• ಹೋಂ
  • »
  • ನ್ಯೂಸ್
  • »
  • Explained
  • »
  • Explained: ಕರ್ನಾಟಕ ಚುನಾವಣೆಯಲ್ಲಿ ಲಿಂಗಾಯತ-ಒಕ್ಕಲಿಗ ಅಂಶವು ಯಾವ ರೀತಿ ಪ್ರಭಾವ ಬೀರುತ್ತದೆ?

Explained: ಕರ್ನಾಟಕ ಚುನಾವಣೆಯಲ್ಲಿ ಲಿಂಗಾಯತ-ಒಕ್ಕಲಿಗ ಅಂಶವು ಯಾವ ರೀತಿ ಪ್ರಭಾವ ಬೀರುತ್ತದೆ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕರ್ನಾಟಕದ ಚುನಾವಣಾ ಫಲಿತಾಂಶವು ಯಾವ ಪ್ರಮುಖ ಪಕ್ಷಗಳು ಪ್ರಮುಖ ಭೌಗೋಳಿಕ ಪ್ರದೇಶಗಳಲ್ಲಿ ತಮ್ಮ ಮತಗಳನ್ನು ರಕ್ಷಿಸಿಕೊಳ್ಳಬಹುದು ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಲಿಂಗಾಯತ ಮತ್ತು ಒಕ್ಕಲಿಗ ಮತಗಳು ಎಷ್ಟರ ಮಟ್ಟಿಗೆ ಬದಲಾಗಬಹುದು ಎಂಬುದು ಕುತೂಹಲಕಾರಿಯಾಗಿದೆ.

  • Trending Desk
  • 4-MIN READ
  • Last Updated :
  • Karnataka, India
  • Share this:

ಕರ್ನಾಟಕದಲ್ಲಿ ಲಿಂಗಾಯತ ಸಮುದಾಯದ (Lingayat Community In Karnataka) ಪ್ರಾಬಲ್ಯ ಇರುವುದನ್ನು ಒಪ್ಪತಕ್ಕ ಅಂಶವೇ ಆಗಿದೆ. ಅಷ್ಟಕ್ಕೂ ಶೈವ (Shaiva) ಅಂಶಕ್ಕೆ ಒತ್ತು ನೀಡುವ ಲಿಂಗಾಯತ ಸಮಾಜದ ಪ್ರತಿಷ್ಠಿತ ಮಠವಾಗಿರುವ ತುಮಕೂರಿನ ಶ್ರೀ ಸಿದ್ಧಗಂಗಾ ಮಠದ (Siddaganga Mutt) ಹೆಸರು ಕೇಳದವರು ರಾಜ್ಯದಲ್ಲಿ ಬಹುಶಃ ಯಾರೂ ಇರಲಿಕ್ಕಿಲ್ಲ. ಗುಹೆಗಳು ಹಾಗೂ ಬಂಡೆಗಳ ಗುಡ್ಡಗಳ ಮಧ್ಯದಲ್ಲಿ ಎಲೆಮರೆಯ ಕಾಯಿಯಂತೆ ನೆಲೆಸಿರುವ ಈ ಪವಿತ್ರ ಮಠವು ಹದಿನೈದನೇ ಶತಮಾನದಲ್ಲಿ ಸ್ಥಾಪನೆಯಾಗಿದ್ದು ಇದರ ಮೂಲ ಉದ್ದೇಶ ಹನ್ನೆರಡನೇ ಶತಮಾನದ ಸಮಾಜ ಸುಧಾರಕ, ಸಂತ, ಭಕ್ತಿ ಭಂಡಾರಿ ಬಸವಣ್ಣನವರ ಉಪದೇಶಗಳನ್ನು ಮಾನವ ಕಲ್ಯಾಣಕ್ಕಾಗಿ ಎಲ್ಲರಲ್ಲೂ ಸಾರುವುದಾಗಿದೆ.


ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಸಿದ್ಧಗಂಗಾ ಮಠದ ಶ್ರೀಗಳು ಕರ್ನಾಟಕ ಕಂಡ ಅದ್ಭುತ ವ್ಯಕ್ತಿತ್ವಗಳಲ್ಲಿ ಒಬ್ಬರು. ಇಂದು ಕೈಲಾಸವಾಸಿಯಾಗಿದ್ದರೂ ಅವರ ಸರಳ ನಡೆ-ನುಡಿ ಇಂದಿಗೂ ಶ್ರೀಮಠದ ಪ್ರಬಲ ಆದ್ಯತೆಗಳಾಗಿವೆ. ಹಿಂದೊಮ್ಮೆ ಸಿದ್ಧಗಂಗಾ ಶ್ರೀಗಳೊಂದಿಗೆ ಕರ್ನಾಟಕದ ರಾಜಕೀಯ ಕುರಿತು ಅನಿಸಿಕೆಗಳನ್ನು ಕೇಳಿದಾಗ ಅವರು ಅರ್ಥಗರ್ಭಿತವಾದಂತಹ ಭಾವನೆಗಳನ್ನು ವ್ಯಕ್ತಪಡಿಸಿದ್ದರು.


ಸಿದ್ಧಗಂಗಾ ಶ್ರೀಗಳ ರಾಜಕೀಯದ ಬಗ್ಗೆ ಅನಿಸಿಕೆ


ಅವರಿಗೆ, ಒಂದೊಮ್ಮೆ ಅವರ ಈ ಮಠವು ರಾಜಕೀಯವನ್ನು ಯಾವ ರೀತಿ ನೋಡುತ್ತದೆ ಎಂದು ಕೇಳಿದ್ದಾಗ ಸರಳವಾಗಿ ಅದಕ್ಕವರು, ಚುನಾವಣೆಗಳು ಎಲ್ಲರೂ ಹಾಗೂ ಪ್ರತಿಯೊಬ್ಬರೂ ಮತ ಹಾಕುವುದಕ್ಕಾಗಿ ನಡೆಯುತ್ತವೆ. ಆದರೆ, ಎಲ್ಲೆ ಹೋದರೂ ಧರ್ಮ ಹಾಗೂ ಜಾತಿಗಳು ರಾಜಕೀಯದ ಜೊತೆಯಲ್ಲೇ ನಡೆಯುತ್ತವೆ" ಎಂದಿದ್ದರು.


ಇದನ್ನೂ ಓದಿ: ಜನರಲ್‌ಗಳ ಕದನಕ್ಕೆ ಹೊತ್ತಿ ಉರಿಯುತ್ತಿದೆ ಸುಡಾನ್: ಇತರ ದೇಶಗಳ ಆತಂಕ ಹೆಚ್ಚಿಸುತ್ತಿರುವುದೇಕೆ ಈ ಸಂಘರ್ಷ?


ಹೌದು, ಇಂದು ನಿಜವಾಗಿಯೂ ಅಂತಹ ಸ್ಥಿತಿಯಿದೆ. ಮುಂದೊಂದು ದಿನ ರಾಜಕೀಯ ಎಂಬುದು ಇವೆಲ್ಲದರಿಂದ ಪ್ರತ್ಯೇಕವಾಗಲಿ. ಈಗಂತೂ ಧರ್ಮ-ಜಾತಿಗಳಿಲ್ಲದೆ ರಾಜಕೀಯವೇ ಇಲ್ಲ ಎಂಬಂತಾಗಿದೆ.


ಸಮುದಾಯವನ್ನು ಅಲ್ಪಸಂಖ್ಯಾತರ ವರ್ಗದಲ್ಲಿ ಸೇರಿಸುವಂತೆ ಶಿಫಾರಸ್ಸು


ಸುಮಾರು ಐದು ವರ್ಷಗಳ ಹಿಂದೆ ಸಿದ್ಧಗಂಗಾ ಶ್ರೀಗಳನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ಕೇಳಿದ್ದಾಗ ಆಗ ರಾಜ್ಯದಲ್ಲಿ ರಾಜಕೀಯ ಬಿಸಿ ಗಗನಕ್ಕೇರಿತ್ತು. ಆ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯನವರು ಲಿಂಗಾಯತರಲ್ಲಿ ಬಿಜೆಪಿಯ ಪ್ರಾಬಲ್ಯವನ್ನು ತಗ್ಗಿಸುವ ಉದ್ದೇಶದಿಂದ ಆ ಸಮುದಾಯವನ್ನು ಅಲ್ಪಸಂಖ್ಯಾತರ ವರ್ಗದಲ್ಲಿ ಸೇರಿಸುವಂತೆ ಶಿಫಾರಸ್ಸು ಮಾಡಿದ್ದರು.


ಇನ್ನು, ಲಿಂಗಾಯತರಲ್ಲೇ ಸಾಕಷ್ಟು ಜನರು ತಮ್ಮನ್ನು ತಾವು ವೀರಶೈವರು ಎಂದು ನಂಬಿರುವುದರಿಂದ ಅಂದಿನ ಕಾಂಗ್ರೆಸ್ ಸರಕಾರವು ವೀರಶೈವ-ಲಿಂಗಾಯತರನ್ನು ಲಿಂಗಾಯತರ ಉಪವರ್ಗ ಎಂತಲೂ ಪ್ರತ್ಯೇಕವಾಗಿ ಗುರುತಿಸುವ ಪ್ರಯತ್ನ ಮಾಡಿತ್ತು. ಇದೊಂದು ಬಗೆಯ ಮತ್ತೊಂದು ವಿವಾದ ಹಾಗೂ ಚರ್ಚೆಗೆ ನಾಂದಿ ಹಾಡಿತ್ತು.


ಸಾಂಕೇತಿಕ ಚಿತ್ರ


ಇದರ ಪರಿಣಾಮ ಹೇಗಾಯಿತೆಂದರೆ ತದನಂತರ ನೆಡದಿದ್ದ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತ ಮತದಾರರ ಪ್ರಾಬಲ್ಯವಿರುವ 70 ಕ್ಷೇತ್ರಗಳಲ್ಲಿ ಬಿಜೆಪಿ ಏಕಾಧಿಪತ್ಯವಾಗಿ ಜಯಭೇರಿ ಸಾಧಿಸಿತ್ತು. ಈಗ ಅದಾದ ಐದು ವರ್ಷಗಳ ನಂತರ ಮತ್ತೊಮ್ಮೆ ಕರ್ನಾಟಕದಲ್ಲಿ ಲಿಂಗಾಯತರ ಮತಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯದ ಜೋರಾದ ಹೋರಾಟ ನೋಡುವಂತಾಗಿದೆ.


ಮತ ಪ್ರಚಾರದಲ್ಲಿ ಯಡಿಯೂರಪ್ಪ


ಪ್ರಸ್ತುತ ಲಿಂಗಾಯತ ಸಮಾಜದ ದೊಡ್ಡ ನಾಯಕರಾಗಿ ಬಿಜೆಪಿಯ ಬಿಎಸ್ ಯಡಿಯೂರಪ್ಪನವರು ರಾಜ್ಯದಲ್ಲಿ ಕಮಲ ಅರಳಿಸಲು ಬಿರುಸಾದ ಪ್ರಚಾರ ಕೈಗೊಂಡಿದ್ದಾರೆ. ಈ ನಡುವೆ ಬಿಜೆಪಿಯ ಮತ್ತಿಬ್ಬರು ನಾಯಕರುಗಳಾಗಿದ್ದ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿ ಅವರು ಕಾಂಗ್ರೆಸ್ ಪಡೆ ಸೇರಿದ್ದಾರೆ. ಒಟ್ಟಿನಲ್ಲಿ ಇದರಿಂದ ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದೆ ಎಂಬುದನ್ನು ಮೇ 13ರಂದೇ ಗೊತ್ತಾಗಲಿದೆ.


ಇನ್ನು, ಲಿಂಗಾಯತ ಸಮಾಜದಂತೆ ಇನ್ನೊಂದೆಡೆ ಒಕ್ಕಲಿಗ ಸಮುದಾಯವು ಸಾಕಷ್ಟು ಪ್ರಭಾವಿ ಸಮುದಾಯವಾಗಿದ್ದು ಡಿಕೆ ಶಿವಕುಮಾರ್ ಸಮಾಜದ ದೊಡ್ಡ ಮುಖಗಳಲ್ಲಿ ಒಬ್ಬರಾಗಿದ್ದಾರೆ. ಇನ್ನೊಂದೆಡೆ ಅಹಿಂದ ಅಂಶವನ್ನು ಎತ್ತಿಕೊಂಡು ಸಾಗುತ್ತಿರುವ ಸಿದ್ಧರಾಮಯ್ಯನವರು ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ. ಅಂಹಿಂದ ಎಂಬುದು 'ಅಲ್ಪಸಂಖ್ಯಾತರು’,’ಹಿಂದುಳಿದವರು’ ಹಾಗೂ ’ದಲಿತರು’ ಈ ಮೂರು ಪಂಗಡಗಳ ಸಂಕ್ಷಿಪ್ತ ರೂಪವಾಗಿದೆ.


ಈ ಮಧ್ಯದಲ್ಲಿ ಒಕ್ಕಲಿಗ ಸಮುದಾಯದ ಹಾಗೂ ಹಳೆಯ ಮೈಸೂರು ಭಾಗದಲ್ಲಿ ಸಾಕಷ್ಟು ಶಕ್ತಿಯುತವಾಗಿರುವ ಜೆಡಿಎಸ್ ಪಕ್ಷದ ಸುಪ್ರೀಮೊ ಹೆ.ಡಿ. ದೇವೇಗೌಡರವರು ಮತ್ತೊಮ್ಮೆ ಈ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ವಿಶ್ವಾಸಗಳಿಸಿ ಸರ್ಕಾರ ರಚಿಸುವಲ್ಲಿ ಕಿಂಗ್ ಮೇಕರ್ ಆಗಿ ಹೊರಹೊಮ್ಮುವ ಇಂಗಿತದಲ್ಲಿದ್ದಾರೆ.


ಒಟ್ಟಿನಲ್ಲಿ ರಾಜ್ಯ ರಾಜಕಾರಣದಲ್ಲಿ ಲಿಂಗಾಯತ-ಒಕ್ಕಲಿಗ ಎಂಬ ಅಂಶವು ಹಲವು ಬಾರಿ ನಿರ್ಣಾಯಕ ಅಂಶಗಳಾಗಿ ಹೊರಹೊಮ್ಮಿರುವುದರಲ್ಲಿ ಸಂಶಯವೇ ಇಲ್ಲ.


ಲಿಂಗಾಯತರು, ಒಕ್ಕಲಿಗರು ಹಾಗೂ ಬದಲಾಗುತ್ತಿರುವ ಸನ್ನಿವೇಶ


ಸ್ವಾತಂತ್ರ್ಯಾ ನಂತರದ ರಾಜ್ಯದ ರಾಜಕೀಯ ಚಿತ್ರಣವನ್ನು ಗಮನಿಸುವುದಾದರೆ ಅದು ಯಾವಾಗಲೂ ಬದಲಾಗುತ್ತಿರುವ "ಪ್ರಬಲ ಜಾತಿ" ಆಧಾರದ ಮೇಲೆ ಅವಲಂಬಿತವಾಗಿರುವುದನ್ನು ಕಾಣಬಹುದು. ಮೊದಲ ಬಾರಿಗೆ 1959 ರಲ್ಲಿ ಸಮಾಜಶಾಸ್ತ್ರಜ್ಞರಾದ ಎಂ.ಎನ್ ಶ್ರೀನಿವಾಸ್ ಅವರು ಮೊದಲ ಬಾರಿಗೆ ಪ್ರಬಲ ಜಾತಿ ಎಂಬ ಪದವನ್ನು ಹುಟ್ಟು ಹಾಕಿದರು.


ಅಷ್ಟಕ್ಕೂ ಸ್ವಾತಂತ್ರ್ಯಾ ನಂತರದ ಸಮಯದಲ್ಲಿ ಹಳೆಯ ಮೈಸೂರಿನ ಭಾಗದಲ್ಲಿ ಒಕ್ಕಲಿಗರದ್ದು ಪ್ರಬಲವಾದ ಸಮುದಾಯವಿತ್ತು. ತದನಂತರ ಲಿಂಗಾಯತ ಸಮುದಾಯದ ನಾಯಕರು ಹೆಚ್ಚಿನ ಪ್ರಮಾಣದಲ್ಲಿ ರಾಜಕೀಯದಲ್ಲಿ ಮುಂದೆ ಬಂದು ರಾಜ್ಯಾದ್ಯಂತ ಲಿಂಗಾಯತ ಒಂದು ಪ್ರಬಲ ಸಮುದಾಯವಾಯಿತು.


ಲಿಂಗಾಯತ - ಒಕ್ಕಲಿಗ ಸಮುದಾಯಗಳ ಐತಿಹಾಸಿಕ ಮಹತ್ವ


1956 ರಿಂದ 1972ರ ಮಧ್ಯದ ಸಮಯದಲ್ಲಿ ಕರ್ನಾಟಕ ರಾಜ್ಯದಲ್ಲಿ ಅಕ್ಷರಶಃ ಈ ಎರಡೂ ಸಮುದಾಯಗಳು ಪ್ರಬಲ ಸಮುದಾಯಗಳಾಗಿದ್ದವು ಈ ಎರಡೂ ಸಮುದಾಯಗಳನ್ನು ಸಮತೋಲಿತವಾಗಿ ತೂಗುತ್ತ ಕಾಂಗ್ರೆಸ್ ಅಕ್ಷರಶಃ ರಾಜ್ಯ ರಾಜಕೀಯದಲ್ಲಿ ದೊಡ್ಡ ಪಕ್ಷವಾಗಿತ್ತು. ಈ ಸಮಯವನ್ನು ರಾಜಕೀಯ ಶಾಸ್ತ್ರಜ್ಞರಾದ ಜೇಮ್ಸ್ ಮ್ಯಾನರ್ ಅವರು ಒಕ್ಕಲಿಗರ ಬೆಂಬಲದೊಂದಿಗೆ ಲಿಂಗಾಯತ ರಾಜ್ ಎಂದು ಕರೆದಿದ್ದಾರೆ.


ಸಾಂಕೇತಿಕ ಚಿತ್ರ


ಈ ಸಂದರ್ಭದಲ್ಲಿ ರಾಜಕೀಯವಾಗಿ ನೋಡುವುದಾದರೆ ರಾಜಕೀಯದಲ್ಲಿ ಪ್ರತಿ ಎರಡನೇ ರಾಜಕಾರಣಿಯು ಲಿಂಗಾಯತ ಅಥವಾ ಒಕ್ಕಲಿಗ ಸಮುದಾಯದಿಂದ ಬಂದವರಾಗಿದ್ದರು. ಈ ಸಮಯದ ನಂತರ ನಿಧಾನವಾಗಿ ಬೇರೆ ಜಾತಿಗಳ ನಾಯಕರು ಬೆಂಗಳೂರಿನಲ್ಲಿ ಅಧಿಕಾರ ಪಡೆಯಲು ಪ್ರಾರಂಭಿಸಿದರು.


ಆದಾಗ್ಯೂ 1956 ರಿಂದ 2020ರ ಮಧ್ಯೆ ಕರ್ನಾಟಕದಲ್ಲಿ ಆಗಿಹೋದ 19 ಮುಖ್ಯಮಂತ್ರಿಗಳ ಪೈಕಿ ಒಂಭತ್ತು ಜನರು ಲಿಂಗಾಯತ ಸಮುದಾಯದಿಂದಲೇ ಬಂದವರಾಗಿದ್ದಾರೆ. 1969 ರಲ್ಲಿ ಎಸ್ ನಿಜಲಿಂಗಪ್ಪನವರು ಕಾಂಗ್ರೆಸ್ ನಿಂದ ಬಂಡಾಯವೆದ್ದ ಮೇಲೆ ರಾಜ್ಯ ರಾಜಕೀಯದಲ್ಲಿ ಹಲವಾರು ಬದಲಾವಣೆಗಳ ಗಾಳಿ ಬೀಸಲಾರಂಭಿಸಿತು.


1972 ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ದೇವರಾಜ್ ಅರಸ್ ಅವರು ಲಿಂಗಾಯತರು ಹಾಗೂ ಒಕ್ಕಲಿಗರ ಪ್ರಭಾವ ತಗ್ಗಿಸುವ ನಿಮಿತ್ತ ರಾಜಕೀಯದಲ್ಲಿ ಇತರೆ ಹಿಂದುಳಿದವರನ್ನು ಗುರುತಿಸಲು ಹಾಗೂ ಅವರನ್ನು ಮುನ್ನೆಲೆಗೆ ತರಲು ಪ್ರಾರಂಭಿಸಿದರು. ಅವರೇ ಮೊದಲ ಬಾರಿಗೆ ’ಅಹಿಂದ’ ಪದವನ್ನು ಬಳಸಿದರು.


ಹಿಂದಿ ನಾಡಿನ ರಾಜಕೀಯ ಚಿತ್ರಣ ಬದಲಿಸಲು ಪ್ರಧಾನಿ ವಿಪಿ ಸಿಂಗ್ ಅವರು ರಚಿಸಿದ್ದ 1989 ರ ಮಂಡಲ್ ಕಮಿಷನ್ ನಿಂದ ಪ್ರೇರಿತರಾಗಿ ಅರಸ್ ಅವರು ರಾಜ್ಯದಲ್ಲಿ ಮೊದಲ ಬಾರಿಗೆ ಹಿಂದುಳಿದ ವರ್ಗದವರ ಕಮಿಷನ್ ಅನ್ನು ಜಾರಿಗೆ ತಂದರು.


ಇದಕ್ಕೆ ಮೇಲ್ವರ್ಗದವರಿಂದ ಸಾಕಷ್ಟು ವಿರೋಧ ವ್ಯಕ್ತವಾಗಿ ನ್ಯಾಯಾಲಯ ಮೆಟ್ಟಿಲು ಏರಿದರೂ ಅಂತಿಮವಾಗಿ ಅರಸ್ ಅವರಿಂದ ಮಾಡಲಾಗಿದ್ದ ಹಾವನೂರ್ ವರದಿಯನ್ನು ನ್ಯಾಯಾಲಯ ಎತ್ತಿ ಹಿಡಿಯಿತು. ಹಾವನೂರ್ ತಮ್ಮ ವರದಿಯಲ್ಲಿ ಹಲವು ಹಿಂದುಳಿದ ಜಾತಿಗಳನ್ನು ಗುರುತಿಸಿದ್ದರು. ತದನಂತರ ಮತ್ತೆ ರಚನೆಯಾದ ವೆಂಕಟಸ್ವಾಮಿ ಕಮಿಷನ್ ಹಾಗು ಚಿನ್ನಪ್ಪ ರೆಡ್ಡಿ ಕಮಿಷನ್ ಗಳು ಒಕ್ಕಲಿಗ ಸಮುದಾಯವನ್ನು ಸಹ ಇತರೆ ಹಿಂದುಳಿದ ವರ್ಗದಲ್ಲಿ ಸೇರಿಸಿತು.


ಈ ಎಲ್ಲ ಅಂಶಗಳಿಂದಾಗಿ ಲಿಂಗಾಯತರು 1990 ರ ನಂತರ ನಿಧಾನವಾಗಿ ಕಾಂಗ್ರೆಸ್ ಪಾಳಯದಿಂದ ನಿರ್ಗಮಿಸುತ್ತ ಆಂಟಿ ಕಾಂಗ್ರೆಸ್ ಆಗಿದ್ದ ಜನತಾ ಪರಿವಾರಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಲು ಪ್ರಾರಂಭಿಸಿದರು. 1990 ರಲ್ಲಿ ರಾಜೀವ್ ಗಾಂಧಿಯವರು ವೀರೇಂದ್ರ ಪಾಟಿಲ್ ಅವರನ್ನು ಮು.ಮಂತ್ರಿ ಸ್ಥಾನದಿಂದ ಉಚ್ಛಾಟಿಸಿದ ನಂತರ ಲಿಂಗಾಯತರು ಕಾಂಗ್ರೆಸ್ ತೊರೆಯುವ ಚಟುವಟಿಕೆ ಹೆಚ್ಚಿನ ಬಿರುಸು ಪಡೆಯಿತು.


ಪ್ರಸ್ತುತ ಪರಿಸ್ಥಿತಿ


ಸದ್ಯ ಈ ಎಲ್ಲ ಸಾಮಾಜಿಕ ಹಾಗೂ ಜಾತಿ ಆಧಾರಿತ ತತ್ವಗಳನ್ನು ಅರ್ಥೈಸಿಕೊಂಡಿರುವ ಮೂರೂ ಪಕ್ಷಗಳು ಲಿಂಗಾಯತ, ಒಕ್ಕಲಿಗ, ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳಿಗೆ ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ನೀಡಿದ್ದಾರೆ. ಬಿಜೆಪಿ ಸದ್ಯ 62 ಲಿಂಗಾಯತರು, 42 ಒಕ್ಕಲಿಗರು, 40 ಹಿಂದುಳಿದ ವರ್ಗದವರು, 37 ಎಸ್ಸಿ, 17 ಎಸ್ಟಿ ವರ್ಗದವರಿಗೆ ಟಿಕೆಟ್ ನೀಡಿದ್ದರೆ, ಕಾಂಗ್ರೆಸ್ ಕ್ರಮವಾಗಿ 51, 43, 40, 35, 16 ಜನರಿಗೆ ಟಿಕೆಟ್ ನೀಡಿದೆ.




ಅದರಂತೆ ಸ್ಥಳೀಯ ಪಕ್ಷವಾದ ಜೆಡಿಎಸ್ ಸಹ ಹೆಚ್ಚು ಕಡಿಮೆ ಇದೇ ರೀತಿಯಲ್ಲಿ ಟಿಕೆಟ್ ನೀಡಿದೆ. ಅದು 44 ಲಿಂಗಾಯತ, 54 ಒಕ್ಕಲಿಗ, 28 ಹಿಂದುಳಿದ, 34 ಎಸ್ಸಿ ಹಾಗೂ 14 ಎಸ್ಟಿ ಸಮುದಾಯದವರಿಗೆ ಟಿಕೆಟ್ ನೀಡಿದೆ.


ಮೋದಿ ಫ್ಯಾಕ್ಟರ್


ಈ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಕರ್ನಾಟಕದಲ್ಲಿ ಬಿರುಸಾದ ಪ್ರಚಾರ ನಡೆಸಲಿರುವುದರಿಂದ ರಾಜ್ಯ ಬಿಜೆಪಿ ಪಾಳಯವು ಮೋದಿ ಅಂಶವನ್ನು ಭರಪೂರವಾಗಿ ಬಳಸಿಕೊಳ್ಳಲು ಯೋಜಿಸಿದೆ.


ಮೋದಿ ಅವರು ಕನ್ನಡಿಗರೊಂದಿಗೆ ಹೊಂದಿರುವ ಸಂಪರ್ಕ ಹಾಗೂ ಮೋದಿ ಅಂಶವು ಈ ಬಾರಿ ಚುನಾವಣೆಯಲ್ಲಿ ಬಿಜೆಪಿಗೆ ಸಾಕಷ್ಟು ನೆರವು ನೀಡಲಿದೆ ಎಂದು ಬಿಜೆಪಿ ನಂಬಿಕೆಯಲ್ಲಿದೆ. ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನೆಯ ವೇಳೆ ಮೋದಿಯವರು ಯಡಿಯೂರಪ್ಪನವರನ್ನು ಆತ್ಮೀಯವಾಗಿ ಕೈಕುಲುಕಿದ್ದು ಇಬ್ಬರೂ ಫೊಟೊಗಳಿಗೆ ಪೋಸ್ ನೀಡಿದ್ದು ರಾಜ್ಯದ ಜನತೆಗೆ ಒಂದು ಸಂದೇಶ ರವಾನಿಸಿದಂತಿದೆ.


ಒಟ್ಟಿನಲ್ಲಿ ರಾಜ್ಯ ರಾಜಕೀಯದಲ್ಲಿ ಎಲ್ಲ ಮೂರು ಪಕ್ಷಗಳು ತಮ್ಮ ತಮ್ಮ ವೋಟ್ ಬ್ಯಾಂಕುಗಳನ್ನು ಯಾವ ರೀತಿ ಒಲಿಸಿಕೊಳ್ಳಲಿದೆ ಹಾಗೂ ಯಾವ ಯಾವ ಅಂಶಗಳ ಮೂಲಕ ಹೊಸ ಮತದಾರರು ಹಾಗೂ ಹೊಸ್ ವೋಟ್ ಬ್ಯಾಂಕುಗಳನ್ನು ತಮ್ಮತ್ತ ಸೆಳೆಯಲಿವೆ ಎಂಬುದನ್ನು ಕಾದು ನೋಡಬೇಕಾಗಿದೆ.

top videos
    First published: