ರೆಕ್ಕೆ ಬಲಿತ ಮೇಲೆ ಹಕ್ಕಿ ಮರಿ ಹಾರಲೇಬೇಕು. ಹಾಗೆಯೇ ಮಕ್ಕಳೂ ಕೂಡ. ಒಳ್ಳೆಯ ವಿದ್ಯಾಭ್ಯಾಸ ಪಡೆದು, ತಮ್ಮ ವೃತ್ತಿ ಹಾಗೂ ಜೀವನವನ್ನು ನೋಡಿಕೊಂಡು ಹೋಗುತ್ತಾರೆ. ಇದು ಕಠು ಸತ್ಯವಾದರೂ ಅರಗಿಸಿಕೊಳ್ಳಲೇಬೇಕು. ಆದರೆ ಹೆತ್ತ ಅಪ್ಪ ಅಮ್ಮ (Parents) ಮಕ್ಕಳ ಸಾಧನೆ ನೋಡಿ ಖುಷಿ ಪಟ್ಟರೂ ಒಳಗೊಳಗೇ ನಿಟ್ಟುಸಿರು ಬಿಡುವುದಂತೂ ಹೌದು. ದೇಶದಲ್ಲಿಯೇ ಹೆಚ್ಚು ಶಿಕ್ಷಣವಂತರಿರುವ ರಾಜ್ಯ ಕೇರಳದಲ್ಲಿ (Kerala) ಇಂಥದ್ದೇ ಪರಿಸ್ಥಿತಿ ಎದುರಾಗಿದೆ. ಮಕ್ಕಳು ಹೊರದೇಶಕ್ಕೆ ಹೋಗುವುದರಿಂದ ಕೇರಳವು ಅತಿಹೆಚ್ಚು ವೃದ್ಧರನ್ನು ಹೊಂದಿರುವ ರಾಜ್ಯವಾಗಿದೆ.
ಕೇರಳದಲ್ಲಿರುವ 82 ವರ್ಷ ವಯಸ್ಸಿನ ವಸಂತಿ ಬೇಬಿ ತನ್ನ ಮನೆಯಲ್ಲಿ ಮೆಟ್ಟಿಲುಗಳನ್ನು ಹತ್ತುವಾಗ ಮುಗ್ಗರಿಸಿ ಬಿದ್ದಿದ್ದರು. ಪತಿ-ಪತ್ನಿ ಇಬ್ಬರೇ ಮನೆಯಲ್ಲಿ ವಾಸಿಸುತ್ತಿದ್ದರು. ಈ ಪರಿಸ್ಥಿತಿಯಲ್ಲಿ ಪತಿಯೊಂದಿಗೆ ವೃದ್ಧರ ನೆರವಿನ ಕೇಂದ್ರಕ್ಕೆ ಹೋಗಲು ನಿರ್ಧರಿಸಿದರು.
ಸದ್ಯ ಅಲ್ಲಿಯೇ ಇರುವಂಥ ಈ ದಂಪತಿ ಅಲ್ಲಿನ ವ್ಯವಸ್ಥೆ, ಅವರು ನೋಡಿಕೊಳ್ಳುವ ರೀತಿಯಿಂದ ಸಂತೋಷವಾಗಿದ್ದಾರೆ. ಈ ಕುರಿತು ಸಂತಸ ವ್ಯಕ್ತಪಡಿಸುವ ವಸಂತ ಬೇಬಿ, ನಮಗೆ ಇಲ್ಲಿ ಸಂಪೂರ್ಣ ಸುರಕ್ಷಿತ ಭಾವನೆ ಇದೆ. ನಾವು ಇದನ್ನು ಮನೆಯಲ್ಲಿ ಪಡೆಯಲು ಸಾಧ್ಯವಿಲ್ಲ ಎಂಬುದಾಗಿ ಹೇಳುತ್ತಾರೆ.
ಇದನ್ನೂ ಓದಿ: BJP MLA ಮಾಡಾಳ್ ವಿರೂಪಾಕ್ಷಪ್ಪಗೆ ಜಾಮೀನು ಮಂಜೂರು
ನಿವೃತ್ತ ಗಣಿತ ಪ್ರಾಧ್ಯಾಪಕರಾದ ಬೇಬಿ ಎರಡು ಅಂತಸ್ತಿನ ಮಲ್ಟಿ ಬೆಡ್‌ರೂಂ ಮನೆಯನ್ನು ಹೊಂದಿದ್ದರು. ಇದನ್ನು ಕಟ್ಟಲು ತನ್ನ ಜೀವನದ ಬಹುತೇಕ ಉಳಿತಾಯವನ್ನು ಖರ್ಚು ಮಾಡಿದ್ದರು. ಮುಂದಿನ ತಲೆಮಾರಿಗೂ ಇದು ಸಾಕು ಎಂಬುದು ಅವರ ಆಲೋಚನೆಯಾಗಿತ್ತು. ಆದರೆ ಅಂದುಕೊಂಡ ಹಾಗೆಯೇ ಜೀವನ ಸಾಗಬೇಕಲ್ಲ. ಅವರ ಮಗ ಸೋನಿ ಕೆಲಸ ಮತ್ತು ಉತ್ತಮ ಗುಣಮಟ್ಟದ ಜೀವನಕ್ಕಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ಗೆ ವಲಸೆ ಹೋದರು.
ಆದರೂ ಬೇಬಿ ಅವರಿಗೆ ತನ್ನ ಮಗ ಜೊತೆಗಿಲ್ಲ ಎಂಬ ನೋವಿದೆ. ಆದರೆ ಬೇರೆಡೆ ಒಳ್ಳೆಯ ಜೀವನವಿದೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಹಾಗೆಯೇ ನಾವು ಮಗನಿಗೆ ಇಲ್ಲಿಯೇ ಇರು ಎಂದು ಹೇಳಲೂ ಸಾಧ್ಯವಿಲ್ಲ ಎಂದು ಒಪ್ಪಿಕೊಳ್ಳುತ್ತಾರೆ.
60 ವರ್ಷ ಮೇಲ್ಪಟ್ಟವರ ಶೇಕಡಾವಾರು ಸಂಖ್ಯೆಯಲ್ಲಿ ಏರಿಕೆ
ಕಳೆದ ಕೆಲವು ವರ್ಷಗಳಲ್ಲಿ, ಕೇರಳದಲ್ಲಿ 60 ವರ್ಷ ಮೇಲ್ಪಟ್ಟವರ ಶೇಕಡಾವಾರು ಪ್ರಮಾಣ 5.1 ರಿಂದ 16.5 ಕ್ಕೆ ಏರಿದೆ. ಇದು ದೇಶದ ಬೇರೆಲ್ಲ ರಾಜ್ಯಗಳಿಗಿಂತ ಹೆಚ್ಚಿನ ಪ್ರಮಾಣವಾಗಿದೆ. ಅಲ್ಲದೇ ಇದು ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯನ್ನು ಹೊಂದಿರುವ ದೇಶದಲ್ಲಿ ಕೇರಳವನ್ನು ಹೊರದೇಶವನ್ನಾಗಿ ಮಾಡುತ್ತದೆ.
ಭಾರತವು ಹೆಚ್ಚಿನ ಯುವ ಜನಸಂಖ್ಯೆಯನ್ನು ಹೊಂದಿದೆ. ಆದರೆ ಭಾಷೆಯ ಅಡೆತಡೆಗಳು, ಹವಾಮಾನ ಮತ್ತು ಸೋನಿಯಂತಹ ಯುವಜನರಲ್ಲಿ ಹೊರದೇಶದಲ್ಲಿ ವಾಸಿಸುವ ಬಯಕೆಯು ಈ ರಾಜ್ಯದ ಹಿರಿಯ ಜನರನ್ನು ಅನಿಶ್ಚಿತ ಸ್ಥಿತಿಯಲ್ಲಿ ಇರಿಸಿದೆ.
ಬಹಳಷ್ಟು ವೃದ್ಧರಿಗೆ ಪಿಂಚಣಿಯೇ ಆಧಾರ
ಮತ್ತೊಂದು ಉದಾಹರಣೆಯನ್ನು ನೋಡುವುದಾದರೆ, ಕೊಚ್ಚಿಯ ಮಟ್ಟಂಚೇರಿ ಸಮೀಪದಲ್ಲಿ ವೃದ್ಧರ ಸಹಾಯ ಕೇಂದ್ರದಿಂದ ಕೇವಲ 20 ಕಿಲೋಮೀಟರ್ ದೂರದಲ್ಲಿ, 65 ವರ್ಷದ ಝೈನಾಬಾ ಅಲಿ ತನ್ನ ಮಗಳ ಮನೆಯ ಒಂದು ಮೂಲೆಯಲ್ಲಿ, ಸಣ್ಣ ಕೋಣೆಯಲ್ಲಿ ವಾಸಿಸುತ್ತಿದ್ದಾರೆ.ಅಂದಹಾಗೆ ಝೈನಾಬಾ ಅಲಿ ಮೊದಲು ಕೆಲಸ ಮಾಡಿದ್ದೆಲ್ಲ ಮಧ್ಯಪ್ರಾಚ್ಯದ ಸುತ್ತಲಿನ ದೇಶಗಳಲ್ಲಿ. ಕ್ಲೀನರ್ ಆಗಿ ಕೆಲಸ ಮಾಡಿದ್ದರು. ಆದರೆ ಸದ್ಯ ಸಂಧಿವಾತ ಮತ್ತು ಇತರ ಆರೋಗ್ಯ ಪರಿಸ್ಥಿತಿಗಳಿಂದ ಆಕೆಗೆ ಕೆಲಸ ಮಾಡಲು ಸಾಧ್ಯವಾಗದ ಪರಿಣಾಮ ಆಕೆ ಭಾರತಕ್ಕೆ ಮರಳಿದರು.
"ನಾನು ಸರ್ಕಾರದಿಂದ ಸಣ್ಣ ಪಿಂಚಣಿ ಪಡೆಯುತ್ತೇನೆ. ಆದರೆ ತಿಂಗಳುಗಳಿಂದ ಬಂದಿಲ್ಲ. ನನ್ನ ಮಕ್ಕಳ ಹಿತದೃಷ್ಟಿಯಿಂದ ನಾನು ಬದುಕುತ್ತಿದ್ದೇನೆ ಎನ್ನುವ ಅಲಿಯ ಮಗಳು ಏನೂ ಕೆಲಸ ಮಾಡುವುದಿಲ್ಲ. ಮಗ ದಿನಗೂಲಿ ಕಾರ್ಮಿಕ. ಆದ್ದರಿಂದ ಔಷಧಿಗಳನ್ನು ಖರೀದಿಸುವುದು ಸಹ ಈಗ ಕಷ್ಟಕರವಾಗಿದೆ." ಎಂದು ಹೇಳುತ್ತಾರೆ.
ಇದನ್ನೂ ಓದಿ: ಸಂಜೆಯವರೆಗೆ ಕಾದು ನೋಡೋಣ; ಹೈಕಮಾಂಡ್ಗೆ ಮತ್ತೊಂದು ಗಡುವು ನೀಡಿದ ಮಾಜಿ ಸಿಎಂ
60 ವರ್ಷ ಮೇಲ್ಪಟ್ಟವರಿಗೆ ತಿಂಗಳಿಗೆ 1600 ರೂ. ಪಿಂಚಣಿ
ಅಂದಹಾಗೆ 60 ವರ್ಷಕ್ಕಿಂತ ಮೇಲ್ಪಟ್ಟ ಜನರು ತಿಂಗಳಿಗೆ ಸರಿಸುಮಾರು 1,600 ರೂಪಾಯಿಗಳ ರಾಜ್ಯ ಪಿಂಚಣಿಗೆ ಅರ್ಹರಾಗಿರುತ್ತಾರೆ. ಇದು ಸಾಮಾನ್ಯವಾಗಿ ಮೂಲಭೂತ ಅವಶ್ಯಕತೆಗಳಿಗೆ ಸಾಕಾಗುವುದಿಲ್ಲ. ಇದರರ್ಥ ಅನೇಕ ವಯಸ್ಸಾದ ಜನರು ಇನ್ನು ಮುಂದೆ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಮತ್ತು ಸಾಕಷ್ಟು ಉಳಿತಾಯವನ್ನು ಹೊಂದಿಲ್ಲದಿದ್ದರೆ ತಮ್ಮ ಮಕ್ಕಳ ಮೇಲೆ ಅವಲಂಬಿತರಾಗುತ್ತಾರೆ.
ಹಾಗೆಯೇ ಕೇರಳದಲ್ಲಿ, 4.2 ಮಿಲಿಯನ್‌ಗಿಂತಲೂ ಹೆಚ್ಚು ವಯಸ್ಸಾದ ಜನರಿದ್ದಾರೆ, ಬಹುತೇಕರ ಹಣಕಾಸು ಪರಿಸ್ಥಿತಿ ಕಠಿಣವಾಗಿದೆ.
ಬೇಸಿಗೆಯಲ್ಲಿ ಶಾಖದ ಅಲೆ, ಅನಿಯಮಿತ ಮಳೆಗಾಲ !
ಇಲ್ಲಿನ ಕೊಚ್ಚಿ ವಿಶೇಷವಾಗಿ ಹಾನಿಯ ಭಾರವನ್ನು ಹೊತ್ತುಕೊಂಡಿದೆ. 2018 ರಲ್ಲಿ ಸಂಭವಿಸಿದ ವಿನಾಶಕಾರಿ ಪ್ರವಾಹವು ನಗರದ ಹೆಚ್ಚಿನ ಭಾಗಗಳನ್ನು ಮುಳುಗಿಸಿತು. ಬೇಸಿಗೆಯ ತಿಂಗಳುಗಳು ಹೆಚ್ಚು ಬಿಸಿಯಾಗುತ್ತಿವೆ. ಜೊತೆಗೆ ಮಳೆಯು ಹೆಚ್ಚು ಅನಿಯಮಿತ ಮತ್ತು ಕೇಂದ್ರೀಕೃತವಾಗುತ್ತಿದೆ.ಮಾನವ ಉಂಟುಮಾಡುವ ಹವಾಮಾನ ಬದಲಾವಣೆಯಿಂದ ಪ್ರವಾಹ ಮತ್ತು ಶಾಖದ ಅಲೆಗಳು ಹೆಚ್ಚಾಗಿವೆ. ಇದು ಕೇರಳದ ಹಿರಿಯ ಜನರ ದುರ್ಬಲತೆಯನ್ನು ಹೆಚ್ಚಿಸುತ್ತದೆ ಎಂದು ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್‌ನ ಸಂಶೋಧನಾ ನಿರ್ದೇಶಕ ಅಂಜಲ್ ಪ್ರಕಾಶ್ ಹೇಳುತ್ತಾರೆ.
"ಮಾನ್ಸೂನ್ ಸಮಯದಲ್ಲಿ ನಾವು ಮನೆಯೊಳಗೆ ತೆರೆದ ಛತ್ರಿಗಳನ್ನು ಹಿಡಿಯಬೇಕು" ಎನ್ನುತ್ತಾರೆ ಅಲ್ಲಿನ ನಿವಾಸಿ ಝೈನಾಬಾ ಅಲಿ. ಮನೆಯ ವಿವಿಧ ಮೂಲೆಗಳಲ್ಲಿ ಇರಿಸಲಾದ ಬಕೆಟ್‌ಗಳನ್ನು ತೋರಿಸುವ ಅವರು, ಸುಡುವ ಬಿಸಿಲಿನ ಕಾರಣ,ಬೇಸಿಗೆಯು ಸಂಪೂರ್ಣವಾಗಿ ಅಸಹನೀಯವಾಗಿದೆ. ನಾವು ಆಗಾಗ್ಗೆ ಗಾಳಿ ನೆರಳು ಅರಸಿ ಸಮುದ್ರ ತೀರಕ್ಕೆ ಹೋಗುತ್ತೇವೆ. ಇಲ್ಲಿ ಒಳಗೆ ಫ್ಯಾನ್ ಕೂಡ ಸರಿಯಾಗಿ ಓಡುವುದಿಲ್ಲ ಎಂದು ಅಲಿ ಹೇಳುತ್ತಾರೆ.
“ಹಿರಿಯರ ನಿರ್ದಿಷ್ಟ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದು ಅವರನ್ನು ರಕ್ಷಿಸುವ ಮೊದಲ ಹಂತವಾಗಿದೆ. ವಯಸ್ಸಾದ ಜನರು ಮತ್ತು ಮಕ್ಕಳನ್ನು ನೋಡಿಕೊಳ್ಳುವಂಥ ತರಬೇತಿ ನೀಡಬೇಕಿದೆ” ಎಂದು ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್‌ನ ಸಂಶೋಧನಾ ನಿರ್ದೇಶಕ ಅಂಜಲ್ ಪ್ರಕಾಶ್ ಅವರು ಹೇಳುತ್ತಾರೆ.
ಇದನ್ನೂ ಓದಿ: Eagle Owl: ತಲೆಯ ಮೇಲೆ 2 ಕೊಂಬಿನ ಗರಿಗಳಿರುವ ಅಪರೂಪದ ಹದ್ದು ಗೂಬೆ ಪತ್ತೆ! ಏನಿದರ ವೈಶಿಷ್ಟ್ಯ ಗೊತ್ತಾ?
1960 ಮತ್ತು 1970 ರ ದಶಕಗಳಲ್ಲಿ, "ಮಧ್ಯಪ್ರಾಚ್ಯ, ಪೂರ್ವ ಆಫ್ರಿಕಾಕ್ಕೆ ಭಾರಿ ವಲಸೆ ಇತ್ತು.ಅನೇಕರು ಶಾಲಾ ಶಿಕ್ಷಕರು ಅಥವಾ ದಾದಿಯರಾಗಿ ಇತರ ದೇಶಗಳಿಗೆ ಹೋದರು. ಇತ್ತೀಚಿನ ದಿನಗಳಲ್ಲಿ ಇದು ಮತ್ತೆ ಮುಂದುವರೆದಿದೆ. ಈಗ ಯುರೋಪ್ ಮತ್ತು ಉತ್ತರ ಅಮೇರಿಕಕ್ಕೆ ಜನರು ವಲಸೆ ಹೋಗುತ್ತಿದ್ದಾರೆ ಎಂದು ನವದೆಹಲಿ ಮೂಲದ ಪಾಪ್ಯುಲೇಶನ್ ಫೌಂಡೇಶನ್ ಆಫ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕರಾದ ಪೂನಂ ಮುತ್ರೇಜಾ ಹೇಳುತ್ತಾರೆ.
ನೋಡಿಕೊಳ್ಳಲು ಕೆಲಸಗಾರರು ಸಿಗುವುದು ಕಷ್ಟ!
2030 ರ ವೇಳೆಗೆ ರಾಜ್ಯದಲ್ಲಿ ಪ್ರತಿ 100 ದುಡಿಯುವ ವಯಸ್ಸಿನ ಜನರಿಗೆ 60ವರ್ಷ ಮೇಲ್ಪಟ್ಟ 35 ಜನರು ಇರುತ್ತಾರೆ ಎಂದು ಕೇರಳ ಸರ್ಕಾರ ತಿಳಿಸಿದೆ. ಇದರರ್ಥ ಇನ್ನೂ ಹೆಚ್ಚಿನ ವಿಶೇಷವಾದ ಆರೈಕೆ ಸೌಲಭ್ಯಗಳು ಬೇಕಾಗುತ್ತವೆ.
"ಅರ್ಹ ಉದ್ಯೋಗಿಗಳನ್ನು ಪಡೆಯುವುದು ಇಂದು ದೊಡ್ಡ ಸವಾಲಾಗಿದೆ. ಭಾಷೆಯ ಅಡೆತಡೆಗಳಿಂದಾಗಿ ಇತರ ರಾಜ್ಯಗಳಿಂದ ಜನರನ್ನು ಕರೆತರುವುದು ಕಷ್ಟ. ಹಾಗೆಯೇ ಕೇರಳದೊಳಗಿಂದ ಸಿಬ್ಬಂದಿಯನ್ನು ಪಡೆಯುವುದು ಸಹ ಕಷ್ಟಕರವಾಗಿದೆ. ಏಕೆಂದರೆ ಹೆಚ್ಚಿನವರು ಕೆಲಸಕ್ಕಾಗಿ ವಿದೇಶಕ್ಕೆ ವಲಸೆ ಹೋಗುತ್ತಾರೆ. " ಎಂದು ಸಿಗ್ನೇಚರ್ ಹೋಮ್ಸ್‌ನ ವ್ಯವಸ್ಥಾಪಕ ಟ್ರಸ್ಟಿ ಅಲೆಕ್ಸ್ ಜೋಸೆಫ್ ಹೇಳುತ್ತಾರೆ.
“ಕೇರಳವು ಅತಿ ಹೆಚ್ಚಿನ ದಾದಿಯರನ್ನು ಪ್ರಪಂಚದ ಉಳಿದ ಭಾಗಗಳಿಗೆ ಕಳುಹಿಸುತ್ತದೆ. ಆದರೆ ಅವರು ಇಲ್ಲಿ ಉಳಿಯುವುದು ಮತ್ತು ದೀರ್ಘಕಾಲದವರೆಗೆ ಇಲ್ಲಿಯೇ ಕೆಲಸ ಮಾಡುವುದು ಅಷ್ಟಾಗಿ ಸಿದ್ಧರಿರುವುದಿಲ್ಲ ಎಂದು ಅವರು ಹೇಳುತ್ತಾರೆ.
ಕೇರಳದಲ್ಲಿ ಶೇ.93ರಷ್ಟು ಸಾಕ್ಷರತೆ ಪ್ರಮಾಣ
ಅಂದಹಾಗೆ 1956 ರಲ್ಲಿ ರಾಜ್ಯ ರಚನೆಯಾದಾಗಿನಿಂದ, ಕೇರಳ ಸಾಮಾಜಿಕ ಕಲ್ಯಾಣಕ್ಕೆ ಆದ್ಯತೆ ನೀಡಿತು ಮತ್ತು ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣದಲ್ಲಿ ಭಾರಿ ಹೂಡಿಕೆ ಮಾಡಿದೆ. ಇದು ಫಲ ನೀಡಿದೆ ಕೂಡ. ಭಾರತದ 75 ಪ್ರತಿಶತ ಸಾಕ್ಷರತೆ ಪ್ರಮಾಣಕ್ಕೆ ಹೋಲಿಸಿದರೆ ಕೇರಳದ ಸಾಕ್ಷರತೆಯ ಪ್ರಮಾಣವು 93 ಪ್ರತಿಶತದಷ್ಟಿದೆ. ಇದು ಪ್ರತಿ 100,000 ಜೀವಂತ ಜನನಗಳಿಗೆ ಒಂದಕ್ಕಿಂತ ಕಡಿಮೆ ತಾಯಿಯ ಮರಣ ಪ್ರಮಾಣವನ್ನು ಹೊಂದಿರುವ ಭಾರತದ ಏಕೈಕ ರಾಜ್ಯವಾಗಿದೆ.
ಭಾರತದ ಇತರ ಭಾಗಗಳಲ್ಲಿ, ವಿಶೇಷವಾಗಿ ಉತ್ತರದ ರಾಜ್ಯಗಳು ಹೆಚ್ಚಿನ ಜನಸಂಖ್ಯೆಯನ್ನು ಹೊಂದಿವೆ. ಆದರೆ ಅಲ್ಲಿ ಹೆಚ್ಚಿನ ಭ್ರಷ್ಟಾಚಾರವಿದೆ. ಜೊತೆಗೆ ಅವು ಆರೋಗ್ಯ ಮತ್ತು ಶಿಕ್ಷಣದಲ್ಲಿ ಹಿಂದುಳಿದಿವೆ ಎಂದು ಮುತ್ರೇಜಾ ಹೇಳಿದರು.
ಆದರೆ ಕೇರಳದಂತೆ ಅನೇಕ ದಕ್ಷಿಣ ಭಾರತದ ರಾಜ್ಯಗಳು ಕಡಿಮೆ ಫಲವತ್ತತೆ ದರವನ್ನು ಹೊಂದಿವೆ. ಏಕೆಂದರೆ ಅವರು ಸಾಕ್ಷರತೆ, ಆರೋಗ್ಯ ಮೂಲಸೌಕರ್ಯ ಮತ್ತು ಕುಟುಂಬ ಯೋಜನೆಯಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಮುತ್ರೇಜಾ ಅಭಿಪ್ರಾಯ ಪಡುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ