• ಹೋಂ
  • »
  • ನ್ಯೂಸ್
  • »
  • Explained
  • »
  • BJP Defeat: ಬಿಜೆಪಿ ಹೀನಾಯ ಸೋಲಿಗೆ ಕಾರಣಗಳೇನು? ಅತಿ ವಿಶ್ವಾಸವೋ, 40 ಪರ್ಸೆಂಟ್ ಆರೋಪವೋ?

BJP Defeat: ಬಿಜೆಪಿ ಹೀನಾಯ ಸೋಲಿಗೆ ಕಾರಣಗಳೇನು? ಅತಿ ವಿಶ್ವಾಸವೋ, 40 ಪರ್ಸೆಂಟ್ ಆರೋಪವೋ?

ಬಿಜೆಪಿ ಸೋಲಿಗೇನು ಕಾರಣ?

ಬಿಜೆಪಿ ಸೋಲಿಗೇನು ಕಾರಣ?

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಮತ್ತೊಮ್ಮೆ ಗೆದ್ದು, ಅಧಿಕಾರಕ್ಕೆ ಏರುವ ವಿಶ್ವಾಸದಲ್ಲಿದ್ದ ಬಿಜೆಪಿ ಹೀನಾಯವಾಗಿ ಸೋತಿದ್ದು ಯಾಕೆ? ಇಲ್ಲಿದೆ ಕುತೂಹಲಕಾರಿ ಮಾಹಿತಿ…

  • News18 Kannada
  • 2-MIN READ
  • Last Updated :
  • Karnataka, India
  • Share this:

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಅತಂತ್ರ ವಿಧಾನಸಭೆ ಅಂತ ಭವಿಷ್ಯ ನುಡಿದಿದ್ದ ಸಮೀಕ್ಷೆಗಳೇ ಸುಳ್ಳಾಗುವಂತೆ ಅತೀ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಿದೆ. ಸರ್ಕಾರ ರಚನೆಗೆ ಬೇಕಿದ್ದ 113 ಸ್ಥಾನಗಳನ್ನು ಮೀರಿರೋ ಕಾಂಗ್ರೆಸ್, ಇದೀಗ ಬರೋಬ್ಬರಿ 136 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ ಬರೀ 65 ಕ್ಷೇತ್ರಗಳಲ್ಲಷ್ಟೇ ಅರಳಲು ಶಕ್ತವಾಗಿದೆ. ಇನ್ನು ಕಿಂಗ್ ಮೇಕರ್ ಆಗುವ ಕನಸು ಕಂಡಿದ್ದ ಜೆಡಿಎಸ್ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ನಾಲ್ವರು ಪಕ್ಷೇತರರು ಜಯ ಸಾಧಿಸಿದ್ದಾರೆ. ಹಾಗಾದರೆ ಮತ್ತೊಮ್ಮೆ ಗೆದ್ದು, ಅಧಿಕಾರಕ್ಕೆ ಏರುವ ವಿಶ್ವಾಸದಲ್ಲಿದ್ದ ಬಿಜೆಪಿ ಹೀನಾಯವಾಗಿ ಸೋತಿದ್ದು ಯಾಕೆ? ಇಲ್ಲಿದೆ ಕುತೂಹಲಕಾರಿ ಮಾಹಿತಿ…     


ಆಡಳಿತ ವಿರೋಧಿ ಅಲೆ


ಕರ್ನಾಟಕದಲ್ಲಿ ಬಿಜೆಪಿಗೆ ಆಡಳಿತ ವಿರೋಧಿ ಅಲೆ ಇದ್ದಿದ್ದು ಸ್ಪಷ್ಟವಾಗುತ್ತದೆ. ಮೈತ್ರಿ ಸರ್ಕಾರ ಉರುಳಿಸಿ, ಸಂವಿಧಾನ ಬಾಹೀರವಾಗಿ ಅಧಿಕಾರಕ್ಕೆ ಬಂದಿದ್ದಾರೆ ಎಂಬ ಆರೋಪ ಮೊದಲೇ ಇತ್ತು. ಇದರ ಜೊತೆಗೆ 40 ಪರ್ಸೆಂಟ್ ಭ್ರಷ್ಟಾಚಾರದ ಆರೋಪವೂ ಸೇರಿತು. ಇದೇ ವಿಚಾರವನ್ನು ಕಾಂಗ್ರೆಸ್ ಪರಿಣಾಮಕಾರಿಯಾಗಿ ಬಳಸಿಕೊಂಡಿತು. ಪೋಸ್ಟರ್, ಸೋಶಿಯಲ್ ಮೀಡಿಯಾ ಮೂಲಕ ಕಾಂಗ್ರೆಸ್ ನಡೆಸಿದ ಪೇ ಸಿಎಂ ಅಭಿಯಾನ ಬಿಜೆಪಿಗೆ ಮುಳುವಾಯ್ತು.


ಯಡಿಯೂರಪ್ಪನವರನ್ನು ಕಡೆಗಣಿಸಿದರಾ?


ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಏರುವಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಕೊಡುಗೆ ಅತೀ ದೊಡ್ಡದಾಗಿದೆ. ಬೇರು ಬಿಡಲೂ ಪರದಾಡುತ್ತಿದ್ದ ಬಿಜೆಪಿಗೆ ರಾಜ್ಯದಲ್ಲಿ ಭದ್ರ ನೆಲೆ ಒದಗಿಸಿದವರಲ್ಲಿ ಯಡಿಯೂರಪ್ಪ ಕೂಡ ಒಬ್ಬರು. ದೊಡ್ಡ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು, ಬಿಜೆಪಿಯನ್ನು ತಳಮಟ್ಟದಲ್ಲಿ ಬೆಳೆಸಿದವರು. ಆದರೆ ಅವರನ್ನೇ ಈ ಬಾರಿ ಕಡೆಗಣಿಸಲಾಯ್ತು ಎಂಬ ಆರೋಪವಿದೆ.


ಇದನ್ನೂ ಓದಿ: ಕರ್ನಾಟಕ ಚುನಾವಣಾ ಫಲಿತಾಂಶ 2023 LIVE: ಸಿಎಂ ಕುರ್ಚಿ ಯಾರಿಗೆ? ಖರ್ಗೆ ನಿವಾಸದಲ್ಲಿ ಡಿಕೆಶಿ ಬ್ರದರ್ಸ್ ಮೀಟಿಂಗ್


ಬಿಎಸ್‌ವೈರನ್ನು ಸಿಎಂ ಸ್ಥಾನದಿಂದ ದೂರವಿಟ್ಟಿದ್ದು


ಬಿಎಸ್‌ವೈ ಅವರನ್ನು ಸಿಎಂ ಸ್ಥಾನದಿಂದ ಕೆಳಕ್ಕಿಳಿಸಿ, ಬಸವರಾಜ ಬೊಮ್ಮಾಯಿ ಅವರನ್ನು ಆ ಸ್ಥಾನಕ್ಕೆ ತಂದಿದ್ದು ಬಿಜೆಪಿಗೆ ಮುಳುವಾಗಿದೆ ಎನ್ನಲಾಗುತ್ತಿದೆ. ನಾನೇ ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದೆ ಅಂತ ಖುದ್ದು ಯಡಿಯೂರಪ್ಪನವ್ರೇ ಹೇಳಿದ್ರು ಬಿಜೆಪಿಗೆ ಡ್ಯಾಮೇಜ್ ಕಂಟ್ರೋಲ್ ಆಗಿಲ್ಲ.


ಲಿಂಗಾಯತ ಸಮುದಾಯದ ಅಸಮಾಧಾನ


ಬಿಜೆಪಿಯು ಚುನಾವಣಾ ಪ್ರಚಾರದ ಸಮಯದಲ್ಲಿ ಹಲವಾರು ಭರವಸೆಗಳನ್ನು ನೀಡಿತು, ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ತನ್ನ ಬಹುಪಾಲು ಮತಗಳ ಪಾಲನ್ನು ಹೊಂದಿರುವ ಪ್ರಬಲ ಸಮುದಾಯಗಳಿಂದ ಮತಗಳನ್ನು ಪಡೆಯಲು ಸರ್ಕಸ್ ಮಾಡಿತು. ಆದರೆ ಲಿಂಗಾಯತ ಸಮುದಾಯದಿಂದ ಬಂದಿರುವ ತನ್ನ ಪ್ರಮುಖ ಮತಬ್ಯಾಂಕ್ ಅನ್ನು ಉಳಿಸಿಕೊಳ್ಳಲು ಅದು ವಿಫಲವಾಗಿದೆ. ಜೊತೆಗೆ ದಲಿತ, ಆದಿವಾಸಿ, ಒಬಿಸಿ ಮತ್ತು ಒಕ್ಕಲಿಗ ಸಮುದಾಯಗಳ ಮತದಾರರನ್ನು ಸೆಳೆಯುವಲ್ಲಿ ವಿಫಲವಾಯ್ತು.


ವಿಫಲರಾದರಾ ಬಸವರಾಜ ಬೊಮ್ಮಾಯಿ?


ಬಿಜೆಪಿಗೆ ಪ್ರಬಲ ರಾಜಕೀಯ ಮುಖ ಇಲ್ಲದಿರುವುದು ಕರ್ನಾಟಕದಲ್ಲಿ ಬಿಜೆಪಿ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತಿದೆ. ಬಿಜೆಪಿ ಮಾಜಿ ಸಿಎಂ ಯಡಿಯೂರಪ್ಪ ಬದಲಿಗೆ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಆದರೆ ಬದಲಾವಣೆ ಮತ್ತು ಪ್ರಗತಿಯ ದೃಷ್ಟಿಯಿಂದ ಜನಸಾಮಾನ್ಯರು ನಿರೀಕ್ಷಿಸಿದ್ದನ್ನು ತಲುಪಿಸುವಲ್ಲಿ ಬಸವರಾಜ ಬೊಮ್ಮಾಯಿ ವಿಫಲರಾದರು. ಇದಲ್ಲದೆ, ಕಾಂಗ್ರೆಸ್‌ಗೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರಂತಹ ಪ್ರಬಲ ಮುಖಗಳು ಸಿಎಂ ಆಕಾಂಕ್ಷಿಗಳ ಲಿಸ್ಟ್‌ನಲ್ಲಿತ್ತು. ಆದರೆ ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದೇ ಗೊಂದಲವಾಗಿತ್ತು.


ಹಿರಿಯ ನಾಯಕರ ಕಡೆಗಣನೆ


ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಈ ಚುನಾವಣೆಯ ಸಂದರ್ಭದಲ್ಲಿ ನಿರ್ಲಕ್ಷ್ಯಿಸಲಾಯ್ತು. ಮತ್ತೋರ್ವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಂತಹ ಪ್ರಮುಖ ನಾಯಕರಿಗೂ ಬಿಜೆಪಿ ಟಿಕೆಟ್ ನಿರಾಕರಿಸಿತ್ತು. ಇದರಿಂದಾಗಿ ಇಬ್ಬರೂ ಕಾಂಗ್ರೆಸ್ ಸೇರಿ, ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಲಿಂಗಾಯತ ನಾಯಕ ಬಿಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿಯನ್ನು ಕಡೆಗಣಿಸಿದ್ದೂ ಸೋಲಿಗೆ ಕಾರಣ ಎನ್ನಲಾಗಿದೆ. ಇನ್ನು 20 ಹಾಲಿ ಶಾಸಕರಿಗೆ ಟಿಕೆಟ್ ನೀಡದೇ ಇರುವುದು ಮತ್ತು 75 ಹೊಸಬರಿಗೆ ಟಿಕೆಟ್ ನೀಡಿರೋ ನಿರ್ಧಾರ ತಪ್ಪಾಗಿತ್ತು.


ಕೇಂದ್ರದ ನಾಯಕರ ಮೇಲಿನ ಅವಲಂಬನೆ


ರಾಜ್ಯ ಬಿಜೆಪಿ ನಾಯಕರು ಸ್ಥಳೀಯ ನಾಯಕರಿಗಿಂತ ಕೇಂದ್ರದ ನಾಯಕರನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ರು. ತಮ್ಮ ಆಡಳಿತದ ಯೋಜನೆಗಳ ಬಗ್ಗೆ ಪ್ರಚಾರ ಮಾಡದೇ ಮೋದಿ ಹಾಗೂ ಕೇಂದ್ರ ಸರ್ಕಾರದ ಯಶಸ್ವಿ ಯೋಜನೆಗಳನ್ನೇ ಇಟ್ಟುಕೊಂಡು ಚುನಾವಣೆಗೆ ಹೋಗಿದ್ದರು. ಅಲ್ಲದೇ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ, ಯೋಗಿ ಆದಿತ್ಯನಾಥ್ ಸೇರಿದಂತೆ ಕೇಂದ್ರದ ನಾಯಕರನ್ನೇ ನೆಚ್ಚಿಕೊಂಡಿದ್ದರು.




ಈಶ್ವರಪ್ಪ ಮೇಲಿನ ಆರೋಪ, ಮಾಡಾಳ್ ಭ್ರಷ್ಟಾಚಾರ


ಹಿಂದೆ ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಶ್ವರಪ್ಪ ವಿರುದ್ಧ ಆರೋಪ ಮಾಡಿದ್ದರಿಂದ ಈಶ್ವರಪ್ಪ ರಾಜೀನಾಮೆ ನೀಡಬೇಕಾಯ್ತು. ಇನ್ನು ಚುನಾವಣೆ ಹೊಸ್ತಿಲಲ್ಲಿ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಭ್ರಷ್ಟಾಚಾರ ಆಱೋಪದ ಮೇಲೆ ಜೈಲು ಸೇರಿದ್ದರು. ಇವೆರಡೂ ಪ್ರಕರಣಗಳು ಬಿಜೆಪಿಗೆ ಮುಳುವಾದವು.


ಇದನ್ನೂ ಓದಿ: Bangalore: ರಾಜ್ಯ ರಾಜಧಾನಿಯಲ್ಲಿ ರಾಜರಾದವರು ಯಾರು? ಗ್ರಾಮಾಂತರದಲ್ಲಿ ಗೆದ್ದು ಬೀಗಿದವರು ಯಾರು?


ಫಲ ನೀಡದ ಹಿಂದುತ್ವದ ಅಜೆಂಡಾ!  

top videos


    ಬಜರಂಗದಳದ ಮೇಲೆ ನಿಷೇಧ ಹೇರುವುದಾಗಿ ಕಾಂಗ್ರೆಸ್ ಭರವಸೆ ನೀಡಿದ ನಂತರ ಕರ್ನಾಟಕದ ಬಿಜೆಪಿ ನಾಯಕರು ಇದನ್ನೇ ಅಸ್ತ್ರ ಮಾಡಿಕೊಳ್ಳುವ ಯತ್ನ ಮಾಡಿದ್ರು.  ಹಲಾಲ್, ಹಿಜಾಬ್, ಆಜಾನ್ ಮತ್ತು ಬಜರಂಗಿ ಸೇರಿದಂತೆ ಹಲವು ಅಸ್ತ್ರಗಳನ್ನು ಪ್ರಯೋಗಿಸಿದರು. ಇನ್ನು ಉತ್ತರ ಪ್ರದೇಶದಂತ ರಾಜ್ಯಗಳಲ್ಲಿ ಚೆನ್ನಾಗಿ ಕೆಲಸ ಮಾಡಬಹುದಾದ ಬಿಜೆಪಿಯ ಹಿಂದುತ್ವ ಕಾರ್ಡ್ ಕರ್ನಾಟಕದಲ್ಲಿ ಕೆಲಸ ಮಾಡಲಿಲ್ಲ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು