Explained: ಪರೀಕ್ಷೆಯಲ್ಲಿ ಒಳ್ಳೆ ಮಾರ್ಕ್ಸ್ ಗಳಿಸಲು ಈ 9 ಸಲಹೆಗಳನ್ನು ಪಾಲಿಸಿ!

How to crack Exams: ಈ ಸಮಯದಲ್ಲಿ ನೀವು ಎಷ್ಟು ಅವಧಿಯವರೆಗೆ ಅಧ್ಯಯನ ಮಾಡಿದ್ದೀರಿ ಎಂಬುವುದಕ್ಕಿಂತ ಎಷ್ಟು ಅಧ್ಯಯನ ಮಾಡಿದ್ದೀರಿ ಎಂಬುವುದು ಬಹಳ ಮುಖ್ಯ.

ಪರೀಕ್ಷೆಯನ್ನು ಒಳ್ಳೆ ಅಂಕ ಗಳಿಸಲು ಈ ಸ್ಟೋರಿ ಓದಿ

ಪರೀಕ್ಷೆಯನ್ನು ಒಳ್ಳೆ ಅಂಕ ಗಳಿಸಲು ಈ ಸ್ಟೋರಿ ಓದಿ

  • Share this:
ನೀವು ಯಾವುದೇ ರೀತಿಯ ಪರೀಕ್ಷೆಗೆ (Exam) ತಯಾರಿ ನಡೆಸುತ್ತಿದ್ದರೂ, ಮೊದಲು ಆದ್ಯತೆ ನೀಡಬೇಕಾಗಿರುವುದು ಪಠ್ಯಕ್ರಮವನ್ನು (Syllabus) ಪೂರ್ಣಗೊಳಿಸುವುದಕ್ಕೆ ಎಂಬುವುದು ತಿಳಿದಿರುವ ಸಂಗತಿ. ಆದರೆ ಯಶಸ್ವಿಯಾಗಿ ಪರೀಕ್ಷೆ ಬರೆಯಲು ಅಷ್ಟೇ ಸಾಕೇ..? ಪಠ್ಯಕ್ರಮವನ್ನು ಪೂರ್ಣಗೊಳಿಸುವುದರ ಜೊತೆ ಜೊತೆಗೆ ಸಮಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಕೂಡ ಅಷ್ಟೇ ಅಗತ್ಯ ಎನಿಸಿಕೊಳ್ಳುತ್ತದೆ. ಒಳ್ಳೆಯ ಅಂಕ (Good Marks) ಪಡೆಯಬೇಕೆಂದರೆ ನೀವು ದಿನಕ್ಕೆ 12 -14 ಗಂಟೆಗಳ ಕಾಲ ಓದಬೇಕು ಎನ್ನುವುದೆಲ್ಲಾ ತಪ್ಪು ಅಭಿಪ್ರಾಯ; ಆದರೆ ಇದು ಎಲ್ಲಾ ಸಂದರ್ಭಗಳಲ್ಲೂ ನಿಜ ಆಗುವುದಿಲ್ಲ. ಈ ಸಮಯದಲ್ಲಿ ನೀವು ಎಷ್ಟು ಅವಧಿಯವರೆಗೆ ಅಧ್ಯಯನ ಮಾಡಿದ್ದೀರಿ ಎಂಬುವುದಕ್ಕಿಂತ ಎಷ್ಟು ಅಧ್ಯಯನ ಮಾಡಿದ್ದೀರಿ ಎಂಬುವುದು ಬಹಳ ಮುಖ್ಯ. ಪರೀಕ್ಷೆಯ ತಯಾರಿ (Exam Preparation) ನಡೆಸಲು ಇಲ್ಲಿವೆ 9 ಸಲಹೆಗಳು:

1. ಬೇಗನೇ ಆರಂಭಿಸಿ
ಪರೀಕ್ಷೆಗೆ ಮೊದಲೇ ತಯಾರಿಯನ್ನು ಆರಂಭಿಸಬೇಕು, ಆಗ ನೀವು ಓದಿದ್ದನ್ನು ಪರಿಷ್ಕರಣೆ ಮಾಡಲು ಅವಕಾಶ ಸಿಗುತ್ತದೆ. ಪರೀಕ್ಷೆಗೆ ಮುನ್ನಾ ದಿನವೇ ಯಾರೂ ಕೂಡ ಪಠ್ಯಕ್ರಮವನ್ನು ಸಂಪೂರ್ಣವಾಗಿ ಓದಿ ಮುಗಿಸಲು ಸಾಧ್ಯವಿಲ್ಲ. ಹಾಗಾಗಿ, ಪರೀಕ್ಷೆಗೆ ಒಂದು ವಾರ ಮೊದಲೇ ಓದಿಟ್ಟರೆ, ಪರೀಕ್ಷಾ ದಿನಗಳಲ್ಲಿ ಮತ್ತೊಮ್ಮೆ ಓದಿಕೊಳ್ಳುವುದು ಸುಲಭವಾಗುತ್ತದೆ.

2. ನಿಮ್ಮನ್ನು ಸಂಯೋಜಿಸಿಕೊಳ್ಳಿ
ಪ್ರತಿ ದಿನ ಎಷ್ಟೆಷ್ಟು ಭಾಗವನ್ನು ಓದಿ ಮುಗಿಸಬೇಕು ಎಂಬ ಕಾರ್ಯಸೂಚಿಯನ್ನು ಮೊದಲೇ ಸಿದ್ಧ ಮಾಡಿಕೊಳ್ಳಿ. ಎಲ್ಲಾ ಪಠ್ಯಕ್ರಮವನ್ನು ಓದಿ ಮುಗಿಸಲು ನಿಮಗೆ ಎಷ್ಟು ಸಮಯ ಉಳಿದಿದೆ ಮತ್ತು ಓದಿದ್ದನ್ನು ಪರಿಶೀಲಿಸಲು ಎಷ್ಟು ಸಮಯ ಸಿಗುತ್ತದೆ ಎಂಬುದನ್ನು ಮೊದಲೇ ತಿಳಿದುಕೊಂಡಿರಬೇಕು. ಒಂದು ನಿರ್ದಿಷ್ಟ ಪಠ್ಯ ವಿಷಯವನ್ನು ಮುಗಿಸಿದ ಬಳಿಕ, ಅದರಲ್ಲಿ ನೀವು ಎಷ್ಟನ್ನು ನೆನಪಿಟ್ಟುಕೊಳ್ಳಬಲ್ಲಿರಿ ಎಂಬುದನ್ನು ತಿಳಿಯಲು ಸಮಯ ಮೀಸಲಿಡಿ. ಆದ್ದರಿಂದ ನಿಮಗೆ ಯಾವ ಭಾಗವನ್ನು ಮತ್ತೊಮ್ಮೆ ಓದಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ.

3. ಔಟ್‌ಲೈನ್‌ ತಯಾರಿ
ಪಠ್ಯದ ಸಂಪೂರ್ಣ ಪರಿಕಲ್ಪನೆಯನ್ನು ನೆನಪಿಸಿಕೊಳ್ಳಲು ನಿಮಗೆ ಸಹಾಯ ಮಾಡುವ ಸಂಕ್ಷಿಪ್ತ ಔಟ್‌ಲೈನ್‌ / ಮುಖ್ಯಾಂಶಗಳನ್ನು ಬರೆದಿಟ್ಟುಕೊಳ್ಳಬೇಕು. ನೀವು ತರಗತಿಯಲ್ಲಿ ಪಾಠ ಕೇಳಿಸಿಕೊಳ್ಳುತ್ತಿರುವಾಗ ಅಥವಾ ಪುಸ್ತಕ ಓದುತ್ತಿರುವಾಗ ಅದನ್ನು ಸಿದ್ಧಪಡಿಸಿಕೊಳ್ಳಬಹುದು. ಓದಿ ಮುಗಿಸಿದ ಬಳಿಕ ಕಷ್ಟಕರವಾದ ಅಂಶಗಳನ್ನು ಪಟ್ಟಿ ಮಾಡಿಕೊಳ್ಳಿ ಮತ್ತು ಅವುಗಳನ್ನು ಮತ್ತೊಮ್ಮೆ ಓದಿ ಅರ್ಥ ಮಾಡಿಕೊಳ್ಳಿ ಅಥವಾ ಶಿಕ್ಷಕರ ಸಹಾಯ ಪಡೆಯಿರಿ. ಎಲ್ಲವನ್ನು ಓದಿ ಅರ್ಥ ಮಾಡಿಕೊಂಡ ನಂತರ, ಕೊನೆಯ ಕ್ಷಣದಲ್ಲಿ ಉಲ್ಲೇಖವಾಗಿ ಬಳಸಬಹುದಾದ ಅಂಶಗಳ ಕುರಿತು ಬಾಹ್ಯರೇಖೆಯನ್ನು ತಯಾರಿಸಿ.

4. ಫ್ಲಾಶ್‍ಕಾರ್ಡ್‍ಗಳನ್ನು ಮಾಡಿಟ್ಟುಕೊಳ್ಳಿ
ಕೆಲವೊಮ್ಮೆ ಚಿತ್ರಗಳು ಪಠ್ಯ ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಮತ್ತು ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತವೆ. ರೂಪುರೇಖೆ/ ಮುಖ್ಯಾಂಶ ಬರೆದಿಟ್ಟುಕೊಳ್ಳುವಿಕೆ ಮುಂತಾದ ಎಲ್ಲಾ ಕೆಲಸಗಳು ಮುಗಿದ ಬಳಿಕ, ನೀವು ಚಿತ್ರಗಳನ್ನು ಬಳಸಿಕೊಂಡು, ಕೊನೆಯ ಕ್ಷಣದ ಅಧ್ಯಯನಕ್ಕೆ ಪೂರಕವಾಗಿ ಜೊತೆಗಿಟ್ಟುಕೊಳ್ಳಬಹುದಾದಂತಹ ಸ್ಟಡಿ ಪುಸ್ತಕವನ್ನಾಗಿ ಮಾಡಿಕೊಳ್ಳಬಹುದು.

ಇದನ್ನೂ ಓದಿ: Explained: ಯಾವ್ಯಾವ ಧರ್ಮದಲ್ಲಿ ಮಹಿಳೆಯರಿಗೆ ಏನೇನು ಹಕ್ಕುಗಳಿವೆ?

5. ಸಹಾಯ ಪಡೆಯಿರಿ
ನಿಮಗೆ ಪಠ್ಯ ವಿಷಯದಲ್ಲಿ ಏನಾದರೂ ತೊಂದರೆ ಕಂಡು ಬಂದಲ್ಲಿ ಅಥವಾ ಅರ್ಥವಾಗದಿದ್ದಲ್ಲಿ, ಸಮಯ ಮೀರುವ ಮುನ್ನವೇ ಶಿಕ್ಷಕರು ಅಥವಾ ಮಾರ್ಗದರ್ಶಕರ ಸಹಾಯ ಪಡೆಯಿರಿ. ಸುಮ್ಮನೆ ಉರು ಹೊಡೆಯಬೇಡಿ, ಅದರ ಬದಲು ಮಾರ್ಗದರ್ಶಕರ ಸಹಾಯ ಪಡೆದು ವಿಷಯವನ್ನು ಅರ್ಥ ಮಾಡಿಕೊಳ್ಳಿ.

6. ಚೆನ್ನಾಗಿ ನಿದ್ರಿಸಿ
ರಾತ್ರಿ ಚೆನ್ನಾಗಿ, ಕನಿಷ್ಟ 7 ಗಂಟೆಗಳ ಕಾಲವಾದರೂ ನಿದ್ರಿಸಿ. ನಿಮ್ಮ ಆಲೋಚನಾ ಶಕ್ತಿಯನ್ನು ಬಳಸಿಕೊಳ್ಳುವಂತೆ ಪರೀಕ್ಷೆಗಳನ್ನು ವಿನ್ಯಾಸಗೊಳಿಸಲಾಗಿರುತ್ತದೆ. ನಿದ್ರೆ ಸರಿಯಾಗಿ ಆಗಿಲ್ಲದಿದ್ದರೆ, ಪರೀಕ್ಷೆಯಲ್ಲಿ ಕೆಲವು ಉತ್ತರಗಳನ್ನು ಪೂರ್ಣಗೊಳಿಸಲಾಗದೆ, ನಿಮ್ಮ ಪರಿಶ್ರಮವೆಲ್ಲಾ ವ್ಯರ್ಥ ಆಗುವ ಸಾಧ್ಯತೆ ಇರುತ್ತದೆ.

7. ಗಾಬರಿಯಾಗಬೇಡಿ
ಪರೀಕ್ಷೆ ಬರೆಯುವಾಗ, ಒಂದು ವೇಳೆ ನಿಮಗೆ ಉತ್ತರ ನೆನಪಾಗದಿದ್ದರೆ ಗಾಬರಿ ಆಗಬೇಡಿ. ಆ ಪ್ರಶ್ನೆಯ ಉತ್ತರಕ್ಕೆ ಜಾಗ ಬಿಟ್ಟು, ಶಾಂತ ಚಿತ್ತದಿಂದ ಮುಂದಿನ ಪ್ರಶ್ನೆಯ ಕಡೆ ಗಮನ ಕೊಡಿ. ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ಬಳಿಕ, ಆ ಪ್ರಶ್ನೆಗೆ ಉತ್ತರ ಬರೆಯಲು ಪ್ರಯತ್ನಿಸಿ.

8. ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳಿ
ಪರೀಕ್ಷೆಯಲ್ಲಿ ಉತ್ತರಗಳನ್ನು ಬರೆಯುವಾಗ ಆತುರ ಬೇಡ. ಏಕೆಂದರೆ ಕೆಲವೊಂದು ಪ್ರಶ್ನೆಗಳು ಟ್ರಿಕ್ಕಿಯಾಗಿರಬಹುದು. ಪ್ರಶ್ನೆಯನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಳ್ಳಿ, ಬಳಿಕ ಉತ್ತರಿಸಿ. ನೀವು ಅವಧಿಗೆ ಮುನ್ನವೇ ಎಲ್ಲಾ ಉತ್ತರಗಳನ್ನು ಬರೆದು ಮುಗಿಸಿದ್ದರೆ, ಅವುಗಳನ್ನು ಮತ್ತೊಮ್ಮೆ ಓದಿಕೊಳ್ಳಿ.

ಇದನ್ನೂ ಓದಿ: Explained: ನಮ್ಮ ಎತ್ತರ ಇಷ್ಟಿದ್ದರೆ ದೇಹದ ತೂಕ ಎಷ್ಟಿರಬೇಕು? ಆರೋಗ್ಯವಾಗಿರೋಕೆ ನೀವು ಎಷ್ಟು ಕೆಜಿ ಇರ್ಬೇಕು?

9. ಪರೀಕ್ಷೆಯ ನಂತರ ಮೌಲ್ಯಮಾಪನ ಬೇಡ
ನೀವು ಯಾವುದಾದರೂ ಪ್ರಶ್ನೆಗೆ ತಪ್ಪು ಉತ್ತರ ಬರೆದಿದ್ದೀರಿ ಎಂಬುವುದು ಪರೀಕ್ಷೆಗೆ ಬಳಿಕ ಗೊತ್ತಾದರೆ ಗಾಬರಿಯಾಗಬೇಡಿ. ಆ ಸಮಯದಲ್ಲಿ ನೀವೇನು ಮಾಡಲು ಸಾಧ್ಯವಿರುವುದಿಲ್ಲ ಎಂಬುವುದನ್ನು ನೆನಪಿಡಿ. ಮುಂದಿನದ್ದರ ಬಗ್ಗೆ ಗಮನ ಕೇಂದ್ರೀಕರಿಸಿ ಮತ್ತು ಮತ್ತೊಮ್ಮೆ ತಪ್ಪಾಗದಂತೆ ಎಚ್ಚರ ವಹಿಸಿ.
Published by:guruganesh bhat
First published: