ರಾಜ್ಯ ರಾಜಕಾರಣದಲ್ಲಿ ತಮ್ಮದೇ ಛಾಪು ಒತ್ತಿದ ರಾಜಕಾರಣಿಗಳಲ್ಲಿ ಸಾರೆಕೊಪ್ಪ ಬಂಗಾರಪ್ಪ (S. Bangarappa) ಕೂಡ ಒಬ್ಬರು. ಶಾಸಕರಾಗಿ, ಸಚಿವರಾಗಿ, ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಎಸ್. ಬಂಗಾರಪ್ಪ ಅವರದ್ದು ನಲವತ್ತು ವರ್ಷಗಳ ಸುದೀರ್ಘ ರಾಜಕೀಯ ಜೀವನ. ಇನ್ನೂ ಸಹ ಅದೆಷ್ಟೋ ಜನ ಬಂಗಾರಪ್ಪ ಅವರ ಕಾರ್ಯಗಳನ್ನು ನೆನಪಿಸಿಕೊಳ್ಳುತ್ತಾರೆ. ರಾಜ್ಯದ ಮತ್ತು ಆ ಭಾಗದ ಧೀಮಂತ ರಾಜಕಾರಣಿಗಳ ಹೆಸರಲ್ಲಿ ಅಗ್ರಪಂಥಿಯಲ್ಲಿದ್ದವರು ಎಸ್. ಬಂಗಾರಪ್ಪ. ಇದೀಗ ಬಂಗಾರಪ್ಪ ಕುಟುಂಬದಲ್ಲೇ (Bangarappa Family) ಬಣ ರಾಜಕೀಯವಿದೆ. ಅವರ ಇಬ್ಬರು ಗಂಡುಮಕ್ಕಳೇ ಒಬ್ಬೊಬ್ಬರು ಒಂದೊಂದು ಪಕ್ಷ ಸೇರಿ, ರಣಕಣದಲ್ಲಿ ತೊಡೆತಟ್ಟಲಿದ್ದಾರೆ. ಪ್ರತಿಸ್ಪರ್ಧಿ ಪಕ್ಷಗಳಾದ ಬಿಜೆಪಿ (BJP) ಮತ್ತು ಕಾಂಗ್ರೆಸ್‌ಗೆ (Congress) ಸೇರಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಅವರ ಪುತ್ರರು ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ತಂದೆಯ ರಾಜಕೀಯ ಪರಂಪರೆಯನ್ನು ಪಡೆದುಕೊಳ್ಳುವ ಹೋರಾಟದಲ್ಲಿ ಮತ್ತೊಮ್ಮೆ ಸೆಟಸಾಟಕ್ಕೆ ಸಿದ್ಧತೆ ನಡೆಸಿದ್ದಾರೆ. ಹಾಗಾದರೆ ಕಾಂಗ್ರೆಸ್‌ನಿಂದ ಸೊರಬ ಕ್ಷೇತ್ರದಲ್ಲಿ ಸಹೋದರ ಕುಮಾರ್ ಬಂಗಾರಪ್ಪಗೆ (Kumar Bangarappa) ಸವಾಲ್ ಹಾಕುತ್ತಿರುವ ಮಧು ಬಂಗಾರಪ್ಪ (Madhu Bangarappa) ಅವರ ಬಗ್ಗೆ ಕೆಲ ಆಸಕ್ತಿಕರ ಸಂಗತಿಗಳು ಇಲ್ಲಿವೆ.
ಅಣ್ಣನ ವಿರುದ್ಧ ಮಧು ಬಂಗಾರಪ್ಪ ರಾಜಕೀಯ
ವಿಧಾನಸಭಾ ಚುನಾವಣೆಯಲ್ಲಿ ಒಂದು ಸೋಲು, ಒಂದು ಗೆಲುವು ಮತ್ತು ಲೋಕಸಭಾ ಚುನಾವಣೆಯಲ್ಲಿ ಒಂದು ಸೋಲು ಕಂಡಿರುವ ಮಧು ಬಂಗಾರಪ್ಪ ಈ ಬಾರಿ ಮತ್ತೆ ಸಹೋದರ ಕುಮಾರ್ ಬಂಗಾರಪ್ಪ ವಿರುದ್ಧ ಅಖಾಡಕ್ಕೆ ಇಳಿದಾಗಿದೆ.
ಸೊರಬದಲ್ಲಿ ರಂಗೇರಿದ ರಣಕಣ
ಈ ಬಾರಿ ಸೊರಬ ಕ್ಷೇತ್ರದಲ್ಲಿ ಹೇಗಾದರೂ ಬಿಜೆಪಿಯ ಟೊಂಕ ಮುರಿಯಬೇಕು ಎಂದು ಕಾರ್ಯನಿರತವಾಗಿರುವ ಮಧು, ಕುಮಾರ್ ವಿರುದ್ಧ ಸಮರ ಸಾರಿದ್ದಾರೆ. ತಂದೆ ಪ್ರತಿನಿಧಿಸುತ್ತಿದ್ದ ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಟಿಕೆಟ್ ಪಡೆದು ಕಣಕ್ಕಿಳಿದು ಈ ಬಾರಿ ಗೆದ್ದೇ ತೀರುವ ಹುಮ್ಮಸ್ಸಿನಲ್ಲಿದ್ದಾರೆ.
ಬಂಗಾರಪ್ಪನವರ ಪುತ್ರ ಮಧು
ಮಧು ಬಂಗಾರಪ್ಪ ಅವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ಮತ್ತು ದಿವಂಗತ ಶಕುಂತಲಾ ಬಂಗಾರಪ್ಪ ಅವರ ಪುತ್ರ. ಹಿರಿಯ ಸಹೋದರ ಕುಮಾರ್ ಬಂಗಾರಪ್ಪ ಮತ್ತು 3 ಸಹೋದರಿಯರಿದ್ದಾರೆ. ಸಹೋದರಿಯರಲ್ಲಿ ಒಬ್ಬರು ಕನ್ನಡದ ನಟ ಶಿವರಾಜಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮಧು ಬಂಗಾರಪ್ಪ ತಮ್ಮ ಬಿ.ಎ ಪದವಿ ಪಡೆದರು.
ವೈಯಕ್ತಿಕ ಜೀವನ.. ಶಿಕ್ಷಣ.. ಸಿನಿಮಾ ರಂಗ
ರಾಜಕೀಯ, ಸಮಾಜ ಸೇವೆ ಜೊತೆ ಸಿನಿಮಾ ರಂಗದಲ್ಲೂ ಮಧು ಗುರುತಿಸಿಕೊಂಡಿದ್ದಾರೆ. ಚಲನಚಿತ್ರ ನಿರ್ಮಾಣದ ಜೊತೆ ಕೆಲ ಸಿನಿಮಾಗಳಲ್ಲಿ ಅಭಿನಯ ಕೂಡ ಮಾಡಿದ್ದಾರೆ. ಸಿನಿಮಾದ ನಂತರ ಸಂಪೂರ್ಣ ರಾಜಕೀಯಕ್ಕೆ ಪ್ರಸ್ತುತ ಗಮನ ನೀಡಿರುವ ಮಧು ಅವರ ರಾಜಕೀಯ ಹಾದಿ ಹೀಗಿದೆ.
ಮಧು ಬಂಗಾರಪ್ಪ ರಾಜಕೀಯ ಜೀವನ
ಎಸ್. ಮಧು ಬಂಗಾರಪ್ಪ ಸೊರಬ ಕ್ಷೇತ್ರದ ಮಾಜಿ ಶಾಸಕರು, ಕಾಂಗ್ರೆಸ್ ನಾಯಕ. ಮಧು ಬಂಗಾರಪ್ಪ 2013ರಲ್ಲಿ ಸೊರಬ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಮೊದಲ ಬಾರಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರು.
ಅಣ್ಣನ ವಿರುದ್ಧ ಸೋಲುಂಡ ಮಧು ಬಂಗಾರಪ್ಪ
ನಂತರ 2018ರ ಚುನಾವಣೆಯಲ್ಲಿಯೂ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಸಹೋದರ ಕುಮಾರ್ ಬಂಗಾರಪ್ಪ ವಿರುದ್ಧ ಸೋಲು ಕಂಡರು. ಮತ್ತೆ 2019 ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಅಲ್ಲೂ ಕೂಡ ಸೋಲು ಇವರದ್ದಾಯಿತು. 2018ರ ವಿಧಾನಸಭಾ ಚುನಾವಣೆಯಲ್ಲಿ ಕುಮಾರ್ ಬಂಗಾರಪ್ಪ ಅವರು ಮಧು ಬಂಗಾರಪ್ಪ ಅವರನ್ನು 3,286 ಮತಗಳಿಂದ ಸೋಲಿಸಿದ್ದರು.
ʻತೆನೆʼ ಇಳಿಸಿ ʻಕೈʼ ಹಿಡಿದ ಮಧು ಬಂಗಾರಪ್ಪ
ಜೆಡಿಎಸ್ ಪಕ್ಷ ಪರ ದುಡಿದು ಸೊರಬದಲ್ಲಿ ಪಕ್ಷ ಸಂಘಟಿಸಿದ್ದ ಮಧು ನಂತರ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು. ತಂದೆ ಬಂಗಾರಪ್ಪನವರಂತೆಯೇ ಪಕ್ಷಾಂತರ ಮಾಡಿ, ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿದರು. 2021 ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಮಧು ಬಂಗಾರಪ್ಪ ಕಾಂಗ್ರೆಸ್‌ಗೆ ಅಧಿಕೃತವಾಗಿ ಸೇರ್ಪಡೆಯಾದರು ಮತ್ತು 2022 ಕೆಪಿಸಿಸಿ ಒಬಿಸಿ ಘಟಕದ ಕಾರ್ಯಾಧ್ಯಕ್ಷರಾಗಿ ನೇಮಕವಾದರು.
ಈ ಬಾರಿ ಅಣ್ಣನನ್ನೇ ಸೋಲಿಸ್ತಾರಾ ಮಧು?
ಕಳೆದ ಬಾರಿ ಜೆಡಿಎಸ್‌ನಲ್ಲಿ ನಿಂತು ಸೋತು ಸುಣ್ಣವಾಗಿದ್ದ ಮಧು ಬಂಗಾರಪ್ಪ ಕಾಂಗ್ರೆಸ್ ಪಕ್ಷದ ಮೂಲಕ ಕುಮಾರು ಬಂಗಾರಪ್ಪ ವಿರುದ್ಧ ಶತಾಯ ಗತಾಯ ಗೆಲ್ಲಲ್ಲು ಕ್ಷೇತ್ರದಲ್ಲಿ ಭರ್ಜರಿ ಪ್ರಚಾರಕ್ಕಿಳಿದಿದ್ದಾರೆ.
ಇದನ್ನೂ ಓದಿ: Laxman Savadi: ಸವದಿ ಸಿಟ್ಟು, ಡಿಕೆ ಡೈನಾಮೈಟ್, ಸಾಹುಕಾರ್‌ಗೆ ಸ್ಕೆಚ್! ಕುಂದಾನಗರಿ ಕೊತ ಕೊತ!
ಹಳ್ಳಿಹಳ್ಳಿಯಲ್ಲಿ ಮಧು ಮತಬೇಟೆ
ಕ್ಷೇತ್ರದಲ್ಲಿ ಯುವ ಸಮೂಹವನ್ನು ಒಗ್ಗೂಡಿಸುತ್ತಿರುವ ಮಧು ಬಂಗಾರಪ್ಪ ಹಳ್ಳಿ ಹಳ್ಳಿಯಲ್ಲೂ ಮತಬೇಟೆಗೆ ಇಳಿದಿದ್ದಾರೆ. ಸೋಲು ಕಂಡ ಮಧು ಬಂಗಾರಪ್ಪ ಅವರನ್ನು ಕ್ಷೇತ್ರದ ಜನ ʻಕೈʼ ಹಿಡಿಯುತ್ತಾರೋ. ಅಧಿಕಾರ ನೀಡ್ತಾರೋ ಎಲ್ಲದಕ್ಕೂ ಮೇ 13ಕ್ಕೆ ಉತ್ತರ ಸಿಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ