ನವದೆಹಲಿ(ಫೆ.02): ಇಡೀ ದೇಶವೇ ಕಾತುರದಿಂದ ಕಾಯುತ್ತಿದ್ದ ಬಜೆಟ್ (Budget 2023) ಅನ್ನು ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮಂಡಿಸಿದ್ದು, ಮಧ್ಯಮ ವರ್ಗಕ್ಕೆ ದೊಡ್ಡ ಉಡುಗೊರೆ ನೀಡಿದ್ದಾರೆ. ಕೇಂದ್ರ ಬಜೆಟ್ 2023ರ ಮಂಡನೆ ವೇಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೂತನ ತೆರಿಗೆ ಸ್ಲಾಬ್ ಗಳನ್ನು (Income Tax Slab) ವಿವರಿಸಿದ್ದು, ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 7 ಲಕ್ಷರೂ ಗೆ ಹೆಚ್ಚಳ ಮಾಡಿದ್ದಾರೆ.
ಏಪ್ರಿಲ್ 1 ರಿಂದ ಬಜೆಟ್ ಘೋಷಣೆಗಳು ಜಾರಿಗೆ ಬರುಲಿದ್ದು, ಬಜೆಟ್ ಘೋಷಣೆಯಂತೆ ಈ ಸ್ಲ್ಯಾಬ್‌ಗಳನ್ನು ಮಾರ್ಪಡಿಸಲಾಗುತ್ತದೆ. ಹಾಗಾದರೆ ನಾವಿಲ್ಲಿ ಆದಾಯ ತೆರಿಗೆ, ಪ್ರಮಾಣಿತ ಕಡಿತದ ದರಗಳೆಷ್ಟು? ತೆರಿಗೆ ಹೊಣೆಗಾರಿಕೆ, ಟೇಕ್ ಹೋಮ್ ಸಂಬಳ ಹೇಗೆ ಬಜೆಟ್ 2023 ರ ನಂತರ ಬದಲಾಗುತ್ತದೆ ಎಂಬುದನ್ನು ನೋಡೋಣ.
ಮಧ್ಯಮ ವರ್ಗಕ್ಕೆ ಬಂಪರ್: 7 ಲಕ್ಷ ರೂ.ವರೆಗಿನ ಆದಾಯದವರೆಗೆ ಯಾವುದೇ ತೆರಿಗೆ ಇಲ್ಲ
ಹೊಸ ತೆರಿಗೆ ವಿಧಾನದ ಅಡಿಯಲ್ಲಿ ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 7 ಲಕ್ಷ ರೂ.ಗೆ ವಿಸ್ತರಣೆ ಮಾಡಿ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು. 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಿದ ಹಣಕಾಸು ಸಚಿವೆ, ಆದಾಯ ತೆರಿಗೆ ವಿನಾಯಿತಿ ಮಿತಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಮಧ್ಯಮ ವರ್ಗದ ವೇತನದಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಅಂದರೆ ಮಧ್ಯಮ ವರ್ಗದವರು ಇನ್ನೂ ಮುಂದೆ 7 ಲಕ್ಷ ರೂ.ವರೆಗಿನ ಯಾವುದೇ ಆದಾಯದಕ್ಕೆ ತೆರಿಗೆ ಕಟ್ಟುವ ಅವಶ್ಯಕತೆ ಇಲ್ಲ.
ಇದನ್ನೂ ಓದಿ: Budget 2023: ಇಂದು ಬಜೆಟ್ ಮಂಡಿಸಿ 2 ವಿಶೇಷ ಗೌರವಕ್ಕೆ ಪಾತ್ರರಾದ ನಿರ್ಮಲಾ! ಈ ವಿಚಾರದಲ್ಲಿ ಸಚಿವೆ ಸಾಧನೆ ಏನು ಗೊತ್ತಾ?
5 ಲಕ್ಷ ರೂಪಾಯಿವರೆಗೆ ಇದ್ದ ಮಿತಿಯನ್ನು 7 ಲಕ್ಷಕ್ಕೆ ವಿಸ್ತರಣೆ
ಈ ಹಿಂದೆ 5 ಲಕ್ಷ ರೂಪಾಯಿ ಆದಾಯ ಇರುವವರು ತೆರಿಗೆ ಕಟ್ಟಬೇಕಿತ್ತು. ಈ ಬಜೆಟ್‌ನಲ್ಲಿ ಈವರೆಗೆ 5 ಲಕ್ಷ ರೂಪಾಯಿ ವರೆಗೆ ಇದ್ದ ಮಿತಿಯನ್ನು 7 ಲಕ್ಷ ರೂಪಾಯಿ ವರೆಗೆ ವಿಸ್ತರಿಸಲಾಗಿದೆ. ಹೊಸ ತೆರಿಗೆ ವಿಧಾನದ ಅಡಿಯಲ್ಲಿ 7 ಲಕ್ಷ ರೂ. ಆದಾಯದವರೆಗೂ ಆದಾಯ ತೆರಿಗೆ ಇರುವುದಿಲ್ಲ.
ತೆರಿಗೆ ರಿಟರ್ನ್ಸ್ ಪ್ರಕ್ರಿಯೆ ಅವಧಿ ಇಳಿಕೆ
ಇಲ್ಲೂ ಸಹ ತೆರಿಗೆದಾರರಿಗೆ ಈ ಬಜೆಟ್‌ನಿಂದ ಸಮಯದ ಅವಧಿ ಕಡಿತಗೊಂಡಿದೆ. ಆದಾಯ ತೆರಿಗೆ ರಿಟರ್ನ್ಸ್‌ನ ಸರಾಸರಿ ಪ್ರಕ್ರಿಯೆ ಅವಧಿಯನ್ನು 93 ದಿನಗಳಿಂದ 16 ದಿನಗಳಿಗೆ ಇಳಿಸಲಾಗಿದೆ ಎಂದು ಸೀತಾರಾಮನ್ ಅವರು ಹೇಳಿದರು. "ಮುಂದಿನ ಜನ್ ಏಕೀಕೃತ ಐಟಿ ರಿಟರ್ನ್ ಫಾರ್ಮ್‌ಗಳನ್ನು ಹೊರತರಲು ಮತ್ತು ಕುಂದುಕೊರತೆ ಪರಿಹಾರವನ್ನು ಹೆಚ್ಚಿಸಲು ಸರ್ಕಾರ ಯೋಜಿಸಿದೆ." ಎಂದು ತಿಳಿಸಿದರು.
ತೆರಿಗೆ ಪಾವತಿ ಆಯ್ಕೆ ಸೌಲಭ್ಯ
2023-24ರ ಬಜೆಟ್‌ನಲ್ಲಿ ಸೀತಾರಾಮನ್ ಅವರು ಪ್ರಸ್ತುತ ರೂ 5 ಲಕ್ಷದವರೆಗಿನ ಒಟ್ಟು ಆದಾಯ ಹೊಂದಿರುವ ವ್ಯಕ್ತಿಗಳು ಹಳೆಯ ಮತ್ತು ಹೊಸ ಆಡಳಿತಗಳ ಅಡಿಯಲ್ಲಿ ರಿಯಾಯಿತಿಯ ಕಾರಣದಿಂದಾಗಿ ಯಾವುದೇ ತೆರಿಗೆಯನ್ನು ಪಾವತಿಸುವುದಿಲ್ಲ ಎಂದು ಹೇಳಿದರು. ಕಳೆದ ವರ್ಷದ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಅಸ್ತಿತ್ವದಲ್ಲಿ ಇದ್ದ ತೆರಿಗೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿರಲಿಲ್ಲ. ಇದರರ್ಥ ಹಿಂದಿನ ತೆರಿಗೆಯ ಸ್ಲ್ಯಾಬ್ ಗಳಲ್ಲಿ ತೆರಿಗೆಗಳನ್ನು ಪಾವತಿಸುವಿಕೆಯನ್ನು ಮುಂದುವರಿಸಲಾಗಿತ್ತು.
ಆದರೆ ಪ್ರಸ್ತುತ ಎರಡೂ ರೀತಿಯಲ್ಲಿ ತೆರಿಗೆ ಪಾವತಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ತೆರಿಗೆದಾರರು ಯಾವುದನ್ನು ಆರಿಸಿಕೊಳ್ಳುತ್ತಾರೆ ಎಂಬುದರ ಆಧಾರದ ಮೇಲೆ ವಿನಾಯಿತಿ ನಿರ್ಧಾರವಾಗುತ್ತದೆ. ಹೊಸ ತೆರಿಗೆ ಪದ್ಧತಿಯೇ ಇನ್ನು ಮುಂದೆ ಡಿಫಾಲ್ಟ್ ತೆರಿಗೆ ಪದ್ಧತಿ ಆಗಿರುತ್ತದೆ. ಆದರೆ ಹಳೆಯ ತೆರಿಗೆ ಪದ್ಧತಿಯೂ ಚಾಲ್ತಿಯಲ್ಲಿರುತ್ತದೆ. ಹೊಸ ತೆರಿಗೆ ಪದ್ಧತಿ ಆರಿಸಿಕೊಳ್ಳುವವರಿಗೆ 7 ಲಕ್ಷ ರೂ ವರೆಗಿನ ತೆರಿಗೆ ವಿನಾಯ್ತಿ ಲಭ್ಯವಾಗಲಿದೆ. ಹೊಸ ತೆರಿಗೆ ಪದ್ಧತಿಯಲ್ಲಿ ಅತಿ ಹೆಚ್ಚು ಸರ್ಚಾರ್ಜ್ ದರವನ್ನು 37% ರಿಂದ 25% ಕ್ಕೆ ಇಳಿಸಲು ಸರ್ಕಾರ ಪ್ರಸ್ತಾಪಿಸಿದೆ.
ಹೊಸ ಆದಾಯ ತೆರಿಗೆ ದರಗಳು
ಈ ಬಜೆಟ್‌ನಲ್ಲಿ ಮಂಡನೆಯಾದ ಘೋಷಣೆಗಳ ಅನ್ವಯ ಹೊಸ ಆದಾಯ ತೆರಿಗೆ ದರಗಳು ಹೀಗಿವೆ.
ಪರಿಷ್ಕರಿಸಿದ ರಿಯಾಯಿತಿ ತೆರಿಗೆ ಪದ್ಧತಿಯ ಅಡಿಯಲ್ಲಿ, 3 ಲಕ್ಷದವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ. ಆದರೆ 3 ರಿಂದ 6 ಲಕ್ಷದವರಿಗೆ ಶೇ.5 ರಷ್ಟು ತೆರಿಗೆ, 6 ರಿಂದ 9 ಲಕ್ಷದವರಿಗೆ ಶೇ.10 ರಷ್ಟು ತೆರಿಗೆ, 9 ರಿಂದ 12 ಲಕ್ಷದವರಿಗೆ ಶೇ.15 ರಷ್ಟು ತೆರಿಗೆ, 12 ರಿಂದ 15 ಲಕ್ಷದವರಿಗೆ ಶೇ. 20 ರಷ್ಟು ತೆರಿಗೆ, 15 ಲಕ್ಷದಿಂದ ಮೇಲ್ಪಟ್ಟ ಮೊತ್ತಕ್ಕೆ ಶೇ.30 ರಷ್ಟು ತೆರಿಗೆ ವಿಧಿಸಲಾಗುತ್ತದೆ.
ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಮಹತ್ವದ ಘೋಷಣೆ
ಹೊಸ ವೈಯಕ್ತಿಕ ಆದಾಯ ತೆರಿಗೆ ಆಡಳಿತದಲ್ಲಿ, ಸ್ಲ್ಯಾಬ್‌ಗಳ ಸಂಖ್ಯೆಯನ್ನು ಐದಕ್ಕೆ ಇಳಿಸಲಾಗುವುದು ಎಂದು ಅವರು ಹೇಳಿದರು. "ಸ್ಲ್ಯಾಬ್‌ಗಳ ಸಂಖ್ಯೆಯನ್ನು ಐದಕ್ಕೆ ಇಳಿಸುವ ಮೂಲಕ ಮತ್ತು ತೆರಿಗೆ ವಿನಾಯಿತಿ ಮಿತಿಯನ್ನು 3 ಲಕ್ಷಕ್ಕೆ ಹೆಚ್ಚಿಸುವ ಮೂಲಕ ಈ ಆಡಳಿತದಲ್ಲಿ ತೆರಿಗೆ ರಚನೆಯನ್ನು ಬದಲಾಯಿಸಲು ನಾನು ಪ್ರಸ್ತಾಪಿಸುತ್ತೇನೆ" ಎಂದು ಸೀತಾರಾಮನ್ ಬಜೆಟ್ ಮಂಡನೆ ವೇಳೆ ತಿಳಿಸಿದರು. ವಾರ್ಷಿಕ ₹ 9 ಲಕ್ಷ ವೇತನ ಪಡೆಯುವವರು ₹ 45,000 ತೆರಿಗೆ ಕಟ್ಟುತ್ತಾರೆ ಎಂದು ಸಚಿವರು ಹೇಳಿದರು.
ಪ್ರಮಾಣಿತ ಕಡಿತಗಳು (ಸ್ಟಾಂಡರ್ಡ್ ಡಿಡಕ್ಷನ್)
ಇಲ್ಲಿ 15.5 ಲಕ್ಷ ಅಥವಾ ಅದಕ್ಕೂ ಹೆಚ್ಚಿನ ಆದಾಯವನ್ನು ವೇತನದಿಂದ ಪಡೆಯುವವರಿಗೆ ₹ 52,500 ಸ್ಟಾಂಡರ್ಡ್ ಡಿಡಕ್ಷನ್ ಸೌಲಭ್ಯ ಸಿಗಲಿದೆ. “ಹೊಸ ತೆರಿಗೆ ಪದ್ಧತಿಗೆ ಪ್ರಮಾಣಿತ ಕಡಿತದ ಪ್ರಯೋಜನವನ್ನು ವಿಸ್ತರಿಸಲು ನಾನು 15.5 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ ಪ್ರತಿಯೊಬ್ಬ ಸಂಬಳದಾರರು 52,500 ರೂಪಾಯಿಗಳ ಲಾಭವನ್ನು ಪಡೆಯುತ್ತಾರೆ" ಎಂದು ಸೀತಾರಾಮನ್ ಹೇಳಿದರು.
ಇದನ್ನೂ ಓದಿ: Budget 2023: ಬಜೆಟ್ ದಿನಸಿ ಅಂಗಡಿ ರಸೀದಿಯಂತಿದೆ ಎಂದು ಸುಬ್ರಮಣಿಯನ್ ಸ್ವಾಮಿ ಟೀಕೆ, ಎಲೆಕ್ಷನ್ ಬಜೆಟ್ ಎಂದ ಖರ್ಗೆ!
2005–2006ರಲ್ಲಿ ಅದನ್ನು ತೆಗೆದುಹಾಕಲಾದ ಹದಿಮೂರು ವರ್ಷಗಳ ನಂತರ, 2014ರಲ್ಲಿ ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ತಮ್ಮ ಮೊದಲ ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 2ರಿಂದ 2.5 ಲಕ್ಷ ರೂ.ಗೆ ಹೆಚ್ಚಳ ಮಾಡಿದ್ದರು. ಅದಾದ ನಂತರ ಎಷ್ಟೇ ಬೇಡಿಕೆ ಬಂದರೂ ಕೇಂದ್ರ ಸರ್ಕಾರ ತೆರಿಗೆ ವಿನಾಯಿತಿ ಮಿತಿ ಏರಿಸಿಲ್ಲ. 2019ರಲ್ಲಿ 50 ಸಾವಿರ ರು. ಸ್ಟಾಂಡರ್ಡ್ ಡಿಡಕ್ಷನ್ ತರಲಾಗಿತ್ತು. ಅದರ ಮಿತಿಯೂ ಏರಿಕೆಯಾಗಿಲ್ಲ. ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು 2018 ರ ಬಜೆಟ್‌ನಲ್ಲಿ ರೂ 40,000 ರ “ಸ್ಟ್ಯಾಂಡರ್ಡ್ ಡಿಡಕ್ಷನ್” ಅನ್ನು ಮರು ಸ್ಥಾಪಿಸಿದರು, ಇದು ರೂ 19,200 ರ ಸಾರಿಗೆ ಭತ್ಯೆ ಮತ್ತು ರೂ 15,000 ವೈದ್ಯಕೀಯ ವೆಚ್ಚವನ್ನು ಬದಲಾಯಿಸಿತು.
ಪ್ರಸ್ತುತ ಮಧ್ಯಮವರ್ಗದ ಮೇಲಿನ ಹೊರೆ ತಗ್ಗಿಸಲು ಪ್ರಮುಖವಾಗಿ ಈ ಎರಡೂ ಮಿತಿ ಏರಿಕೆ ಮಾಡಿ ಬಜೆಟ್ ಮಂಡನೆ ಮಾಡಿದ್ದಾರೆ.
ಏಪ್ರಿಲ್ 1 ರಿಂದ ಜಾರಿಗೆ
ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ, ಬಜೆಟ್ ಘೋಷಣೆಯಂತೆ ಈ ಸ್ಲ್ಯಾಬ್‌ಗಳನ್ನು ಮಾರ್ಪಡಿಸಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ