Explained: ಸ್ವರ್ಣ'ಲಂಕೆ'ಯಲ್ಲಿ ನಿಲ್ಲದ ಸಂಕಷ್ಟ; ತುತ್ತು ಊಟಕ್ಕೂ ಪರದಾಟ-ಹಣಕ್ಕಾಗಿ ಹಾಹಾಕಾರ! ಮುಂದೇನು ಗತಿ?

ಈಗಾಗಲೇ ಶ್ರೀಲಂಕಾ ದೇಶವು ಆರ್ಥಿಕತೆಯ ಹೀನಾಯ ಸ್ಥಿತಿ ತಲುಪಿದ್ದು ಅಲ್ಲಿನ ಜನಜೀವನದ ಮೇಲೆ ಭಾರಿ ಪರಿಣಾಮ ಉಂಟು ಮಾಡಿರುವುದನ್ನು ಗಮನಿಸಿದ್ದೇವೆ. ಇದೀಗ ದಿನದಿಂದ ದಿನಕ್ಕೆ ಅಲ್ಲಿನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದೆ. ಸದ್ಯ ಲಂಕೆಯಲ್ಲಿ ಏನಾಗುತ್ತಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ...

ಶ್ರೀಲಂಕಾದಲ್ಲಿ ಜನರ ಸಂಕಷ್ಟ

ಶ್ರೀಲಂಕಾದಲ್ಲಿ ಜನರ ಸಂಕಷ್ಟ

  • Share this:
ಈಗಾಗಲೇ ಶ್ರೀಲಂಕಾ (Sri Lanka ) ದೇಶವು ಆರ್ಥಿಕತೆಯ (Economy) ಹೀನಾಯ ಸ್ಥಿತಿ ತಲುಪಿದ್ದು ಅಲ್ಲಿನ ಜನಜೀವನದ (People's life) ಮೇಲೆ ಭಾರಿ ಪರಿಣಾಮ ಉಂಟು ಮಾಡಿರುವುದನ್ನು ಗಮನಿಸಿದ್ದೇವೆ. ಸದ್ಯ ಈಗ ಅಲ್ಲಿನ ಹಣಕಾಸು ಮಂತ್ರಿಗಳ (Finance minister) ಹೇಳಿಕೆ ಗಮನಿಸಿದರೆ ಈ ಸ್ಥಿತಿ ಇನ್ನೂ ಸ್ವಲ್ಪ ಕಾಲ ಹಾಗೆ ಮುಂದುವರಿಯಲಿದೆ ಎಂದು ತೋರುತ್ತಿದೆ. ಕಳೆದ ಬುಧವಾರದಂದು ಶ್ರೀಲಂಕಾದ ಹಣಕಾಸು ಮಂತ್ರಿಗಳು ದೇಶದ ಸಂದಿಗ್ಧ ಪರಿಸ್ಥಿತಿಗೆ ಸಂಬಂಧಿಸಿದಂತೆ ಮಾತನಾಡುತ್ತ ಮುಂದಿನ ದಿನಗಳಲ್ಲಿ ಜನರು ನಗದು ಹಣದ (Money) ತೀವ್ರ ಅಭಾವ ಎದುರಿಸಬೇಕಾಗಿದೆ ಎಂದು ಎಚ್ಚರಿಸಿರುವುದಲ್ಲದೆ ಈಗ ಸದ್ಯದ ಪರಿಸ್ಥಿತಿಯಿಂದ ದೇಶ ಸುಧಾರಿಸಿಕೊಳ್ಳಲು ಏನಿಲ್ಲವೆಂದರೂ ಕನಿಷ್ಠ ಎರಡು ವರ್ಷಗಳ ಕಾಲಾವಧಿ ಬೇಕಾಗಿರುವುದಾಗಿ ತಿಳಿಸಿದ್ದಾರೆ.

ಸಂಕಷ್ಟದ ಪರಿಸ್ಥಿತಿಯಲ್ಲಿ ಶೀಲಂಕಾ!

ಈಗಾಗಲೇ ಶ್ರೀಲಂಕಾದ ಪರಿಸ್ಥಿತಿ ಸಾಕಷ್ಟು ಚಿಂತಾಜನಕವಾಗಿದೆ ಎಂದರೂ ತಪ್ಪಿಲ್ಲ. ಹಲವು ತಿಂಗಳುಗಳಿಂದ ಅಲ್ಲಿನ ಜನರು ಜೀವನ ಸಾಗಿಸಲು ಪರದಾಡುತ್ತಿದ್ದಾರೆ. ಇಂಧನ ಕೊರತೆ, ಆಹಾರ ಕೊರತೆ, ಇತರೆ ಸಾಮಗ್ರಿಗಳ ಕೊರತೆ, ವಿದ್ಯುತ್ ಕೊರತೆ ಇತ್ಯಾದಿಗಳು ಸಾಲದೆಂಬಂತೆ ಗಗನಕ್ಕೇರಿರುವ ಬೆಲೆಗಳು ಗಾಯದ ಮೇಲೆ ಬರೆ ಹಾಕಿದಂತಿದೆ.

ಅಲ್ಲಿನ ಜನರು ಸರ್ಕಾರದ ವಿರುದ್ಧ ಸಾಕಷ್ಟು ಆಕ್ರೋಶಗೊಂಡಿರುವುದನ್ನು ಗಮನಿಸಬಹುದು. ನಿತ್ಯ ಗೋಳು ಹೊಯ್ದುಕೊಳ್ಳುವಂತಹ ಸಮಸ್ಯೆಗಳಿಂದ ಕಂಗಾಲಾಗಿರುವ ಜನರು ದೇಶಾದ್ಯಂತ ಅಲ್ಲಲ್ಲಿ ದೊಂಬಿ ಏಳುತ್ತಿದ್ದಾರೆ, ಪ್ರತಿಭಟನೆಗಳನ್ನು ನಡೆಸುತ್ತ ಈ ಆರ್ಥಿಕ ಮಹಾ ಬಿಕ್ಕಟ್ಟಿಗೆ ಸರ್ಕಾರವನ್ನೇ ದೂಷಿಸಿ ರಾಜಿನಾಮೆ ನೀಡಿ ಆಡಳಿತದಿಂದ ಕೆಳಗಿಳಿಯುವಂತೆ ಒತ್ತಾಯಿಸುತ್ತಿದ್ದಾರೆ.

1948 ರಲ್ಲಿ ಪಡೆದ ಸ್ವಾತಂತ್ರ್ಯದ ನಂತರ ಶ್ರೀಲಂಕಾ ಇಂತಹ ಆರ್ಥಿಕ ಬಿಕ್ಕಟ್ಟನ್ನು ಇದೇ ಮೊದಲ ಬಾರಿಗೆ ಅನುಭವಿಸುತ್ತಿದೆ. ಪರಿಸ್ಥಿತಿಯ ಬಗ್ಗೆ ಹಣಕಾಸು ಮಂತ್ರಿ ಅಲಿ ಸಬ್ರಿ ಹೇಳಿದ್ದೇನು? ಇನ್ನು, ದೇಶದ ಹಣಕಾಸು ಮಂತ್ರಿಗಳಾಗಿರುವ ಅಲಿ ಸಬ್ರಿ ಅವರು ದೇಶದ ಲೋಕಸಭೆಯಲ್ಲಿ ಮಾತನಾಡುತ್ತ, "ಜನರಿಗೆ ಸತ್ಯ ತಿಳಿಯಬೇಕು, ಆದರೆ ಅವರಿಗೆ ಈ ಪರಿಸ್ಥಿತಿಯ ಗಂಭೀರತೆಯು ಅರ್ಥವಾಗುವುದೋ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ" ಎಂದು ಹೇಳಿದ್ದಾರೆ.

ಅವರು, "ಈಗ ಉದ್ಭವವಾಗಿರುವ ಈ ಮಹಾ ಸಂಕಷ್ಟವನ್ನು ಮುಂದಿನ ಎರಡು ವರ್ಷಗಳಲ್ಲಿ ಸರಿಪಡಿಸಲು ನಮ್ಮಿಂದ ಸಾಧ್ಯವಾಗದು, ಆದರೆ, ಆ ಬಗ್ಗೆ ಇಂದೇ ನಾವು ತೆಗೆದುಕೊಳ್ಳುವ ಕ್ರಮಗಳು ಸಂಕಷ್ಟವು ಎಲ್ಲಿಯವರೆಗೆ ಎಳೆಯಲ್ಪಡುತ್ತದೆ ಎಂಬುದನ್ನು ನಿರ್ಣಯಿಸಬಹುದು" ಎಂದು ಸಬ್ರಿ ಹೇಳಿದ್ದಾರೆ. ಸದ್ಯ ಶ್ರೀಲಂಕಾದ ಬಳಿ, ಜೀವನ ಸಾಗಿಸಲು ಜನರಿಗೆ ಬೇಕಾಗಿರುವ ಅವಶ್ಯಕ ಸಾಮಗ್ರಿಗಳನ್ನು ಆಮದು ಮಾಡಿಕೊಂಡು ಸಮಯವನ್ನು ತಳ್ಳಲು ಕೇವಲ 50 ಮಿಲಿಯನ್ ಯುಎಸ್ ಡಾಲರ್ ವಿದೇಶಿ ವಿನಿಮಯ ಮಾತ್ರ ಉಳಿದಿರುವುದಾಗಿ ಸಬ್ರಿ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:  International Trips: ನಿಮ್ಮ ಸ್ಮಾರ್ಟ್ ಫೋನ್ ಬೆಲೆಯಲ್ಲಿ ಮಾಡಿ ಅಂತರಾಷ್ಟ್ರೀಯ ಪ್ರವಾಸ: ಇಲ್ಲಿವೆ 5 ಬೆಸ್ಟ್ ಸ್ಥಳಗಳು

ಮುಂದುವರೆಯುತ್ತ ಅವರು, ಅಧಿಕೃತ ಮಾಹಿತಿಯು $1.7 ಶತಕೋಟಿ ಮೀಸಲು ಇರುವುದನ್ನು ತೋರಿಸುತ್ತದೆಯಾದರೂ ಆ ಅಂಕಿ ಅಂಶದ ಹೆಚ್ಚಿನ ಪ್ರಮಾಣವು ಚೀನೀ ಕರೆನ್ಸಿ ಸ್ವಾಪ್ ಅನ್ನು ಒಳಗೊಂಡಿದೆ ಹಾಗೂ ಇದನ್ನು ಇತರ ದೇಶಗಳಿಂದ ಆಮದುಗಳಿಗೆ ಪಾವತಿಸಲು ಬಳಸಲು ಸಾಧ್ಯವಿಲ್ಲ ಎಂದು ಹೇಳಿರುವ ಅವರು ಸರ್ಕಾರವು ಈ ಬಗ್ಗೆ ಪರಿಹಾರಕ್ಕಾಗಿ ಐಎಂಎಫ್ ಬಳಿ ಹೋಗಲು ವಿಳಂಬ ಮಾಡಿರುವುದು ಸಮಸ್ಯೆ ಸಾಕಷ್ಟು ಉಲ್ಬಣಗೊಳ್ಳುವಂತಾಗಿದೆ ಎಂದು ತಿಳಿಸಿದ್ದಾರೆ.

ಐಎಂಎಫ್ ನೊಂದಿಗೆ ಬೇಲ್ ಔಟ್ ಬಗ್ಗೆ ಮಾತುಕತೆ

ಅಷ್ಟಕ್ಕೂ, ಐಎಂಎಫ್ ನೊಂದಿಗೆ ಬೇಲ್ ಔಟ್ ಬಗ್ಗೆ ಮಾತುಕತೆ ಇನ್ನೂ ನಡೆಯುತ್ತಿದ್ದು ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥರು ಹೇಳಿರುವಂತೆ ಆ ಹಣ ಹರಿದು ಬರಲು ಇನ್ನೂ ಕೆಲ ತಿಂಗಳುಗಳೇ ಬೇಕಾಗಬಹುದೆನ್ನಲಾಗಿದೆ. ಈ ಮಧ್ಯೆ ಸರ್ಕಾರವು ಹೊಸ ಬಜೆಟ್ ಮಂಡಿಸಿ ದೇಶದ ಆದಾಯ ಏರುವಂತೆ ಹೊಸ ತೆರಿಗೆ ನೀತಿಗಳನ್ನು ಜಾರಿಗೆ ತರಲಿದೆ ಎನ್ನಲಾಗಿದೆ.

ಸಬ್ರಿ ಅವರು, ಈ ನಿಟ್ಟಿನಲ್ಲಿ ಮಾತನಾಡುತ್ತ, 2019 ರಲ್ಲಿ ತೆರಿಗೆ ಕಡಿತಗೊಳಿಸುವ ನಿರ್ಧಾರ ಪ್ರಕಟಿಸಿದ್ದ ಶ್ರೀಲಂಕಾ ಸರ್ಕಾರ ಮಾಡಿರುವ ದೊಡ್ಡ ಐತಿಹಾಸಿಕ ತಪ್ಪು ಅದೆ ಆಗಿದೆ ಎಂದು ಹೇಳಿರುವುದಲ್ಲದೆ ಕುಸಿಯುತ್ತಿದ್ದ ಶ್ರೀಲಂಕಾದ ಕರೆನ್ಸಿಯನ್ನು ಸಮರ್ಥಿಸಲು ಈ ಹಿಂದೆ ದೇಶದ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥರು ವಿದೇಶಿ ವಿನಿಮಯ ಖರ್ಚು ಮಾಡುವ ನಿರ್ಣಯ ತೆಗೆದುಕೊಂಡಿದ್ದು ದೇಶಕ್ಕೆ ಹೆಚ್ಚಿನ ಹೊಡೆತ ಕೊಟ್ಟಿರುವುದಾಗಿ ತಿಳಿಸಿದ್ದಾರೆ.

ಶ್ರೀಲಂಕಾದ ಪ್ರವಾಸೋದ್ಯಮಕ್ಕೆ ಬಹಳಷ್ಟು ಹೊಡೆತ

ಕೋವಿಡ್ ನಂತರ ಶ್ರೀಲಂಕಾದ ಪ್ರವಾಸೋದ್ಯಮಕ್ಕೆ ಬಹಳಷ್ಟು ಹೊಡೆತ ಬಿದ್ದಿದ್ದಲ್ಲದೆ ವಿದೇಶಗಳಿಂದ ರೆಮಿಟನ್ಸ್ ಬರುವುದು ಸಹ ನಿಂತು ಹೋಯಿತು. ಇದೇ ಸಂದರ್ಭದಲ್ಲಿ ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ಹೆಚ್ಚಲಾರಂಭಿಸಿತು ಹಾಗೂ ಅದು ಮುಂದುವರೆಯುತ್ತ ಇಂದು ದೊಡ್ಡ ಪ್ರಮಾಣದ ಗಾಯವಾದಂತಾಗಿದೆ.

ಇದನ್ನೂ ಓದಿ:  Holiday Plan: 9 ಸಾವಿರಕ್ಕಿಂತ ಕಡಿಮೆ ಹಣದಲ್ಲಿ ಮಾಡಿ ಉತ್ತರ ಭಾರತ ಪ್ರವಾಸ

ಶ್ರೀಲಂಕಾವನ್ನು ಈ ಪರಿಸ್ಥಿತಿಯಿಂದ ಹೊರಗೆ ತರಲು ತಾನು ಎಲ್ಲರಿಂದ ಒಪ್ಪಿತ ಏಕತೆಯ ಸರ್ಕಾರವನ್ನು ರಚಿಸಲು ಸಿದ್ಧವಿರುವುದಾಗಿ ಅಧ್ಯಕ್ಷ ಗೋಟಬಯ ರಾಜಪಕ್ಷ ಅವರು ಹೇಳಿದ್ದರೆ ರಾಜಪಕ್ಷ ಕುಟುಂಬದ ಯಾವ ಸದಸ್ಯರು ಅದರಲ್ಲಿ ಅಧಿಕಾರದ ಪದವಿ ಹೊಂದಿರಬಾರದೆಂಬುದು ವಿರೋಧ ಪಕ್ಷಗಳ ಗಟ್ಟಿ ನಿಲುವಾಗಿದೆ.

ಈಗಾಗಲೇ ಪ್ರತಿಭಟನಾಕಾರರು ಸಾಕಷ್ಟು ಸಂಖ್ಯೆಯಲ್ಲಿ ಅಧ್ಯಕ್ಷರವರ ಸಮುದ್ರಕ್ಕೆ ಎದುರ್ಮುಖವಾಗಿ ಸ್ಥಿತವಿರುವ ಕಚೇರಿಯ ಮುಂದೆ ಕಳೆದ ಒಂದು ತಿಂಗಳಿನಿಂದ ಠಿಕಾಣಿ ಹೂಡಿ ಪ್ರತಿಭಟಿಸುತ್ತಿದ್ದಾರೆ. ಅಧ್ಯಕ್ಷರು ತಮ್ಮ ಸ್ಥಾನದಿಂದ ಕೆಳಗಿಳಿಯಬೇಕೆಂಬುದೇ ಅವರ ಬೇಡಿಕೆಯಾಗಿದೆ. ಒಟ್ಟಿನಲ್ಲಿ ಈ ಪರಿಸ್ಥಿತಿ ಮುಂದೆ ಯಾವ ರೂಪ ಪಡೆಯಲಿದೆಯೋ ಎಂಬುದನ್ನು ಕಾದು ನೋಡಬೇಕಾಗಿದೆ.
Published by:Ashwini Prabhu
First published: