• ಹೋಂ
  • »
  • ನ್ಯೂಸ್
  • »
  • Explained
  • »
  • Presidential Election: ರಾಷ್ಟ್ರಪತಿ ಚುನಾವಣೆ ನಡೆಯುವುದು ಹೇಗೆ? ಪ್ರಥಮ ಪ್ರಜೆಯನ್ನು ಆಯ್ಕೆ ಮಾಡುವವರು ಯಾರು?

Presidential Election: ರಾಷ್ಟ್ರಪತಿ ಚುನಾವಣೆ ನಡೆಯುವುದು ಹೇಗೆ? ಪ್ರಥಮ ಪ್ರಜೆಯನ್ನು ಆಯ್ಕೆ ಮಾಡುವವರು ಯಾರು?

ರಾಷ್ಟ್ರಪತಿ ಚುನಾವಣೆ

ರಾಷ್ಟ್ರಪತಿ ಚುನಾವಣೆ

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರಾವಧಿ ಜುಲೈ 24 ರಂದು ಕೊನೆಗೊಳ್ಳುವ ಹಿನ್ನೆಲೆಯಲ್ಲಿ, ನೂತನ ರಾಷ್ಟ್ರಪತಿ ಆಯ್ಕೆಗೆ ಇಂದು ಚುನಾವಣೆ ನಡೆಯಲಿದೆ. ಹಾಗಾದರೆ ರಾಷ್ಟ್ರಪತಿ ಚುನಾವಣೆ ಹೇಗೆ ನಡೆಯುತ್ತದೆ? ಇದರಲ್ಲಿ ವೋಟ್ ಮಾಡುವವರು ಯಾರು? ಜನಸಾಮಾನ್ಯರಿಗೆ ಯಾಕಿಲ್ಲ ದೇಶದ ಪ್ರಥಮ ಪ್ರಜೆಯನ್ನು ನೇರವಾಗಿ ಆಯ್ಕೆ ಮಾಡುವ ಅಧಿಕಾರ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಓದಿ…

ಮುಂದೆ ಓದಿ ...
  • Share this:

ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ (President Ramnath Kovind) ಅವರ ಅವಧಿ (Term) ಜುಲೈ 24ರಂದು ಮುಕ್ತಾಯವಾಗಲಿದೆ. ಕೊನೆಯ ಅಧ್ಯಕ್ಷೀಯ ಚುನಾವಣೆಯು (Presidential Election) 17 ಜುಲೈ 2017 ರಂದು ನಡೆದಿತ್ತು. ಇದೀಗ ಇಂದು ರಾಷ್ಟ್ರಪತಿ ಚುನಾವಣೆಗೆ ನಡೆಯಲಿದೆ. ಹಾಲಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅವರ ಅಧಿಕಾರಾವಧಿ ಜುಲೈ 24 ರಂದು ಕೊನೆಗೊಳ್ಳುವ ಹಿನ್ನೆಲೆಯಲ್ಲಿ, ನೂತನ ರಾಷ್ಟ್ರಪತಿ ಆಯ್ಕೆಗೆ ಇಂದು ಚುನಾವಣೆ  ನಡೆಯಲಿದೆ. ಜುಲೈ 21ಕ್ಕೆ ಮತ ಎಣಿಕೆ ಕಾರ್ಯ (Counting) ನಡೆಯಲಿದೆ. ಇನ್ನು ರಾಮನಾಥ್ ಕೋವಿಂದ್ ನಂತರ ದೇಶದ ಮುಂದಿನ ಪ್ರಥಮ ಪ್ರಜೆ ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ. ಹಾಗಾದರೆ ರಾಷ್ಟ್ರಪತಿ ಚುನಾವಣೆ ಹೇಗೆ ನಡೆಯುತ್ತದೆ? ಇದರಲ್ಲಿ ವೋಟ್ ಮಾಡುವವರು ಯಾರು? ಜನಸಾಮಾನ್ಯರಿಗೆ ಯಾಕಿಲ್ಲ ದೇಶದ ಪ್ರಥಮ ಪ್ರಜೆಯನ್ನು ನೇರವಾಗಿ ಆಯ್ಕೆ ಮಾಡುವ ಅಧಿಕಾರ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಓದಿ…


 ಜುಲೈ 18ರಂದು ರಾಷ್ಟ್ರಪತಿ ಚುನಾವಣೆ


ಇಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಇದಾದ ಬಳಿಕ ಜುಲೈ 21ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಅಂದೇ ನೂತನ ರಾಷ್ಟ್ರಪತಿ ಯಾರಾಗಲಿದ್ದಾರೆ ಅಂತ ಘೋಷಿಸಲಾಗುತ್ತದೆ. ಜುಲೈ 25ರೊಳಗೆ ನೂತನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸುತ್ತಾರೆ.


4880 ಮತದಾರರಿಂದ ವೋಟಿಂಗ್


ಈ ಬಾರಿ ರಾಷ್ಟ್ರಪತಿ ಚುನಾವಣೆಯಲ್ಲಿ ಒಟ್ಟು 4,880 ಮತದಾರರು ಮತ ಚಲಾಯಿಸುತ್ತಾರೆ. ಯಾವುದೇ ರಾಜಕೀಯ ಪಕ್ಷವು ತನ್ನ ಸದಸ್ಯರಿಗೆ ವಿಪ್ ಜಾರಿಗೊಳಿಸುವಂತಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.


ಸಂವಿಧಾನದಲ್ಲಿ ರಾಷ್ಟ್ರಪತಿ ಬಗ್ಗೆ ಉಲ್ಲೇಖ


ಭಾರತದ ಸಂವಿಧಾನದ 52ನೇ ವಿಧಿಯು ರಾಷ್ಟ್ರಕ್ಕೆ ರಾಷ್ಟ್ರಪತಿ ಸ್ಥಾನವನ್ನು ಹೊಂದಿರಲು ನಿರ್ದೇಶಿಸುತ್ತದೆ. ರಾಷ್ಟ್ರಪತಿಯವರು ಸಂವಿಧಾನ ಮುಖ್ಯಸ್ಥರೂ, ರಾಷ್ಟ್ರದ ಪ್ರಥಮ ಪ್ರಜೆಯೂ, ಕಾರ್ಯಾಂಗದ ಮುಖ್ಯಸ್ಥರೂ ಹಾಗೂ ಭಾರತದ ವಾಯುಪಡೆ, ಭೂಪಡೆ, ಮತ್ತು ನೌಕಾಪಡೆಯ ಮಹಾದಂಡನಾಯಕರೂ ಆಗಿರುತ್ತಾರೆ. ರಾಷ್ಟ್ರದ ಮುಖ್ಯಸ್ಥರೂ ಆಗಿದ್ದು ವಿಶೇಷ ಅಧಿಕಾರಗಳನ್ನು ಹೊಂದಿದ್ದು ಸರ್ವೋನ್ನತ ಸ್ಥಾನವನ್ನು ಹೊಂದಿದ್ದಾರೆ.


ಇದನ್ನೂ ಓದಿ: Explained: ರಾಜ್ಯಸಭಾ ಚುನಾವಣೆ ನಡೆಯುವುದು ಹೇಗೆ? ಇಲ್ಲಿದೆ ಓದಿ ಪಿನ್ ಟು ಪಿನ್ ಮಾಹಿತಿ


ರಾಷ್ಟ್ರಪತಿಯಾಗಲು ಬೇಕಾದ ಅರ್ಹತೆಗಳೇನು?


ಭಾರತೀಯ ಸಂವಿಧಾನದ 52ನೇ ಪರಿಚ್ಛೇದ ಅಧ್ಯಕ್ಷರ ಪದವಿಯ ಸೃಷ್ಟಿಯನ್ನು ತೋರಿಸುತ್ತದೆ. ಸಂವಿಧಾನದ ಪ್ರಕಾರ, ಭಾರತದ ರಾಷ್ಟ್ರಪತಿಯಾಗಲು ಭಾರತೀಯ ಪ್ರಜೆಯಾಗಿರಬೇಕು. ಇನ್ನು ಎಷ್ಟು ಅವಧಿಗಳಿಗಾದರೂ ಚುನಾಯಿತರಾಗಬಹುದು. ಇನ್ನು ಕನಿಷ್ಠ 35 ವರ್ಷ ಪೂರ್ಣವಾಗಿರುವ ವ್ಯಕ್ತಿ ರಾಷ್ಟ್ರಪತಿ ಹುದ್ದೆಗೆ ಸ್ಪರ್ಧೆ ಮಾಡಬಹುದು.


ರಾಷ್ಟ್ರಪತಿಯವರ ಅಧಿಕಾರ


ರಾಷ್ಟ್ರಪತಿಗಳು ಸಂಸತ್ತಿನ ಅವಿಭಾಜ್ಯ ಅಂಗವಾಗಿದ್ದಾರೆ. ಅಲ್ಲದೆ ಸಂವಿಧಾನದ ರಕ್ಷಕರೂ ಆಗಿದ್ದಾರೆ. ಆದರೆ ಈ ಎಲ್ಲಾ ಅಧಿಕಾರಗಳ ಮಿತಿಗಾಗಿ ಅವರು ಯಾವುದೇ ಅಧಿಕಾರ ಚಲಾಯಿಸಲು ಪ್ರಧಾನ ಮಂತ್ರಿಯವರ ಅಥವಾ ಕೇಂದ್ರ ಮಂತ್ರಿಮಂಡಳದ ಸಲಹೆಯ ಮೇಲೆ ಮಾತ್ರ ಆಜ್ಞೆ ಮಾಡಬಹುದು.


ರಾಷ್ಟ್ರಪತಿ ಚುನಾವಣೆ ನಡೆಯುವುದು ಹೇಗೆ?


ಹಾಲಿ ರಾಷ್ಟ್ರಪತಿ ಅವಧಿ ಪೂರ್ಣಗೊಳ್ಳುವ ಮುನ್ನವೇ ಕೇಂದ್ರ ಚುನಾವಣಾ ಆಯೋಗ ರಾಷ್ಟ್ರಪತಿ ಚುನಾವಣೆಗೆ ದಿನಾಂಕ ನಿಗದಿ ಮಾಡುತ್ತದೆ. ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಗೆ ನಾಮಪತ್ರ ಸಲ್ಲಿಕೆ ವೇಳೆ 50 ಮಂದಿ ಮತದಾರರು ಸೂಚಕರಾಗಿ, 50 ಮಂದಿ ಅನುಮೋದಕರಾಗಿ ಸಹಿ ಮಾಡಬೇಕಾಗುತ್ತದೆ. ರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಸುವ ಅಭ್ಯರ್ಥಿ 15 ಸಾವಿರ ರೂಪಾಯಿ ಠೇವಣಿ ಇಡಬೇಕಾಗುತ್ತದೆ.


ಯಾರು ಮತ ಹಾಕುತ್ತಾರೆ?


ಸಂಸತ್ತಿನ ಉಭಯ ಸದನಗಳಾದ ಲೋಕಸಭೆ, ರಾಜ್ಯಸಭೆ ಸಂಸದರು, ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ವಿಧಾನಸಭೆ ಸದಸ್ಯರಿಂದ ಮತದಾನ ನಡೆಯುತ್ತದೆ. ಆದರೆ ವಿಧಾನಪರಿಷತ್ ಸದಸ್ಯರು, ನಾಮಕರಣಗೊಂಡ ಸಂಸದರು, ಶಾಸಕರಿಗೆ ಮತದಾನದ ಹಕ್ಕಿಲ್ಲ.


ತೀವ್ರ ಕಟ್ಟೆಚ್ಚರದಲ್ಲಿ ಎಲೆಕ್ಷನ್


ಲೋಕಸಭೆ, ರಾಜ್ಯಸಭೆ ಪ್ರಧಾನ ಕಾರ್ಯದರ್ಶಿಗಳು ಆವೃತ ಪದ್ಧತಿಯಡಿ ಚುನಾವಣಾಧಿಕಾರಿಗಳಾಗಿರುತ್ತಾರೆ. ಈ ಬಾರಿ ರಾಷ್ಟ್ರಪತಿ ಚುನಾವಣೆಗೆ ಲೋಕಸಭೆ ಪ್ರಧಾನ ಕಾರ್ಯದರ್ಶಿ ಚುನಾವಣಾ ಅಧಿಕಾರಿಯಾಗಿರುತ್ತಾರೆ. ಮತಪತ್ರ ಮೂಲಕ ಮತದಾನ ನಡೆಯಲಿದೆ.


ಮತಗಳ ಲೆಕ್ಕಾಚಾರ ಹೇಗೆ?


ರಾಷ್ಟ್ರಪತಿ ಚುನಾವಣೆಯಲ್ಲಿ ಸಂಸದರ ಮತಗಳ ಮೌಲ್ಯದ ಲೆಕ್ಕಾಚಾರವೆ ಬೇರೆ. ಮೊದಲನೆಯದಾಗಿ, ಎಲ್ಲಾ ರಾಜ್ಯಗಳ ವಿಧಾನಸಭೆಗಳ ಶಾಸಕರ ಮತಗಳ ಮೌಲ್ಯವನ್ನು ಸೇರಿಸಲಾಗುತ್ತದೆ. ಈ ಸಾಮೂಹಿಕ ಮೌಲ್ಯವನ್ನು ರಾಜ್ಯಸಭೆ ಮತ್ತು ಲೋಕಸಭೆಯ ಒಟ್ಟು ಸದಸ್ಯರ ಒಟ್ಟು ಸಂಖ್ಯೆಯಿಂದ ಭಾಗಿಸಲಾಗುತ್ತದೆ. ಈ ರೀತಿಯಲ್ಲಿ ಪಡೆದ ಸಂಖ್ಯೆಯು ಸಂಸದರ ಮತದ ಮೌಲ್ಯವಾಗಿರುತ್ತದೆ.


ಒಬ್ಬ ಶಾಸಕರ ಮೌಲ್ಯವೆಷ್ಟು?


ಶಾಸಕರು ಇರುವ ರಾಜ್ಯದ ಜನಸಂಖ್ಯೆಯ ಆಧಾರದ ಮೇಲೆ ಅವರ ಮೌಲ್ಯ ಪರಿಗಣಿಸಲಾಗುತ್ತದೆ. ಶಾಸಕರ ಮೌಲ್ಯವನ್ನು ಲೆಕ್ಕಾಚಾರ ಮಾಡಲು, ರಾಜ್ಯದ ಜನಸಂಖ್ಯೆಯನ್ನು ಒಟ್ಟು ಶಾಸಕರ ಸಂಖ್ಯೆಯಿಂದ ಭಾಗಿಸಲಾಗುತ್ತದೆ. ಈ ರೀತಿಯಲ್ಲಿ ಬಂದ ಸಂಖ್ಯೆಯನ್ನು 1000ರಿಂದ ಭಾಗಿಸಲಾಗುತ್ತದೆ. ಭಾಗಿಸಿದ ನಂತರ ಬಂದ ಅಂಕಿ ಅಂಶವೆ ಆ ರಾಜ್ಯದ ಶಾಸಕರೊಬ್ಬರ ಮತದ ಮೌಲ್ಯವಾಗುತ್ತದೆ.


ಮತಗಳ ಮೌಲ್ಯ ಎಷ್ಟು?


ಲೋಕಸಭೆ ಮತ್ತು ರಾಜ್ಯಸಭೆ ಸೇರಿದಂತೆ ದೇಶದಲ್ಲಿ ಒಟ್ಟು 776 ಸಂಸದರಿದ್ದಾರೆ. ಇಲ್ಲಿ ಪ್ರತಿ ಸಂಸದರ ಮತ ಮೌಲ್ಯ 708. ದೇಶದಲ್ಲಿ ಒಟ್ಟು 4120 ಶಾಸಕರಿದ್ದಾರೆ. ಪ್ರತಿ ರಾಜ್ಯದ ಶಾಸಕರ ಮತದ ಮೌಲ್ಯ ವಿಭಿನ್ನವಾಗಿರುತ್ತದೆ. ಉದಾಹರಣೆಗೆ ಉತ್ತರ ಪ್ರದೇಶದಲ್ಲಿ 403 ಶಾಸಕರಿರುವುದರಿಂದ, ಅವರ ಒಟ್ಟು ಮತಗಳ ಮೌಲ್ಯ 83,824 ಆಗಿದೆ. ಇನ್ನು ಉತ್ತರ ಪ್ರದೇಶದ 80 ಸಂಸದರ ಮತಗಳ ಮೌಲ್ಯ 80*700 ಅಂದರೆ 56,000. ಇದು ಒಟ್ಟು 139,824 ಮತಗಳೊಂದಿಗೆ ಯುಪಿಯಿಂದ ರಾಷ್ಟ್ರಪತಿ ಚುನಾವಣೆಗೆ ಒಟ್ಟು 12.9 ಪ್ರತಿಶತ ಮತಗಳು ಚಲಾಯಿಸಲ್ಪಡುತ್ತದೆ. ಇನ್ನು ಯಾವುದೇ ಅಭ್ಯರ್ಥಿ ಅಧ್ಯಕ್ಷರಾಗಲು 5,49,441 ಮತಗಳು ಅಗತ್ಯವಿದೆ.


ಕರ್ನಾಟಕದ ಶಾಸಕರ ಮತ ಮೌಲ್ಯ ಎಷ್ಟು?


2011ರ ಜನಗಣತಿಯ ಪ್ರಕಾರ ಕರ್ನಾಟಕದ ಜಸಂಖ್ಯೆ = 6,10, 95,297
ಕರ್ನಾಟಕದ ಶಾಸಕರ ಮತಮೌಲ್ಯ = 131
ಕರ್ನಾಟಕದ ಒಟ್ಟು ಮತ ಮೌಲ್ಯ (131*224) = 29,344


ರಾಷ್ಟ್ರಪತಿ ಚುನಾವಣೆಯಲ್ಲಿ ಕಾಶ್ಮೀರ ಭಾಗವಹಿಸುತ್ತದೆಯೇ?


ಸಂಸತ್ತಿನ ಉಭಯ ಸದನಗಳಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಪ್ರತಿನಿಧಿಸುವ ಚುನಾಯಿತ ಸದಸ್ಯರು ರಾಷ್ಟ್ರಪತಿ ಚುನಾವಣೆಯಲ್ಲಿ ಭಾಗವಹಿಸುತ್ತಾರೆ, ಆದಾಗ್ಯೂ, ವಿಧಾನಸಭೆಯಿಂದ ಯಾವುದೇ ಪ್ರತಿನಿಧಿಗಳು ಇರುವುದಿಲ್ಲ.


ಮತಗಳ ಎಣಿಕೆಯೂ ವಿಭಿನ್ನ


ರಾಷ್ಟ್ರಪತಿ ಚುನಾವಣೆಯ ಕೌಂಟಿಂಗ್ ಇತರ ಚುನಾವಣೆಗಳಿಗಿಂತ ಭಿನ್ನವಾಗಿರುತ್ತದೆ. ಇಲ್ಲಿ ಸ್ಪಷ್ಟ ವಿಜೇತರು ಗರಿಷ್ಠ ಮತಗಳನ್ನು ಪಡೆದವರಲ್ಲ, ಆದರೆ ನಿರ್ದಿಷ್ಟ ಕೋಟಾಕ್ಕಿಂತ ಹೆಚ್ಚು ಮತಗಳನ್ನು ಪಡೆದಿರುತ್ತಾರೆ. ಮಾನ್ಯವಾದ ಮತಗಳ ಮೊತ್ತವನ್ನು 2 ರಿಂದ ಭಾಗಿಸಿ ಮತ್ತು ಅಂಶಕ್ಕೆ ಒಂದನ್ನು ಸೇರಿಸುವ ಮೂಲಕ ಕೋಟಾವನ್ನು ನಿರ್ಧರಿಸಲಾಗುತ್ತದೆ. ನಿಗದಿತ ಕೋಟಾಕ್ಕಿಂತ ಹೆಚ್ಚಿನ ಒಟ್ಟು ಮತಗಳನ್ನು ಪಡೆದರೆ ಮಾತ್ರ ಅಭ್ಯರ್ಥಿಯನ್ನು ವಿಜೇತ ಎಂದು ಘೋಷಿಸಲಾಗುತ್ತದೆ.


ವಿಜೇತರಾಗಲು ಅಗತ್ಯ ವೋಟುಗಳು


ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಸಂಖ್ಯೆಯಂತೆ ಹಲವು ಆದ್ಯತೆಗಳು ಇರಬಹುದು. ಮತವನ್ನು ಮಾನ್ಯವೆಂದು ಪರಿಗಣಿಸುವ ಮೊದಲ ಆದ್ಯತೆಯನ್ನು ಗುರುತಿಸುವುದು ಮೇಲೆ ಹೇಳಿದಂತೆ ಕಡ್ಡಾಯವಾಗಿದೆ. ಇತರ ಆದ್ಯತೆಗಳನ್ನು ಗುರುತಿಸುವುದು ಐಚ್ಛಿಕವಾಗಿರುತ್ತದೆ. ಒಂದು ಅಭ್ಯರ್ಥಿ ಚುನಾವಣೆಯಲ್ಲಿ ಗೆಲ್ಲಲು ಮೊದಲ ಆದ್ಯತೆಯ ಮತಗಳ "ಮತದಾನದಲ್ಲಿ 50% ಮತಗಳು +1" (ಕೋಟಾ) ಅಗತ್ಯವಿದೆ.


ವಿಜೇತರು ಯಾರಾಗುತ್ತಾರೆ?


ಯಾವುದೇ ಅಭ್ಯರ್ಥಿ ಅಗತ್ಯ ಕೋಟಾವನ್ನು ಪಡೆಯದಿದ್ದರೆ, ಅತಿ ಕಡಿಮೆ ಮೊದಲ ಆದ್ಯತೆಯ ಮತಗಳನ್ನು ಪಡೆಯುವ ಅಭ್ಯರ್ಥಿಯನ್ನು ಕೈಬಿಡಲಾಗುತ್ತದೆ. ಈ ಅಭ್ಯರ್ಥಿಯ ಎರಡನೇ ಆದ್ಯತೆಯ ಮತಗಳನ್ನು ನಂತರ ಉಳಿದ ಅಭ್ಯರ್ಥಿಗಳ ನಡುವೆ ಹಂಚಲಾಗುತ್ತದೆ. ಅಭ್ಯರ್ಥಿಯು ಅಗತ್ಯವಾದ ಕೋಟಾವನ್ನು ಪಡೆಯುವವರೆಗೆ 'ಅಂದರೆ "ಮತದಾನದಲ್ಲಿ 50% ಮತಗಳು +1" (ಕೋಟಾ)', ಈ ಪ್ರಕ್ರಿಯೆಯ ಹೊರಗಿಡುವಿಕೆ ಮತ್ತು ಹೊರಹಾಕುವಿಕೆ ಪುನರಾವರ್ತನೆಯಾಗುತ್ತದೆ. (ಎಂದರೆ ನಂತರ ಕನಿಷ್ಟ ಮತ ಪಡೆದ ಎರಡನೇ ಅಭ್ಯರ್ಥಿಯನ್ನು 3ನೆಯ ಆದ್ಯತೆಯ ಮತಗಳನ್ನು ಉಳಿದವರಿಗೆ ಸೇರಿಸುವುದು ಈ ಕ್ರಮ ಬಹುಮತ ಬರುವವರೆಗೆ ಮುಂದುವರೆಸುವುದು) ಹೀಗೆ ಎಣಿಕೆಯಾದಾಗ "50% ಮತಗಳು +1" ಅಥವಾ ಅದಕ್ಕೂ ಹೆಚ್ಚು ಮತ ಪಡೆದವರನ್ನು ವಿಜೇತರೆಂದು ಘೋಷಿಸಲಾಗುವುದು.


ಇದನ್ನೂ ಓದಿ: Explained: ಪ್ರವಾದಿ ಅವಹೇಳನ ಮಾಡಿದ ನೂಪುರ್ ಶರ್ಮಾ ಯಾರು? ಅವರು ಮಾಡಿರುವ ವಿವಾದವೇನು?


ಒಂದು ವೇಳೆ ಕಡಿಮೆ ಮತ ಪಡೆದ ಅಭ್ಯರ್ಥಿಗಳನ್ನು ಹೊರತುಪಡಿಸಿದರೆ, ಹೊರತುಪಡಿಸಿದ ನಂತರ, ಯಾವುದೇ ಅಭ್ಯರ್ಥಿ ಅಗತ್ಯವಾದ ಕೋಟಾವನ್ನು ಪಡೆದುಕೊಳ್ಳದಿದ್ದರೆ ಮತ್ತು ಅಂತಿಮವಾಗಿ ಉಳಿದ ಹೆಚ್ಚು ಮತ ಪಡೆದ ಒಬ್ಬ ಅಭ್ಯರ್ಥಿ - ಏಕೈಕ ಮುಂದುವರೆದ ಅಭ್ಯರ್ಥಿಯಾಗಿ ಉಳಿದವನ/ಳನ್ನು, ಅವರು ಚುನಾಯಿತರಾಗಿದ್ದಾರೆಂದು ಘೋಷಿಸಲಾಗುವುದು.


ಈ ಬಾರಿ ಪಕ್ಷಗಳ ಬಲಾಬಲ ಹೇಗಿದೆ?


ರಾಷ್ಟ್ರಪತಿ ಚುನಾವಣೆಯಲ್ಲಿ ಚಲಾವಣೆಯಾಗಲಿರುವ ಮತಗಳ ಒಟ್ಟು ಮೌಲ್ಯ: 10,98,882, ರಾಷ್ಟ್ರಪತಿಗಳ ಆಯ್ಕೆಗೆ ಅಗತ್ಯವಾಗಿರುವ ಮತಗಳ ಮೌಲ್ಯ : 5,49,442, ಎನ್‍ಡಿಎ ಒಕ್ಕೂಟದ ಮತ ಮೌಲ್ಯ: 5,27,371 ಅಂದರೆ ಶೇಕಡಾ 48.10, 2,37,888 (ಲೋಕಸಭೆ)+ 49,560 (ರಾಜ್ಯಸಭೆ) + 2,39,923 (ವಿಧಾನಸಭೆ),


ವಿಪಕ್ಷಗಳ ಬಲಾಬಲ ಎಷ್ಟಿದೆ?


ಯುಪಿಎ ಒಕ್ಕೂಟದ ಮತ ಮೌಲ್ಯ: 1,73,849 ಅಂದರೆ ಶೇಕಡಾ 15.90
34,692 (ಲೋಕಸಭೆ) + 46,020 (ರಾಜ್ಯಸಭೆ) + 93,137 (ವಿಧಾನಸಭೆ). ಇನ್ನು ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿರುವ ಪಕ್ಷಗಳ ಮತ ಮೌಲ್ಯ : 2,60,392 ಅಂದರೆ ಶೇಕಡಾ 23.80, ಈ ಪೈಕಿ 60,180 (ಲೋಕಸಭೆ)+ 47,436(ರಾಜ್ಯಸಭೆ)+ 1,52,776(ವಿಧಾನಸಭೆ) ಹಾಗೂ ಇತರೆ ವಿರೋಧ ಪಕ್ಷಗಳ ಮತ ಮೌಲ್ಯ: 1,33,907 ಅಂದರೆ ಶೇಕಡಾ 12.80
50,268 (ಲೋಕಸಭೆ)+ 20,532 (ರಾಜ್ಯಸಭೆ)+ 63,107(ವಿಧಾನಸಭೆ)

top videos
    First published: