• Home
  • »
  • News
  • »
  • explained
  • »
  • Congress Presidential Election 2022: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ನಡೆಯುವುದು ಹೇಗೆ? ಖರ್ಗೆ ಕೈಗೆ ಸಿಗುತ್ತಾ ಚುಕ್ಕಾಣಿ?

Congress Presidential Election 2022: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ನಡೆಯುವುದು ಹೇಗೆ? ಖರ್ಗೆ ಕೈಗೆ ಸಿಗುತ್ತಾ ಚುಕ್ಕಾಣಿ?

ಖರ್ಗೆ-ತರೂರ್ ನಡುವೆ ಸ್ಪರ್ಧೆ

ಖರ್ಗೆ-ತರೂರ್ ನಡುವೆ ಸ್ಪರ್ಧೆ

ಸುಮಾರು 25 ವರ್ಷಗಳ ನಂತರ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಗಾಂಧಿ ಕುಟುಂಬದ ಹೊರಗಿನವರನ್ನು ಆಯ್ಕೆ ಮಾಡಲು ಕಾಂಗ್ರೆಸ್ ಸಜ್ಜಾಗಿದ್ದು, ಐತಿಹಾಸಿಕ ಚುನಾವಣೆಗೆ ಕಾಂಗ್ರೆಸ್ ಸಾಕ್ಷಿಯಾಗಲಿದೆ. ಈ ಸ್ಪರ್ಧೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಮುಖಾಮುಖಿಯಾಗಿದ್ದಾರೆ. ಹಾಗಾದ್ರೆ ಚುನಾವಣೆ ಹೇಗೆ ನಡೆಯಲಿದೆ? ಈ ಚುನಾವಣೆ ಕಾಂಗ್ರೆಸ್‌ಗೆ ಏಕೆ ಮಹತ್ವದ್ದು? ಇಲ್ಲಿದೆ ಮಾಹಿತಿ...

ಮುಂದೆ ಓದಿ ...
  • Share this:

ದೇಶದ ಅತೀ ಹಳೆಯ ರಾಜಕೀಯ ಪಕ್ಷಕ್ಕೆ (country's oldest political party) ಇಂದು ಮಹತ್ವದ ದಿನ. ಯಾಕೆಂದರೆ ಇಂದು ಆ ಪಕ್ಷಕ್ಕೆ ಹೊಸ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಹೌದು, ಇಂದು ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆ (Congress presidential election) ನಡೆಯಲಿದೆ. ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಜೊತೆಗೆ ಕನ್ನಡಿಗರೂ ಆಗಿರುವ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಹಾಗೂ ಮಾಜಿ ಕೇಂದ್ರ ಸಚಿವ, ಹಾಲಿ ಸಂಸದ, ಲೇಖಕರೂ ಆಗಿರುವ ಶಶಿ ತರೂರ್‌ (Shashi Tharoor) ನಡುವೆ ಬಿರುಸಿವ ಸ್ಪರ್ಧೆ ಏರ್ಪಟ್ಟಿದೆ. ಸದ್ಯ ಹಂಗಾಮಿ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ (interim president Sonia Gandhi) ಅವರೇ ಪಕ್ಷದ ಉಸ್ತುವಾರಿ ಹೊತ್ತಿದ್ದು, ಅಕ್ಟೋಬರ್ 19ರಂದು ಮತ ಎಣಿಕೆ ನಡೆಯಲಿದ್ದು, ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರು ಯಾರೆಂಬ ಪ್ರಶ್ನೆಗೆ ಉತ್ತರ ಸಿಗಲಿದೆ.


ಗಾಂಧಿ ಕುಟುಂಬದ ಹೊರಗಿನವರ ಸ್ಪರ್ಧೆ


ಸುಮಾರು 25 ವರ್ಷಗಳ ನಂತರ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಗಾಂಧಿ ಕುಟುಂಬದ ಹೊರಗಿನವರನನ್ನು ಆಯ್ಕೆ ಮಾಡಲು ಕಾಂಗ್ರೆಸ್ ಸಜ್ಜಾಗಿದ್ದು, ಐತಿಹಾಸಿಕ ಚುನಾವಣೆಗೆ ಕಾಂಗ್ರೆಸ್ ಸಾಕ್ಷಿಯಾಗಲಿದೆ. ಈ ಸ್ಪರ್ಧೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಮುಖಾಮುಖಿಯಾಗಿದ್ದಾರೆ.


ರಹಸ್ಯ ಮತದಾನದ ಮೂಲಕ ಆಯ್ಕೆ


9,000 ಕ್ಕೂ ಹೆಚ್ಚು ಪ್ರದೇಶ ಕಾಂಗ್ರೆಸ್ ಸಮಿತಿ (PCC) ಪ್ರತಿನಿಧಿಗಳು ಚುನಾವಣಾ ಕಾಲೇಜನ್ನು ರಚಿಸುತ್ತಾರೆ, ಅದು ರಹಸ್ಯ ಮತದಾನದಲ್ಲಿ ಪಕ್ಷದ ಮುಖ್ಯಸ್ಥರನ್ನು ಆಯ್ಕೆ ಮಾಡುತ್ತದೆ. ದೆಹಲಿಯಲ್ಲಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಕೇಂದ್ರ ಕಚೇರಿಯಲ್ಲಿ ಮತ್ತು ದೇಶಾದ್ಯಂತ 65ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.


ಬೆಳಗ್ಗೆ 10ರಿಂದ 4 ಗಂಟೆವರಗೆ ವೋಟಿಂಗ್


ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ತಮ್ಮ ತಮ್ಮ ಮತಗಟ್ಟೆಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 4 ರ ನಡುವೆ ತಾವು ಬೆಂಬಲಿಸುವ ಅಭ್ಯರ್ಥಿಗೆ 'ಟಿಕ್' ಚಿಹ್ನೆಯೊಂದಿಗೆ ಮತ ಚಲಾಯಿಸುತ್ತಾರೆ ಎಂದು ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಹೇಳಿದ್ದಾರೆ.


ಇದನ್ನೂ ಓದಿ: Congress President: ಕಾಂಗ್ರೆಸ್‌ ಅಧ್ಯಕ್ಷರ ಆಯ್ಕೆಗೆ ಇಂದು ಎಲೆಕ್ಷನ್, ಬಳ್ಳಾರಿಯಲ್ಲೇ ರಾಹುಲ್ ಗಾಂಧಿ ವೋಟಿಂಗ್


ಸೀಲ್ ಮಾಡಿದ ಬಾಕ್ಸ್‌ನಲ್ಲಿ ಮತಪತ್ರ


ಮತದಾನದ ನಂತರ, ಸೀಲ್ ಮಾಡಿದ ಬಾಕ್ಸ್‌ಗಳನ್ನು ದೆಹಲಿಗೆ ಸಾಗಿಸಲಾಗುತ್ತದೆ ಮತ್ತು ಎಐಸಿಸಿ ಪ್ರಧಾನ ಕಚೇರಿಯ ಸ್ಟ್ರಾಂಗ್ ರೂಮ್‌ನಲ್ಲಿ ಇರಿಸಲಾಗುತ್ತದೆ. ಮತ ಎಣಿಕೆ ಪ್ರಾರಂಭವಾಗುವ ಮೊದಲು ಮತಪತ್ರಗಳನ್ನು ಮಿಶ್ರಣ ಮಾಡಲಾಗುವುದು. ಇದರಿಂದ ಅಭ್ಯರ್ಥಿಗೆ ನಿರ್ದಿಷ್ಟ ರಾಜ್ಯದಿಂದ ಎಷ್ಟು ಮತಗಳು ಬಂದವು ಎಂಬುದು ಯಾರಿಗೂ ತಿಳಿಯುವುದಿಲ್ಲ.


137 ವರ್ಷಗಳಲ್ಲಿ 6ನೇ ಬಾರಿಗೆ ಚುನಾವಣೆ!


ಕಾಂಗ್ರೆಸ್ ಪಕ್ಷದ 137 ವರ್ಷಗಳ ಇತಿಹಾಸದಲ್ಲಿ ಆರನೇ ಬಾರಿಗೆ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಇದಾಗಿದೆ. 2000 ರಲ್ಲಿ ಜಿತೇಂದ್ರ ಪ್ರಸಾದ ಸೋನಿಯಾ ಗಾಂಧಿಯವರ ಕೈಯಲ್ಲಿ ಹೀನಾಯ ಸೋಲು ಅನುಭವಿಸಿದಾಗ ಪಕ್ಷದ ಉನ್ನತ ಹುದ್ದೆಗೆ ಕೊನೆಯ ಚುನಾವಣಾ ಸ್ಪರ್ಧೆ ನಡೆಯಿತು.


ಅಧ್ಯಕ್ಷ ಸ್ಥಾನದಲ್ಲಿ ಗೆದ್ದಿದ್ದ ಬೋಸ್!


1939 ರಲ್ಲಿ, ಮಹಾತ್ಮ ಗಾಂಧಿಯವರ ಅಭ್ಯರ್ಥಿ ಪಿ ಸೀತಾರಾಮಯ್ಯ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ನಡುವೆ ಚುನಾವಣಾ ಸ್ಪರ್ಧೆ ನಡೆಯಿತು. ಆಗ ಬೋಸ್ ಗೆದ್ದಿದ್ದರು. 1950 ರಲ್ಲಿ ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ತನ್ನ ಮೊದಲ ಚುನಾವಣೆಯನ್ನು ನಡೆಸಿತು. ಪುರಷೋತ್ತಮ್ ದಾಸ್ ಟಂಡನ್ ಮತ್ತು ಆಚಾರ್ಯ ಕೃಪಲಾನಿ ಸ್ಪರ್ಧಿಸಿದ್ದರು.


ಚುನಾವಣೆಯಲ್ಲಿ ಗೆದ್ದಿದ್ದ ಸೋನಿಯಾಗಾಂಧಿ


2000ನೇ ಇಸ್ವಿಯಲ್ಲಿ ಐದನೇ ಬಾರಿಗೆ ಸ್ಪರ್ಧೆ ನಡೆಯಿತು. ಆಗ. ಜಿತೇಂದ್ರ ಪ್ರಸಾದ ಅವರು ಸೋನಿಯಾ ಗಾಂಧಿಯನ್ನು ಎದುರಿಸುವುದರೊಂದಿಗೆ ಗಾಂಧಿ ಕುಟುಂಬದ ಸದಸ್ಯರೊಬ್ಬರು ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದರು. ಸೋನಿಯಾ 7400 ಮತ ಪಡೆದರೆ, ಪ್ರಸಾದ್ ಕೇವಲ 94 ಮತ ಪಡೆದು, ಹೀನಾಯ ಸೋಲನ್ನು ಅನುಭವಿಸಿದ್ದರು.


ಸ್ವಾತಂತ್ಯಾನಂತರ 16 ಅಧ್ಯಕ್ಷರು


ಸ್ವಾತಂತ್ರ್ಯೋತ್ತರ ಯುಗದಲ್ಲಿ ಗಾಂಧಿ ಕುಟುಂಬದ ವ್ಯಕ್ತಿಯೊಬ್ಬರು ಒಟ್ಟು 40 ವರ್ಷಗಳಿಂದ ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ. ಸ್ವಾತಂತ್ರ್ಯದ ನಂತರ, ಪಕ್ಷವನ್ನು ಇದುವರೆಗೆ 16 ಜನರು ಮುನ್ನಡೆಸಿದ್ದಾರೆ, ಅದರಲ್ಲಿ ಐದು ಮಂದಿ ಗಾಂಧಿ ಕುಟುಂಬದಿಂದ ಅಧ್ಯಕ್ಷರಾಗಿದ್ದಾರೆ.


ಖರ್ಗೆಯೋ, ಶಶಿಯೋ?


ಮಲ್ಲಿಕಾರ್ಜುನ್ ಖರ್ಗೆ ಮತ್ತು ಶಶಿ ತರೂರ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಶಶಿ ತರೂರ್ ಮೇಲೆ ರಾಹುಲ್ ಗಾಂಧಿಗೆ ನಂಬಿಕೆ ಇದ್ದರೆ, ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದರೆ ಉತ್ತಮ ಎಂಬ ಭರವಸೆ ಸೋನಿಯಾ ಗಾಂಧಿ ಅವ್ರಿಗಿದೆಯಂತೆ.


ಮಲ್ಲಿಕಾರ್ಜುನ್ ಖರ್ಗೆ ಮೇಲೆ ಸೋನಿಯಾ ವಿಶ್ವಾಸ


*ಮಲ್ಲಿಕಾರ್ಜುನ ಖರ್ಗೆ ಅವರು ಗಾಂಧಿ ಕುಟುಂಬಕ್ಕೆ ನಿಷ್ಟರು. ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಕುಟುಂಬ ರಾಜಕಾರಣದ ಆರೋಪದಿಂದ ಹೊರ ಬರುವ ಪ್ರಯತ್ನ ಮಾಡಬಹುದು ಎನ್ನಲಾಗಿದೆ. ಮಲ್ಲಿಕಾರ್ಜುನ ಖರ್ಗೆ ದೆಹಲಿ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಒಳ-ಹೊರಗನ್ನು ಅರಿತಿದ್ದಾರೆ. ಅಲ್ಲದೇ ಪ್ರಬಲ ಹಿಂದುಳಿದ ನಾಯಕರಾಗಿರುವುದರಿಂದ ಹಿಂದುಳಿದ ಸಮುದಾಯದ ಬೆಂಬಲ ಪಡೆಯುವುದು ಸುಲಭ ಎಂಬ ಲೆಕ್ಕಾಚಾರ ಇದೆ.


ರಾಜಕೀಯವಾಗಿ ಅಪಾರ ಅನುಭವಿ ಖರ್ಗೆ


ಮಲ್ಲಿಕಾರ್ಜುನ ಖರ್ಗೆ ಅವ್ರು ದಕ್ಷಿಣ ಭಾರತದ ಪ್ರಬಲ ಹಿಂದುಳಿದ ಕಾಂಗ್ರೆಸ್ ನಾಯಕ. ಹಿಂದಿ ಭಾಷೆಯ ಮೇಲೆ ಹಿಡಿತವಿದೆ, ಸಂಸದರಾಗಿ, ಸಚಿವರಾಗಿ, ವಿಪಕ್ಷ ನಾಯಕರಾಗಿ ಕೆಲಸ ಮಾಡಿರುವ ಅನುಭವವಿದೆ.  ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ ಹಾಗೂ ರಾಜ್ಯಸಭಾ ಸದಸ್ಯರಾಗಿ ನಾಲ್ಕೂ ಸದನಗಳ ಸದಸ್ಯರಾಗಿ ಕೆಲಸ ಮಾಡಿರುವ ಅನುಭವ ಇವರ ಬೆನ್ನಿಗಿದೆ.


ಕಾಂಗ್ರೆಸ್ ಹೈಕಮಾಂಡ್ ಜೊತೆ ಹತ್ತಿರದ ನಂಟು


ಕಾಂಗ್ರೆಸ್‌ ಹೈಕಮಾಂಡ್ ಜೊತೆಗೆ ಸಕ್ರಿಯವಾಗಿ ಕೆಲಸ ಮಾಡಿರುವ ಅನುಭವ ಖರ್ಗೆಯವರಿಗಿದೆ. ಪ್ರಮುಖವಾಗಿ ಕಾಂಗ್ರೆಸ್ ಮೇಲಿರುವ ಕುಟುಂಬ ರಾಜಕಾರಣದ ಆರೋಪದಿಂದ ಹೊರಗೆ ಬರಲು ಅನುಕೂಲವಾಗಲಿದೆ ಎನ್ನಲಾಗಿದೆ.


ಖರ್ಗೆ ವಿರುದ್ಧ ಅಪಸ್ವರ ಯಾಕೆ?


ಕೆಲವರಿಗೆ ಖರ್ಗೆಯವರ ಮೇಲೆ ವಿಶ್ವಾಸವಿದ್ದಂತಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೇಶಾದ್ಯಂತ ಸಂಚರಿಸಲು ವಯಸ್ಸಿನ‌ ಅಡ್ಡಿಯಿದೆ, ವಯಸ್ಸಾಗಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರ ಎದುರಾಳಿಯಾಗಿ ಪಕ್ಷ ಸಂಘಟನೆ ಮಾಡುವುದು ಸುಲಭವಲ್ಲ. ಕಾಂಗ್ರೆಸ್ ಪಕ್ಷದಲ್ಲಿ ದಕ್ಷಿಣ ಭಾರತದ ನಾಯಕರನ್ನು ಉತ್ತರ ಭಾರತದವರು ಒಪ್ಪಿಕೊಳ್ಳುವುದು ಕಷ್ಟ ಎನ್ನಲಾಗಿದೆ.


ಇದನ್ನೂ ಓದಿ: Rishab Shetty: ಪ್ರಶಾಂತ್ ಶೆಟ್ಟಿ ಎಂಬ ಹುಡುಗ ರಿಷಬ್ ಶೆಟ್ಟಿ ಆಗಿದ್ದು ಹೇಗೆ? ಕುಂದಾಪುರದಿಂದ ಕಾಂತಾರದವರೆಗಿನ ಪ್ರಯಾಣ ಇಲ್ಲಿದೆ


ಖರ್ಗೆ ಅವರ ಹಿಂದಿಯ ಬಗ್ಗೆ ಅಪಸ್ವರ!


ಹಿಂದಿ ಭಾಷೆಯ ಮೇಲೆ  ಮಲ್ಲಿಕಾರ್ಜುನ ಖರ್ಗೆ ಅವ್ರಿಗೆ ಹಿಡಿತವಿದೆ, ಆದರೆ ಅವರು ಮಾತನಾಡವುದು ಉರ್ದು ಮಿಶ್ರತ ಹಿಂದಿಯಂತೆ! ಮಲ್ಲಿಕಾರ್ಜುನ ಖರ್ಗೆ ಅವರ ಭಾಷಾ ಶೈಲಿಯನ್ನು ಉತ್ತರ ಭಾರತೀಯರು ಒಪ್ಪಿಕೊಳ್ಳದಿರುವ ಸಾಧ್ಯತೆಯಿದೆ ಎನ್ನಲಾಗಿದೆ. ರಾಷ್ಟ್ರಮಟ್ಟದ ಕಾಂಗ್ರೆಸ್ ನಲ್ಲಿ ಹಿರಿಯ ಎಲ್ಲ ನಾಯಕರು ಖರ್ಗೆ ಅವರನ್ನು ಒಪ್ಪಿಕೊಳ್ಳದಿರಬಹುದು ಎನ್ನುವುದು ಖರ್ಗೆ ವಿರೋಧಿಗಳ ಆತಂಕ.

Published by:Annappa Achari
First published: