ಬೆಳಗಾವಿಯನ್ನು (Belagavi) ‘ಕುಂದಾನಗರಿ’ (Kundanagari) ಅಂತ ಕರೆಯುತ್ತಾರೆ. ಕುಂದಾ ಅಂದರೆ ಸಿಹಿ ಪ್ರಿಯರ ಬಾಯಲ್ಲಿ ನೀರು ಬರುತ್ತದೆ. ಆದರೆ ರಾಜಕಾರಣದಲ್ಲಿ (Politics) ಕುಂದಾನಗರಿ ನಾಯಕರು ಅಂದ್ರೆ ಮೈ ಬೆವರುತ್ತದೆ. ಯಾಕೆಂದ್ರೆ ರಾಜ್ಯ ರಾಜಕಾರಣದಲ್ಲಿ ಬೆಳಗಾವಿ ಮಂದಿಯ ಗತ್ತು ಗೈರತ್ತೇ ಬೇರೆ. ಮಾಜಿ ಸಚಿವ ಉಮೇಶ್ ಕತ್ತಿ (Umesh Katti), ಜಾರಕಿಹೊಳಿ ಬ್ರದರ್ಸ್ (Jarakiholi), ಲಕ್ಷ್ಮಣ ಸವದಿ (Laxman Savadi) ಸೇರಿದಂತೆ ಅನೇಕರು ಈಗಾಗಲೇ ರಾಜ್ಯ ರಾಜಕಾರಣದಲ್ಲಿ ತಮ್ಮ ಪ್ರಭಾವ ಏನು ಎನ್ನುವುದನ್ನು ತೋರಿಸಿದ್ದಾರೆ. ಇದೀಗ ಲಕ್ಷ್ಮಣ ಸವದಿ ಕೂಡ ಸುದ್ದಿಯಲ್ಲಿದ್ದಾರೆ. ಲಕ್ಷ್ಮಣ ಸವದಿ ರಾಜ್ಯದ ಹಿರಿಯ ರಾಜಕಾರಣಿ, ಬೆಳಗಾವಿ ಭಾಗದ ಪ್ರಭಾವಿ ನಾಯಕ ಜೊತೆಗೆ ಮಾಜಿ ಡಿಸಿಎಂ (DCM) ಹಾಗೂ ಮಾಜಿ ಸಚಿವರೂ ಕೂಡ ಹೌದು. ಇದೀಗ ಬಿಜೆಪಿಯಿಂದ ಟಿಕೆಟ್ ಸಿಗದೇ ಇರೋದಕ್ಕೆ ಸಮರ ಸಾರಿರುವ ಸವದಿ, ಕಮಲಕ್ಕೆ ಗುಡ್ ಬೈ ಹೇಳಿದ್ದಾರೆ! ಹಾಗಾದರೆ ಲಕ್ಷ್ಮಣ ಸವದಿ ಯಾರು? ರಾಜ್ಯ ರಾಜಕಾರಣದಲ್ಲಿ ಅವರೆಷ್ಟು ಪ್ರಭಾವಿ? ಅವರ ರಾಜಕೀಯ ಏಳು-ಬೀಳು ಹೇಗಿತ್ತು? ಇಲ್ಲಿದೆ ಮಾಹಿತಿ…
ಸವದಿ ಹಾದಿಗೆ ಮುಳ್ಳಾದ ಜಾರಕಿಹೊಳಿ
ಲಕ್ಷ್ಮಣ ಸವದಿ ಬೆಳಗಾವಿ ಜಿಲ್ಲೆಯ ಅಥಣಿ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಟಿಕೆಟ್ ಬಯಸಿದ್ದರು. ಆದರೆ ಅವರ ಬೇಡಿಕೆಗೆ ಅಡ್ಡಗಾಲಾಗಿದ್ದು ಮತ್ತೋರ್ವ ಪ್ರಭಾವಿ ರಾಜಕಾರಣಿ ರಮೇಶ್ ಜಾರಕಿಹೊಳಿ. ಅಥಣಿಯಿಂದ ಸ್ನೇಹಿತ ಮಹೇಶ್ ಕುಮಟಳ್ಳಿಗೆ ಟಿಕೆಟ್ ಕೊಡಲೇಬೇಕು ಅಂತ ಪಟ್ಟು ಹಿಡಿದಿದ್ದ ಜಾರಕಿಹೊಳಿ, ಕುಮಟಳ್ಳಿಗೆ ಟಿಕೆಟ್ ಕೊಡದಿದ್ದರೆ ನನಗೂ ಟಿಕೆಟ್ ಬೇಡ ಅಂತ ಪಟ್ಟು ಹಿಡಿದಿದ್ದರು. ಕೊನೆಗೆ ಜಾರಕಿಹೊಳಿ ಹಠಕ್ಕೆ ಮಣಿದ ಬಿಜೆಪಿ ಹೈಕಮಾಂಡ್ ಮಹೇಶ್ ಕುಮಟಳ್ಳಿಗೆ ಅಥಣಿ ಟಿಕೆಟ್ ನೀಡಿದೆ.
ಬಿಜೆಪಿಯಲ್ಲಿಲ್ಲ ಟಿಕೆಟ್, ಕಮಲದ ವಿರುದ್ಧ ಸವದಿ ಸಮರ
ಬಿಜೆಪಿ ಹೈಕಮಾಂಡ್ ನಿರ್ಧಾರಕ್ಕೆ ಲಕ್ಷ್ಮಣ ಸವದಿ ವ್ಯಗ್ರರಾಗಿದ್ದರು. ಬಿಜೆಪಿಯಿಂದ ಟಿಕೆಟ್ ನಿರಾಕರಿಸಿದ ಕೆಲವು ದಿನಗಳ ನಂತರ, ಇಂದು ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ. ಇಂದು ಬಿಜೆಪಿ ಪ್ರಾಥಮಿಕ ಸದಸ್ಯತ್ವ ಹಾಗೂ ತಮ್ಮ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ: Bhavani Revanna: ಗೌಡ್ರ ಮನೆಯಲ್ಲಿ ಸೊಸೆಯ ಟಿಕೆಟ್ ಗದ್ದಲ! ಭವಾನಿ ವಿಚಾರಕ್ಕೆ ಎಚ್‌ಡಿಕೆ-ರೇವಣ್ಣ ಸಂಘರ್ಷ!
ಲಕ್ಷ್ಮಣ ಸವದಿ ಯಾರು?
ಲಕ್ಷ್ಮಣ ಸವದಿ ರಾಜ್ಯದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರು. ಬೆಳಗಾವಿ ಭಾಗದ ಪ್ರಭಾವಿ ನಾಯಕರಲ್ಲಿ ಒಬ್ಬರು. ಶಾಸಕರಾಗಿ, ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ, ವಿಧಾನ ಪರಿಷತ್ ಸದಸ್ಯರಾಗಿ ರಾಜಕೀಯದಲ್ಲಿ ಅಪಾರ ಅನುಭವ ಪಡೆದವರು.
ಮಹೇಶ್ ಕುಮಟಳ್ಳಿ ವಿರುದ್ಧ ಸೋತಿದ್ದ ಸವದಿ
ಸವದಿ ಪ್ರಸ್ತುತ ಬಿಜೆಪಿಯ ವಿಧಾನ ಪರಿಷತ್ ಸದಸ್ಯರಾಗಿದ್ದು, ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಈ ಹಿಂದೆ ಅಥಣಿಯಿಂದ ಮೂರು ಬಾರಿ ಶಾಸಕರಾಗಿದ್ದರು. ಆದರೆ 2018ರ ಚುನಾವಣೆಯಲ್ಲಿ ಆಗ ಕಾಂಗ್ರೆಸ್‌ನಲ್ಲಿದ್ದ ಮಹೇಶ್ ಕುಮಟಳ್ಳಿ ವಿರುದ್ಧ ಸೋತಿದ್ದರು. ಬದಲಾದ ರಾಜಕೀಯದಲ್ಲಿ ಕುಮಟಳ್ಳಿ ಬಿಜೆಪಿ ಸೇರಿದ್ದಾಗ, 2019ರ ಉಪ ಚುನಾವಣೆಯಲ್ಲಿ ಇವರಿಗೆ ಟಿಕೆಟ್ ನೀಡಿಲ್ಲ. ಬದಲಾಗಿ ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಲಾಯ್ತು.
ಡಿಸಿಎಂ ಆಗಿ, ಸಚಿವರಾಗಿ ಅನುಭವ
ಬಿಎಸ್ ಯಡಿಯೂರಪ್ಪ, ಸದಾನಂದಗೌಡ ಸಂಪುಟದಲ್ಲಿ ಸಚಿವರಾಗಿ ವಿವಿಧ ಖಾತೆ ನಿರ್ವಹಿಸಿದರು. ಬಿಜೆಪಿ ಪ್ರಬಲ ನಾಯಕರಾಗಿದ್ದ ಲಕ್ಷ್ಮಣ ಸವದಿ ಕರ್ನಾಟಕದ ಎಂಟನೇ ಉಪಮುಖ್ಯಮಂತ್ರಿಯಾಗಿದ್ದರು. 2019 ರಿಂದ 2021 ರವರೆಗೆ ಕರ್ನಾಟಕದ ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದರು. ವಿಧಾನ ಪರಿಷತ್‌ನ ಉಪ ನಾಯಕರಾಗಿದ್ದರು.
ಸದನದಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿದ ವಿವಾದ
2012ರಲ್ಲಿ ಶಾಸಕರಾಗಿದ್ದ ಲಕ್ಷ್ಮಣ ಸವದಿ ವಿಧಾನ ಸಭೆ ಅಧಿವೇಶನದ ವೇಳೆ ತಮ್ಮ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿದ ವಿವಾದಕ್ಕೆ ಒಳಗಾದರು. 2012 ರಲ್ಲಿ, ಸವದಿ ಅವರು ಮತ್ತು ಅವರ ಅಂದಿನ ಸಹೋದ್ಯೋಗಿ ಸಿಸಿ ಪಾಟೀಲ್ ಅವರು ಕರ್ನಾಟಕ ವಿಧಾನಸಭೆಯಲ್ಲಿ ಮೊಬೈಲ್ ಫೋನ್‌ನಲ್ಲಿ ಅಶ್ಲೀಲ ಕ್ಲಿಪ್‌ಗಳನ್ನು ವೀಕ್ಷಿಸುತ್ತಿರುವುದನ್ನು ತೋರಿಸುವ ವಿಡಿಯೋ ಅಂದು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.
ರಾಜೀನಾಮೆ ನೀಡಿದ್ದ ಲಕ್ಷ್ಮಣ ಸವದಿ
ಅವರು ಅಶ್ಲೀಲ ದೃಶ್ಯ ವೀಕ್ಷಿಸುತ್ತಿರುವ ವಿಡಿಯೋ ಹೊರಬಂದ ನಂತರ ವಿವಾದದ ಮಧ್ಯದಲ್ಲಿ ಸಿಕ್ಕಿಬಿದ್ದರು. ಈ ಘಟನೆ ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು. ಜೆಡಿಎಸ್ ಕಾಂಗ್ರೆಸ್ ವಿರೋಧದ ಹಿನ್ನೆಲೆಯಲ್ಲಿ ಸವದಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಇದನ್ನೂ ಓದಿ: MB Patil: ಎಂಬಿ ಪಾಟೀಲ್ ಹಿನ್ನೆಲೆ ಏನು? ಬಬಲೇಶ್ವರ ಶಾಸಕರ ರಾಜಕೀಯ ಏಳು-ಬೀಳುಗಳೇನು?
ಬಿಜೆಪಿಗೆ ಟಕ್ಕರ್ ಕೊಡಲು ಸಜ್ಜಾದ ಸವದಿ
ಇದೀಗ ಬಿಜೆಪಿಯಿಂದ ಹೊರಕ್ಕೆ ಬಂದಿರುವ ಲಕ್ಷ್ಮಣ ಸವದಿ ಬಿಜೆಪಿ ವಿರುದ್ಧವೇ ಸಮರ ಸಾರಿದ್ದಾರೆ. ಅಥಣಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸೋ ಸಾಧ್ಯತೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ