ರವಿಕುಮಾರ್ ಸಮರ್ಥ್...ಈ ಹೆಸರು ಕನ್ನಡಿಗರಿಗೆ ಅಷ್ಟೇನೂ ಪರಿಚಿತವಲ್ಲ. ಏಕೆಂದರೆ ಈತ ರಾಷ್ಟ್ರೀಯ ತಂಡವನ್ನೂ ಪ್ರತಿನಿಧಿಸಿಲ್ಲ. ಹಾಗೆಯೇ ಐಪಿಎಲ್ ಕೂಡ ಆಡಿಲ್ಲ. ಆದರೆ ಕರ್ನಾಟಕ ರಣಜಿ ತಂಡದ ಆಧಾರಸ್ತಂಭ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು, ರವಿಕುಮಾರ್ ಸಮರ್ಥ್ ಎಂತಹ ಬ್ಯಾಟ್ಸ್ಮನ್ ಎಂಬುದಕ್ಕೆ ಪ್ರಸ್ತುತ ನಡೆಯುತ್ತಿರುವ ವಿಜಯ್ ಹಝಾರೆ ಟೂರ್ನಿಯ ಬ್ಯಾಟಿಂಗ್ ಪ್ರದರ್ಶನವೇ ಸಾಕ್ಷಿ.
ಕೆ.ಎಲ್. ರಾಹುಲ್ ಮತ್ತು ಮನೀಶ್ ಪಾಂಡೆ ಅವರಂತಹ ಪ್ರತಿಭೆಗಳು ಕರ್ನಾಟಕದಿಂದ ಟೀಮ್ ಇಂಡಿಯಾಗೆ ಪ್ರವೇಶಿಸುತ್ತಿದ್ದಂತೆ, ಇತ್ತ ರಾಜ್ಯ ತಂಡದ ಆರಂಭಿಕರ ಕೊರತೆಯನ್ನು ನೀಗಿಸಿದ್ದು ರವಿಕುಮಾರ್ ಸಮರ್ಥ್. 2013-14ರ ರಣಜಿ ಸೀಸನ್ನಲ್ಲಿ ಕರ್ನಾಟಕದ ಪರ ಮೊದಲ ಪಂದ್ಯವಾಡಿದ ಸಮರ್ಥ್ ಮುಂಬೈ ವಿರುದ್ಧದ ಚೊಚ್ಚಲ ಪಂದ್ಯದಲ್ಲೇ 75 ರನ್ ಸಿಡಿಸಿದ್ದರು.
ಇದರ ಬಳಿಕ ಕರ್ನಾಟಕ ತಂಡದ ಮಧ್ಯಮ ಕ್ರಮಾಂಕವನ್ನು ಸಮರ್ಥ್ ಸಮರ್ಥವಾಗಿ ನಿಭಾಯಿಸಿದ್ದರು. 2015-16ರ ದೇಶೀಯ ಟೂರ್ನಿಯಲ್ಲಿ ಮಿಡಲ್ ಆರ್ಡರ್ನಲ್ಲಿ ಬ್ಯಾಟ್ ಬೀಸಿ 487 ರನ್ಗಳಿಸಿದ್ದರು. 2016-17ರಲ್ಲಿ ಮೇಲಿನ ಕ್ರಮಾಂಕದಲ್ಲಿ ಅವಕಾಶ ಪಡೆದ ಬಳಿಕ ಕನ್ನಡಿಗ ಹಿಂತಿರುಗಿ ನೋಡಿಲ್ಲ. ಈ ಸೀಸನ್ನಲ್ಲಿ 46.80 ರ ಸರಾಸರಿಯಲ್ಲಿ 702 ರನ್ ಗಳಿಸಿದ ಅವರು, ಕರ್ನಾಟಕದ ಪ್ರಮುಖ ರನ್-ಸ್ಕೋರರ್ ಆಗಿ ಹೊರಹೊಮ್ಮಿದರು.
ಅಲ್ಲದೆ ರಾಷ್ಟ್ರೀಯ ಆಯ್ಕೆದಾರರು ಅವರ ಮೇಲೆ ಕಣ್ಣಿಟ್ಟಿರುವುದು ಕೂಡ ಖಾತ್ರಿಯಾಗಿತ್ತು. ಗಾಯಾಳು ಅಭಿನವ್ ಮುಕುಂದ್ ಬದಲಿಗೆ ಭಾರತದ 'ಎ' ತಂಡದಲ್ಲೂ ಸ್ಥಾನ ಪಡೆದಿದ್ದರು.
ಇದರ ಬಳಿಕ ಕೂಡ ಸಮರ್ಥ್ ಆರ್ಭಟ ದೇಶೀಯ ಟೂರ್ನಿಯಲ್ಲಿ ಮುಂದುವರೆದಿತ್ತು. 2017/18 ರಣಜಿ ಟ್ರೋಫಿ ಸೀಸನ್ನ 12 ಇನ್ನಿಂಗ್ಸ್‌ಗಳಿಂದ ಸಮರ್ಥ್ ಕಲೆಹಾಕಿದ್ದು ಬರೋಬ್ಬರಿ 652 ರನ್ಗಳು. ತಮ್ಮ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಆ ಸೀಸನ್ನಲ್ಲಿ ಕರ್ನಾಟಕ ಸೆಮಿಫೈನಲ್ ಪ್ರವೇಶಿಸಿತ್ತು. ಇದಾದ ಬಳಿಕ ಕರ್ನಾಟಕ ವಿಜಯ್ ಹಝಾರೆ ಟ್ರೋಫಿಯನ್ನು ಗೆಲ್ಲುವಲ್ಲಿ ಸಮರ್ಥ್ ಪ್ರಮುಖ ಪಾತ್ರವಹಿಸಿದ್ದರು. ಇದಾಗ್ಯೂ ಸಮರ್ಥ್ ಅವರನ್ನು ಖರೀದಿಸಲು ಯಾವುದೇ ಐಪಿಎಲ್ ಫ್ರಾಂಚೈಸಿಗಳು ಮುಂದಾಗಲಿಲ್ಲ.
ಇನ್ನು ಭಾರತ ಎ ತಂಡವನ್ನು ಪ್ರತಿನಿಧಿಸಿದ್ದ ಸಮರ್ಥ್ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಇನ್ನಿಂಗ್ಸ್‌ನಲ್ಲಿ 127 ರನ್ ಬಾರಿಸುವ ಮೂಲಕ ಟೀಮ್ ಇಂಡಿಯಾ ಎ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಪ್ರಸ್ತುತ ನಡೆಯುತ್ತಿರುವ ವಿಜಯ್ ಹಝಾರೆ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಸಮರ್ಥ್ ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ.
ಅನುಭವಿ ಆಟಗಾರರ ಕೊರತೆಯ ನಡುವೆ ತಂಡದ ನಾಯಕತ್ವವನ್ನು ವಹಿಸಿಕೊಂಡಿರುವ 28 ವರ್ಷದ ಸಮರ್ಥ್ ಕಳೆದ 5 ಇನಿಂಗ್ಸ್ಗಳಿಂದ ಕಲೆಹಾಕಿದ್ದು ಬರೋಬ್ಬರಿ 413 ರನ್ಗಳು. ಅದರಲ್ಲಿ ಎರಡು ಭರ್ಜರಿ ಅಜೇಯ ಶತಕಗಳು ( 158, 130 ) ಹಾಗೂ 2 ಬಿರುಸಿನ ಅರ್ಧಶತಕಗಳು ಮೂಡಿಬಂದಿರುವುದು ವಿಶೇಷ. ಭರ್ಜರಿ ಬ್ಯಾಟಿಂಗ್ ಜೊತೆಗೆ ಅತ್ಯುತ್ತಮವಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಸದ್ಯ ಕರ್ನಾಟಕ ತಂಡ ವಿಜಯ್ ಹಝಾರೆ ಟೂರ್ನಿಯಲ್ಲಿ ಕ್ವಾಟರ್ ಫೈನಲ್ ಪ್ರವೇಶಿಸಿದ್ದು, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಗುರುತಿಸಿಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ