ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗಳನ್ನು ಅವರ ನಡವಳಿಕೆ ಹಾಗೂ ಪ್ರತಿಭೆ ಆಧರಿಸಿ ಕಠಿಣ ಶಿಕ್ಷೆ ವಿಧಿಸದೆ ಶಿಕ್ಷೆಯ ಪ್ರಮಾಣವನ್ನು ತಗ್ಗಿಸಿ ಅಥವಾ ಜಾಮೀನು ನೀಡಿ ನ್ಯಾಯಾಲಯಗಳು ತೀರ್ಪು ನೀಡಿದೆ. ಘಟನೆಯನ್ನು ಕೂಲಂಕುಷವಾಗಿ ನೋಡುವುದಾದರೆ ಒಂದು 2016ರಲ್ಲಿ ನಡೆದ ನ್ಯಾಯಾಲಯದ ತೀರ್ಪಾಗಿದ್ದರೆ, ಇಂತಹದ್ದೇ ಇನ್ನೊಂದು ಪ್ರಕರಣದಲ್ಲಿ ಐದು ವರ್ಷಗಳ ನಂತರ ಭಾರತದ ಗುವಾಹಟಿ ನ್ಯಾಯಾಲಯವು ಲೈಂಗಿಕ ದೌರ್ಜನ್ಯವೆಸಗಿದ್ದ ದೋಷಿಯನ್ನು ಈ ಎರಡೂ ಚೌಕಟ್ಟುಗಳನ್ನು ಆಧರಿಸಿ ಜಾಮೀನು ನೀಡಿದೆ. 2016 ರಲ್ಲಿ ಆರನ್ ಪರ್ಸ್ಕಿ ನ್ಯಾಯಾಧೀಶರು ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಯ ನಡವಳಿಕೆ ಮನ್ನಿಸಿ ಶಿಕ್ಷೆಯ ಪ್ರಮಾಣವನ್ನು ತಗ್ಗಿಸಿದರೆ ಗುವಾಹಟಿಯ ನ್ಯಾಯಾಧೀಶರು ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಯು ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು 'ಅಸ್ಸಾಂ ರಾಜ್ಯದ ಭವಿಷ್ಯದ ಆಸ್ತಿ' ಎಂಬುದನ್ನು ಪರಿಗಣಿಸಿ ಜಾಮೀನು ನೀಡಿದ್ದಾರೆ.
ಈ ಎರಡೂ ಪ್ರಕರಣಗಳಲ್ಲಿ ಸ್ಪಷ್ಟವಾಗಿರುವ ಅಂಶವೇನೆಂದರೆ ದೋಷಿಯ ನಡವಳಿಕೆ ಹಾಗೂ ಶೈಕ್ಷಣಿಕ ರಂಗದಲ್ಲಿ ಪ್ರತಿಭಾವಂತರಾಗಿದ್ದರೆ ನ್ಯಾಯಾಲಯದಲ್ಲಿ ಯಾವ ತಪ್ಪು ಮಾಡಿದ್ದರೂ ಪರಿಗಣನೆ ಇದೆ ಎಂಬುದಾಗಿದೆ. ಆರೋಪಿ ಲೈಂಗಿಕ ದೌರ್ಜನ್ಯದಂತಹ ಗಂಭೀರ ಆರೋಪವನ್ನು ಎಸಗಿದ್ದರೂ ಆತನ ಶಿಕ್ಷಣ ಹಾಗೂ ಮುಂದಿನ ಭವಿಷ್ಯ ಆಧರಿಸಿ ಶಿಕ್ಷೆಯ ಪ್ರಮಾಣವನ್ನು ತಗ್ಗಿಸುವುದು ಅಥವಾ ಜಾಮೀನು ನೀಡುವುದನ್ನು ನ್ಯಾಯಾಲಯಗಳು ಮಾಡಿವೆ.
ಒಟ್ಟಿನಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಯ ಭವಿಷ್ಯ ಹಾಗೂ ಅವರ ಆರೋಪಗಳಿಗಿಂತಲೂ ಅವರಿಗಾದ ಅನ್ಯಾಯಕ್ಕಿಂತಲೂ ದೋಷಿಗೆ ನಡವಳಿಕೆ ಹಾಗೂ ಶೈಕ್ಷಣಿಕ ಮಾನ್ಯತೆ ನೀಡುವುದು ಕಾನೂನಿನ ಮಟ್ಟಿಗೆ ಸರಿಯಾಗಿದೆ ಎನ್ನುವುದಾಗಿದೆ.
2018ರಲ್ಲಿ ಭಾರತದಲ್ಲಿ ನಡೆದಿದ್ದ #MeToo (ಮೀಟೂ) ಆಂದೋಲನ ನೆನಪಿರಬಹುದು. ಪ್ರಮುಖ ಹಾಸ್ಯ ನಟರೊಬ್ಬರು ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಯುವತಿಯೊಬ್ಬರು ಆಪಾದನೆ ಮಾಡಿದ್ದರು. ಈ ಆಪಾದನೆ ಸಿನಿ ಕ್ಷೇತ್ರದಲ್ಲಿಯೇ ತಲ್ಲಣವನ್ನುಂಟು ಮಾಡಿತು ಹಾಗೂ ಅದೆಷ್ಟೋ ಪ್ರಕರಣಗಳು ಬಹಿರಂಗಗೊಳ್ಳಲು ಈ ಒಂದು ಆಂದೋಲನ ಧ್ವನಿಯಾಯಿತು.
ಆದರೆ ವರ್ಷಗಳ ನಂತರ ಮಹಿಳೆಯರು ತಮಗಾದ ಅನ್ಯಾಯಗಳ ವಿರುದ್ಧ ಧ್ವನಿ ಎತ್ತುತ್ತಿರುವಾಗಲೇ ನ್ಯಾಯಾಲಯಗಳು ದೋಷಿಯನ್ನು ನಿರ್ದೋಷಿ ಎಂದು ಘೋಷಿಸುತ್ತಿರುವುದನ್ನು ಪರಿಗಣಿಸಿದಾಗ ಮಹಿಳೆಯ ಕೂಗು ಮೂಕ ರೋಧನವೇ ಎಂದು ಅನಿಸತೊಡಗುತ್ತದೆ.
ಗುವಾಹಟಿಯ ಉಚ್ಛ ನ್ಯಾಯಾಲಯವು ಲೈಂಗಿಕ ದೌರ್ಜನ್ಯವೆಸಗಿದ್ದ ಐಐಟಿ ಬಿಟೆಕ್ ವಿದ್ಯಾರ್ಥಿಗೆ ಜಾಮೀನು ನೀಡಿದೆ. ನ್ಯಾಯಾಲಯವು ಆತನಿಗೆ ಜಾಮೀನು ನೀಡಿದ ಹಿನ್ನೆಲೆ ಗಮನಿಸಿದಾಗ ಒಬ್ಬ ಹೆಣ್ಣುಮಗಳಿಗಾದ ಅನ್ಯಾಯಕ್ಕೆ ನಮ್ಮ ದೇಶದಲ್ಲಿ ಯಾವುದೇ ಮನ್ನಣೆ ಇಲ್ಲವೇ ಎಂಬುದು ಕೌತುಕವೆನಿಸುತ್ತದೆ. ಆಪಾದಿತನು ಪ್ರತಿಭಾವಂತ ಯುವ ವಿದ್ಯಾರ್ಥಿಯಾಗಿದ್ದು ಅಸ್ಸಾಂ ರಾಜ್ಯದ ಭವಿಷ್ಯದ ಆಸ್ತಿ ಎಂಬುದಾಗಿ ನ್ಯಾಯಾಲಯವು ತೀರ್ಪು ನೀಡಿ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ತನಿಖೆ ಪೂರ್ಣಗೊಂಡಿರುವುದರಿಂದ ಮಾಹಿತಿದಾರರ/ಸಂತ್ರಸ್ತ ಬಾಲಕಿ ಹಾಗೂ ಆರೋಪಿಯು ರಾಜ್ಯದ ಭವಿಷ್ಯದ ಸ್ವತ್ತಾಗಿರುವುದರಿಂದ ಮತ್ತು ಐಐಟಿ ಗುವಾಹಟಿಯಂತಹ ತಾಂತ್ರಿಕ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಾಗಿರುವುದರಿಂದ ಅದೂ ಅಲ್ಲದೆ 19 ರಿಂದ 21 ವರ್ಷ ವಯಸ್ಸಿನ ಯುವ ಜನರಾದ್ದರಿಂದ ಆರೋಪಿ ಬಂಧಿಸುವುದು ಅನಿವಾರ್ಯವಲ್ಲ ಎಂದು ತೀರ್ಪಿತ್ತಿದೆ.
ನ್ಯಾಯಾಲಯವು ನೀಡಿರುವ ಈ ತೀರ್ಪು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದು ಇದು ‘ಬ್ರೋಕ್ ಟರ್ನರ್’ ಸಂಚಿಕೆಯ ಪುನರಾವೃತ್ತಿಯಾಗಿದೆ ಎಂದು ಖಂಡಿಸಿದ್ದಾರೆ. ಬ್ರೋಕ್ ಟರ್ನರ್ ವಿವಾದ ಎಂಬುದು ವಿಶ್ವವ್ಯಾಪಿ ತೀವ್ರ ಖಂಡನೆಗೆ ಒಳಗಾದ ಘಟನೆಯಾಗಿದೆ. ಪ್ರಜ್ಞಾಹೀನ ಮಹಿಳೆಯೊಬ್ಬರ ಮೇಲೆ ಲೈಂಗಿಕ ಹಲ್ಲೆ ನಡೆಸಿದ ವಿವಿ ಈಜುಗಾರ ಬ್ರೋಕ್ ಟರ್ನರ್ ಎಂಬಾತನಿಗೆ ನ್ಯಾಯಾಲಯವು ಕೇವಲ ಆರು ತಿಂಗಳ ಶಿಕ್ಷೆ ವಿಧಿಸಿತ್ತು. ಈ ಹಿನ್ನಲೆಯಲ್ಲಿ ನ್ಯಾಯಾಧೀಶರ ನಡೆ ಖಂಡಿಸಿ ಪ್ರತಿಭಟನೆಗಳನ್ನು ನಡೆಸಲಾಯಿತು. ಹೀಗಾಗಿ ತೀರ್ಪು ನೀಡಿದ ನ್ಯಾಯಾಧೀಶರನ್ನು ವಜಾಗೊಳಿಸಲಾಗಿತ್ತು.
ಈಗ ಇದೇ ವರ್ತನೆ ನಮ್ಮ ದೇಶದಲ್ಲೂ ಪುನರಾವರ್ತನೆಯಾಗಿದೆ ಎಂಬುದು ಖೇದಕರ ಸಂಗತಿಯಾಗಿದೆ. ಭಾರತದಲ್ಲಿ ನ್ಯಾಯಕ್ಕೆ ಬೆಲೆ ಇಲ್ಲವೇ ಎಂದು ಹಲವಾರು ಸಾಮಾಜಿಕ ಜಾಲತಾಣ ಬಳಕೆದಾರರು ಆಕ್ರೋಶ ಹೊರಹಾಕಿದ್ದಾರೆ. ಹೆಣ್ಣುಮಕ್ಕಳಿಗೆ ನಮ್ಮ ನ್ಯಾಯವ್ಯವಸ್ಥೆಯಲ್ಲಿ ಯಾವುದೇ ರಕ್ಷಣೆ ಇಲ್ಲವೇ ಎಂದು ನೆಟ್ಟಿಗರು ಟ್ವೀಟ್ ಮೂಲಕ ಕಮೆಂಟ್‌ಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಪಾದಿತ ಪ್ರತಿಭಾವಂತ ವಿದ್ಯಾರ್ಥಿ ಹಾಗೂ ರಾಜ್ಯದ ಸ್ವತ್ತು ಎಂದು ಪರಿಗಣಿಸಿ ಆತನಿಗೆ ಜಾಮೀನು ನೀಡಿರುವುದು ದೇಶದ ನ್ಯಾಯ ವ್ಯವಸ್ಥೆಯ ಕುರಿತು ಸಂಶಯ ಹುಟ್ಟುಹಾಕುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ