ಹೊಸ ರೋಗ?
ಕಿಮ್ ಜಾಂಗ್ ಅವರು ಉತ್ತರ ಕೊರಿಯಾದ ಜನರನ್ನು ಹೊರ ಜಗತ್ತಿನಿಂದ ಬೇರ್ಪಡಿಸಿ, ಹೊರಗಿನ ಮಾಹಿತಿಗಳೇ ಸಿಗದಂತೆ ಮಾಡುತ್ತಿದ್ದು, ಈ ಬೆಳವಣಿಗೆ ದೇಶದಲ್ಲಿ ಸಂಕಷ್ಟಗಳನ್ನು ಹೆಚ್ಚಿಸುತ್ತಿದೆ. ಲಕ್ಷಾಂತರ ಜನ ಆ ದೇಶದಲ್ಲಿ ಹಸಿವಿನಿಂದ ನರಳುತ್ತಿದ್ದಾರೆ. ಆದರೆ ಕಿಮ್ ಜಾಂಗ್ ಮಾತ್ರ ತಮ್ಮ ಆಡಳಿತದ ಪರ ಪ್ರಚಾರಗಳಿಂದಲೇ ಅವರ ಹಸಿವೆ ತುಂಬಲು ಯತ್ನಿಸುತ್ತಿದ್ದಾರೆ. ಪಕ್ಕದ ದಕ್ಷಿಣ ಕೊರಿಯಾದ ಜನರ ಸಮೃದ್ಧಿಯನ್ನು ಉತ್ತರ ಕೊರಿಯಾದ ಮಂದಿಯ ಕಣ್ಣಿಗೆ ಬೀಳದಂತೆ ಮಾಡುವುದರಲ್ಲೇ ಅವರ ಪ್ರಚಾರ ತಂತ್ರ ಅಡಗಿದೆ ಎನ್ನಲಾಗುತ್ತದೆ.
ಕಳೆದ ವರ್ಷ ಕೊರೋನಾ ಆರಂಭವಾದಾಗ ಗಡಿ ಭಾಗವನ್ನು ಮುಚ್ಚುವ ಪೂರ್ವದಲ್ಲೇ ಉತ್ತರ ಕೊರಿಯಾ ದೇಶವು ಸದ್ಯ ಬಾಹ್ಯ ಜಗತ್ತಿನಿಂದ ಹೆಚ್ಚುಕಡಿಮೆ ಸಂಪರ್ಕವನ್ನು ಕಡಿದುಕೊಂಡಿತ್ತು. ಅದೀಗ ಸಂಪೂರ್ಣ ಸಂಪರ್ಕ ರಹಿತವಾಗುವ ದಿಕ್ಕಿನಲ್ಲಿ ಸಾಗುತ್ತಿದೆ. ಪಕ್ಕದ ಚೀನಾದೊಂದಿಗಿನ ವ್ಯಾಪಾರ ಮತ್ತು ಪೂರೈಕೆಗಳು ಬಹುತೇಕ ಸ್ಥಗಿತವಾಗುವ ಹಂತದಲ್ಲಿದೆ. ಅಲ್ಪಸ್ವಲ್ಪ ಪೂರೈಕೆಗಳು ಈಗೀಗ ಶುರುವಾದರೂ ಆಮದು ಪ್ರಕ್ರಿಯೆ ಕಡಿಮೆ ಇದೆ.
ಅಷ್ಟಾದರೂ ತನ್ನ ದೇಶದ ಪ್ರಜೆಗಳ ಬಾಯಿಗೆ ಬೀಗ ಹಾಕುವ ಪ್ರಕ್ರಿಯೆಯಲ್ಲಿ ಕಿಮ್ ಜಾಂಗ್ ಹಿಂದೆ ಮುಂದೆ ನೋಡುತ್ತಿಲ್ಲ.
ವಿದೇಶಿ ಸಿನಿಮಾ, ಧಿರಿಸು, ಮಾತಿನ ಶೈಲಿಗೂ ನಿಷೇಧ:
ತಮ್ಮ ಹೊಸ ಕಾನೂನಿನಲ್ಲಿ ಕಿಮ್ ಜಾಂಗ್, ವಿದೇಶಿ ಸುದ್ದಿಗಳು ಮಾತ್ರವಲ್ಲ. ವಿದೇಶಿ ಪ್ರಭಾವಗಳಿಗೂ ನಿಷೇಧ ಹೇರಿದ್ದಾರೆ. ಯಾರಾದರೂ ವಿದೇಶಿ ಶೈಲಿಯಲ್ಲಿ ಮಾತನಾಡಿದರೆ, ಬಟ್ಟೆ ಧರಿಸಿದರೆ ಇಲ್ಲವೇ ವಿದೇಶಿ ಸಿನಿಮಾಗಳನ್ನು ನೋಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಇದನ್ನೂ ಓದಿ: Explained: 18 ವರ್ಷ ಮೇಲ್ಪಟ್ಟವರಿಗೆ ಉಚಿತ ಕೊರೋನಾ ಲಸಿಕೆ; ಭಾರತದ ಹೊಸ ಲಸಿಕಾ ನೀತಿಯ ಹೈಲೈಟ್ಸ್ ಇಲ್ಲಿದೆ
ಸಣ್ಣಪುಟ್ಟದಕ್ಕೂ ಇಂಥ ಕಾನೂನು ಮಾಡಿ ಜನರನ್ನು ಹೈರಾಣಾಗಿಸುತ್ತಿರುವ ಉತ್ತರ ಕೊರಿಯಾದ ಆಡಳಿತದ ವಿರುದ್ಧ ಜನರಿಗೆ ಬೇಸರವಿದ್ದರೂ ಏನೂ ಮಾಡುವಂತಿಲ್ಲ. ದಿನದಿನಕ್ಕೂ ಹೊಸ ಕಾನೂನು ಮಾಡಿ ಜನರ ನೆಮ್ಮದಿ ಕೆಡಿಸಲಾಗುತ್ತದೆ. ತಮ್ಮ ಬದುಕಿನ ಸ್ವಾತಂತ್ರ್ಯದಿಂದ ಹಿಡಿದು ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದರೂ ಅದನ್ನು ಸಹಿಸಿಕೊಳ್ಳದಿದ್ದರೆ ಸಾಯುವುದು ಅನಿವಾರ್ಯ. ಒಂದು ವೇಳೆ ದೇಶ ಬಿಡುವ ಯತ್ನ ಮಾಡಿದರೆ ಗಡಿಯಲ್ಲಿ ಕಂಡಲ್ಲಿ ಗುಂಡಿಕ್ಕೆ ಕೊಲ್ಲುವ ಆದೇಶವಿದೆ. ಅಲ್ಲಿಂದ ತಪ್ಪಿಸಿಕೊಳ್ಳುವುದು ಹೆಚ್ಚು ಕಡಿಮೆ ಅಸಂಭವ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ