ಬೆಂಗಳೂರು: ರಾಜ್ಯವೇ ಎದುರು ನೋಡುತ್ತಿದ್ದ ವಿಧಾನಸಭಾ ಚುನಾವಣೆಗೆ (Karnataka Assembly Election 2023) ದಿನಾಂಕ್ ಫಿಕ್ಸ್ ಆಗಿದೆ. ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ (Election Commission) ದಿನಾಂಕ ನಿಗದಿ ಮಾಡಿದೆ. ಮತದಾನ ಒಂದೇ ಹಂತದಲ್ಲಿ ಮೇ 10 ಕ್ಕೆ ನಿಗದಿಯಾಗಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಪ್ರಕಟ ಆಗಲಿದೆ. ಇನ್ನು ಮಾರ್ಚ್ 29 ರಂದೇ ‘ಚುನಾವಣಾ ಮಾದರಿ ನೀತಿ ಸಂಹಿತೆ" (Election Code Of Conduct0 ಕೂಡ ಜಾರಿಗೆ ಬಂದಿದೆ. ಹಾಗಾದರೆ ಚುನಾವಣೆ ದಿನಾಂಕ (Election Date) ಪ್ರಕಟವಾಗುತ್ತಿದ್ದ ಹಾಗೇ ಜಾರಿಗೆ ಬರುವ ಈ ನೀತಿ ಸಂಹಿತೆ ಏನು? ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಪಾಲಿಸಬೇಕಾದ ನಿಯಮಗಳೇನು? ಏನೆಲ್ಲಾ ನಿರ್ಬಂಧ ಇರುತ್ತದೆ? ಅಂತಾ ನೋಡೋಣ ಬನ್ನಿ.
ಮಾದರಿ ನೀತಿ ಸಂಹಿತೆ (MCC) ಎಂದರೇನು?
ಭಾರತದ ಚುನಾವಣಾ ಆಯೋಗವು ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸಲು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುತ್ತದೆ. ಈ ಮಾರ್ಗಸೂಚಿಗಳನ್ನು ಚುನಾವಣಾ ಮಾದರಿ ನೀತಿ ಸಂಹಿತೆ (MCC) ಎಂದು ಕರೆಯುತ್ತಾರೆ.
ಈ ಮಾರ್ಗಸೂಚಿಗಳು ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಚುನಾವಣೆಯ ಮೊದಲು ಮತ್ತು ಸಮಯದಲ್ಲಿ ಏನು "ಮಾಡಬೇಕು ಮತ್ತು ಮಾಡಬಾರದು" ಎಂಬುದರ ಕುರಿತು ಒಂದು ಅವಲೋಕನವನ್ನು ನೀಡುತ್ತವೆ.
ನೀತಿ ಸಂಹಿತೆಯ ಅವಧಿಯಲ್ಲಿ ಎಲ್ಲಾ ಪಕ್ಷಗಳು ಚುನಾವಣಾ ಆಯೋಗದ ಪ್ರತಿಯೊಂದು ನಿರ್ಧಾರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಚುನಾವಣಾ ಆಯೋಗದ ಆದೇಶವನ್ನು ಪಾಲಿಸದಿದ್ದರೆ ಸಂಬಂಧಪಟ್ಟ ಮುಖಂಡರ ವಿರುದ್ಧ ಚುನಾವಣಾ ಆಯೋಗ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಈ ನೀತಿ ಸಂಹಿತೆ ಸಂಪೂರ್ಣ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಜಾರಿಯಲ್ಲಿರುತ್ತದೆ.
ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ನೀತಿ ಸಂಹಿತೆಯಲ್ಲಿ ಅನ್ವಯವಾಗುವ ನಿಯಮಗಳು
1.ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿ ಜಾತಿ ಮತ್ತು ಧರ್ಮದ ಆಧಾರದ ಮೇಲೆ ಮತಗಳನ್ನು ಕೇಳುವಂತಿಲ್ಲ. ದೇವಾಲಯಗಳು, ಮಸೀದಿಗಳು, ಚರ್ಚುಗಳು ಮತ್ತು ಇತರ ಧಾರ್ಮಿಕ ಸ್ಥಳಗಳನ್ನು ಚುನಾವಣಾ ಪ್ರಚಾರಕ್ಕಾಗಿ ಬಳಸಿಕೊಳ್ಳಬಾರದು.
2.ವಿವಿಧ ಜಾತಿಗಳು ಮತ್ತು ಧರ್ಮಗಳ ಜನರ ನಡುವೆ ದ್ವೇಷ ಮತ್ತು ಉದ್ವಿಗ್ನತೆಯ ವಾತಾವರಣ ಉಂಟಾಗುವಂತೆ ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಯು ಅಂತಹ ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗಬಾರದು.
4.ಮತದಾರರಿಗೆ ಬೆದರಿಕೆ ಹಾಕುವುದು, ಲಂಚ ನೀಡುವುದು, ಮತಗಟ್ಟೆಗಳಿಂದ 100 ಮೀಟರ್‌ಗಳ ಪರಿಧಿಯಲ್ಲಿ ಪ್ರಚಾರ ನಡೆಸುವುದು, ಮತದಾನದ 48 ಗಂಟೆಗಳ ಒಳಗೆ ಸಾರ್ವಜನಿಕ ಸಭೆಯನ್ನು ಆಯೋಜಿಸುವುದು ಮತ್ತು ಮತಗಟ್ಟೆಗಳಿಗೆ ಹೋಗಲು ಸಾರಿಗೆ ವ್ಯವಸ್ಥೆ ಮಾಡುವುದನ್ನು ಸಹ ನಿಷೇಧಿಸಲಾಗಿದೆ.
5.ಯಾವುದೇ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಜಮೀನು, ಕಟ್ಟಡ, ಕಾಂಪೌಂಡ್, ಗೋಡೆ, ವಾಹನ ಸೇರಿದಂತೆ ಅವುಗಳ ಮಾಲೀಕರ ಅನುಮತಿಯಿಲ್ಲದೆ ಕರಪತ್ರಗಳು, ಬ್ಯಾನರ್‌ಗಳನ್ನು, ಪಕ್ಷದ ಧ್ವಜಗಳನ್ನು ಪ್ರದರ್ಶಿಸಲು, ಘೋಷಣೆಗಳನ್ನು ಬರೆಯಲು ಅವುಗಳನ್ನು ಬಳಸುವಂತಿಲ್ಲ.
6.ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ವಿರೋಧ ಪಕ್ಷಗಳ ಅಥವಾ ಅಭ್ಯರ್ಥಿಗಳ ಸಭೆ ಮತ್ತು ರ್ಯಾಲಿಗೆ ಅಡ್ಡಿಪಡಿಸಬಾರದು ಮತ್ತು ವಿರೋಧ ಪಕ್ಷಗಳು ಆಯೋಜಿಸುವ ಸಭೆಯಲ್ಲಿ ಕರಪತ್ರಗಳನ್ನು ಹಂಚುವಂತಿಲ್ಲ.
7.ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಯಾವುದೇ ಸ್ಥಳದಲ್ಲಿ ಸಭೆಯನ್ನು ಆಯೋಜಿಸುವ ಮೊದಲು ಆ ಪ್ರದೇಶದ ಪೊಲೀಸ್ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯತಕ್ಕದ್ದು.
8.ಒಂದು ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಯು ಮೆರವಣಿಗೆಯನ್ನು ಆಯೋಜಿಸಲು ಯೋಜನೆ ಹಾಕಿಕೊಂಡಿದ್ದರೆ, ಅದರ ಸಮಯ, ಮಾರ್ಗ, ಮೆರವಣಿಗೆ ಪ್ರಾರಂಭವಾಗುವ ಸ್ಥಳ ಮತ್ತು ಮೆರವಣಿಗೆ ಕೊನೆಗೊಳ್ಳುವ ಸ್ಥಳ ಈ ಎಲ್ಲದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮೊದಲೇ ಮಾಹಿತಿ ನೀಡಿರಬೇಕು.
9.ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಮತದಾನದ ದಿನದಂದು ಮತದಾರರಿಗೆ ನೀಡಿದ ಗುರುತಿನ ಚೀಟಿಯನ್ನು ಖಾಲಿ ಕಾಗದದಲ್ಲಿ ಮುದ್ರಿಸಬೇಕು . ಸ್ಲಿಪ್ ಯಾವುದೇ ರಾಜಕೀಯ ಪಕ್ಷದ ಅಥವಾ ಅಭ್ಯರ್ಥಿಯ ಹೆಸರು/ಚಿಹ್ನೆಯನ್ನು ಹೊಂದಿರಬಾರದು.
10.ಮತದಾನದ ದಿನ ಮತ್ತು ಮತದಾನಕ್ಕೆ 24 ಗಂಟೆಗಳ ಮೊದಲು ಮತದಾರರಿಗೆ ಮದ್ಯ ಸೇರಿ ಇತ್ಯಾದಿಗಳನ್ನು ನೀಡಬಾರದು.
12.ಆಡಳಿತ ಪಕ್ಷವು ಸಾರ್ವಜನಿಕ ಸ್ಥಳಗಳು, ಹೆಲಿಪ್ಯಾಡ್‌ಗಳು ಮತ್ತು ವಿಮಾನಗಳ ಮೇಲೆ ಏಕಸ್ವಾಮ್ಯವನ್ನು ಹೊಂದಿರುವುದಿಲ್ಲ,
13.ಚುನಾವಣೆಯ ಸಮಯದಲ್ಲಿ ಪತ್ರಿಕೆಗಳು ಮತ್ತು ಇತರ ಮಾಧ್ಯಮಗಳ ಮೂಲಕ ಸಾರ್ವಜನಿಕ ಖಜಾನೆಯ ವೆಚ್ಚದಲ್ಲಿ ಯಾವುದೇ ಜಾಹೀರಾತುಗಳನ್ನು ಪ್ರಕಟಿಸುವಂತಿಲ್ಲ.
ಇದನ್ನೂ ಓದಿ: Karnataka Elections: ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶ; ಕರುನಾಡ ಕದನದಲ್ಲಿ ಗೆಲ್ಲೋದು ಈ ಪಕ್ಷವಂತೆ!
14.ಆಯೋಗವು ಚುನಾವಣೆಗಳನ್ನು ಘೋಷಿಸಿದ ದಿನಾಂಕದಿಂದ ಮಂತ್ರಿಗಳು ಮತ್ತು ಇತರ ಅಧಿಕಾರಿಗಳು ವಿವೇಚನಾ ನಿಧಿಯಿಂದ ಅನುದಾನ/ಪಾವತಿಗಳನ್ನು ಮಂಜೂರು ಮಾಡಬಾರದು. ಅಂದರೆ ಈ ನಿಯಮದ ಅಡಿ ಈ ಕೆಳಗಿನ ಕೆಲಸಗಳನ್ನು ಮಾಡುವಂತಿಲ್ಲ.
*ಹೊಸ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಮಾಡುವಂತಿಲ್ಲ
*ಹೊಸ ಯೋಜನೆಗೆ ಹಣ ನೀಡುವಂತಿಲ್ಲ, ಹೊಸ ಟೆಂಡರ್ ಕರೆಯುವಂತಿಲ್ಲ
*ರಸ್ತೆಗಳ ನಿರ್ಮಾಣ, ಕುಡಿಯುವ ನೀರಿನ ಸೌಲಭ್ಯ ಇತ್ಯಾದಿಗಳ ಯಾವುದೇ ಭರವಸೆ ನೀಡುವಂತಿಲ್ಲ
*ಸರ್ಕಾರ, ಸಾರ್ವಜನಿಕ ಉದ್ಯಮಗಳು ಇತ್ಯಾದಿಗಳಲ್ಲಿ ಯಾವುದೇ ತಾತ್ಕಾಲಿಕ ನೇಮಕಾತಿಗಳನ್ನು ಮಾಡುವಂತಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ