ಮಹಿಳೆಯರು (Women) ಪ್ರಸ್ತುತ ಪುರುಷರಷ್ಟೇ (Men) ಸಮಾನರು. ಅವರಿಲ್ಲದ ಕ್ಷೇತ್ರವಿಲ್ಲ, ಅವರು ಮಾಡದ ಸಾಧನೆ ಇಲ್ಲ. ತೊಟ್ಟಿಲನ್ನು ತೂಗುವ ಕೈ ಇಂದು ಜಗತ್ತನ್ನೇ ಆಳುತ್ತಿದೆ. ಸಣ್ಣ ಪದವಿ, ಕೆಲಸ, ಮನೆಗೆಲಸದಿಂದ ಹಿಡಿದು ಅತ್ಯುತ್ತಮ ಪದವಿಯವರೆಗೂ ಮಹಿಳೆ ಸ್ಥಾನ ಪಡೆದುಕೊಂಡಿದ್ದಾಳೆ. ಹೀಗೆ ಮಹಿಳೆಯರ ಸಾಧನೆ, ಕೊಡುಗೆ ಸ್ಮರಿಸಲು ಒಂದು ವಿಶೇಷ ದಿನವನ್ನು (Women's Day) ಆಚರಿಸಲಾಗುತ್ತದೆ.
ಅಂತರಾಷ್ಟ್ರೀಯ ಮಹಿಳಾ ದಿನ
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಪ್ರತಿ ವರ್ಷ ಮಾರ್ಚ್ 8 ರಂದು ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಮಹಿಳೆಯರ ತ್ಯಾಗ, ಪರಿಶ್ರಮ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಕ್ಷೇತ್ರಗಳಲ್ಲಿನ ಅವರ ಸಾಧನೆ, ಸಮಾಜಕ್ಕೆ ಅವರ ಅಗತ್ಯತೆ, ಕೊಡುಗೆ, ಅವರಿಗೆ ಗೌರವ ಸಲ್ಲಿಸಲು ಹೀಗೆ ಹತ್ತಾರು ಕಾರಣಕ್ಕೆ ಈ ದಿನವನ್ನು ಮಹಿಳೆಯರಿಗಾಗಿ ಮೀಸಲಿಡಲಾಗಿದೆ.
ಇದನ್ನೂ ಓದಿ: ಓದುತ್ತಿರುವಾಗಲೇ ಬೇಕಿಂಗ್ ಬ್ಯುಸಿನೆಸ್, ವರ್ಷಕ್ಕೆ 40 ಲಕ್ಷ ಸಂಪಾದಿಸುತ್ತಿದ್ದಾರೆ ಈ ಯುವತಿ!
ಪುರುಷರಷ್ಟೇ ಸರಿಸಮಾನವಾಗಿ ಕ್ರೀಡೆಯಲ್ಲಿ, ಸೈನ್ಯದಲ್ಲಿ, ಬಾಹ್ಯಾಕಾಶದಲ್ಲಿ, ಮಹಿಳೆ ಮಹತ್ತರ ಸಾಧನೆ ಮಾಡುತ್ತಿದ್ದಾಳೆ. ಹಾಗಾದರೆ ಇಂತದ್ದೊಂದು ಮಹತ್ವದ ದಿನ ಹುಟ್ಟಿಕೊಂಡಿದ್ದು ಹೇಗೆ? ಇಂದಿನ ಇತಿಹಾಸವೇನು ನೋಡೋಣ.
ಅಂತಾರಾಷ್ಟ್ರೀಯ ಮಹಿಳಾ ದಿನ ಹೇಗೆ ಪ್ರಾರಂಭವಾಯಿತು?
1908 ರಲ್ಲಿ ಅಮೆರಿಕದಲ್ಲಿ ಕಾರ್ಮಿಕ ಚಳವಳಿ ನಡೆದಿತ್ತು. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದುಡಿಯುವ ಮಹಿಳೆಯರು ಪಾಲ್ಗೊಂಡಿದ್ದರು. ಸುಮಾರು 15,000 ಮಹಿಳೆಯರು ನ್ಯೂಯಾರ್ಕ್ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ದರು ಮತ್ತು ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸಿದರು.
ತಮ್ಮ ಕೆಲಸದ ಅವಧಿಯನ್ನು ಕಡಿಮೆ ಮಾಡಬೇಕು ಮತ್ತು ವೇತನ ಶ್ರೇಣಿಯನ್ನು ಹೆಚ್ಚಿಸಬೇಕು ಎಂದು ಕಾರ್ಮಿಕ ಮಹಿಳೆಯರು ಧ್ವನಿ ಎತ್ತಿದರು. ಮಹಿಳೆಯರಿಗೂ ಮತದಾನದ ಹಕ್ಕನ್ನು ನೀಡಬೇಕೆಂದು ಬೇಡಿಕೆಯಿಟ್ಟಿದ್ದರು.
1910ರ ಆಗಸ್ಟ್‌ನಲ್ಲಿ ಡೆನ್ಮಾರ್ಕ್‌ನ ಕೋಪೆನ್‌ಹೇಗನ್‌ನಲ್ಲಿ ಎರಡನೆಯ ಅಂತರರಾಷ್ಟ್ರೀಯ ಸೋಷಿಯಲಿಸ್ಟ್ ಮಹಿಳಾ ಸಮ್ಮೇಳನ ನಡೆಯಿತು. ಅಲ್ಲಿನ ಕಾರ್ಮಿಕರ ಪ್ರತಿನಿಧಿ ಸಭೆಯ ಸಭಾಂಗಣದಲ್ಲಿ 17 ದೇಶಗಳ ಪ್ರತಿನಿಧಿಗಳು ಸೇರಿದ್ದರು.
ಅಮೆರಿಕೆಯ ಹಲವಾರು ಕಾರ್ಮಿಕ ಸಂಘಟನೆಗಳ ನಾಯಕಿಯರು ಬಂದಿದ್ದರು. ಈ ಸಮ್ಮೇಳನಕ್ಕೆ ಅಂತರಾಷ್ಟ್ರೀಯ ಮಹಿಳಾ ಸೆಕ್ರೆಟೇರಿಯೆಟ್‌ನ ಮುಖ್ಯಸ್ಥೆಯಾಗಿದ್ದ ಕ್ಲಾರಾ ಜೆಟ್‌ಕಿನ್ ಅಧ್ಯಕ್ಷೆಯಾಗಿದ್ದಳು. ಈ ಸಮ್ಮೇಳನದಲ್ಲಿ ಚರ್ಚಿತವಾದ ಎರಡು ವಿಷಯಗಳೆಂದರೆ ಸಾರ್ವತ್ರಿಕ ಮತದಾನದ ಹಕ್ಕು ಮತ್ತು ಮಹಿಳೆಯರ ಹೆರಿಗೆ ಭತ್ಯೆ ಮತ್ತು ಇತರ ಸೌಕರ್ಯಗಳು.
1909 ರಲ್ಲಿ, ಚಳುವಳಿಯ ಒಂದು ವರ್ಷದ ನಂತರ, ಅಮೆರಿಕಾದ ಸಮಾಜವಾದಿ ಪಕ್ಷ ಮಹಿಳಾ ದಿನವನ್ನು ಘೋಷಿಸಿತು. ಅಂದಿನಿಂದ ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ.
ಮಹಿಳಾ ದಿನದಂದು ಬಣ್ಣಗಳ ಪಾತ್ರ
ಈ ದಿನದಂದು ವಿಶೇಷವಾಗಿ ನೇರಳೆ ಬಣ್ಣದ ಬಟ್ಟೆ ಧರಿಸುತ್ತಾರೆ. ಹಸಿರು ಬಣ್ಣವು ಭರವಸೆಯನ್ನು ಪ್ರೇರೇಪಿಸುತ್ತದೆ ಮತ್ತು ಬಿಳಿ ಬಣ್ಣವನ್ನು ಶುದ್ಧತೆಯ ಸಿಂಬಲ್ನ್ನು ಸೂಚಿಸುತ್ತದೆ.
ಮಹಿಳೆಯರಿಗೆ ನ್ಯಾಯದ ಭರವಸೆಯನ್ನು ಈ ಬಣ್ಣಗಳ ಮೂಲಕ ಹೇಳಲಾಗುತ್ತದೆ. ಯುಕೆಯಲ್ಲಿನ ಮಹಿಳಾ ಸಾಮಾಜಿಕ ಮತ್ತು ರಾಜಕೀಯ ಒಕ್ಕೂಟ (WSPU) 1908 ರಲ್ಲಿ ಈ ದಿನಕ್ಕಾಗಿ ಬಣ್ಣಗಳನ್ನು ರಚಿಸಿತು.
ಇದನ್ನೂ ಓದಿ: ಸಲಾಂ ಸಾಧಕಿ! ಇವರು ನೂರಕ್ಕೂ ಹೆಚ್ಚು ಪೋಸ್ಟ್ ಮಾರ್ಟಂ ಮಾಡಿರುವ ಗಟ್ಟಿಗಿತ್ತಿ ವೈದ್ಯೆ!
ಮಹಿಳಾ ದಿನವನ್ನು ಹೇಗೆ ಆಚರಿಸಲಾಗುತ್ತದೆ?
ಮಹಿಳೆಯರಿಗೆ ಶುಭಾಶಯ ತಿಳಿಸುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ. ಜೊತೆಗೆ ಕಾರ್ಯಕ್ರಮಗಳ ಆಯೋಜನೆ, ಮಹಿಳೆಯರ ಸಾಧನೆಗಳ ಕುರಿತು ವರದಿ, ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನ, ಮಹಿಳಾ ಸಬಲೀಕರಣದ ಬಗ್ಗೆ ಕಾರ್ಯಕ್ರಮ ಹೀಗೆ ಹಲವು ಮಾರ್ಗಗಳ ಮೂಲಕ ಮಹಿಳೆಯರಿಗೆ ಈ ದಿನವನ್ನು ಸಮರ್ಪಿಸಬಹುದು.
ಈ ದಿನ ಆಚರಣೆಯ ಮುಖ್ಯ ಉದ್ದೇಶ ಲಿಂಗ ಸಮಾನಸತೆಯನ್ನು ಎತ್ತಿಹಿಡಿಯುವುದು, ಜೊತೆಗೆ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುವುದಾಗಿದೆ. ಹೀಗಾಗಿ ಕೇವಲ ಮಾರ್ಚ್ ಎಂಟಕ್ಕೆ ಈ ದಿನ ಸೀಮಿತವಾಗದೇ ಎಲ್ಲಾ ಸಮಯದಲ್ಲೂ ಈ ದಿನ ಸಿಗುವ ಗೌರವ, ಮನ್ನಣೆ ಮಹಿಳೆಗೆ ಸಿಗಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ