ಕರಾವಳಿ, ಮಲೆನಾಡು ಮತ್ತು ಬಯಲುಸೀಮೆ ಮೂರನ್ನೂ ಹೊಂದಿಕೊಂಡಿರುವ ಅಪರೂಪದ ಜಿಲ್ಲೆ ಉತ್ತರ ಕನ್ನಡ (Uttara Kannada). ಪಶ್ಚಿಮಕ್ಕೆ ವಿಶಾಲವಾದ ಅರಬ್ಬಿ ಸಮುದ್ರ (Arabian Sea) ಹೊಂದಿರುವ ಇಲ್ಲಿ ಮೀನುಗಾರಿಕೆಯೇ ಬದುಕಿನ ಮೂಲ ಕಸುಬು. ಸಮಾನಾಂತರವಾಗಿ ಹಬ್ಬಿರುವ ಸಹ್ಯಾದ್ರಿ ಗಿರಿ ಶಿಖರಗಳ ಸಾಲುಗಳ ನಡುವೆ ನೆಲೆಗೊಂಡಿರುವ ಕಾರವಾರ-ಅಂಕೋಲಾ (Karwar-Ankola) 2,17,000 ಮತದಾರರಿರುವ ಹಾಲಕ್ಕಿಗಳ ಸೀಮೆ. ಹಾಲಕ್ಕಿ ಒಕ್ಕಲಿಗರೇ (Halakki Okkalig) ಅಗ್ರ ಪಂಕ್ತಿಯಲ್ಲಿದ್ದು, ಇವರದ್ದೇ ಸುಮಾರು 45 ಸಾವಿರ ಮತಗಳಿವೆ. ಇಲ್ಲಿ ಘಟ್ಟದ ಮೇಲಿನವರು ಮತ್ತು ಘಟ್ಟದ ಕೆಳಗಿನವರು ಎಂದು ವಿಂಗಡನೆಗೊಂಡಿದೆ. ಇಲ್ಲಿ ರಾಜಕೀಯವು ಇದೇ ಆಯಾಮದಲ್ಲಿ ಮುಂದುವರೆಯುತ್ತದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ವಿಧಾನಸಭಾ ಕ್ಷೇತ್ರವು (Karwar assembly constituency) ಈ ಸಲ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿದೆ. ಮೇ 10ರಂದು ನಡೆಯುವ ಚುನಾವಣೆಗೆ ಈ ಬಾರಿ ಸಖತ್ ಸ್ಪರ್ಧೆ ಏರ್ಪಟ್ಟಿದ್ದು, ಜನರ ಬೆಂಬಲವೇ ರಾಜಕಾರಣಿಗಳಿಗೆ ಗದ್ದುಗೆ ತಂದುಕೊಡಲಿದೆ.
ಎರಡನೇ ಬಾರಿ ಕಣಕ್ಕಿಳಿದ ರೂಪಾಲಿ ನಾಯ್ಕ್
ಉತ್ತರ ಕನ್ನಡ ಜಿಲ್ಲೆಯಲ್ಲಿ 2018ರಲ್ಲಿ 6 ಕ್ಷೇತ್ರದಲ್ಲಿ 4 ಕ್ಷೇತ್ರವನ್ನು ಬಿಜೆಪಿ ಗೆದ್ದುಕೊಂಡಿತ್ತು. ಹಳಿಯಾಳ ಮತ್ತು ಯಲ್ಲಾಪುರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು. ಇನ್ನು 2008ರಲ್ಲಿ ಆನಂದ್ ಅಸ್ನೋಟಿಕರ್ ಜಯಶೀಲರಾಗಿ ಬೀಗಿದ್ದರು. 2013 ರಲ್ಲಿ ಕಾಂಗ್ರೆಸ್‍ನಿಂದ ಸತೀಶ್ ಸೈಲ್ ಗೆದ್ದು ನಂತರ ಜೈಲು ಪಾಲಾದರು. 2018ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರೂಪಾಲಿ ನಾಯ್ಕ್ ಗೆದ್ದು ಐದು ವರ್ಷಗಳಿಂದ ಜನಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಇದೀಗ 2023ರ ಚುನಾವಣೆಯಲ್ಲಿ ಎರಡನೇ ಬಾರಿಗೆ ಕಣಕ್ಕಿಳಿದಿದ್ದು, ಜಯ ಸಾಧಿಸುವ ಉತ್ಸಾಹದಲ್ಲಿದ್ದಾರೆ.
ವೈಯಕ್ತಿಕ ಬದುಕು
ಭಾರತೀಯ ಜನತಾ ಪಕ್ಷದಲ್ಲಿ ಶಾಸಕಿಯಾಗಿ ಅಧಿಕಾರ ನಡೆಸುತ್ತಿರುವ ರೂಪಾಲಿ ನಾಯ್ಕ್ ಅವರು ಜನಿಸಿದ್ದು ಮೇ 15, 1972ರಂದು. ರೂಪಾಲಿ ಅವರು 1988-89ರಲ್ಲಿ ಕಾರವಾರದ ಚೆಂಡಿಯಾದ ಪಾಪ್ಯುಲರ್ ನ್ಯೂ ಇಂಗ್ಲಿಷ್ ಶಾಲೆಯಲ್ಲಿ 10ನೇ ತರಗತಿಯನ್ನು ಪೂರೈಸಿದರು. ಅವರ ಪತಿ ಸಂತೋಷ್ ನಾಯ್ಕ್ ಗುತ್ತಿಗೆದಾರ. ರೂಪಾಲಿ ನಾಯ್ಕ್ ಅವರ ಪುತ್ರ ಪರ್ಬತ್ ನಾಯ್ಕ್ ಹಾಗೂ ಸೊಸೆ ರೇಖಾ.
ಇದನ್ನೂ ಓದಿ: Basavaraj Bommai: 'ಕಾಮನ್ ಮ್ಯಾನ್'ನಿಂದ 'ಸಿಎಂ' ಹುದ್ದೆಯವರೆಗೆ ಬಸವರಾಜ ಬೊಮ್ಮಾಯಿ ಹೆಜ್ಜೆಗುರುತು
ರಾಜಕೀಯ ಜೀವನ
2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾರವಾರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿ ಸುಮಾರು 60 ಸಾವಿರಕ್ಕೂ ಹೆಚ್ಚು ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಆನಂದ್ ವಸಂತ್ ಅಸ್ನೋಟಿಕರ್ ವಿರುದ್ಧ ಜಯ ಗಳಿಸಿದ್ದರು. ಇದೀಗ ಎರಡನೇ ಬಾರಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಆರೋಪಗಳು ಏನೇನಿವೆ?
ಪ್ಯಾಕೇಜ್ ಕಾಮಗಾರಿಗಳಲ್ಲಿ ಶಾಸಕಿ ರೂಪಾಲಿ ನಾಯ್ಕ ಅವರು ಕಮಿಷನ್ ಹೊಡೆಯುತ್ತಿದ್ದಾರೆಂದು ಗುತ್ತಿಗೆದಾರ ಸಂಘ ನೇರವಾಗಿಯೇ ಆರೋಪ ಮಾಡಿತ್ತು. ಉತ್ತರ ಕನ್ನಡ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ್ ನಾಯ್ಕ್, ಇವರ ವಿರುದ್ಧ ಕಮಿಷನ್ ಆರೋಪ ಮಾಡಿದ್ದಾರೆ. ಕಾರವಾರ ಅಂಕೋಲಾ ಕ್ಷೇತ್ರದಲ್ಲಿ ಸರ್ಕಾರದ ಪ್ಯಾಕೇಜ್ ಕಾಮಗಾರಿಗಳಲ್ಲಿ 40% ಕಮೀಷನ್ ನಡೆಯುತ್ತಿದೆ. ಇದನ್ನ ವಿರೋಧಿಸಿ ಹೋರಾಟ ಮಾಡಿದ್ದ ನನ್ನ ವಿರುದ್ಧ ಶಾಸಕಿ ರೂಪಾಲಿ ನಾಯ್ಕ ಕೋರ್ಟ್‍ನಲ್ಲಿ 5 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಕ್ಷೇತ್ರದಲ್ಲಿ ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಾ ತಿರಗಾಡುತ್ತಿದ್ದಾರೆ ಎಂದು ಕಿಡಿಕಾರಿದ್ದರು.
ಕಣದಲ್ಲಿರುವ ಅಭ್ಯರ್ಥಿಗಳು
ಕಾರವಾರ ಅಂಕೋಲಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರೂಪಾಲಿ ನಾಯ್ಕ, ಕಾಂಗ್ರೆಸ್‌ನಿಂದ ಮಾಜಿ ಶಾಸಕ ಸತೀಶ್ ಸೈಲ್, ಜೆಡಿಎಸ್ ಅಭ್ಯರ್ಥಿಯಾಗಿ ಚೈತ್ರಾ ಕೋಠಾರಕರ್ ಕಣದಲ್ಲಿದ್ದು, ಉಮೇದುವಾರಿಕೆ ಸಲ್ಲಿಸಿದ್ದಾರೆ. ಇದಲ್ಲದೇ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಗಂಗಾಧರ ಭಟ್ ಹಾಗೂ ಕುಮಾರ್ ನಾಯ್ಕ ಕೂಡ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಎಲ್ಲ ಅಭ್ಯರ್ಥಿಗಳ ಪೈಪೋಟಿಯಿಂದ ಕಾರವಾರ ಅಂಕೋಲಾ ಕ್ಷೇತ್ರ ಕಳೆಗಟ್ಟಲಿದೆ.
ಇದನ್ನೂ ಓದಿ: HD Kumaraswamy: 'ಗ್ರಾಮವಾಸ್ತವ್ಯ'ದ ಮೂಲಕ ಜನಮನ ತಲುಪಿದ ಮಾಜಿ ಸಿಎಂ! ಇಲ್ಲಿದೆ ಎಚ್‌ಡಿಕೆ ರಾಜಕೀಯ ಹಾದಿ
ರೂಪಾಲಿ ಆಸ್ತಿ ವಿವರ
5 ವರ್ಷದಲ್ಲಿ ಕಾರವಾರದ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಆಸ್ತಿ ದ್ವಿಗುಣಗೊಂಡಿದ್ದು, ಕಾರವಾರದ ಸೇಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದದಲ್ಲಿ 91.44 ಲಕ್ಷ ಸೇರಿ, 1.45 ಕೋಟಿ ರೂ. ಸಾಲ ಹೊಂದಿದ್ದಾರೆ. ವ್ಯಾಗನರ್, ಇನೋವಾ, ಹುಂಡೈ ಎಲೆಂಟ್ರಾ, ಟಾಟಾ ವೆಂಚರ್, ಟಾಟಾ ಹಿಟಾಚಿ ವಾಹನಗಳನ್ನು ಹೊಂದಿದ್ದಾರೆ. 2018ರ ಚುನಾವಣೆಯಲ್ಲಿ ಅಫಿಡವಿಟ್ ಸಲ್ಲಿಸಿದ್ದ ರೂಪಾಲಿ ನಾಯ್ಕ, ಸ್ಥಿರಾಸ್ಥಿಯಾಗಿ 1.03 ಕೋಟಿಯ ಕೃಷಿ ಮತ್ತು ವಾಸ್ತವ್ಯದ ಮನೆಯನ್ನು ಹೊಂದಿದ್ದರು. ಆದರೆ ಈ ಬಾರಿ ಈ ಸ್ಥಿರಾಸ್ಥಿ 3.50 ಕೋಟಿಗೆ ಏರಿಕೆ ಕಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ