ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಆಡಳಿತದಲ್ಲಿ ಪ್ರಮುಖ ಬದಲಾವಣೆ ಮಾಡಿದೆ. ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಪ್ರವೀಣ್ ಸೂದ್ (Praveen Sood) ಸಿಬಿಐ ನಿರ್ದೇಶಕರಾಗಿ (CBI Director) ನೇಮಕವಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಸ್ಥಾನ ತೆರವಾಗಿತ್ತು. ನಿನ್ನೆ ಅವರ ಸ್ಥಾನಕ್ಕೆ ಮತ್ತೋರ್ವ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಮೋಹನ್ (Alok Mohan) ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಹೊಸ ಅಡ್ವೊಕೇಟ್ ಜನರಲ್ ನೇಮಕ ಕೂಡ ನಡೆದಿದೆ. ಈ ಹಿಂದೆ ಫ್ರಭುಲಿಂಗ ನಾವದಗಿ ರಾಜ್ಯದ ಅಡ್ವೊಕೇಟ್ ಜನರಲ್ (Advocate General) ಆಗಿದ್ದರು. ಇದೀಗ ಹಿರಿಯ ವಕೀಲ ಶಶಿಕಿರಣ್ ಶೆಟ್ಟಿಯವರನ್ನು (Sashikiran Shetty) ನೂತನ ಎಜಿಯಾಗಿ ಸರ್ಕಾರ ನೇಮಿಸಿದೆ. ಹಾಗಾದರೆ ಶಶಿಕಿರಣ್ ಶೆಟ್ಟಿ ಯಾರು? ಅವರ ಹಿನ್ನೆಲೆ ಏನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಶಶಿಕಿರಣ್ ಶೆಟ್ಟಿ ಯಾರು?
47 ವರ್ಷದ ಶಶಿಕಿರಣ್ ಶೆಟ್ಟಿ ಹಿರಿಯ ವಕೀಲರಾಗಿದ್ದಾರೆ. ಮಾಜಿ ಲೋಕಾಯುಕ್ತ ವಿಶ್ವನಾಥ್ ಶೆಟ್ಟಿಯವರ ಕಿರಿಯ ಪುತ್ರರೂ ಹೌದು. ಸೆಪ್ಟೆಂಬರ್ 13, 1975 ರಂದು ಶಶಿಕಿರಣ್ ಶೆಟ್ಟಿ ಜನಿಸಿದರು.
ಬೆಂಗಳೂರಿನ ಲಾ ಕಾಲೇಜ್‌ನಲ್ಲಿ ಪದವಿ
ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಹಳೆಯ ವಿದ್ಯಾರ್ಥಿಯಾಗಿದ್ದು, ಅಲ್ಲಿ ಅವರು 1998 ರಲ್ಲಿ BALLB (ಆನರ್ಸ್) ಪದವಿ ಪಡೆದರು.
ಇದನ್ನೂ ಓದಿ: Alok Mohan: ನೂತನ ಪೊಲೀಸ್ ಮಹಾನಿರ್ದೇಶಕರಾಗಿ ಅಲೋಕ್ ಮೋಹನ್ ನೇಮಕ, ರಾಜ್ಯ ಸರ್ಕಾರದಿಂದ ಆದೇಶ
ಸುಪ್ರೀಂ ಕೋರ್ಟ್ ವಕೀಲರಾಗಿಯೂ ಸೇವೆ
ಶಶಿಕಿರಣ್ ಶೆಟ್ಟಿ ಅವರು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿ ಅಭ್ಯಾಸ ಮಾಡಿದ್ದಾರೆ. ಇವರನ್ನು 2014 ರಲ್ಲಿ ಕರ್ನಾಟಕ ಹೈಕೋರ್ಟ್‌ನಿಂದ ಹಿರಿಯ ವಕೀಲರಾಗಿ ನೇಮಿಸಲಾಯಿತು.
23 ವರ್ಷಗಳ ಕಾನೂನು ಅಭ್ಯಾಸ
ಶಶಿಕಿರಣ್ ಶೆಟ್ಟಿಯವರು ಸತತ 23 ವರ್ಷಗಳ ಕಾಲ ಕಾನೂನು ಕ್ಷೇತ್ರದಲ್ಲಿದ್ದಾರೆ. ಸಂವಿಧಾನದ ಕಾನೂನು, ಆಡಳಿತಾತ್ಮಕ ಕಾನೂನು, ಕೌಟುಂಬಿಕ ಕಾನೂನು, ಗಣಿಗಾರಿಕೆ, ಸಾಲ ವಸೂಲಾತಿ ಮತ್ತು ಬ್ಯಾಂಕಿಂಗ್ ಸೇರಿದಂತೆ ಹಲವಾರು ಪ್ರಕರಣಗಳನ್ನು ನಿರ್ವಹಿಸಿದ್ದಾರೆ. ಪ್ರಸ್ತುತ, ಅವರು ಬೆಂಗಳೂರಿನ ಪ್ರಮುಖ ಕಾನೂನು ಸಂಸ್ಥೆಯಾದ ಶೆಟ್ಟಿ ಮತ್ತು ಹೆಗ್ಡೆ ಅಸೋಸಿಯೇಟ್ಸ್‌ನಲ್ಲಿ ವ್ಯವಸ್ಥಾಪಕ ಮುಖ್ಯಸ್ಥರಾಗಿದ್ದಾರೆ.
14 ಶಾಸಕರ ಅನರ್ಹತೆ ಕೇಸ್‌ನಲ್ಲಿ ವಾದ
ಈ ಹಿಂದೆ 2019ರಲ್ಲಿ ರಾಜ್ಯದಲ್ಲಿ 14 ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ್ದು ಇದೇ ಶಶಿಕಿರಣ್ ಶೆಟ್ಟಿ. ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಪ್ರಕರಣದಲ್ಲಿ ಕೆಪಿಸಿಸಿ ಪರ ವಾದ ಮಂಡಿಸಿದ್ದರು.
ಬಿಜೆಪಿ ಸರ್ಕಾರದ ನಿರ್ಧಾರದ ವಿರುದ್ಧ ವಾದ
ಇತ್ತೀಚೆಗಷ್ಟೇ ಅವರು ಈ ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ವಾದ ಮಂಡಿಸಿದ್ದರು. ರಾಜ್ಯದಲ್ಲಿನ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿಯನ್ನು ಹಿಂದೆಗೆದುಕೊಂಡಿದ್ದ ಬಿಜೆಪಿ ಸರಕಾರ ಕೈಗೊಂಡ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿದಾರರ ಪರ ವಾದ ಮಂಡಿಸಿದ್ದರು.
ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ ಶಶಿಕಿರಣ್ ಶೆಟ್ಟಿ
ತನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಸರ್ಕಾರಕ್ಕೆ ಶಶಿಕಿರಣ್ ಶೆಟ್ಟಿ ಧನ್ಯವಾದ ಅರ್ಪಿಸಿದ್ದಾರೆ. ಸರ್ಕಾರಿ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್, ಸುಪ್ರೀಂ ಕೋರ್ಟ್ ಮತ್ತು ರಾಜ್ಯದ ಇತರ ನ್ಯಾಯಾಲಯಗಳಲ್ಲಿ ವ್ಯಾಜ್ಯಗಳ ಬಾಕಿಯನ್ನು ಕಡಿಮೆ ಮಾಡುವುದು ತಮ್ಮ ಆದ್ಯತೆಯಾಗಿದೆ ಅಂತ ಹೇಳಿದ್ದಾರೆ.
ಇದನ್ನೂ ಓದಿ: Rupees 2000: ಹಿಂಪಡೆದಿದ್ದೇಕೆ 2000 ರೂಪಾಯಿ ನೋಟ್? ಪಿಂಕ್ ಕರೆನ್ಸಿ ಇನ್ಮುಂದೆ ಬಳಸುವಂತೆ ಇಲ್ವಾ?
ಬಾಕಿ ಇರುವ ಕೇಸ್‌ಗಳ ಶೀಘ್ರ ಇತ್ಯರ್ಥ
ಇನ್ನು ಹಲವು ಕ್ಷುಲ್ಲಕ ಪ್ರಕರಣಗಳು, ಬಾಕಿ ಉಳಿದಿರುವ ಪ್ರಕರಣಗಳನ್ನು ಶೀಘ್ರದಲ್ಲಿ ಇತ್ಯರ್ಥಗೊಳಿಸುವುದು, ಕಾನೂನು ಇಲಾಖೆಯನ್ನು ಬಲಪಡಿಸುವುದು ಮತ್ತು ನ್ಯಾಯಾಲಯದ ಕಾರ್ಯನಿರ್ವಹಣೆಯನ್ನು ಉತ್ತಮಗೊಳಿಸುವುದು ಪ್ರಮುಖ ಆದ್ಯತೆಯಾಗಿದೆ ಎಂದು ಶಶಿಕಿರಣ್ ಶೆಟ್ಟಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ