ಕರ್ನಾಟಕ ವಿಧಾನಸಭೆ ಚುನಾವಣೆ (Karnataka assembly elections) ಅಬ್ಬರ ಮುಗಿದು, ಫಲಿತಾಂಶವೂ (election result) ಬಂದಾಗಿದೆ. ಆಡಳಿತಾರೂಢ ಬಿಜೆಪಿ ಹೀನಾಯವಾಗಿ ಸೋತಿದ್ದರೆ, ಕಾಂಗ್ರೆಸ್ (Congress) 135 ಸ್ಥಾನಗಳ ಭರ್ಜರಿ ಸ್ಥಾನ ಪಡೆದು, ಆಡಳಿತದ ಚುಕ್ಕಾಣಿ ಹಿಡಿಯಲಿದೆ. ಸಿಎಂ (CM) ಸ್ಥಾನಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಹಾಗೂ ಸಿದ್ದರಾಮಯ್ಯ (Siddaramaiah) ಪಟ್ಟು ಹಿಡಿದು ಕುಳಿತಿದ್ದರು. ಹೈಕಮಾಂಡ್ (Congress High Command) ಮನವೊಲಿಕೆಗೂ ಇಬ್ಬರೂ ಬಗ್ಗಿರಲಿಲ್ಲ. ಬಳಿಕ ಸೋನಿಯಾ (Sonia Gandhi) ಸಂಧಾನ ಸೂತ್ರ ಹೆಣೆದ ಬಳಿಕ ಇಬ್ಬರೂ ಮೆತ್ತಗಾಗಿದ್ದಾರೆ. ಇದೀಗ ಸಿದ್ದರಾಮಯ್ಯ ಸಿಎಂ ಆಗಿ, ಡಿಕೆ ಶಿವಕುಮಾರ್ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆದರೆ ಸಿದ್ದರಾಮ್ಯನವರ ಹಾದಿ ಹೂವಿನ ಹಾಸಿಗೆಯಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಸಿದ್ದರಾಮಯ್ಯ ಸಾಲು-ಸಾಲು ಸವಾಲು ಎದುರಿಸಬೇಕಿದೆ!
ಡಿಕೆಶಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕು
ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರೂ ಪ್ರಭಾವಿ ನಾಯಕರು. ಇದೀಗ ಇಬ್ಬರೂ ಒಂದೇ ಸಂಪುಟದಲ್ಲಿ ಸಿಎಂ ಹಾಗೂ ಡಿಸಿಎಂ ಆಗಿ ಆಡಳಿತ ನಡೆಸಬೇಕು. ಈಗಾಗಲೇ ಸಿಎಂ ಸ್ಥಾನ ವಂಚಿತವಾಗಿ ಆಕ್ರೋಶದಲ್ಲಿರುವ ಡಿಕೆಶಿ ಜೊತೆ ಸಿದ್ದು ಹೊಂದಾಣಿಕೆ ಮಾಡಿಕೊಳ್ಳಲೇಬೇಕಾಗಿದೆ. ಡಿಕೆಶಿ ಅಷ್ಟೇ ಅಲ್ಲ ಅವರ ಬೆಂಬಲಿಗ ಸಚಿವರ ಜೊತೆಯೂ ಸಿದ್ದರಾಮಯ್ಯ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳಲೇ ಬೇಕು.
ಟಿಕೆಟ್ ಹಂಚಿಕೆಯಿಂದ ಹಿಡಿದು ಅಧಿಕಾರ ಹಂಚಿಕೆವರೆಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರೂ ಒಮ್ಮತದ ನಿರ್ಧಾರಕ್ಕೆ ಬಂದೇ ಇರಲಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಸರ್ಕಾರದಲ್ಲೇ ಬಿರುಕು ಮೂಡದಂತೆ, ಎಂಥದ್ದೇ ಭಿನ್ನಾಭಿಪ್ರಾಯವಿದ್ದರೂ ಒಗ್ಗಟ್ಟು ಹಾಳಾಗದಂತೆ ನೋಡಿಕೊಳ್ಳುವುದು, ಈ ಮೂಲಕ ವಿಪಕ್ಷಗಳ ಮುಂದೆ ನಗೆಪಾಟಲಿಗೀಡಾಗುವುದನ್ನು ತಪ್ಪಿಸಬೇಕಿದೆ.
ಇದನ್ನೂ ಓದಿ: Congress Guarantee: ಕಾಂಗ್ರೆಸ್ ಭರವಸೆ ಈಡೇರೋದು ‘ಗ್ಯಾರಂಟಿ’ನಾ? ಕೊಟ್ಟ ಮಾತು ಉಳಿಸಿಕೊಳ್ಳಲು ಬೇಕು 62 ಸಾವಿರ ಕೋಟಿ!
ಸಂಪುಟ ರಚನೆಯ ಕಸರತ್ತು
ಸಿದ್ದರಾಮಯ್ಯ ಸಿಎಂ ಹಾಗೂ ಡಿಕೆ ಶಿವಕುಮಾರ್ ಡಿಸಿಎಂ ಎನ್ನುವುದೇನೋ ಕಾಂಗ್ರೆಸ್ ಹೈಕಮಾಂಡ್ ಫೈನಲ್ ಮಾಡಿದೆ. ಆದರೆ ಸಿದ್ದು ಸಂಪುಟಕ್ಕೆ ಸೇರುವವರು ಯಾರು? ಲಿಸ್ಟ್ ದೊಡ್ಡದೇ ಇದೆ. ಈಗಾಗಲೇ ಅನೇಕರು ಸಚಿವ ಸ್ಥಾನ ಪಡೆಯಲು ಲಾಬಿ ಶುರು ಮಾಡಿದ್ದಾರೆ. ಈ ಬಾರಿ ಆರ್‌ವಿ ದೇಶಪಾಂಡೆ, ಕೆಎಚ್ ಮುನಿಯಪ್ಪ, ಶಾಮನೂರು ಶಿವಶಂಕರಪ್ಪ ಸೇರಿದಂತೆ ಅನೇಕ ಹಿರಿಯ ನಾಯಕರು ಗೆದ್ದಿದ್ದಾರೆ. ಹೀಗಾಗಿ ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎನ್ನುವುದು ಕೂಡ ಚಾಲೆಂಜಿಂಗ್.
ಈ ಬಾರಿ ಅದ್ಭುತ ಗೆಲುವಿಗೆ ಕಾಂಗ್ರೆಸ್ ಘೋಷಿಸಿರುವ 5 ಗ್ಯಾರಂಟಿ ಯೋಜನೆಗಳ ಪಾಲೂ ದೊಡ್ಡದಿದೆ. ಚುನಾವಣೆಗೂ ಮುನ್ನವೇ ರಾಜ್ಯದ ಜನಸಾಮಾನ್ಯರು, ಗೃಹಿಣಿಯರು, ನಿರುದ್ಯೋಗಿಗಳು, ರೈತರು ಸೇರಿದಂತೆ ಹಲವು ವರ್ಗಗಳವನ್ನು ಗುರಿಯಾಗಿಸಿಕೊಂಡು 5 ಗ್ಯಾರಂಟಿಗಳನ್ನು ಕಾಂಗ್ರೆಸ್ ಘೋಷಿಸಿತ್ತು. ಚುನಾವಣೆಯಲ್ಲಿ ಗೆದ್ದ ಬಳಿಕ ಮೊದಲ ಪತ್ರಿಕಾಗೋಷ್ಠಿಯಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಪ್ರಮುಖ ನಾಯಕರು ಜನರಿಗೆ ಕೊಟ್ಟ ಗ್ಯಾರಂಟಿ ಭರವಸೆಗಳನ್ನು ಈಡೇರಿಸೋದಾಗಿ ಹೇಳಿದ್ದರು. ಆದರೀಗ ಅದೇ ದೊಡ್ಡ ಸವಾಲಾಗಿದೆ.
ಭರವಸೆ ಈಡೇರಿಕೆಗೆ ವಾರ್ಷಿಕ 62 ಸಾವಿರ ಕೋಟಿ ರೂಪಾಯಿ ಬೇಕು!
ಅಂದಹಾಗೆ ಈ ‘ಗ್ಯಾರಂಟಿ’ಗಳು ಕರ್ನಾಟಕ ರಾಜ್ಯಕ್ಕೆ ನಷ್ಟವಾಗುವುದು ಖಚಿತ ಅಂತ ಹೇಳಲಾಗುತ್ತಿದೆ. ಎಕನಾಮಿಕ್ ಟೈಮ್ಸ್ ಪ್ರಕಾರ, ಕರ್ನಾಟಕದ ಕಾಂಗ್ರೆಸ್ ಸರ್ಕಾರವು ತನ್ನ ಭರವಸೆ ಈಡೇರಿಕೆಗಾಗಿ ವರ್ಷಕ್ಕೆ 62,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಉಚಿತಗಳಿಗೆ ತಗಲುವ ವೆಚ್ಚವು ಹೆಚ್ಚುವರಿ ಖರ್ಚಿಗೆ ಕಾರಣವಾಗುತ್ತದೆ.
ಭರವಸೆ ಈಡೇರಿಸಲಿದ್ದರೆ ದೊಡ್ಡ ಹೊಡೆತ
ಭರವಸೆ ಈಡೇರಿಕೆಗೆ ಸರ್ಕಾರದ ಬೊಕ್ಕಸಕ್ಕೆ 62 ಸಾವಿರ ರೂ. ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ. ಇದರಿಂದ ಹೆಚ್ಚಿನ ಸಾಲ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ. ಹಣಕಾಸು ಸ್ಥಿತಿಯನ್ನೂ ಕಾಪಾಡಿಕೊಂಡು ಗ್ಯಾರಂಟಿ ಯೋಜನೆಗಳನ್ನು ಸಿದ್ದರಾಮಯ್ಯ ಅವರು ಹೇಗೆ ನಿಭಾಯಿಸಬೇಕಿದೆ. ಆರ್ಥಿಕ ಹೊರೆಯ ಕಾರಣ ಮುಂದಿಟ್ಟು ಈ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಕಾಂಗ್ರೆಸ್ ಹಿಂದೆ ಮುಂದೆ ನೋಡಿದ್ರೆ ಜನರ ವಿಶ್ವಾಸ ಕಳೆದುಕೊಳ್ಳುವುದು ಗ್ಯಾರಂಟಿ!
ಒಕ್ಕಲಿಗರನ್ನು ಸಮಾಧಾನ ಮಾಡಬೇಕಿದೆ!
ಈ ಬಾರಿ ಡಿಕೆಶಿ ಸಿಎಂ ಆಗಲಿದ್ದಾರೆ ಎಂಬ ಕಾರಣಕ್ಕೆ ಚುನಾವಣೆಯಲ್ಲಿ ಹೆಚ್ಚಿನ ಒಕ್ಕಲಿಗರು ಕಾಂಗ್ರೆಸ್ ಕಡೆ ವಾಲಿದ್ದರು. ಆದರೆ ಸಿಎಂ ಸ್ಥಾನವನ್ನು ಡಿಕೆಶಿಗೆ ಕೊಡದೇ ಇರುವುದರಿಂದ ಕಾಂಗ್ರೆಸ್ ವಿರುದ್ಧ ಒಕ್ಕಲಿಗರು ಬೇಸರ ಮಾಡಿಕೊಂಡಿದ್ದಾರೆ. ಹೀಗಾಗಿ ಮುಂದೆ ಒಕ್ಕಲಿಗರ ಮತ ಸೆಳೆಯಲು ಕಸರತ್ತು ಮಾಡಬೇಕಿದೆ.
ಕೇಂದ್ರ ಸರ್ಕಾರದ ಜೊತೆ ಉತ್ತಮ ಬಾಂಧವ್ಯದ ಚಾಲೆಂಜ್
ಸಿದ್ದು ನೇತೃತ್ವದ ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಜೊತೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳಬೇಕಿದೆ. ಕೇಂದ್ರ ಸರ್ಕಾರದ ಜತೆ ಉತ್ತಮ ಸಂಬಂಧ ಇಟ್ಟುಕೊಂಡು ರಾಜ್ಯಕ್ಕೆ ಬರಬೇಕಾದ ಪಾಲನ್ನು ಪಡೆಯಬೇಕಾದ ಬಹುದೊಡ್ಡ ಸವಾಲು ಕೂಡ ಸಿದ್ದರಾಮಯ್ಯ ಮುಂದಿದೆ.
ಇದನ್ನೂ ಓದಿ: Karnataka CM: ಮುಖ್ಯಮಂತ್ರಿಗಳ ಸಂಬಳ ಎಷ್ಟು? ಸಿಎಂ ಆಗಲು ಏನೆಲ್ಲಾ ಅರ್ಹತೆಗಳಿರಬೇಕು ಗೊತ್ತಾ?
ಲೋಕಸಭೆಯಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕಾದ ಸವಾಲು!
ವಿಧಾನಸಭೆ ಚುನಾವಣೆಯಲ್ಲೇನೋ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ. ಆದರೆ ಲೋಕಸಭೆ ಚುನಾವಣೆಯ ಲೆಕ್ಕಾಚಾರ ಬೇರೆಯೇ ಇದೆ. ಕಳೆದ ಬಾರಿ ಕಾಂಗ್ರೆಸ್ ಕೇವಲ ಒಂದೇ ಸ್ಥಾನ ಪಡೆದಿತ್ತು. ಆದರೆ ಈ ಬಾರಿ ಹೆಚ್ಚಿನ ಸ್ಥಾನ ಗಳಿಸಿ, ಕೇಂದ್ರದಲ್ಲಿ ಕಾಂಗ್ರೆಸ್‌ಗೆ ಶಕ್ತಿ ತುಂಬಬೇಕಿದೆ. ಇದೂ ಕೂಡ ಸಿದ್ದರಾಮಯ್ಯರಿಗೆ ದೊಡ್ಡ ಸವಾಲಿನ ಟಾಸ್ಕ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ