Explained: ಉಚಿತ ವಿದ್ಯುತ್​, ಮಿನಿ ಹೆಲಿಕಾಪ್ಟರ್, ಮಂಗಳ ಗ್ರಹಕ್ಕೆ ಪ್ರವಾಸ! ಚುನಾವಣೆಗೂ ಮುನ್ನ ಉಚಿತ ಕೊಡುಗೆಗಳ ಆಮಿಷ

ಕಳೆದ ವರ್ಷದ ತಮಿಳುನಾಡು ಚುನಾವಣೆಯಲ್ಲಿ ದಕ್ಷಿಣ ಮಧುರೈ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿ ತುಲಂ ಸರವಣನ್ ಅವರು ಚಂದ್ರನಿಗೆ 100 ದಿನಗಳ ಉಚಿತ ಪ್ರವಾಸ, ಐಫೋನ್‌, ಗೃಹಿಣಿಯರಿಗೆ ತಮ್ಮ ಮನೆಕೆಲಸಗಳಲ್ಲಿ ಸಹಾಯ ಮಾಡಲು ರೋಬೋಟ್‌ಗಳು, ಎಲ್ಲರಿಗೂ ಈಜುಕೊಳ ಹೊಂದಿರುವ ಮೂರು ಅಂತಸ್ತಿನ ಮನೆ, ಮಿನಿ ಹೆಲಿಕಾಪ್ಟರ್‌ ಹೀಗೆ ನಾನಾ ಆಫರ್ ಘೋಷಿಸಿದ್ದರು.

ಮತ ಹಾಕಿದರೆ ಚಂದ್ರನಿಗೆ ಪ್ರವಾಸ

ಮತ ಹಾಕಿದರೆ ಚಂದ್ರನಿಗೆ ಪ್ರವಾಸ

  • Share this:
ಚುನಾವಣೆಯಲ್ಲಿ ವೋಟ್ ಗಿಟ್ಟಿಸಲು ಮತದಾರರಿಗೆ ಉಚಿತ ಭರವಸೆಗಳನ್ನು ನೀಡುವ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. ಈ ಕುರಿತು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್​ ಸಹ ಗಂಭೀರ ಅಭಿಪ್ರಾಯ ವ್ಯಕ್ತಪಡಿಸಿದ್ದುಉಚಿತವಾಗಿ ಭರವಸೆಗಳನ್ನು ನೀಡುವ ಆಮಿಷಗಳು ಮತದಾರರ ಮೇಲೆ ಅನಗತ್ಯವಾಗಿ ಪ್ರಭಾವ ಬೀರಬಹುದು. ಮುಕ್ತ ಮತ್ತು ನ್ಯಾಯಯುತ ಚುನಾವಣೆಯ ಬೇರುಗಳನ್ನು ಅಲುಗಾಡಿಸಬಹುದು.  ಅಷ್ಟೇ ಅಲ್ಲದೇ  ಚುನಾವಣಾ ಪ್ರಕ್ರಿಯೆಯ ಪರಿಶುದ್ಧತೆಯನ್ನು ಹಾಳುಮಾಡುತ್ತದೆ ಎಂದು ಸುಪ್ರೀಂಕೋರ್ಟ್  ಆತಂಕ ವ್ಯಕ್ತಪಡಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಚುನಾವಣೆಗೂ ಮುನ್ನ ಸಾರ್ವಜನಿಕರ ಮತವನ್ನು ಕೈವಶ ಮಾಡಿಕೊಳ್ಳಲು ಉಚಿತ ಕೊಡುಗೆಗಳನ್ನು ನೀಡುವ "ರೇವಡಿ ಸಂಸ್ಕೃತಿ" ಎಂದು ಕರೆದಿದ್ದರು. ಅಲ್ಲದೇ ಈಕುರಿತು ಜನರಿಗೆ ಎಚ್ಚರಿಕೆ ನೀಡಿದ್ದರು. ಇದು ದೇಶದ ಅಭಿವೃದ್ಧಿಗೆ "ಅತ್ಯಂತ ಅಪಾಯಕಾರಿ" ಎಂದು ಪ್ರಧಾನಿ ಮೋದಿ ಇತ್ತೀಚಿಗಷ್ಟೇ ಉಲ್ಲೇಖಿಸಿದ್ದನ್ನು ಇಲ್ಲಿ ಪ್ರಸ್ತಾಪಿಸಬಹುದು.

ಬೆಳೆಯುತ್ತಲೇ ಇದೆ ಉಚಿತ ಭರವಸೆಗಳ ವ್ಯಾಪ್ತಿ
ಮತದಾರರಿಗೆ ಚುನಾವಣಾ ಪೂರ್ವ ಭರವಸೆ ನೀಡುವುದು ದಶಕಗಳಿಂದ ಭಾರತದ ರಾಜಕಾರಣಿಗಳಲ್ಲಿ ಸಾಮಾನ್ಯ ರೂಢಿಯಾಗಿದೆ. ನಗದು ಹಣದಿಂದ ಹಿಡಿದು ಮದ್ಯ, ಮನೆಬಳಕೆಯ ವಿವಿಧ ವಸ್ತುಗಳು, ವಿದ್ಯಾರ್ಥಿ ವೇತನಗಳು, ಸಬ್ಸಿಡಿಗಳು ಮತ್ತು ಆಹಾರ ಧಾನ್ಯಗಳವರೆಗೆಈ ಉಚಿತ ಆಮಿಷಗಳ ವ್ಯಾಪ್ತಿ ಬೆಳೆಯುತ್ತಲೆ ಇದೆ.

ಜಯಲಲಿತಾರೂ ಹೊರತಲ್ಲ
ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ, ಎಐಎಡಿಎಂಕೆ ನಾಯಕಿ ದಿವಂಗತ ಜಯಲಲಿತಾ ಅವರು ಹೀಗೆ ಚುನಾವಣೆಗೂ ಮುನ್ನ ಉಚಿತವಾಗಿ ಹಂಚಿಕೆ ಮಾಡುವ ಭರವಸೆ ಬಿತ್ತಿದವರಲ್ಲಿ ಒಬ್ಬರು ಎಂಬ ಮಾತು ರಾಜಕೀಯ ವಲಯದಲ್ಲಿದೆ.

ಜಯಲಲಿತಾ ಘೋಷಣೆಗಳಿಗೆ ಸ್ಪೂರ್ತಿಯಾರು?
ಮತದಾರರಿಗೆ ಉಚಿತ ವಿದ್ಯುತ್, ಮೊಬೈಲ್ ಫೋನ್, ವೈಫೈ ಸಂಪರ್ಕ, ಸಬ್ಸಿಡಿ ಸ್ಕೂಟರ್, ಬಡ್ಡಿ ರಹಿತ ಸಾಲ, ಫ್ಯಾನ್, ಮಿಕ್ಸರ್-ಗ್ರೈಂಡರ್, ಸ್ಕಾಲರ್‌ಶಿಪ್ ಮತ್ತು ಇನ್ನಿತರ ಭರವಸೆಗಳನ್ನು ಜಯಲಲಿತಾ ನೀಡಿದ್ದರು. ಅವರು ಆರಂಭಿಸಿದ ಅಮ್ಮಾ ಕ್ಯಾಂಟೀನ್ ಯೋಜನೆಯೂ ಭಾರೀ ಜನಪ್ರಿಯವೇ ಆಯಿತು. ಜಯಲಲಿತಾ ಅವರಿಗಿಂತ ಮೊದಲು ತಮಿಳುನಾಡು ಸಿಎಂ ಆಗಿದ್ದ ಸಿಎನ್ ಅಣ್ಣಾದೊರೈ 1960 ರ ದಶಕದಲ್ಲೇ 1 ರೂ.ಗೆ ಒಂದು ಕಿಲೋಗ್ರಾಂ ಅಕ್ಕಿ ವಿತರಿಸುವುದಾಗಿ ಘೋಷಿಸಿದ್ದರು. ಇಂತಹ ಘೋಷಣೆಗಳೇ ಜಯಲಲಿತಾ ಅವರಿಗೆ ಸ್ಪೂರ್ತಿಯಾಗಿತ್ತು ಎಂಬ ಅಂದಾಜಿದೆ.

ಉಚಿತ ಟಿವಿ, ಉಚಿತ ಅಡುಗೆ ಅನಿಲವನ್ನೂ ಕೊಡ್ತೇವೆ!
ಹೀಗೆ ಉಚಿತ ವಿತರಣೆಯ ವಿವಿಧ ಭರವಸೆ ನೀಡುವುದರಲ್ಲಿ ತಮಿಳುನಾಡಿನಲ್ಲಿ ಜಯಲಲಿತಾ ಅವರ ವಿರೋಧಿ ಪಾಳಯದ ಡಿಎಂಕೆ ಪಕ್ಷವೂ ಹಿಂದೆ ಬಿದ್ದಿಲ್ಲ. 2006 ರಲ್ಲಿ ಡಿಎಂಕೆ ಪಕ್ಷವು ಜನರಿಗೆ ಉಚಿತವಾಗಿ ಕಲರ್ ಟಿವಿ, ಬಿಪಿಎಲ್​ ಕಾರ್ಡ್​ದಾರರಿಗೆ ಅಡುಗೆ ಅನಿಲ ಸಂಪರ್ಕ ನೀಡುವ ಘೋಷಣೆ ಮಾಡಿತ್ತು.

ಹಳೆ ಪ್ಲಾನ್ ಹಳೇದಾಯ್ತು, ಹುಟ್ಟಿಕೊಂಡ್ತು ಮಾಸ್ಟರ್ ಪ್ಲಾನ್!
ಮಧ್ಯರಾತ್ರಿ ಮತದಾರರಿಗೆ ನಗದು ಹಣವನ್ನು ಹಸ್ತಾಂತರಿಸುವುದು 2011ರವರೆಗೆ ಸಾಂಪ್ರದಾಯಿಕ ಪದ್ಧತಿಯಾಗಿತ್ತು. ಅದರ ಬದಲು ಹೊಸ ಪ್ಲಾನ್ ರೆಡಿಯಾಗಿತ್ತು. ಲಕೋಟೆಗಳಲ್ಲಿ ಹಣ ಮತ್ತು ಡಿಎಂಕೆ ಪಕ್ಷದ ವೋಟಿಂಗ್ ಸ್ಲಿಪ್ ಇಟ್ಟು ದಿನಪತ್ರಿಕೆಗಳ ಒಳಗೆ ಇರಿಸಲಾಯಿತು. ಬೆಳಗ್ಗೆ ನ್ಯೂಸ್ ಪೇಪರ್ ಜೊತೆ ಹಣವೂ ಮನೆಮನೆ ಸೇರಿತು! ಇದು ಮತಕ್ಕಾಗಿ ಹಣ ತೆಗೆದುಕೊಳ್ಳದವರ ಮನೆಗೂ ಹಣ ತಲುಪುವಂತೆ ಮಾಡಿತು. ಈ ಮಾಸ್ಟರ್ ಪ್ಲಾನ್ ಬಹಿರಂಗಗೊಂಡ ನಂತರ ಹಲವು ರಾಜಕಾರಣಿಗಳು ಈ ಹಗರಣವನ್ನು ಒಪ್ಪಿಕೊಂಡಿದ್ದರು.

ಉತ್ತರ ಪ್ರದೇಶದಲ್ಲಿ ಉಚಿತ ಲ್ಯಾಪ್​ಟಾಪ್
2013 ರಲ್ಲಿ ಉತ್ತರ ಪ್ರದೇಶದ ಅಖಿಲೇಶ್ ಯಾದವ್ ಸರ್ಕಾರವು ವಿದ್ಯಾರ್ಥಿಗಳಿಗೆ ಮಹತ್ವಾಕಾಂಕ್ಷೆಯ ಉಚಿತ ಲ್ಯಾಪ್‌ಟಾಪ್ ಯೋಜನೆಯನ್ನು ಘೋಷಿಸಿತು. ಈ ಘೋಷಣೆಯು ಯುವಕರ ಮತಗಳನ್ನು ಅಖಿಲೇಶ್ ಯಾದವ್​ಗೆ ಸಹಾಯ ಮಾಡಿತು. ಅಲ್ಲದೇ 2012 ಮತ್ತು 2015 ರ ನಡುವೆ ಉತ್ತರ ಪ್ರದೇಶ ಸರ್ಕಾರವು ಒಟ್ಟು 15 ಲಕ್ಷ ಲ್ಯಾಪ್‌ಟಾಪ್‌ಗಳನ್ನು ವಿತರಿಸಿತು.

ಶಿರೋಮಣಿ ಅಕಾಲಿದಳದಿಂದ ಆಮ್ ಆದ್ಮಿಯವರೆಗೆ
ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿದಳವು 1997 ರಲ್ಲಿ ಅಧಿಕಾರಕ್ಕೆ ಬಂದಾಗ ರೈತರಿಗೆ ಉಚಿತ ವಿದ್ಯುತ್ ಕೊಡುಗೆ ಘೋಷಿಸಿತು. ಆದರೆ ಈ ಯೋಜನೆಯಿಂದ ಸರ್ಕಾರದ ಬೊಕ್ಕಸಕ್ಕೆ ಅಪಾರ ಹಣ ವೆಚ್ಚವಾಗುತ್ತಿತ್ತು. ಹೀಗಾಗಿ 2002 ರಲ್ಲಿ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್​ನ ಕ್ಯಾಪ್ಟನ್ ಅಮರಿಂದರ್ ಸಿಂಗ್ ಉಚಿತ ವಿದ್ಯುತ್ ಯೋಜನೆಯನ್ನು ರದ್ದುಗೊಳಿಸಿದರು.

ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಪ್ರಸ್ತುತ ಹೀಗೆ ಉಚಿತವಾಗಿ ಹಂಚುವ ರಾಜಕೀಯದ ಮೊರೆಹೋಗಿದೆ. ದೆಹಲಿಯಲ್ಲಿ 2015 ರ ವಿಧಾನಸಭಾ ಚುನಾವಣೆಯಲ್ಲಿ ಕರೆಂಟ್ ಬಿಲ್​ನಲ್ಲಿ ಶೇಕಡಾ 50ರಷ್ಟು ಕಡಿಮೆ ಮಾಡುವ ಆಸೆ ಬಿತ್ತಿತ್ತು. ಅಲ್ಲದೇ ಪ್ರತಿ ಮನೆಗೆ 700 ಲೀಟರ್ ಉಚಿತ ನೀರನ್ನು ನೀಡುತ್ತದೆ ಎಂದು ಭರವಸೆ ನೀಡಿತ್ತು. ಇದರಿಂದಾಗಿ ದೆಹಲಿಯಲ್ಲಿ ಭರ್ಜರಿ ಜಯ ಗಳಿಸಿತು ಆಮ್ ಆದ್ಮಿ ಪಕ್ಷ.

ದೆಹಲಿಯಿಂದ ಇತರ ರಾಜ್ಯಗಳ ಕಡೆಗೆ ತನ್ನ ಗುರಿ ವಿಸ್ತರಿಸಿದ ಆಪ್​ ಪಂಜಾಬ್​ನಲ್ಲೂ ಇಂತಹ ಉಚಿತ ವಿತರಣೆ ಭರವಸೆಗಳಿಂದಲೇ ಗೆದ್ದಿತು. ಅಲ್ಲದೇ ಉಚಿತ ಭರವಸೆಗಳ ಆಮಿಷವನ್ನು ಇನ್ನಷ್ಟು ವೈವಿಧ್ಯಮಯಗೊಳಿಸಲು ಯುವಕರಿಗೆ ವಿದ್ಯಾರ್ಥಿವೇತನ, ವೃದ್ಧರಿಗೆ ತೀರ್ಥಯಾತ್ರೆಯಂತಹ ವಿವಿಧ ಉಚಿತ ಯೋಜನೆಗಳನ್ನು ಹೆಚ್ಚಿಸುತ್ತಿದೆ.

ಚಂದ್ರನ ಅಂಗಳಕ್ಕೂ ಪ್ರವಾಸ!
ಕಳೆದ ವರ್ಷದ ತಮಿಳುನಾಡು ಚುನಾವಣೆಯಲ್ಲಿ ದಕ್ಷಿಣ ಮಧುರೈ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿ ತುಲಂ ಸರವಣನ್ ಅವರು ಚಂದ್ರನಿಗೆ 100 ದಿನಗಳ ಉಚಿತ ಪ್ರವಾಸ, ಐಫೋನ್‌, ಗೃಹಿಣಿಯರಿಗೆ ತಮ್ಮ ಮನೆಕೆಲಸಗಳಲ್ಲಿ ಸಹಾಯ ಮಾಡಲು ರೋಬೋಟ್‌ಗಳು, ಎಲ್ಲರಿಗೂ ಈಜುಕೊಳ ಹೊಂದಿರುವ ಮೂರು ಅಂತಸ್ತಿನ ಮನೆ, ಮಿನಿ ಹೆಲಿಕಾಪ್ಟರ್‌ಗಳು, ಮಹಿಳೆಯರಿಗೆ ಅವರ ಮದುವೆಗೆ 100 ಸಾವರಿನ್ ಚಿನ್ನ, ಪ್ರತಿ ಕುಟುಂಬಕ್ಕೆ ದೋಣಿ ಮತ್ತು ವ್ಯಾಪಾರ ಉದ್ಯಮಗಳನ್ನು ಪ್ರಾರಂಭಿಸಲು ಯುವಕರಿಗೆ 50,000 ಡಾಲರ್ ಹಣವನ್ನು ಘೋಷಿಸಿತ್ತು.

ಹೀಗೆ ವಿವಿಧ ಪಕ್ಷಗಳು ಘೋಷಿಸುತ್ತಿರುವ ವಿವಿಧ ಉಚಿತ ಭರವಸೆಗಳನ್ನು ನೋಡಿಯೂ ಭಾರತದ ಮತದಾರ ತಲೆಕೆಡಿಸಿಕೊಳ್ಳುತ್ತಿಲ್ಲ. ಮೋಸಹೋಗುತ್ತಿಲ್ಲ.  ತನಗೆ ನಿಜಕ್ಕೂ ಭರವಸೆ ಮೂಡಿಸುವ ಅಭ್ಯರ್ಥಿಗೆ ಮತದಾನ ಮಾಡುತ್ತಿದ್ದಾರೆ ಎಂದು ಹೇಳಬಹುದಲ್ಲವೇ?
Published by:guruganesh bhat
First published: