• Home
  • »
  • News
  • »
  • explained
  • »
  • Explained: ಕರ್ನಾಟಕ ಸರ್ಕಾರ v/s ಆ್ಯಪ್‌ ಆಧಾರಿತ ಓಲಾ-ಉಬರ್: ಏನಿದು ಹಗ್ಗಜಗ್ಗಾಟ?

Explained: ಕರ್ನಾಟಕ ಸರ್ಕಾರ v/s ಆ್ಯಪ್‌ ಆಧಾರಿತ ಓಲಾ-ಉಬರ್: ಏನಿದು ಹಗ್ಗಜಗ್ಗಾಟ?

ಓಲಾ, ಉಬರ್

ಓಲಾ, ಉಬರ್

ಸರ್ಕಾರ ನಿಗದಿಪಡಿಸಿದ ದರಗಳನ್ನು ಅನುಸರಿಸುವುದಕ್ಕೆ ಒಪ್ಪಿದರೆ ಮಾತ್ರ ಈ ಸೇವೆಗಳಿಗೆ ರಾಜ್ಯದಲ್ಲಿ ಅವಕಾಶ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಓಲಾ, ಉಬರ್‌, ರಾಪಿಡೋ ಅಪ್ಲಿಕೇಶನ್‌ಗಳಿಗೆ ಎಚ್ಚರಿಸಿತ್ತು.

  • Share this:

    ಬೆಂಗಳೂರಿನಲ್ಲಿ ಆ್ಯಪ್‌ ಆಧಾರಿತ ಆಟೋ, ಕ್ಯಾಬ್‌ಗಳು ಜನರಿಗೆ ತಮ್ಮ ಸ್ವಂತ ವಾಹನದಂತೆ ಯಾವಾಗ ಬೇಕಿದ್ದರೂ ಲಭ್ಯವಿರುವಂತಹ ಸೇವೆಯಾಗಿದೆ. ಕ್ಷಣಾರ್ಧದಲ್ಲಿ ಫೋನ್‌ ಮೂಲಕ ಬುಕ್‌ ಮಾಡಿ ಹೋಗುವ ಈ ಸಂಚಾರ ಸೇವೆ ವ್ಯವಸ್ಥೆ ದೊಡ್ಡ ಸಿಟಿಗಳಲ್ಲಿ ಜನಪ್ರಿಯವಾಗಿದೆ. ಜನ ಕೂಡ ಸುಲಭವಾಗಿ ಸಿಗುವ ಈ ಸೇವೆಗೆ ಒಗ್ಗಿ ಹೋಗಿದ್ದಾರೆ. ಆದರೆ, ಈ ಕಂಪನಿಗಳು ಮಾತ್ರ ಸರ್ಕಾರದ ನಿಯಮಗಳಿಗೆ (Karnataka Government) ಕ್ಯಾರೆ ಎನ್ನದೇ ಪ್ರಯಾಣಿಕರ ಬಳಿ ಹಣ ಪೀಕುತ್ತಿವೆ. ಬೆಂಗಳೂರಿನಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ದರ ವಿಧಿಸುತ್ತಿರುವ ಓಲಾ, ಉಬರ್‌, ರಾಪಿಡೋ ಆಟೋ ಸೇವೆಗಳ (Auto Service)  ಮೇಲೆ ಸರ್ಕಾರ ಬ್ಯಾನ್‌ ಅಸ್ತ್ರ ಪ್ರಯೋಗ ಮಾಡಿತ್ತು. ಬೆಂಗಳೂರಿನಲ್ಲಿ ಸರ್ಕಾರ ನಿಗದಿ ಪಡಿಸಿರುವ ದರವನ್ನು ಮೀರಿ ಹೆಚ್ಚಿನ ಶುಲ್ಕವನ್ನು ಓಲಾ ಉಬರ್‌ಗಳು (Ola Uber In Bengaluru) ವಿಧಿಸುತ್ತಿರುವುದರಿಂದ ಈ ರೀತಿಯ ಕ್ರಮಕ್ಕೆ ಸರ್ಕಾರ ಮುಂದಾಗಿತ್ತು.


    ಹೌದು, ಆ್ಯಪ್‌ ಆಧಾರಿತ ಆಟೋ ಸೇವೆಗಳನ್ನು ರಾಜ್ಯದಲ್ಲಿ ಬ್ಯಾನ್‌ ಮಾಡುವುದಾಗಿ ಹೇಳಿ ಸರ್ಕಾರ ಜನರಿಗೆ ಶಾಕ್‌ ನೀಡಿತ್ತು. ಸರ್ಕಾರ ನಿಗದಿಪಡಿಸಿದ ದರಗಳನ್ನು ಅನುಸರಿಸುವುದಕ್ಕೆ ಒಪ್ಪಿದರೆ ಮಾತ್ರ ಈ ಸೇವೆಗಳಿಗೆ ರಾಜ್ಯದಲ್ಲಿ ಅವಕಾಶ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಓಲಾ, ಉಬರ್‌, ರಾಪಿಡೋ ಅಪ್ಲಿಕೇಶನ್‌ಗಳಿಗೆ ಎಚ್ಚರಿಸಿತ್ತು.


    ಪ್ರಯಾಣಿಕರಿಗೆ ತೊಂದರೆ
    ಬೆಂಗಳೂರಿನಲ್ಲಿ ಓಲಾ, ಉಬರ್ ಮತ್ತು ರಾಪಿಡೋದಂತಹ ಅಗ್ರಿಗೇಟರ್‌ಗಳಿಗೆ ಸಂಪರ್ಕ ಹೊಂದಿದ ಆಟೋ-ರಿಕ್ಷಾಗಳ ಮೇಲೆ ವಿಧಿಸಲಾದ ನಿಷೇಧವು ಪ್ರಯಾಣಿಕರನ್ನು ತೊಂದರೆಗೀಡು ಮಾಡಿತ್ತು.


    ಜನರಿಗೆ ತೊಂದರೆಯಾಗುವ ತೀರ್ಮಾನ ಬೇಡ - ಹೈಕೋರ್ಟ್‌
    ಜನರ ಹಿತಾಸಕ್ತಿಯನ್ನು ಪರಿಗಣನೆಗೆ ತೆಗೆದುಕೊಂಡ ಕರ್ನಾಟಕ ಹೈಕೋರ್ಟ್, ಮಧ್ಯಪ್ರವೇಶಿಸಿ, ಸರ್ಕಾರ ಹೊರಡಿಸಿದ್ದ ನಿಷೇಧವನ್ನು ಹಿಂತೆಗೆದುಕೊಳ್ಳಲು ಸೂಚಿಸಿತು, ಮಧ್ಯಂತರ ವ್ಯವಸ್ಥೆಯಾಗಿ ಜಿಎಸ್‌ಟಿಯನ್ನು ಹೊರತುಪಡಿಸಿ 10% ಅನುಕೂಲಕರ ಶುಲ್ಕದ ಮಿತಿಯನ್ನು ಆದೇಶಿಸಿದೆ.


    ಆ್ಯಪ್‌ ಆಧಾರಿತ ಆಟೋ ಸೇವೆಗೆ ನ್ಯಾಯಯುತ ದರ ವಿಧಿಸುವ ಸಂಬಂಧ ಓಲಾ ಮತ್ತು ಉಬರ್‌ ಕಂಪನಿಗಳೊಂದಿಗೆ ಸಭೆ ನಡೆಸಿ ಮಾತುಕತೆ ಮೂಲಕ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಹಮತದ ತೀರ್ಮಾನ ಕೈಗೊಳ್ಳುವಂತೆ ಸರಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ. ಆದರೆ, ಅಗ್ರಿಗೇಟರ್ ಕಂಪನಿಗಳು ಮತ್ತು ಬೊಮ್ಮಾಯಿ ಸರ್ಕಾರ 'ನ್ಯಾಯಯುತ ಬೆಲೆ' ಬಗ್ಗೆ ಇನ್ನೂ ಒಮ್ಮತಕ್ಕೆ ಬಂದಿಲ್ಲ.


    ಆಟೋ-ಅಗ್ರಿಗೇಟರ್‌ಗಳನ್ನು ಏಕೆ ನಿಷೇಧಿಸಲಾಗಿದೆ?
    ಓಲಾ ಮತ್ತು ಉಬರ್‌ ನಂತಹ ಅಗ್ರಿಗೇಟರ್‌ಗಳು 2014 ರಲ್ಲಿ ಪ್ರಾಯೋಗಿಕ ಯೋಜನೆಯಾಗಿ ಬೆಂಗಳೂರಿನಲ್ಲಿ ಆಟೋ-ರಿಕ್ಷಾ ಸೇವೆಗಳನ್ನು ಪ್ರಾರಂಭಿಸಿದರು. 2016ರಲ್ಲಿ ಪೂರ್ಣ ಪ್ರಮಾಣದ ಸೇವೆಯಾಗಿ ಜಾರಿ ಮಾಡಲಾಯಿತು. ಬೆಂಗಳೂರಿನ ಸ್ಥಳೀಯ ಕಂಪನಿಯಾದ ರಾಪಿಡೋ ಸಹ ಅದೇ ವರ್ಷ ಆಟೋ ಸೇವೆಗಳನ್ನು ಪ್ರಾರಂಭಿಸಿತು.


    60% ಆಟೋಗಳು ಓಲಾ, ಊಬರ್‌, ರಾಪಿಡೋಗೆ ಲಿಂಕ್‌ ಆಗಿವೆ
    ಬೆಂಗಳೂರಿನಲ್ಲಿ 55,000 ಕ್ಕೂ ಹೆಚ್ಚು ಆಟೋಗಳಿವೆ, ಅವುಗಳಲ್ಲಿ 60% ಕ್ಕಿಂತ ಹೆಚ್ಚು ಓಲಾ, ಉಬರ್‌, ರಾಪಿಡೋ ಅಥವಾ ಇತರ ಸಣ್ಣ ಸ್ಥಳೀಯ ಅಗ್ರಿಗೇಟರ್‌ಗಳ ಜೊತೆ ಲಿಂಕ್‌ ಹೊಂದಿವೆ.


    ಪರವಾನಗಿ ಇಲ್ಲದೆ ವ್ಯವಹಾರ ನಡೆಸಿದ್ದೇ ಸಂಘರ್ಷಕ್ಕೆ ಕಾರಣ
    ಆದರೆ, ಈ ಕಂಪನಿಗಳು ಆರು ವರ್ಷಗಳಿಂದ ಕರ್ನಾಟಕದಲ್ಲಿ ಆಟೋ-ರಿಕ್ಷಾಗಳ ಒಟ್ಟುಗೂಡುವಿಕೆಗೆ ಪರವಾನಗಿ ಇಲ್ಲದೆ ವ್ಯವಹಾರ ನಡೆಸಿವೆ. 2016 ರ ಕರ್ನಾಟಕ ಆನ್-ಡಿಮಾಂಡ್ ಟ್ರಾನ್ಸ್‌ಪೋರ್ಟೇಶನ್ ಟೆಕ್ನಾಲಜಿ ಅಗ್ರಿಗೇಟರ್ಸ್ ನಿಯಮಗಳ ಅಡಿಯಲ್ಲಿ ಪರವಾನಗಿಗಳು ಅತ್ಯಗತ್ಯವಾಗಿರುತ್ತದೆ.


    ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ಅಗ್ರಿಗೇಟರ್ಸ್‌ ನಿಯಮಗಳಡಿ ಟ್ಯಾಕ್ಸಿ ಸೇವೆ ಒದಗಿಸಲು ಓಲಾ ಮತ್ತು ಉಬರ್‌ ಕಂಪೆನಿಗಳಿಗೆ ಪರವಾನಗಿ ನೀಡಲಾಗಿದೆ. ಆದರೆ, ಪರವಾನಗಿ ಪಡೆಯದೆ ಆಟೋ ಸೇವೆ ಒದಗಿಸಲಾಗುತ್ತಿದೆ, ಜೊತೆಗೆ ಅಗ್ರಿಗೇಟರ್‌ಗಳು ಹೆಚ್ಚಿನ ಅನುಕೂಲಕ್ಕಾಗಿ ಶುಲ್ಕವನ್ನು ವಿಧಿಸುತ್ತಿದ್ದರು.


    ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದ ಸಾರಿಗೆ ಇಲಾಖೆ, ಆ್ಯಪ್‌ ಆಧಾರಿತ ಆಟೋರಿಕ್ಷಾ ಸೇವೆ ಸ್ಥಗಿತಗೊಳಿಸುವ ವಿಚಾರವಾಗಿ ವಿವರಣೆ ಕೇಳಿ ಅಕ್ಟೋಬರ್ 6 ರಂದು ನೋಟಿಸ್‌ ನೀಡಿತ್ತು. ಸೇವೆ ಸ್ಥಗಿತಗೊಳಿಸಲು ಅ. 11ರಂದು ಸರ್ಕಾರ ಆದೇಶ ಹೊರಡಿಸಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರ ಕಂಪೆನಿಗಳು ಹೈಕೋರ್ಟ್‌ ಮೊರೆ ಹೋಗಿದ್ದವು, ಹೈಕೋರ್ಟ್ ಇದಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಹಮತದ ತೀರ್ಮಾನ ಕೈಗೊಳ್ಳುವಂತೆ ಸರಕಾರಕ್ಕೆ ಸೂಚಿಸಿದೆ.


    ನಿಷೇಧವು ಸಾಮಾನ್ಯ ದರಗಳ ವಾಪಾಸಾತಿಗೆ ಸಹಾಯ ಮಾಡಿದೆಯೇ?
    ಬೆಂಗಳೂರು ಮೂಲದ ಟೆಕ್ಕಿ ಪ್ರಹ್ಲಾದ್ ರಾವ್ ಅವರು ಕೆಲಸ ಮಾಡಲು ಜೆಪಿ ನಗರ 3ನೇ ಹಂತದಿಂದ ಬಸವನಗುಡಿಗೆ ಪ್ರತಿದಿನ ಆಟೋದಲ್ಲಿ 5.4 ಕಿ.ಮೀ ಹೋಗುತ್ತಾರೆ. ಇವರು ಮಾಮೂಲಿ ಆಟೋದಲ್ಲಿ ಹೋದರೆ ಇವರಿಗೆ 75 ರೂ. ಬೇಕಾಗುತ್ತದೆ. ಅದೇ ಇವರು ಅಗ್ರಿಗೇಟರ್ ಅಪ್ಲಿಕೇಶನ್‌ಗಳ ಮೂಲಕ ಬುಕ್ ಮಾಡಿ ಹೋದರೆ ಅದೇ ಹಾದಿಗೆ ಇವರು ಪ್ರತಿ ರೈಡ್‌ಗೆ 150 ರೂಪಾಯಿಗಳನ್ನು ಪಾವತಿಸುತ್ತಾರೆ. ಅಂದರೆ ಅವರ ರೈಡ್‌ನಲ್ಲಿ 50% ಕ್ಕಿಂತ ಹೆಚ್ಚು ಅನುಕೂಲಕರ ಶುಲ್ಕವನ್ನು ವಿಧಿಸುತ್ತದೆ.


    ಇದರಿಂದ ಸರ್ಕಾರ ನಿಗದಿಪಡಿಸಿದ ದರಗಳನ್ನು ಅನುಸರಿಸಲು ಕಂಪೆನಿಗಳಿಗೆ ಆದೇಶ ನೀಡಲಾಗಿದೆ. ಇದರಂತೆ ಕಂಪನಿಗಳು ಮೊದಲ 2 ಕಿಮೀಗೆ 30 ರೂ ಮತ್ತು ನಂತರ 15 ರೂಗಳ ನಿಗದಿತ ದರವನ್ನು ಮಾತ್ರ ವಿಧಿಸಬಹುದಾಗಿದೆ.


    ಹಣ ಹೆಚ್ಚಿದ್ದರೂ ಆ್ಯಪ್‌ ಆಧಾರಿತ ಆಟೋಗಳ ಮೇಲೆ ಪ್ರಯಾಣಿಕರ ಒಲವು
    ಆದರೂ ಜನ ಅಗ್ರಿಗೇಟರ್ ಅಪ್ಲಿಕೇಶನ್‌ಗಳ ಮೂಲಕ ಬುಕ್ ಮಾಡಿ ಹೋಗಲು ಬಯಸುತ್ತಾರೆ. ಟೆಕ್ಕಿಯೊಬ್ಬರು ಮಾತನಾಡಿ "ಆಟೋಗಳನ್ನು ನಿಷೇಧಿಸುವ ಸರ್ಕಾರದ ನಿರ್ಧಾರವು ನಮಗೆ ಬೇಸರ ತಂದಿದೆ. ಮೊದಲು, ನಾನು ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಸುಲಭವಾಗಿ ಆಟೋದಲ್ಲಿ ಹೋಗಬಹುದಿತ್ತು. ಆದರೆ, ಈಗ ಮೀಟರ್ ಹೊಂದಿರುವ ಆಟೋಗಳನ್ನು ಕಂಡುಹಿಡಿಯುವುದು ತುಂಬಾ ಕಷ್ಟಕರವಾಗಿದೆ" ಎಂದು ಹೇಳಿದರು.


    ಏತನ್ಮಧ್ಯೆ, ಮೀಟರ್ ಹೊಂದಿರುವ ಆಟೋ-ರಿಕ್ಷಾಗಳನ್ನು ಹುಡುಕಲು ಪ್ರಯತ್ನಿಸಿದ ಇತರ ಪ್ರಯಾಣಿಕರು ಆಟೋ-ಚಾಲಕರು ಒಪ್ಪಿಗೆ ನೀಡುವವರೆಗೆ ಕಾಯುವುದು ಮಾತ್ರವಲ್ಲದೆ, ಅತಿಯಾದ ಮೊತ್ತವನ್ನು ಸಹ ಪಾವತಿಸಬೇಕಾಯಿತು ಎಂದು ಆರೋಪಿಸಿದರು. ಸರ್ಕಾರದ ಈ ನಿಷೇಧ ಬಂದ ಸಂದರ್ಭದಲ್ಲಿ ಕೆಲವು ಖಾಸಗಿ ಆಟೋ ಚಾಲಕರು ಓಲಾ ಮತ್ತು ಉಬರ್‌ನಷ್ಟೇ ಶುಲ್ಕ ವಿಧಿಸಿದ್ದಾರೆ ಎಂದು ಕೆಲ ಪ್ರಯಾಣಿಕರು ದೂರಿದ್ದಾರೆ.


    ಹೈಕೋರ್ಟ್ ಮಧ್ಯಂತರ ಆದೇಶ ಏನು?
    ಸರ್ಕಾರದ ನಿಷೇಧವನ್ನು ಪ್ರಶ್ನಿಸಿ ಅಗ್ರಿಗೇಟರ್‌ಗಳು ಕರ್ನಾಟಕ ಹೈಕೋರ್ಟ್‌ಗೆ ಮೊರೆ ಹೋದಾಗ, ನ್ಯಾಯಮೂರ್ತಿ ಎಂಜಿ ಶುಕುರೆ ಕಮಲ್ ಅವರು ಜಿಎಸ್‌ಟಿ ಹೊರತುಪಡಿಸಿ, ಪ್ರಯಾಣ ದರದ 10% ರಷ್ಟು ಅನುಕೂಲಕರ ಶುಲ್ಕವನ್ನು ಮಿತಿಗೊಳಿಸಿ ಮಧ್ಯಂತರ ಆದೇಶವನ್ನು ನೀಡಿದರು. ಈ ವಿವಾದದಲ್ಲಿ ಎಲ್ಲಾ ಪಾಲುದಾರರು ಒಮ್ಮತಕ್ಕೆ ಬರಲು ಮತ್ತು ಎಲ್ಲರಿಗೂ ಪ್ರಯೋಜನಕಾರಿ ಮೊತ್ತವನ್ನು ನಿರ್ಧರಿಸಲು ಹೈಕೋರ್ಟ್ ಹೇಳಿದೆ.


    ಕರ್ನಾಟಕ ಸಾರಿಗೆ ಇಲಾಖೆಯು ಅಕ್ಟೋಬರ್ 29 ರಂದು ಓಲಾ, ಉಬರ್ ಮತ್ತು ರಾಪಿಡೋ ಕಾರ್ಯನಿರ್ವಾಹಕರೊಂದಿಗೆ ಸಭೆಗೆ ಕರೆದಿತ್ತಾದರೂ ಅಲ್ಲೂ ಸಹ ಇಬ್ಬರು ಯಾವುದೇ ಒಮ್ಮತಕ್ಕೆ ಬಂದಿಲ್ಲ.


    ಅಧಿಕಾರಿಗಳು ಹೇಳುವುದೇನು?
    ಕರ್ನಾಟಕ ಸರ್ಕಾರದ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿ, "ಓಲಾ ಮತ್ತು ಉಬರ್‌ನ ಕಾರ್ಯನಿರ್ವಾಹಕರು ಫ್ಲೆಕ್ಸಿ-ಫೇರ್ ಅನ್ನು ಮುಂದುವರಿಸಲು ಪ್ರಯತ್ನಿಸಿದರು, ಇದನ್ನು ಸರ್ಜ್ ಪ್ರೈಸ್ ಎಂದೂ ಕರೆಯುತ್ತಾರೆ, ಆದರೆ ಇಲಾಖೆಯು ಈ ಕಲ್ಪನೆಯನ್ನು ಒಪ್ಪಿಕೊಳ್ಳಲಿಲ್ಲ. ಇದರಿಂದಾಗಿ ಇಬ್ಬರ ನಡುವೆ ಬಿಕ್ಕಟ್ಟು ಮುಂದುವರೆದಿದೆ" ಎಂದು ತಿಳಿಸಿದರು.


    ಬೆಂಗಳೂರಿನಲ್ಲಿ ಆಟೋ ಚಾಲಕರ ಗತಿ ಏನು?
    ಕೋವಿಡ್‌ನಿಂದ ಹೊಡೆತ ಅನುಭವಿಸಿದ್ದ ಆಟೋ ಚಾಲಕರು ಮತ್ತೊಂದು ಸಂಕಷ್ಟದಲ್ಲಿದ್ದಾರೆ. ಸಾರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಓಲಾ, ಉಬರ್ ಮತ್ತು ರಾಪಿಡೋ ಅಧಿಕಾರಿಗಳ ನಡುವಿನ ತಿಕ್ಕಾಟದಲ್ಲಿ ಆಟೋ ಚಾಲಕರು ಹೈರಾಣಾಗಿದ್ದಾರೆ.


    ಆಟೋ-ರಿಕ್ಷಾ ಚಾಲಕರ ಒಂದು ವಿಭಾಗವನ್ನು ಪ್ರತಿನಿಧಿಸುವ ವಕೀಲ ಅಮೃತೇಶ್ ಎನ್‌ಪಿ, ಸರ್ಕಾರವು ನಿಜವಾದ ಪಾಲುದಾರರಾದ ಆಟೋ ಚಾಲಕರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.


    ಇದನ್ನೂ ಓದಿ: ಓಲಾ, ಉಬರ್​ಗೆ ಸೆಡ್ಡು ಹೊಡೆದು BMTC ಆ್ಯಪ್ ಆಧಾರಿತ ಸೇವೆ ನೀಡುತ್ತಾ?


    ಸಾರಿಗೆ ಇಲಾಖೆಯು ಭ್ರಷ್ಟವಾಗಿದ್ದು, ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲು ಮೀನಾಮೇಷ ಎಣಿಸುತ್ತಿದೆ. ಇಲಾಖೆಯು ಈ ದೊಡ್ಡ ಕಂಪನಿಗಳ ಕಾರ್ಯನಿರ್ವಾಹಕರನ್ನು ಮಾತ್ರ ಸಭೆಗೆ ಕರೆದು ಆಟೋರಿಕ್ಷಾ ಯೂನಿಯನ್‌ಗಳನ್ನು ನಿರ್ಲಕ್ಷಿಸಿದೆ. ನವೆಂಬರ್ 7 ರಂದು ವಿಚಾರಣೆ ಪುನರಾರಂಭವಾದಾಗ ನಾವು ಈ ವಿಷಯಗಳನ್ನು ನ್ಯಾಯಾಲಯದಲ್ಲಿ ಪ್ರಸ್ತಾಪಿಸುತ್ತೇವೆ ಎಂದು ತಿಳಿಸಿದರು.


    ಬೆಂಗಳೂರಿನಲ್ಲಿ ಆಟೋ ಚಾಲಕ ಅಬ್ದುಲ್ ಖಲೀಲ್ ಅವರು ಇಂಧನ ವೆಚ್ಚವನ್ನು ಸರಿದೂಗಿಸಲು ಅಗ್ರಿಗೇಟರ್ ಅಪ್ಲಿಕೇಶನ್‌ಗಳು ಹೇಗೆ ವಿಫಲವಾಗಿವೆ ಎಂಬುದನ್ನು ತೋರಿಸುತ್ತಿವೆ. ಈ ನಿಷೇಧ ನಮ್ಮ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ ಎಂದು ಹೇಳಿದರು. ಹಾಗಂತ ಇದೇ ರೀತಿಯ ಪರಿಣಾಮ ಬೆಂಗಳೂರಿನ ಎಲ್ಲಾ ಆಟೋ ಚಾಲಕರ ಮೇಲೆ ಬೀರಿಲ್ಲ.


    100 ಕ್ಕೂ ಹೆಚ್ಚು ಆಟೋಗಳನ್ನು ವಶಪಡಿಸಿಕೊಂಡ ಇಲಾಖೆ
    ಸರ್ಕಾರವು ಅಗ್ರಿಗೇಟರ್‌ಗಳ ಮೇಲೆ ನಿಷೇಧ ಹೇರಿದ ದಿನ, ಆರ್‌ಟಿಒ ಅಧಿಕಾರಿಗಳು 100 ಕ್ಕೂ ಹೆಚ್ಚು ಆಟೋಗಳನ್ನು ವಶಪಡಿಸಿಕೊಂಡರು. ದಂಡ ವಿಧಿಸಿದರು ಮತ್ತು ಆಟೋ ಸೇವೆಗಳು ಕಾನೂನುಬಾಹಿರ ಎಂದು ಕಂಪನಿಗಳಿಗೆ ನೋಟಿಸ್ ಕಳುಹಿಸಿದರು.


    ಇದನ್ನೂ ಓದಿ: Vande Bharat Express: ವಂದೇ ಭಾರತ್ ಎಫೆಕ್ಟ್; ಬೆಂಗಳೂರು-ಚೆನ್ನೈ ನಡುವಿನ 2 ರೈಲುಗಳ ವೇಗ ಕಡಿಮೆ ಸಾಧ್ಯತೆ


    ನಿಷೇಧದ ಬಗ್ಗೆ ಪ್ರತಿಕ್ರಿಯಿಸಿದ ಓಲಾ ಮತ್ತು ಉಬರ್ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಮತ್ತು ಕರ್ನಾಟಕ ರಾಜ್ಯ ಆಟೋ ಮತ್ತು ಟ್ಯಾಕ್ಸಿ ಫೆಡರೇಶನ್ ಸದಸ್ಯ ತನ್ವೀರ್ ಪಾಷಾ, "ನಿಷೇಧವು ಆಟೋ ಚಾಲಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಕ್ಯಾಬ್ ಚಾಲಕರು ಭಿನ್ನವಾಗಿ, ಅವರು ವ್ಯಾಪಾರವನ್ನು ಮುಂದುವರಿಸುತ್ತಾರೆ. ಆದರೆ ಸ್ವಯಂಸೇವಕರು ಮಾಡಿದ ತಪ್ಪುಗಳಿಗೆ ಆಟೋ ಚಾಲಕರು ದಂಡನೆಗೆ ಒಳಗಾಗದಂತೆ ಸರಕಾರದ ಮಧ್ಯಸ್ಥಿಕೆಯನ್ನು ನಾವು ಬಯಸುತ್ತೇವೆ." ಎಂದರು. ಒಲಾ ಮತ್ತು ಉಬರ್ ನ್ಯಾಯಯುತ ಬೆಲೆಯನ್ನು ಒಪ್ಪಿಕೊಳ್ಳಬೇಕೆಂದು ನಾವು ಬಯಸುತ್ತೇವೆ ಎಂದು ತಿಳಿಸಿದರು.


    ಈ ಬಿಕ್ಕಟ್ಟಿನಲ್ಲಿ ನಿಜವಾದ ನಷ್ಟ ಯಾರಿಗೆ?
    ಬೆಂಗಳೂರು ನಗರದ ಕಳಪೆ ಮೂಲಸೌಕರ್ಯ, ಕೆಟ್ಟ ರಸ್ತೆಗಳು ಮತ್ತು ಕಳಪೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಗಮನಿಸಿದರೆ, ಹೆಚ್ಚಿನ ನಿವಾಸಿಗಳು ಕಡಿಮೆ ದೂರ ಪ್ರಯಾಣಿಸಲು ಆಟೋಗಳನ್ನು ಅವಲಂಬಿಸಿದ್ದಾರೆ. ಸರ್ಕಾರ ಮತ್ತು ದೊಡ್ಡ ಕಂಪನಿಗಳ ಮಧ್ಯದ ಜಟಾಪಟಿಯಲ್ಲಿ ಪ್ರಯಾಣಿಕರು ಮತ್ತು ಆಟೋ ಚಾಲಕರು ಇಕ್ಕಟ್ಟಿಗೆ ಸಿಲುಕಿದ್ದಂತೂ ಹೌದು.

    Published by:ಗುರುಗಣೇಶ ಡಬ್ಗುಳಿ
    First published: