Explained: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಜೆಡಿಎಸ್ ದ್ವಂದ್ವ ನಿಲುವು; ಎಚ್​ಡಿಕೆ ಹೇಳಿಕೆ ಹಿಂದಿನ ಉದ್ದೇಶವೇನು?

ತಮಿಳುನಾಡು ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೂರು ರೂಪಾಯಿ ಕಡಿತ ಮಾಡಿದೆ. ಇಡೀ ದೇಶಕ್ಕೆ ಅದು ಒಂದು ಇಂಡಿಕೇಷನ್. ಆ ಮಾದರಿಯನ್ನು ಬೇರೆ ರಾಜ್ಯಗಳು ಕೂಡ ಪಾಲಿಸಬೇಕು. ರಾಜ್ಯ ಸರ್ಕಾರ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು. ಪೆಟ್ರೋಲ್ ಹೊರೆ ತಗ್ಗಿಸಬೇಕು. ನಾವು ಕೂಡ ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡ್ತೀವಿ ಎಂದು ದೇವೇಗೌಡರು ಹೇಳುವ ಮೂಲಕ ಪಕ್ಷದ ಡ್ಯಾಮೇಜ್ ಕಂಟ್ರೋಲ್​ ಮಾಡಿದರು. 

ಸಿದ್ದರಾಮಯ್ಯ - ಎಚ್​ಡಿಕೆ

ಸಿದ್ದರಾಮಯ್ಯ - ಎಚ್​ಡಿಕೆ

 • Share this:
  ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಜನಸಾಮಾನ್ಯರ ಬದುಕು ಶೋಚನೀಯವಾಗುತ್ತಿದೆ. ತೈಲ ದರ ಏರಿಕೆಯಿಂದ ಸರಕು, ಸಾಗಣಿಕೆ ವೆಚ್ಚ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಆಹಾರ ಪದಾರ್ಥಗಳ ಬೆಲೆ ಏರಿಕೆ ಆಗುತ್ತಿದೆ. ಇದೆಲ್ಲದರ ನೇರ ಹೊಡೆತ ಜನಸಾಮಾನ್ಯರ ಮೇಲೆ ಬೀಳುತ್ತಿದೆ. ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಕಾಂಗ್ರೆಸ್​ ಹೋರಾಟ ಆರಂಭಿಸಿದೆ. ಕರ್ನಾಟಕದಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಆಗುತ್ತಿರುವ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು. ಆದರೆ, ಈ ವಿಷಯದಲ್ಲಿ ಜೆಡಿಎಸ್​ ದ್ವಂದ್ವ ನಿಲುವು ತೋರಿರುವುದು ಆ ಪಕ್ಷದ ಕಾರ್ಯಕರ್ತರಿಗೂ ನುಂಗಲಾರದ ತುತ್ತಾಗಿದೆ. 

  ಗುರುವಾರ ಸದನದಲ್ಲಿ ಇದೇ ವಿಷಯವಾಗಿ ಮಾತನಾಡಿದ್ದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು, ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರ ಖಜಾನೆ ತುಂಬಿಸಿಕೊಳ್ಳಲು ಬೆಲೆ ಏರಿಕೆ ಮಾಡುವುದು ಅನಿವಾರ್ಯ ಎಂದು ಹೇಳುವ ಮೂಲಕ ಕೇಂದ್ರ ಬಿಜೆಪಿ ಸರ್ಕಾರದ ನಿಲುವು ಸಮರ್ಥನೆ ಮಾಡಿಕೊಂಡಿದ್ದರು. ಬೆಲೆ ಏರಿಕೆ ನಿರಂತರ ಪ್ರಕ್ರಿಯೆ. ಸರ್ಕಾರದ ಆರ್ಥಿಕ ಪರಿಸ್ಥಿತಿ ಸುಧಾರಿಸಲು, ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು, ಹಣ ಹೊಂದಿಸಲಿಕ್ಕೆ ಕೆಲವು ಸಂದರ್ಭಗಳಲ್ಲಿ ಬೆಲೆ ಏರಿಕೆ ಮಾಡುವ ಅನಿವಾರ್ಯ ಸಂದರ್ಭಗಳು ಬರುವುದು ಸಹಜ. ಸರ್ಕಾರ ಬೆಲೆ ಏರಿಕೆ ಮಾಡಿದಾಗ ವಿರೋಧ ಪಕ್ಷಗಳು ಹೋರಾಟ, ಪ್ರತಿಭಟನೆ ಮಾಡುವುದು ಸಹ ನಿರಂತರ ಪ್ರಕ್ರಿಯೆ. ಹಲವು ದಿನಗಳಿಂದ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿ, ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಗಮನ ಸೆಳೆದಿದ್ದಾರೆ ಎಂದು ಹೇಳಿದ್ದರು.

  ಕುಮಾರಸ್ವಾಮಿ ಅವರ ಈ ಹೇಳಿಕೆಯಿಂದ ಪಕ್ಷ ಸಾಕಷ್ಟು ಮುಜುಗರ ಅನುಭವಿಸುವಂತಾಗಿತು. ಅವರದೇ ಪಕ್ಷದ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ನಾಯಕನ ಮಾತುಗಳಿಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಜನಸಾಮಾನ್ಯರು ಮೊದಲೇ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಕಷ್ಟದ ಸಂಕೋಲೆಯಲ್ಲಿ ಒದ್ದಾಡುತ್ತಿರುವಾಗ ಬೆಲೆ ಏರಿಕೆ ಅನಿವಾರ್ಯ ಎಂದು ಹೇಳುವ ಮೂಲಕ ಕೇಂದ್ರದ ನಡೆ ಸಮರ್ಥನೆ ಮಾಡಿಕೊಂಡಿದ್ದರು. ಆದರೆ, ಇಲ್ಲಿ ಕುಮಾರಸ್ವಾಮಿ ಅವರು ಯಾರನ್ನು ಮೆಚ್ಚಿಸುವ ಸಲುವಾಗಿ ಅಥವಾ ಯಾರ ವಿರುದ್ಧ ತಿರುಗೇಟು ನೀಡುವ ಸಲುವಾಗಿ ಈ ಹೇಳಿಕೆ ನೀಡಿದ್ದರು ಎಂಬುದು ಗೊತ್ತಿಲ್ಲದ ವಿಷಯವೇನಲ್ಲ. ಸದನದಲ್ಲಿ ದರ ಏರಿಕೆ ಬಗ್ಗೆ ನಿರಂತರವಾಗಿ ಮಾತನಾಡಿ, ಜನಸಾಮಾನ್ಯರ ಕಷ್ಟಗಳನ್ನು ಸಿದ್ದರಾಮಯ್ಯ ಅವರು ಸದನದಲ್ಲಿ ಹೋಟೆಲ್ ತಿಂಡಿ ಬೆಲೆಗಳನ್ನು ಉದಾಹರಣೆಯೊಂದಿಗೆ ಹೇಳಿ ವಿವರಿಸಿ ಎಲ್ಲರ ಗಮನ ಸೆಳೆದಿದ್ದರು. ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡುವ ಉದ್ದೇಶದಿಂದ ಕುಮಾರಸ್ವಾಮಿ ಅವರು ಪೆಟ್ರೋಲ್ ದರ ಏರಿಕೆ ಬಗ್ಗೆ ಸಮರ್ಥಿಸಿಕೊಂಡಿದ್ದಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಇದರಿಂದ ಪಕ್ಷಕ್ಕೆ ಎದುರಾಗಬಹುದಾದ ಡ್ಯಾಮೇಜ್ ಕಂಟ್ರೋಲ್ ಮಾಡಲು ಜೆಡಿಎಸ್ ಸರ್ವೋಚ್ಛ ನಾಯಕ ಎಚ್.ಡಿ. ದೇವೇಗೌಡ ಅವರು ಮಾಧ್ಯಮದ ಮುಂದೆ ಬರಬೇಕಾಯಿತು.

  ಇಂದು ಈ ವಿಚಾರವಾಗಿ ಮಾತನಾಡಿದ ದೇವೇಗೌಡರು, ಕಳೆದ ಎರಡು ವರ್ಷದಿಂದ ಪ್ರತಿ ದಿನ ಪೆಟ್ರೋಲ್, ಡೀಸೆಲ್ ದರ ಏರಿಕೆ (Petrol And Diesel Price Hike) ಆಗುತ್ತಿದೆ. ಇದರ ಪರಿಣಾಮ ಜನ ಸಾಮಾನ್ಯರ ಮೇಲೆ ತುಂಬಾ ಭಾರ ಬೀಳಲಿದೆ. ಸರಕು ಸಾಗಾಣಿಕೆ ಖರ್ಚು ವೆಚ್ಚ ಕೂಡ ಜನ ಸಾಮಾನ್ಯರ ಮೇಲೆ ಬೀಳಲಿದೆ. ಇದೆಲ್ಲವೂ ಗ್ರಾಹಕರ ಮೇಲೆಯೇ ಬೀಳುತ್ತಿದೆ. ಕೋವಿಡ್ ವೆಚ್ಚ ಭರಿಸಲು ಈ ರೀತಿ‌ ಮಾಡ್ಬೇಕಾಯ್ತು ಅಂತ ಕೇಂದ್ರ ಸಮರ್ಥನೆ ಕೊಡುತ್ತೆ. ಯಾವುದೇ ಸರ್ಕಾರ ಇರಲಿ ಅವರು ಕೂಡ ಹೀಗೆ ಮಾಡಬೇಕಾದ ಸ್ಥಿತಿ ಎನ್ನುತ್ತಾರೆ. ಕೊರೋನಾ ನೆಪ ಹೇಳಿಕೊಂಡು ಈ ರೀತಿ ಮಾಡೋದು ಖಂಡನೀಯ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (HD Devegowda) ಅವರು ಹೇಳುವ ಮೂಲಕ ಪಕ್ಷದ ನಿಲುವು ಸ್ಪಷ್ಟಪಡಿಸಿದರು.

  ಇದನ್ನು ಓದಿ: HD Devegowda: ನಾವು ಕೂಡ ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡ್ತೀವಿ; ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ

  ಬೆಲೆ ಏರಿಕೆ ಬಗ್ಗೆ ಸಿದ್ದರಾಮಯ್ಯ ನಾಲ್ಕು ಗಂಟೆ ಚರ್ಚೆ ಮಾಡಿದ್ರು. ನಮ್ಮ ಸರ್ಕಾರದ ಹೋರಾಟ ತೋರ್ಪಡಿಕೆಗೆ ಅಲ್ಲ. ವಾಜಪೇಯಿ ಸರ್ಕಾರದಲ್ಲಿ ಸೀಮೆಎಣ್ಣೆಗೆ ಒಂದು ರೂಪಾಯಿ ಏರಿಕೆ ಆಯ್ತು. ಇದೇ ಸೀಮೆಎಣ್ಣೆ ಡಬ್ಬ ತಲೆ ಮೇಲೆ ಇಟ್ಟುಕೊಂಡು ಹೋರಾಟ ಮಾಡಿದ್ವಿ. ನಾನು ಸೀಮೆಎಣ್ಣೆ ಡಬ್ಬ ಹೊತ್ತುಕೊಂಡಿದ್ದಕ್ಕೆ ಸಾಕಷ್ಟು ಟೀಕೆ ಬಂದಿದ್ದವು. ನಾನು ಟೀಕೆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಈಗಲೂ‌ ಬೆಲೆ‌ ಏರಿಕೆ ವಿರುದ್ಧ ಹೊರಾಟ ಮಾಡುತ್ತೇವೆ. ತಮಿಳುನಾಡು ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೂರು ರೂಪಾಯಿ ಕಡಿತ ಮಾಡಿದೆ. ಇಡೀ ದೇಶಕ್ಕೆ ಅದು ಒಂದು ಇಂಡಿಕೇಷನ್. ಆ ಮಾದರಿಯನ್ನು ಬೇರೆ ರಾಜ್ಯಗಳು ಕೂಡ ಪಾಲಿಸಬೇಕು. ರಾಜ್ಯ ಸರ್ಕಾರ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು. ಪೆಟ್ರೋಲ್ ಹೊರೆ ತಗ್ಗಿಸಬೇಕು. ನಾವು ಕೂಡ ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡ್ತೀವಿ ಎಂದು ದೇವೇಗೌಡರು ಹೇಳುವ ಮೂಲಕ ಪಕ್ಷದ ಡ್ಯಾಮೇಜ್ ಕಂಟ್ರೋಲ್​ ಮಾಡಿದರು.
  Published by:HR Ramesh
  First published: