Explainer: ಕರ್ನಾಟಕದಲ್ಲಿ ಹಿಜಾಬ್ ‘ವಿವಾದ’ ಹೇಗಾಯ್ತು? ಇಲ್ಲಿಯವರೆಗೆ ಏನೆಲ್ಲಾ ನಡೆಯಿತು..Timeline ಇಲ್ಲಿದೆ

ಹಿಜಾಬ್​ ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೆ ವಿದ್ಯಾರ್ಥಿಗಳು ಹಿಜಾಬ್, ಕೇಸರಿ ಸ್ಕಾರ್ಫ್ ಅಥವಾ ಇತರೆ ಯಾವುದೇ  ಧಾರ್ಮಿಕ ಗುರುತುಗಳನ್ನು ಧರಿಸದಂತೆ ಹೈಕೋರ್ಟ್‌ ಮಧ್ಯಂತರ ಆದೇಶ ನೀಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:

  ಕರ್ನಾಟಕ (Karnataka) ಈ ವರ್ಷ ಇಡೀ ವಿಶ್ವದ ಗಮನವನ್ನೇ ಸೆಳೆದಿದೆ. ಆದರೆ, ಯಾವುದೋ ಒಳ್ಳೆಯ ಕಾರಣದಿಂದ ಹೆಸರು ಪಡೆದಿಲ್ಲ ಬಿಡಿ. ವಿವಾದಗಳಿಂದಲೇ ಹೆಚ್ಚು ಸದ್ದು, ಸುದ್ದಿ ಮಾಡ್ತಿದೆ. ಹೌದು, ಕರ್ನಾಟಕದಲ್ಲಿ ಹಿಜಾಬ್ (Hijab Controversy) ವಿಚಾರ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ವಿದ್ಯಾರ್ಥಿಗಳನ್ನು, ಅವರ ಪೋಷಕರನ್ನು, ಜನ ಸಾಮಾನ್ಯರನ್ನು ಕೆರಳಿಸುತ್ತಲೇ ಇದೆ. ಮುಸ್ಲಿಂ ಮತ್ತು ಹಿಂದೂ ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ಪ್ರತಿ ಪ್ರದರ್ಶನಗಳೂ ಆಗಾಗ್ಗೆ ನಡೆಯುತ್ತಲೇ ಇದೆ. ಕರ್ನಾಟಕ ಹೈಕೋರ್ಟ್ ಈ ವಿಷಯದ ಕುರಿತು ಹಲವು ದಿನಗಳಿಂದ ಅರ್ಜಿಗಳನ್ನು ವಿಚಾರಣೆ ನಡೆಸುತ್ತಿದೆ. ಆದರೆ ಈ ಸಂಬಂಧ ಈಗಾಗಲೇ ಮಧ್ಯಂತರ ಆದೇಶ ನೀಡಿದ ಹೈಕೋರ್ಟ್‌, ಸಮಸ್ಯೆ ಬಗೆಹರಿಯುವವರೆಗೆ ವಿದ್ಯಾರ್ಥಿಗಳು ಸಮವಸ್ತ್ರವನ್ನು ಧರಿಸಬೇಕು. ಹಿಜಾಬ್, ಕೇಸರಿ ಸ್ಕಾರ್ಫ್ ಅಥವಾ ಇತರ ಯಾವುದೇ  ಧಾರ್ಮಿಕ ಗುರುತುಗಳನ್ನು ಧರಿಸದಂತೆಯೂ ಹೈಕೋರ್ಟ್‌ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದೆ.


  ಕರ್ನಾಟಕದಲ್ಲಿ ಹಿಜಾಬ್ ವಿವಾದದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲ ಮಾಹಿತಿಗಳು ಇಲ್ಲಿದೆ ನೋಡಿ..


  ಸಮಸ್ಯೆ ಏನು..?


  ಉಡುಪಿಯ ಸರಕಾರಿ ಪಿಯು ಕಾಲೇಜಿನಲ್ಲಿ ಜನವರಿ 1ರಂದು ಹಿಜಾಬ್‌ ಧರಿಸಿ ತರಗತಿಗೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ ಎಂದು 6 ವಿದ್ಯಾರ್ಥಿನಿಯರು ಆರೋಪಿಸಿದಾಗ ಈ ಹಿಜಾಬ್‌ ವಿವಾದ ಬೆಳಕಿಗೆ ಬಂತು. ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಿದ್ದ ವಿದ್ಯಾರ್ಥಿನಿಯರು, ಹಿಜಾಬ್‌ ಧರಿಸಲು ಕಾಲೇಜಿನ ಬಳಿ ಅನುಮತಿ ಕೇಳಲಾಗಿದೆ. ಆದರೆ ಕಾಲೇಜು ಅಧಿಕಾರಿಗಳು ಹಿಜಾಬ್‌ ಧರಿಸಿ ಹಾಗೂ ಮುಖ ಮುಚ್ಚಿಕೊಂಡು ತರಗತಿಗೆ ಪ್ರವೇಶಿಸಲು ನಿರಾಕರಿಸಿದರು ಎಂದು ಅವರು ಹೇಳಿದರು.


  ಇದನ್ನೂ ಓದಿ: Explained: ಹಿಜಾಬ್, ಬುರ್ಖಾ, ನಿಕಾಬ್.. ಈ ಮೂರರಲ್ಲೂ ಇರೋ ವ್ಯತ್ಯಾಸವೇನು? ಯಾವ ದಿರಿಸು ಯಾವ ಸಂದರ್ಭದಲ್ಲಿ ತೊಡುತ್ತಾರೆ?

  ಬಳಿಕ, ಈ ವಿದ್ಯಾರ್ಥಿನಿಯರು ಕಾಲೇಜು ಅಧಿಕಾರಿಗಳ ವಿರುದ್ಧ ಪ್ರತಿಭಟನೆಯನ್ನು ಪ್ರಾರಂಭಿಸಿದರು. ಒಂದು ಕಾಲೇಜಿನಿಂದ ಆರಂಭವಾದ ಈ ವಿವಾದ, ಶೀಘ್ರದಲ್ಲೇ ರಾಜ್ಯವ್ಯಾಪಿ ಹರಡಿ ದೊಡ್ಡ ಸಮಸ್ಯೆಯಾಗಿ ಬದಲಾಯಿತು. ನಂತರ, ಇದೇ ರೀತಿಯ ಪ್ರತಿಭಟನೆಗಳ ವರದಿಗಳು ಕರ್ನಾಟಕದ ಇತರ ಪಟ್ಟಣಗಳಿಂದ ಹೊರಹೊಮ್ಮಿದವು. ಇನ್ನು, ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಯೊಳಗೆ ಹಿಜಾಬ್‌ ಧರಿಸಿದರೆ ನಾವು ಕೇಸರಿ ಶಾಲುಗಳನ್ನು ಹಾಕಿಕೊಳ್ಳುತ್ತೇವೆ ಎಂದು ಕೆಲ ಹಿಂದೂ ವಿದ್ಯಾರ್ಥಿಗಳು ಆಗ್ರಹಿಸಿದರು. ಅಲ್ಲದೆ, ಕೇಸರಿ ಶಾಲುಗಳನ್ನು ಒಳಗೊಂಡ ಪ್ರತಿಭಟನೆಗಳು ಮತ್ತು ಪ್ರತಿ ಪ್ರದರ್ಶನಗಳು ಇಡೀ ಕರ್ನಾಟಕ ಮಾತ್ರವಲ್ಲ, ಬಳಿಕ ಇತರ ರಾಜ್ಯಗಳಿಗೂ ಹರಡಿದವು.


  ಎರಡು ಸಮುದಾಯಗಳ ವಿದ್ಯಾರ್ಥಿಗಳು ಮಾತಿನ ಚಕಮಕಿಯಲ್ಲಿ ತೊಡಗಿರುವುದನ್ನು ತೋರಿಸಿದ ಪ್ರತಿಭಟನೆಯ ಹಲವಾರು ವಿಡಿಯೋಗಳು ಸಹ ಈ ವೇಳೆ ಹೊರಹೊಮ್ಮಿದವು. ಈ ಪೈಕಿ ಮಂಡ್ಯದ ಕಾಲೇಜೊಂದರಿಂದ ಬಂದ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್‌ ಆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಕೇಸರಿ ಶಾಲು ಧರಿಸಿದ ಹುಡುಗರು ಹಿಜಾಬ್‌ ಧರಿಸಿದ್ದ ಆ ವಿದ್ಯಾರ್ಥಿನಿ ಬಳಿ ಹೋಗಿ "ಜೈ ಶ್ರೀ ರಾಮ್" ಎಂದು ಘೋಷಣೆಗಳನ್ನು ಕೂಗಿದರು. ಆದರೆ, ಇದರಿಂದ ಹೆದರದ ಆ ವಿದ್ಯಾರ್ಥಿನಿ, ಅದಕ್ಕೆ ಪ್ರತಿಯಾಗಿ "ಅಲ್ಲಾ ಹು ಅಕ್ಬರ್!" ಎಂದು ಕೂಗಿದಳು.


  ಉಡುಪಿ ಕಾಲೇಜಿನ ನಿಲುವೇನು..?


  ಇನ್ನು, ಈ ವಿವಾದ ಆರಂಭವಾದ ಉಡುಪಿ ಕಾಲೇಜಿನ ಪ್ರಾಂಶುಪಾಲ ರುದ್ರೇಗೌಡ ಅವರು ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದು, ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಕ್ಯಾಂಪಸ್‌ಗೆ ಬರುತ್ತಿದ್ದರು. ಆದರೆ, ಅದನ್ನು ತೆಗೆದು ತೆಗೆದು ತರಗತಿಗಳಿಗೆ ಪ್ರವೇಶಿಸುತ್ತಿದ್ದರು ಎಂದು ಹೇಳಿದರು.


  “ಸಂಸ್ಥೆಯು ಹಿಜಾಬ್ ಧರಿಸುವುದರ ಬಗ್ಗೆ ಯಾವುದೇ ನಿಯಮವನ್ನು ಹೊಂದಿಲ್ಲ ಮತ್ತು ಕಳೆದ 35 ವರ್ಷಗಳಲ್ಲಿ ಯಾರೂ ಅದನ್ನು ತರಗತಿಯಲ್ಲಿ ಧರಿಸುತ್ತಿರಲಿಲ್ಲ. ಅಲ್ಲದೆ, ಕ್ಲಾಸ್‌ಗಳಲ್ಲಿ ಹಿಜಾಬ್‌ ಧರಿಸುವ ಬೇಡಿಕೆಯೊಂದಿಗೆ ಬಂದ ವಿದ್ಯಾರ್ಥಿಗಳಿಗೆ ಹೊರಗಿನ ಶಕ್ತಿಗಳ ಬೆಂಬಲವಿದೆ ಎಂದು ಪ್ರಾಂಶುಪಾಲರಾದ ರುದ್ರೇಗೌಡ ಅವರು ಹೇಳಿದರು.


  ನ್ಯಾಯಾಲಯ ತಲುಪಿದ ವಿಚಾರ


  ಕೇವಲ ಪ್ರತಿಭಟನೆ, ಆಕ್ರೋಶಗಳಿಗೆ ನಿಲ್ಲದ ಹಿಜಾಬ್‌ ನ್ಯಾಯಾಲಯದ ಕದವನ್ನೂ ತಟ್ಟಿದೆ.ಜನವರಿ 31 ರಂದು ಕರ್ನಾಟಕ ಹೈಕೋರ್ಟ್‌ನಲ್ಲಿ ಹಲವಾರು ಅರ್ಜಿಗಳನ್ನು ಸಲ್ಲಿಸಲಾಯಿತು. ಈ ಪೈಕಿ ಮುಸ್ಲಿಂ ವಿದ್ಯಾರ್ಥಿನಿಯರು ಭಾರತದ ಸಂವಿಧಾನದ 14, 19 ಮತ್ತು 25ನೇ ವಿಧಿಯ ಅಡಿಯಲ್ಲಿ ತರಗತಿಯಲ್ಲಿ ಹಿಜಾಬ್ ಧರಿಸುವ ಹಕ್ಕನ್ನು ಕೇಳಿದರು. ಈ ಸಂಬಂಧ ಫೆಬ್ರವರಿ 8 ರಂದು ನ್ಯಾಯಾಲಯವು ಮೊದಲ ಬಾರಿಗೆ ವಿಚಾರಣೆ ನಡೆಸಿತು.


  ಅಂತಹ ಎಲ್ಲಾ ಅರ್ಜಿಗಳ ಪರಿಗಣನೆಗೆ ಬಾಕಿ ಇರುವ ತನ್ನ ಮಧ್ಯಂತರ ಆದೇಶದಲ್ಲಿ ಹೈಕೋರ್ಟ್, ಎಲ್ಲಾ ವಿದ್ಯಾರ್ಥಿಗಳು ತರಗತಿಯೊಳಗೆ ಕೇಸರಿ ಶಾಲು, ಶಿರೋವಸ್ತ್ರಗಳು, ಹಿಜಾಬ್ ಮತ್ತು ಯಾವುದೇ ಧಾರ್ಮಿಕ ಧ್ವಜವನ್ನು ಧರಿಸದಂತೆ ಕಳೆದ ವಾರ ನಿರ್ಬಂಧಿಸಿದೆ.


  ರಾಜ್ಯ ಸರ್ಕಾರ ಏನು ಹೇಳುತ್ತದೆ..?


  ಕರ್ನಾಟಕ ಸರ್ಕಾರವು ತನ್ನ 1983ರ ಶಿಕ್ಷಣ ಕಾಯ್ದೆಯ ಅಡಿಯಲ್ಲಿ ತರಗತಿಯೊಳಗೆ ಹಿಜಾಬ್ ಅನ್ನು ನಿಷೇಧಿಸುವುದನ್ನು ಸಮರ್ಥಿಸಿತು. ಫೆಬ್ರವರಿ 5 ರ ಆದೇಶದಲ್ಲಿ, ಕಾಯಿದೆಯ ಸೆಕ್ಷನ್ 133 ರ ಅಡಿಯಲ್ಲಿ, ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಶಾಲೆಗಳು ಮತ್ತು ಕಾಲೇಜುಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡುವ ಹಕ್ಕನ್ನು ರಾಜ್ಯ ಸರ್ಕಾರವು ಕಾಯ್ದಿರಿಸಿಕೊಂಡಿದೆ ಎಂದು ಹೇಳಿದೆ.


  ಕರ್ನಾಟಕ ಬೋರ್ಡ್ ಆಫ್ ಪ್ರೀ-ಯೂನಿವರ್ಸಿಟಿ ಎಜುಕೇಶನ್ ಅಡಿಯಲ್ಲಿ ಬರುವ ಕಾಲೇಜುಗಳಲ್ಲಿ, ಕಾಲೇಜು ಅಭಿವೃದ್ಧಿ ಸಮಿತಿ ಅಥವಾ ಆಡಳಿತ ಮೇಲ್ವಿಚಾರಣಾ ಸಮಿತಿಯು ಸೂಚಿಸುವ ಡ್ರೆಸ್ ಕೋಡ್ ಅನ್ನು ಅನುಸರಿಸಬೇಕು. ಆಡಳಿತವು ಡ್ರೆಸ್ ಕೋಡ್ ಅನ್ನು ಸರಿಪಡಿಸದಿದ್ದರೆ, ಸಮಾನತೆ, ಏಕತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗದ ಬಟ್ಟೆಗಳನ್ನು ಧರಿಸಬೇಕು ಎಂದೂ ಅದು ಹೇಳಿದೆ.


  ಇದನ್ನೂ ಓದಿ: Explained: ನಮ್ಮ ಎತ್ತರ ಇಷ್ಟಿದ್ದರೆ ದೇಹದ ತೂಕ ಎಷ್ಟಿರಬೇಕು? ಆರೋಗ್ಯವಾಗಿರೋಕೆ ನೀವು ಎಷ್ಟು ಕೆಜಿ ಇರ್ಬೇಕು?

  ಇನ್ನು, ಈ ಹಿಜಾಬ್‌ ವಿವಾದ ಕೇವಲ ಕೆಲ ಶಾಲೆ, ಕಾಲೇಜುಗಳಲ್ಲಿ ಮಾತ್ರ ಸೀಮಿತವಾಗಿದೆ. ಇಡೀ ರಾಜ್ಯಕ್ಕೆ ವಿವಾದ ಹರಡಿಲ್ಲ ಎಂದೂ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಹೇಳಿದೆ.ರಾಜ್ಯದಲ್ಲಿ ಒಟ್ಟು 75,000 ಅಂತಹ ಸಂಸ್ಥೆಗಳ 8 ಪ್ರೌಢಶಾಲೆಗಳು ಮತ್ತು ಪ್ರೀ ಯುನಿವರ್ಸಿಟಿ ಅಥವಾ ಪಿಯು ಕಾಲೇಜುಗಳಲ್ಲಿ ಮಾತ್ರ ಹಿಜಾಬ್ ವಿವಾದ ಮುಂದುವರಿದಿದೆ ಎಂದು ಗುರುವಾರ ರಾಜ್ಯ ಸರ್ಕಾರ ಹೇಳಿದೆ. ಅಲ್ಲದೆ, ಶೀಘ್ರದಲ್ಲೇ ಸರ್ಕಾರ ಸಮಸ್ಯೆ ಬಗೆಹರಿಸುವ ವಿಶ್ವಾಸವನ್ನೂ ವ್ಯಕ್ತಪಡಿಸಿದೆ.ಈ ಮಧ್ಯೆ ಉದ್ವಿಗ್ನತೆಯನ್ನು ಶಾಂತಗೊಳಿಸುವ ಪ್ರಯತ್ನದಲ್ಲಿ, ಕರ್ನಾಟಕ ಸರ್ಕಾರವು ಕಳೆದ ವಾರ ಶಾಲೆಗಳನ್ನು ತಾತ್ಕಾಲಿಕವಾಗಿ ಬಂದ್‌ ಮಾಡಿತ್ತು. ಆದರೆ ಈ ವಾರ ಅವುಗಳನ್ನು ಕ್ರಮೇಣ ಪುನಃ ತೆರೆಯಲು ಆದೇಶಿಸಿತು.


  ಪ್ರಸ್ತುತ ಪರಿಸ್ಥಿತಿ


  ಹೈಕೋರ್ಟ್ ಮಧ್ಯಂತರ ಆದೇಶದ ನಂತರವೂ, ಕೆಲವು ವಿದ್ಯಾರ್ಥಿಗಳು ಗುರುವಾರವೂ 'ಹಿಜಾಬ್' ಮತ್ತು 'ಬುರ್ಖಾ'ದೊಂದಿಗೆ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡಬೇಕೆಂದು ಹಠ ಹಿಡಿದಿರುವುದರಿಂದ ವಿವಾದವು ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಕಂಡುಬರುತ್ತಿಲ್ಲ.


  ಹಿಜಾಬ್ ಮತ್ತು ಬುರ್ಖಾ ನಡುವಿನ ವ್ಯತ್ಯಾಸ


  ಹಿಜಾಬ್ ತಲೆಯ ಸ್ಕಾರ್ಫ್ ಆಗಿದ್ದು ಅದು ಕೂದಲು, ಕುತ್ತಿಗೆ ಮತ್ತು ಕೆಲವೊಮ್ಮೆ ಮಹಿಳೆಯ ಭುಜಗಳನ್ನು ಆವರಿಸುತ್ತದೆ. ಮತ್ತೊಂದೆಡೆ, ಬುರ್ಖಾ ಮುಖ ಮತ್ತು ದೇಹವನ್ನು ಆವರಿಸುವ ಒಂದು ತುಂಡು ಮುಸುಕಾಗಿದ್ದು, ಕಣ್ಣುಗಳು ಮಾತ್ರ ಕಾಣಿಸುತ್ತವೆ. ಅಲ್ಲದೆ, ಮುಖ ನೋಡಲು ಕೇವಲ ಜಾಲರಿಯ ಪರದೆಯನ್ನು ಮಾತ್ರ ಬಿಡುತ್ತದೆ.


  ಒಟ್ಟಾರೆ ಹೈಕೋರ್ಟ್‌ನಲ್ಲಿ ವಿಚಾರಣೆ ಇನ್ನೂ ಮುಂದುವರಿದಿದ್ದು, ಹೈಕೋರ್ಟ್ ಯಾವ ರೀತಿಯ ತೀರ್ಪು ನೀಡಲಿದೆ ಎನ್ನುವುದು ಇಡೀ ರಾಜ್ಯ ಸರ್ಕಾರ ಹಾಗೂ ಜನತೆಯ ಪಾಲಿಗೆ ಕುತೂಹಲ ಕೆರಳಿಸಿದೆ. ಇದು ಬರೀ ರಾಜ್ಯವಲ್ಲ, ಇಡೀ ದೇಶದ ಚಿತ್ತವೇ ಕರ್ನಾಟಕ ಹೈಕೋರ್ಟ್‌ನತ್ತ ನೆಟ್ಟಿದೆ ಎಂದು ಹೇಳಿದರೂ ತಪ್ಪಾಗುವುದಿಲ್ಲ.

  Published by:Kavya V
  First published: